ಎಸ್ಸಿ ಎಸ್ಟಿ: ಮೇಲ್ಮನವಿಗೆ 3 ರಾಜ್ಯಗಳ ನಿರ್ಧಾರ
Team Udayavani, Apr 18, 2018, 8:05 AM IST
ಹೊಸದಿಲ್ಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪು ದೇಶಾದ್ಯಂತ ಹಿಂಸಾಚಾರಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಬಿಜೆಪಿ ಆಡಳಿತವಿರುವ ಮೂರು ರಾಜ್ಯಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿವೆ. ಸುಪ್ರೀಂಕೋರ್ಟ್‌ನ ಮಾ. 20ರ ಆದೇಶವನ್ನು ಸದ್ಯದ ಮಟ್ಟಿಗೆ ಜಾರಿಗೊಳಿಸದಿರಲು ಛತ್ತೀಸ್ ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರಕಾರಗಳು ನಿರ್ಧರಿಸಿದ್ದು, ಆ ಸರಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರದಲ್ಲೇ ತೀರ್ಪು ಮರುಪರಿಶೀಲನೆಗೆ ಕೋರಿ ಅರ್ಜಿ ಸಲ್ಲಿಸಲಿವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, “ಈಗಾಗಲೇ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದರಿಂದ ನ್ಯಾಯಾಲಯದ ಅಂತಿಮ ನಿರ್ಧಾರ ಹೊರಬೀಳುವವರೆಗೂ ತೀರ್ಪು ಅನುಷ್ಠಾನಗೊಳ್ಳದು” ಎಂದಿದ್ದಾರೆ. ಕೇಂದ್ರ ಸರಕಾರವೂ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಒಂದು ವೇಳೆ ಸುಪ್ರೀಂ ಕೋರ್ಟ್‌ನ ತೀರ್ಪು ತಮ್ಮ ಪರ ಬರದೇ ಇದ್ದರೆ, ಆದೇಶವನ್ನು ಬದಿಗೆ ಸರಿಸಲು ಅಧ್ಯಾದೇಶದ ಮೊರೆ ಹೋಗಲೂ ಸರಕಾರ ಚಿಂತನೆ ನಡೆಸಿದೆ.
ತಮಿಳುನಾಡು ಉತ್ಸುಕ: ಇದೇ ವೇಳೆ, ತಮಿಳುನಾಡು ಸರಕಾರವೂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಂಗಳವಾರ ಘೋಷಿಸಿದೆ. ಸಿಎಂ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯಗಳ ಬೆಂಬಲ: ಮಾ. 20ರ ಸುಪ್ರೀಂಕೋರ್ಟ್ ತೀರ್ಪಿನ ಪುನರ್ ಪರಿಶೀಲನೆ ವಿಚಾರದಲ್ಲಿ ಎಲ್ಲಾ ರಾಜ್ಯ ಸರಕಾರಗಳೂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆಸಕ್ತಿ ತೋರಿವೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಕಾಯ್ದೆಯನ್ನು ದುರ್ಬಲಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ರಾಜ್ಯಗಳು ಕೇಂದ್ರ ಸರಕಾರದ ಜತೆ ಸಂಪರ್ಕದಲ್ಲಿದ್ದು, ಕೆಲವು ರಾಜ್ಯಗಳು ಮೇಲ್ಮನವಿ ಕುರಿತು ಘೋಷಿಸಿಯೂ ಆಗಿವೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಡ್ತಿ ವಿಚಾರಕ್ಕೂ ಮೇಲ್ಮನವಿ
ಸರಕಾರಿ ಉದ್ಯೋಗದಲ್ಲಿ ಬಡ್ತಿ ನೀಡುವಾಗ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮೀಸಲಾತಿ ನೀಡುವ ವಿಚಾರದಲ್ಲೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಸರಕಾರಿ ಉದ್ಯೋಗಿಗಳಿಗೆ ಬಡ್ತಿ ನೀಡುವ ವಿಚಾರದಲ್ಲಿ ಎಸ್ಸಿ, ಎಸ್ಟಿ ಉದ್ಯೋಗಿಗಳನ್ನು ವಿಶೇಷವಾಗಿ ಪರಿಗಣಿಸಕೂಡದೆಂದು ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರಕಾರ, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಈ ವಿಷಯದಲ್ಲೂ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಸಿದ್ಧವಿದೆ. ಆದರೆ, ಮೊದಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ನಂತರ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಪಾಸ್ವಾನ್ ತಿಳಿಸಿದ್ದಾರೆ. ಜತೆಗೆ, ಎನ್‌ಡಿಎ ಸರಕಾರವು ದಲಿತರಿಗೆ ನೀಡಿದಷ್ಟು ಕೊಡುಗೆಯನ್ನು ಈವರೆಗೆ ಯಾವ ಸರಕಾರವೂ ಕೊಟ್ಟಿಲ್ಲ. ದಲಿತರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವಲ್ಲಿ ನಾವು ಬದ್ಧರಾಗಿದ್ದೇವೆ ಎಂದೂ ಅವರು ಪುನರುಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.