ಆಂಧ್ರ ಸಿಎಂ ಜಗನ್ ವಿರುದ್ಧ ಬೃಹತ್ ಪ್ರತಿಭಟನೆ; TDP ವರಿಷ್ಠ ಚಂದ್ರಬಾಬು, ಪುತ್ರನ ಗೃಹಬಂಧನ
Team Udayavani, Sep 11, 2019, 12:39 PM IST
ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸರಕಾರ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್ ಸೇರಿದಂತೆ ತೆಲುಗು ದೇಶಂ ಪಕ್ಷದ ಹಲವಾರು ಮುಖಂಡರನ್ನು ಬುಧವಾರ ಗೃಹಬಂಧನದಲ್ಲಿ ಇರಿಸಿರುವ ಘಟನೆ ನಡೆದಿದೆ.
ರಾಜಕೀಯ ದ್ವೇಷದ ಹಿಂಸಾಚಾರದಿಂದ ನಲುಗಿಹೋಗಿದ್ದ ಪಾಲ್ ನಾಡು ಪ್ರದೇಶದಲ್ಲಿ ಜನ ಗುಂಪು ಸೇರುವುದಕ್ಕೆ ಪೊಲೀಸರು ನಿಷೇಧ ಹೇರಿದ್ದಾರೆ. ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಚಂದ್ರಬಾಬು ನಾಯ್ಡು ಜಗನ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗನ್ ಮೋಹನ್ ಸರಕಾರದ ವಿರುದ್ಧ ಬುಧವಾರ ಬೆಳಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆವರೆಗೆ 12 ಗಂಟೆ ಕಾಲ ಉಪವಾಸ ಸತ್ಯಾಗ್ರಹ ನಡೆಸಲು ಚಂದ್ರಬಾಬು ನಾಯ್ಡು ಉದ್ದೇಶಿಸಿದ್ದರು. ಈ ನಿಟ್ಟಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ನಾಯ್ಡು ಅವರನ್ನು ಪೊಲೀಸರು ವಿಜಯವಾಡ ಸಮೀಪದ ಉಂದಾವಲ್ಲಿ ನಿವಾಸದಲ್ಲಿಯೇ ಗೃಹಬಂಧನದಲ್ಲಿ ಇರಿಸಿರುವುದಾಗಿ ವರದಿ ವಿವರಿಸಿದೆ.
ಚಂದ್ರಬಾಬು ಅವರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಖಂಡಿಸಿ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ನಾಯ್ಡು ನಿವಾಸದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.