ಭಾರತೀಯರ ಅಣಕವಾಡಿ ಕೀಳುಮಟ್ಟಕ್ಕಿಳಿದ ಚೀನ
Team Udayavani, Aug 18, 2017, 7:30 AM IST
ಬೀಜಿಂಗ್: ಡೊಕ್ಲಾಮ್ ಗಡಿವಿವಾದ ಉದ್ಭವವಾದ ಬಳಿಕ ಭಾರತದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚೀನದ ಸರಕಾರಿ ಸ್ವಾಮ್ಯದ ಮಾಧ್ಯಮಗಳು ಇದೀಗ ಸಭ್ಯತೆಯ ಎಲ್ಲೆ ಮೀರಿವೆ.
ಸುದ್ದಿಗಳಲ್ಲಿ, ಲೇಖನಗಳಲ್ಲಿ ಭಾರತದ ವಿರುದ್ಧ ಸಮರ ಸಾರಿರುವ ಅಲ್ಲಿನ ಮಾಧ್ಯಮಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯರನ್ನು ಅಣಕಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಸರಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಸಿಕ್ಖ್ ರೀತಿ ದಾಡಿ ಮತ್ತು ಪೇಟದ ವೇಷ ಧರಿಸಿದ ಚೀನೀ ನಿರೂಪಕಿಯೊಬ್ಬಳು ಭಾರತವನ್ನು ಹಳಿಯುವ ರೀತಿಯ, ಚೀನೀಯನೊಬ್ಬನೊಂದಿಗೆ ಸಂಭಾಷಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ. ಭಾರತದ “ಏಳು ಪಾಪಗಳು’ (ಸೆವೆನ್ ಸಿನ್ಸ್) ಹೆಸರಿನಲ್ಲಿ ಇದನ್ನು ಪ್ರದರ್ಶಿಸಲಾಗಿದ್ದು, ಜನಾಂಗೀಯ, ಪೂರ್ವಗ್ರಹ ಪೀಡಿತ ಮಾತುಗಳನ್ನು ಹೊಂದಿದೆ. 7 ಪಾಪಗಳನ್ನು ವಿಡಿಯೋದಲ್ಲಿ ಪಟ್ಟಿ ಮಾಡಿದ್ದು, ಗಡಿಯೊಳಗೆ ನುಗ್ಗಿರುವುದು, ತಪ್ಪೋ ಸರಿಯೋ ಗೊತ್ತಿಲ್ಲದಿರುವುದು, ಆರೋಪ ಹೊರಿಸಿ ತಾನೇ ಸಂತ್ರಸ್ತನಂತೆ ಬಿಂಬಿಸುವುದು, ಸಣ್ಣ ನೆರೆಯ ದೇಶವನ್ನು ಹೈಜಾಕ್ ಮಾಡಿರುವುದು ಮತ್ತು ತಪ್ಪು ಎಂದು ಗೊತ್ತಿದ್ದರೂ ಅದನ್ನೇ ಸಮರ್ಥಿ ಸಿಕೊಳ್ಳುತ್ತಿರುವುದು ಇತ್ಯಾದಿಗಳನ್ನು ಹೇಳಲಾಗಿದೆ. ಇಂಗ್ಲಿಷ್ ವಿಡಂಬನೆಗಳೂ ಇದರಲ್ಲಿದ್ದು, ಜನರು ನಗುತ್ತಿರುವ ಆಡಿಯೋವನ್ನೂ ಇದಕ್ಕೆ ಹಾಕಲಾಗಿದೆ.
ಚೀನದಿಂದ ಮತ್ತಷ್ಟು ಗಡಿ ಚಿತಾವಣೆ: ಡೋಕ್ಲಾಂ ವಿವಾದ ಜೀವಂತವಾಗಿರುವ ಹಿನ್ನೆಲೆಯಲ್ಲಿ ಚೀನ ಭಾರತದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಡಿಯ ವಿವಿಧ ಭಾಗಗಳಲ್ಲಿ ಒಳನುಗ್ಗುವ, ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯತ್ನಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಲಡಾಖ್‌ನ ಪೆನುಗಾಂಗ್ ಸರೋವರ ಪ್ರದೇಶ ದಲ್ಲೂ ಚೀನ ಇಂತಹುದೇ ಯತ್ನ ನಡೆಸಿದ್ದು, ಇದಕ್ಕೆ ಉದಾಹರಣೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಗಡಿ ಸಮಸ್ಯೆ ಇರುವ ಭಾಗಗಳಾದ ಹಿಮಾಚಲ ಪ್ರದೇಶ, ಸಿಕ್ಕಿಂ, ಅರುನಚಲ ಪ್ರದೇಶ, ಉತ್ತರಾಖಂಡ ಮುಂತಾದೆಡೆ ಚೀನ ಸೇನೆ ಒಳನುಗ್ಗುವ ಯತ್ನ ಮಾಡಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರದಲ್ಲಿರುವಂತೆ ಯೋಧರಿಗೆ ಸೂಚಿಸಲಾಗಿದೆ. ಅಲ್ಲದೇ ಚೀನ ಸೇನೆಯ ಚಿತಾವಣೆಯನ್ನು ಶಾಂತವಾಗಿ ಎದುರಿಸುವಂತೆ ಹೇಳಲಾಗಿದೆ.
ಭಾರತ ಪಾಕಿಸ್ಥಾನವನ್ನಾಗಲಿ, ಚೀನವನ್ನಾಗಲಿ ಎದುರಿಸಬಹುದು. ಆದರೆ ಅಪಾಯ ಒಳಗಿನಿಂದಲೇ ಇದೆ. ಕಳ್ಳ ಒಳಗೆ ಕೂತಿದ್ದು, ಎಲ್ಲವನ್ನೂ ಕೊಳ್ಳೆ ಹೊಡೆಯಲು ಯೋಜಿಸಿದ್ದಾನೆ.
– ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ
ಭಾರತ ಮತ್ತು ಚೀನಗಳು ತಮ್ಮ ನಡುವಿನ ಭೇದಗಳನ್ನು ವಿವಾದಗಳನ್ನಾಗಿ ಬೆಳೆಸದೇ ಅವುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸ ಬೇಕು. ಸಹೋದರರು ಒಂದಾಗಿ ಜೀವಿಸಿದರೆ, ಹಲವು ಸಮಸ್ಯೆಗಳನ್ನು ಪರಿಹರಿಸಬಹುದು.
– ತರುಣ್ ವಿಜಯ್, ಬಿಜೆಪಿ ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.