ವಾಯುನೆಲೆಗಳಲ್ಲಿ ಚೀನ ಡ್ರೋನ್! ಉಪಗ್ರಹ ಚಿತ್ರಗಳಿಂದ ದೃಢ
ತವಾಂಗ್ ಘರ್ಷಣೆ ಬಳಿಕ ಯುದ್ಧ ವಿಮಾನಗಳ ನಿಯೋಜಿಸಿದ ನೆರೆರಾಷ್ಟ್ರ
Team Udayavani, Dec 20, 2022, 6:55 AM IST
ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನ ಸೇನೆಯ ಘರ್ಷಣೆ ನಡೆದ ಬೆನ್ನಲ್ಲೇ ಚೀನ ಸೇನೆಯು ಟಿಬೆಟ್‌ನ ವಾಯುನೆಲೆಗಳಲ್ಲಿ ಭಾರೀ ಪ್ರಮಾಣದ ಡ್ರೋನ್‌ಗಳು ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ತವಾಂಗ್ ಘರ್ಷಣೆಯ ಬಳಿಕದ ಹೈರೆಸೊಲ್ಯೂಶನ್ ಉಪಗ್ರಹ ಚಿತ್ರಗಳನ್ನು ಪರಿಶೀಲಿಸಿದಾಗ ಈ ವಿಚಾರ ಸ್ಪಷ್ಟವಾಗಿ ಗೋಚರಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಅರುಣಾಚಲ ಪ್ರದೇಶದ ಆಗಸದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಗಸ್ತು ತಿರುಗುತ್ತಿರುವಂತೆಯೇ ಈ ಬೆಳವಣಿಗೆ ವರದಿಯಾಗಿದೆ.
ಅರುಣಾಚಲದ ಗಡಿಯಿಂದ 150 ಕಿ.ಮೀ. ದೂರದಲ್ಲಿರುವ ಚೀನದ ಬಾಂಗಾx ವಾಯುನೆಲೆಯ ಉಪಗ್ರಹ ಚಿತ್ರಗಳನ್ನು ನೋಡಿದಾಗ, ಅಲ್ಲಿ ಅತ್ಯಾಧುನಿಕ ಡಬ್ಲ್ಯುಝೆಡ್-7 ಸೋರಿಂಗ್ ಡ್ರ್ಯಾಗನ್ ಡ್ರೋನ್ ನಿಯೋಜಿಸಿರುವುದು ಪತ್ತೆಯಾಗಿದೆ. ಕಳೆದ ವರ್ಷವಷ್ಟೇ ಅನಾವರಣಗೊಂಡ ಈ ಡ್ರೋನ್ ಸತತ 10 ಗಂಟೆಗಳ ಕಾಲ ನಿರಂತರವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
ನೆಲದಲ್ಲಿರುವ ಟಾರ್ಗೆಟ್ ಅನ್ನು ಛೇದಿಸಲು ಕ್ರೂಸ್ ಕ್ಷಿಪಣಿಗ ಳಿಗೆ ದತ್ತಾಂಶ ಪೂರೈಕೆಯಲ್ಲಿ ಈ ಡ್ರೋನ್ ನೆರವಾಗಲಿದೆ. ಭಾರತದ ಬಳಿ ಈ ದರ್ಜೆಯ ಡ್ರೋನ್ ಇಲ್ಲ.
ಇದಷ್ಟೇ ಅಲ್ಲದೆ, ಡಿ.14ರಂದು ಸೆರೆಹಿಡಿಯಲಾದ ಈ ವಾಯುನೆಲೆಯ ಫೋಟೋದಲ್ಲಿ, ಚೀನವು ಸಾಲು ಸಾಲು ಯುದ್ಧ ವಿಮಾನಗಳನ್ನು ನಿಲ್ಲಿಸಿರುವುದೂ ಕಂಡುಬಂದಿದೆ ಎಂದೂ ವರದಿ ತಿಳಿಸಿದೆ.
ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್: ಇದೇ ವೇಳೆ, ಚೀನ ವಿಚಾರದ ಕುರಿತು ಚರ್ಚೆಯಾಗಬೇಕು ಎಂದು ರಾಜ್ಯಸಭೆಯಲ್ಲಿ ಆಗ್ರಹಿಸಿದ್ ವಿಪಕ್ಷಗಳು, ಅದಕ್ಕೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಕಲಾಪ ಬಹಿಷ್ಕರಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂಥ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜೈಶಂಕರ್ ಪುತ್ರನಿಗೂ ಚೀನದಿಂದ ದೇಣಿಗೆ: ಕಾಂಗ್ರೆಸ್
ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನದಿಂದ ದೇಣಿಗೆ ಬಂದಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, “ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಪುತ್ರ ಮತ್ತು ಚೀನಕ್ಕಿರುವ ಲಿಂಕ್’ ಬಗ್ಗೆ ಪ್ರಶ್ನೆಯೆತ್ತಿದೆ. ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, “ಜೈಶಂಕರ್ ಅವರ ಪುತ್ರನೇ ಮುಖ್ಯಸ್ಥ(ಒಂದು ಘಟಕದ ಮುಖ್ಯಸ್ಥ)ರಾಗಿರುವ ಥಿಂಕ್‌ಟ್ಯಾಂಕ್‌ಗೆ ಚೀನದ ರಾಯಭಾರ ಕಚೇರಿಯಿಂದ 3 ಬಾರಿ ದೇಣಿಗೆ ಬಂದಿದೆ. ಜೈಶಂಕರ್ ಪುತ್ರನಿಗೂ ಚೀನಕ್ಕೂ ಯಾವ ರೀತಿಯ ಬಾಂಧವ್ಯ ಎಂಬುದನ್ನು ಬಹಿರಂಗಪಡಿಸಿ’ ಎಂದು ಒತ್ತಾಯಿಸಿದ್ದಾರೆ. ಜತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಂಪರ್ಕವಿರುವಂಥ ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನಕ್ಕೆ ಚೀನದಿಂದ ದೇಣಿಗೆ ಬಂದಿಲ್ಲವೇ ಎಂದೂ ಪ್ರಶ್ನಿಸಿದ್ದಾರೆ.
ರಷ್ಯಾ-ಚೀನ ಜಂಟಿ ನೌಕಾ ಕವಾಯತು
“ಶತ್ರುವಿನ ಶತ್ರು ಮಿತ್ರ’ ಎಂಬಂತೆ ಅಮೆರಿಕಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನ ಕೈಜೋಡಿಸಿವೆ. ಅದರಂತೆ ಬುಧವಾರದಿಂದ ಪೂರ್ವ ಚೀನ ಸಮುದ್ರದಲ್ಲಿ ಉಭಯ ದೇಶಗಳ ನಡುವೆ ನೌಕಾ ಕವಾಯತು ನಡೆಯಲಿದೆ. ಈ ಸಮರಾಭ್ಯಾಸಕ್ಕಾಗಿ ಎರಡೂ ರಾಷ್ಟ್ರಗಳು ಸಿದ್ಧತೆ ನಡೆಸಿದ್ದು, ಚೀನದ ನೌಕಾಪಡೆಯು ತನ್ನ ಯುದ್ಧನೌಕೆಗಳು, ಜಲಾಂತರ್ಗಾಮಿಗಳನ್ನು ಹಾಗೂ ರಷ್ಯಾ ನೌಕಾಪಡೆ ತನ್ನ ವರ್ಯಾಗ್ ಕ್ರೂಸರ್ ಕ್ಷಿಪಣಿ, ಮಾರ್ಷಲ್ ಶಪೋಶ್ನಿಕೋವ್ ಡೆಸ್ಟ್ರಾಯರ್ ಸಹಿತ ಹಲವು ಶಸ್ತ್ರಾಸ್ತ್ರಗಳನ್ನು ಈ ಕವಾಯತಿನಲ್ಲಿ ಬಳಸಲು ನಿರ್ಧರಿಸಿವೆ.
ಭಾರತ ಮತ್ತು ಚೀನ ಗಡಿಯನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ. ಇದರಿಂದಾಗಿಯೇ ಪ್ರತೀ ಬಾರಿ ಮುಂಚೂಣಿ ಪ್ರದೇಶಗಳಲ್ಲಿ ಸಮಸ್ಯೆಯಾಗುತ್ತಿದೆ. ಗಡಿ ಗುರುತಿಸುವಿಕೆ ನಡೆದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಜಮ್ಯಾಂಗ್ ನಮ್‌ಗ್ಯಾಲ್, ಬಿಜೆಪಿ ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.