ನಿಲ್ಲದ ಚೀನ ಪ್ರಚೋದನೆ
ಕಳೆದ ವಾರ ವಾರ್ನಿಂಗ್ ಶಾಟ್ಸ್ ಹಾರಿಸಿದ್ದ ಚೀನ ಸೇನೆ; ಪ್ರತಿಯಾಗಿ ಭಾರತ ಸೇನೆಯಿಂದಲೂ ಗುಂಡಿನ ಮೊರೆತ
Team Udayavani, Sep 17, 2020, 6:00 AM IST
ಲೇಹ್‌ಗೆ ಬಂದಿಳಿದ ಭಾರತೀಯ ವಾಯುಪಡೆಯ ಫೈಟರ್ ಜೆಟ್.
ಹೊಸದಿಲ್ಲಿ: ಭಾರತದ ಕಡೆಯಿಂದ ಪದೇ ಪದೆ ಏಟು ತಿನ್ನುತ್ತಲೇ ಇದ್ದರೂ ಬುದ್ಧಿ ಕಲಿಯದ ನೆರೆಯ ಕುತಂತ್ರಿ ದೇಶ ಚೀನ, ಭಾರತದ ವಿರುದ್ಧ ಇನ್ನೂ ಪ್ರಚೋದನಾತ್ಮಕ ತಂತ್ರ ಅನುಸರಿಸುತ್ತಲೇ ಇದೆ. ಕಳೆದ ವಾರವಷ್ಟೇ ವಾಸ್ತವ ನಿಯಂತ್ರಣ ರೇಖೆ ಬಳಿಯಲ್ಲಿ ಎರಡು ಬಾರಿ ವಾರ್ನಿಂಗ್ ಶಾಟ್ಸ್ ಹಾರಿಸಿರುವ ಚೀನ ತನ್ನ ದುರ್ಬದ್ಧಿ ತೋರಿಸಿದೆ. ಭಾರತವೂ ತಕ್ಕ ಉತ್ತರವನ್ನೇ ನೀಡಿದೆ.
ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಚೀನ ಮತ್ತು ಭಾರತದ ಪಡೆಗಳು ಸುಮಾರು 100ರಿಂದ 200 ಸುತ್ತಿನ ಗುಂಡು ಹಾರಿಸಿವೆ. ಆದರೆ ಇದು ಪರಸ್ಪರ ಹಾರಿಸಿದ್ದಲ್ಲ, ಆಕಾಶದತ್ತ ಗುಂಡು ಹಾರಿಸಿರುವ ಕ್ರಮವಷ್ಟೇ. ಮಿಲಿಟರಿ ಭಾಷೆಯಲ್ಲಿ “ವಾರ್ನಿಂಗ್ ಶಾಟ್ಸ್’ ಎಂದರೆ, ಶತ್ರು ದೇಶವನ್ನು ಯುದ್ಧಕ್ಕೆ ಆಹ್ವಾನಿಸುವುದು ಅಥವಾ ಆ ದೇಶಕ್ಕೆ ಎಚ್ಚರಿಕೆ ನೀಡುವುದಾಗಿದೆ. ಈ ಮೂಲಕ ಚೀನ ಸುಖಾಸುಮ್ಮನೇ ವಾರ್ನಿಂಗ್ ಶಾಟ್ಸ್ ಹಾರಿಸಿ, ಭಾರತವನ್ನು ಪ್ರಚೋದಿಸಿದೆ. ಭಾರತವೂ ವಾರ್ನಿಂಗ್ ಶಾಟ್ಸ್ ಮೂಲಕವೇ ಉತ್ತರ ನೀಡಿದೆ. ವಿಶೇಷವೆಂದರೆ ರಷ್ಯಾದ ಮಾಸ್ಕೋದಲ್ಲಿ ನಡೆದ ಉಭಯ ದೇಶಗಳ ರಕ್ಷಣ ಸಚಿವರು ಮತ್ತು ವಿದೇಶಾಂಗ ಸಚಿವರ ಮಾತುಕತೆಗೂ ಎರಡು ದಿನಗಳಿಗೂ ಮುನ್ನ ಈ ಘಟನೆಗಳು ನಡೆದಿವೆ. ಅದೊಂದು ವಾರದಲ್ಲೇ ಇಂಥ ಎರಡು ಘಟನೆಗಳು ನಡೆದಿದ್ದು, ಕಳೆದ ತಿಂಗಳಿನಿಂದೀಚೆಗೆ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ.
ಪ್ಯಾಂಗಾಂಗ್ ತ್ಸೋ ಲೇಕ್‌ನ ಉತ್ತರ ದಡದಲ್ಲಿ ಈ ಘಟನೆ ನಡೆದಿದೆ. ಈ ಭಾಗದಲ್ಲಿ ಭಾರತ ಸೇನಾ ಜಮಾವಣೆಯ ಸಾಮರ್ಥ್ಯ ಹೆಚ್ಚಿಸಿದೆ. ಭಾರತ ಚೀನಕ್ಕೆ ತಿರುಗೇಟು ನೀಡಿ ಅವರನ್ನು ವಾಪಸ್ ಕಳುಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ
ಸೆ. 7ರಂದು ಇದೇ ಲೇಕ್‌ನ ದಕ್ಷಿಣ ದಡದಲ್ಲಿ ಮೊದಲ ಘಟನೆ ಸಂಭವಿಸಿದೆ. ರಜಂಗ್ ಲಾ ರಿಡ್ಜ್ಲೈನ್‌ನ ಮುಖ್‌ಪರಿ ಪ್ರದೇಶದಲ್ಲಿ ಎರಡೂ ಸೇನೆಗಳು ಮುಖಾಮುಖೀಯಾಗಿವೆ. ಎರಡೂ ಪಡೆಗಳು ಆಕಾಶದತ್ತ ಗುಂಡು ಹಾರಿಸಿವೆ. ಈ ವೇಳೆ ಆರೋಪ- ಪ್ರತ್ಯಾರೋಪ ನಡೆಸಿದ್ದು, ಅನಂತರ ವಾಪಸ್ ಆಗಿವೆ. ಆದರೆ ಎರಡೂ ಕಡೆಗಳ ಸೇನೆಗಳು ಈ ವಿಷಯವನ್ನು ಸಾರ್ವಜನಿಕಗೊಳಿಸಿಲ್ಲ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಂಪೂರ್ಣವಾಗಿ ಸಿದ್ಧರಿದ್ದೇವೆ…
ಒಂದು ವೇಳೆ ಚೀನ ಈಗಲೇ ಯುದ್ಧಕ್ಕೆಂದು ಬಂದರೆ, ಅದಕ್ಕೆ ತಕ್ಕ ಉತ್ತರವನ್ನೇ ನೀಡುತ್ತೇವೆ. ಇದಕ್ಕಾಗಿ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ… ಇದು ನಾರ್ಥರ್ನ್ ಕಮಾಂಡ್‌ನ ದಿಟ್ಟ ಹೇಳಿಕೆ. ಚೀನ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆ ರಾಜನಾಥ್ ಸಿಂಗ್ ಅವರ “ಸಮರಕ್ಕೆ ಸಿದ್ಧ’ ಹೇಳಿಕೆ ಬಗ್ಗೆ ಕಕ್ಕಾಬಿಕ್ಕಿಯಾಗಿದೆ. ಈ ಹೇಳಿಕೆ ಸಹಿಸಲಾರದ ಆ ಪತ್ರಿಕೆ, ಭಾರತ ಇನ್ನೂ ಯುದ್ಧಕ್ಕೆ ತಯಾರಿ ಮಾಡಿಕೊಂಡಿಲ್ಲ, ಚಳಿಗಾಲದಲ್ಲಿ ಹೋರಾಟ ನಡೆಸಲು ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿಲ್ಲ ಎಂದು ಬರೆದುಕೊಂಡಿದೆ. ಇದಕ್ಕೆ ತಿರುಗೇಟು ನೀಡಿರುವ ನಾರ್ಥರ್ನ್ ಕಮಾಂಡ್, ಭಾರತ ಈಗಲೂ ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದಿದೆ. ಅಷ್ಟೇ ಅಲ್ಲ, ಅತ್ಯುತ್ತಮವಾಗಿ ತರಬೇತಿ ಪಡೆದ, ದೈಹಿಕವಾಗಿ ಅತ್ಯಂತ ಬಲಶಾಲಿಗಳಾಗಿರುವ ಯೋಧರ ಪಡೆಯನ್ನೇ ಹೊಂದಿರುವ ಭಾರತ, ಚೀನಕ್ಕೆ ತಕ್ಕ ಉತ್ತರವನ್ನೇ ನೀಡಲಿದೆ ಎಂದೂ ಹೇಳಿದೆ.
ಚೀನ ಗೂಢಚಾರಿಕೆ ಅಧ್ಯಯನಕ್ಕೆ ಸಮಿತಿ
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾ| ಶರದ್ ಬೋಬೆx ಸೇರಿದಂತೆ ದೇಶದ ದೊಡ್ಡ ದೊಡ್ಡ ನಾಯಕರ ಬಗ್ಗೆ ಚೀನ ಕಂಪೆನಿ ನಡೆಸಿರುವ ಗೂಢಚಾರಿಕೆ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರಕಾರ ತಜ್ಞರ ಸಮಿತಿಯೊಂದನ್ನು ರಚಿಸಿದೆ. ನ್ಯಾಶನಲ್ ಸೈಬರ್ ಸೆಕ್ಯುರಿಟಿ ಕೋ-ಆರ್ಡಿನೇಟರ್ ಅಡಿಯಲ್ಲಿ ಈ ಸಮಿತಿ ಬರಲಿದೆ. ಇದು 30 ದಿನಗಳಲ್ಲಿ ಅಧ್ಯಯನ ನಡೆಸಿ ವರದಿ ನೀಡಲಿದೆ. ರಾಜ್ಯಸಭೆ ಸದಸ್ಯ ಕೆ.ಸಿ. ವೇಣುಗೋಪಾಲ್ ಅವರು ಚೀನದ ಗೂಢಚರ್ಯೆಯ ಬಗ್ಗೆ ಪ್ರಶ್ನಿಸಿದ್ದು, ಸಮಿತಿ ರಚಿಸಿರುವ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರು ಮಾಹಿತಿ ನೀಡಿದ್ದಾರೆ. ಚೀನದ ಗೂಢಚಾರಿಕೆ ಬಗ್ಗೆ ಬುಧವಾರ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು.
ಇಂದು ರಾಜನಾಥ್ ಹೇಳಿಕೆ
ಮಂಗಳವಾರವಷ್ಟೇ ಲೋಕಸಭೆಯಲ್ಲಿ ಭಾರತ-ಚೀನ ಸಂಘರ್ಷದ ಬಗ್ಗೆ ಹೇಳಿಕೆ ನೀಡಿದ್ದ ರಾಜನಾಥ್ ಸಿಂಗ್ ಅವರು, ಗುರುವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆಯಲ್ಲೂ ಮಾಹಿತಿ ನೀಡಲಿದ್ದಾರೆ. ಲೋಕ ಸಭೆಯ ಹೇಳಿಕೆ ಬಗ್ಗೆ ವಿಪಕ್ಷ ಕಾಂಗ್ರೆಸ್ ಆಕ್ಷೇಪವೆತ್ತಿದ್ದಲ್ಲದೆ, ಸಂದೇಹ ನಿವಾರಿಸಿಕೊಳ್ಳುವ ಸಂಬಂಧ ಪ್ರಶ್ನೆ ಕೇಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ ಸ್ಪೀಕರ್ ಅವಕಾಶ ನೀಡಿರಲಿಲ್ಲ. ಬುಧವಾರ ಸಂಜೆ, ರಾಜನಾಥ್ ಸಿಂಗ್ ಅವರು ವಿಪಕ್ಷ ಸದಸ್ಯರ ಜತೆ ಸಭೆ ನಡೆಸಿದ್ದಾರೆ. ರಾಜ್ಯಸಭೆಯಲ್ಲಿನ ಭಾಷಣದ ಅನಂತರ ವಿಪಕ್ಷಗಳ ಕೆಲವು ನಾಯಕರೂ ಮಾತನಾಡುವ ಸಾಧ್ಯತೆ ಇದೆ. ಬಳಿಕ ಅಗತ್ಯಬಿದ್ದರೆ ರಾಜನಾಥ್ ಸಿಂಗ್ ಅವರು ಸ್ಪಷ್ಟೀಕರಣ ನೀಡಲಿದ್ದಾರೆ.
ಸಂಬಂಧ ಹಳಸಿಲ್ಲ
ಚೀನ ಜತೆಗೆ ಗಡಿ ಸಂಘರ್ಷ ಮುಂದುವರಿಯುತ್ತಿದ್ದರೂ ಆ ದೇಶದ ಜತೆಗಿನ ದ್ವಿಪಕ್ಷೀಯ ಸಂಬಂಧ ಹಳಸಿಲ್ಲ ಎಂದು ವಿದೇಶಾಂಗ ಇಲಾಖೆ ಲೋಕಸಭೆಯಲ್ಲಿ ಮಾಹಿತಿ ನೀಡಿದೆ. ಟಿಎಂಸಿ ಸಂಸದ ಸೌಗತ್ ರಾಯ್ ಕೇಳಿದ ಪ್ರಶ್ನೆಗೆ, ಲಿಖೀತ ಉತ್ತರ ನೀಡಿದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್, ಭಾರತ ಇಂದಿಗೂ ತನ್ನ ನೆರೆಯ ದೇಶಗಳ ಜತೆಗೆ ಉತ್ತಮ ಸಂಬಂಧವಿರಿಸಿಕೊಳ್ಳಲು ಆದ್ಯತೆ ನೀಡುತ್ತಿದೆ. ಈಗಲೂ ಭಾರತ ನೆರೆಯ ದೇಶಗಳೊಂದಿಗೆ ರಾಜಕೀಯ ಮತ್ತು ಆರ್ಥಿಕವಾಗಿ ಉತ್ತಮ ಸಂಬಂಧ ಹೊಂದಿದೆ ಎಂದಿದ್ದಾರೆ. ಅಲ್ಲದೆ, ಈ ದೇಶಗಳ ಜತೆಗಿನ ಯೋಜನೆಗಳೂ ಮುಂದುವರಿಯುತ್ತಿವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.