ಮೇಲ್ಮನೆಯಲ್ಲಿ ತ್ರಿವಳಿ ತಲಾಖ್‌ಗೆ ಕಾಂಗ್ರೆಸ್ ಅಡ್ಡಗಾಲು
Team Udayavani, Jan 4, 2018, 6:00 AM IST
ಹೊಸದಿಲ್ಲಿ: ಲೋಕಸಭೆಯಲ್ಲಿ ಸರಾಗವಾಗಿ ಒಪ್ಪಿಗೆ ಪಡೆದಿದ್ದ ತ್ರಿವಳಿ ತಲಾಖ್‌ಗೆ ಕೊಕ್ ನೀಡುವಂಥ ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣಾ) ಮಸೂದೆ ರಾಜ್ಯಸಭೆಯಲ್ಲಿ ಸ್ಥಗಿತಗೊಂಡಿದೆ.
ಕಳೆದ ವಾರವಷ್ಟೇ ಕೆಳಮನೆಯಲ್ಲಿ ಇದೇ ಮಸೂದೆ ಮಂಡನೆಯಾಗಿದ್ದಾಗ ಹೆಚ್ಚು ಕಡಿಮೆ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ಅನಂತರದ ಧ್ವನಿ ಮತದ ವೇಳೆ ಮಸೂದೆ ಪರವಾಗಿಯೇ ಮತ ಹಾಕಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಅನುಭವಿಸುತ್ತಿರುವ ಎನ್‌ಡಿಎ ಸರಕಾರಕ್ಕೆ ಬಿಸಿ ನೀಡಿದ ಅದು, ಮಸೂದೆ ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸುವಂತೆ ಆಗ್ರಹಿಸಿತು. ಇದಕ್ಕೆ ಆಡಳಿತ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಯಲ್ಲಿ ಮೇಲ್ಮನೆ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಬುಧವಾರ ಬೆಳಗ್ಗೆಯೇ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಸೂದೆ ಮಂಡನೆಗೆ ವೇದಿಕೆ ಸಿದ್ಧವಾಗಿದ್ದರೂ ಮಹಾರಾಷ್ಟ್ರ ಹಿಂಸಾಚಾರದ ಸಂಬಂಧ ಪದೇ ಪದೇ ಕಲಾಪ ಮುಂದೂಡಿದ್ದರಿಂದ ಸಾಧ್ಯವಾಗಿರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಮೇಲ್ಮನೆ ಯಲ್ಲಿ ಮಸೂದೆ ಮಂಡಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಖ್ ರದ್ದು ಮಾಡುವ ಮಸೂದೆಯ ಮಹತ್ವದ ಬಗ್ಗೆ ಹೇಳಿದರು. ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಈಗಲೂ ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಖ್ ಅನ್ನು ಮುಂದುವರಿಸಲಾಗುತ್ತಿದೆ. ಹೀಗಾಗಿ ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಅಂಗೀಕಾರ ವಾಗಬೇಕಿದೆ ಎಂದು ಮನವರಿಕೆ ಮಾಡಿದರು.
ಆದರೆ, ವಿಪಕ್ಷಗಳ ಸಾಲಿನಿಂದ ಟಿಎಂಸಿಯ ಸದಸ್ಯರೊಬ್ಬರು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಬಗ್ಗೆ ನಿಲುವಳಿ ಮಂಡಿಸಿದರು. ಇದಕ್ಕೆ ರವಿಶಂಕರ್ ಪ್ರಸಾದ್ ಆಕ್ಷೇಪಿಸಿದರು. ತತ್‌ಕ್ಷಣವೇ ಕಾಂಗ್ರೆಸ್‌ನ ಆನಂದ್ ಶರ್ಮಾ ಅವರೂ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ನಿಲುವಳಿ ಮಂಡಿಸಿದರು. ಇದಕ್ಕೆ ತೀವ್ರ ಆಕ್ಷೇಪಿಸಿದ ರಾಜ್ಯಸಭೆಯಲ್ಲಿನ ಆಡಳಿತ ಪಕ್ಷದ ನಾಯಕ ಹಾಗೂ ವಿತ್ತ ಸಚಿವ ಅರುಣ್ ಜೇಟಿÉ, ಲೋಕಸಭೆಯಲ್ಲಿ ಇದೇ ಮಸೂದೆಗೆ ಒಪ್ಪಿಗೆ ನೀಡಿ, ಈಗ ರಾಜ್ಯಸಭೆಯಲ್ಲಿ ಆಯ್ಕೆ ಸಮಿತಿಗೆ ಕಳುಹಿಸುವಂತೆ ನಿಲುವಳಿ ಮಂಡಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು. ಅಲ್ಲದೆ ಸಂಸದೀಯ ನಡಾವಳಿಗಳ ಪ್ರಕಾರ, ಒಂದು ದಿನ ಮುಂಚೆ ಹೇಳದೆ ನಿಲುವಳಿ ಮಂಡಿಸುವುದು ಅಸಾಧ್ಯವೆಂದರು. ಜತೆಗೆ ಕಾಂಗ್ರೆಸ್ ಮಸೂದೆ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ಕೂಡ ಆರು ತಿಂಗಳಲ್ಲಿ ಈ ಬಗ್ಗೆ ಶಾಸನ ಮಾಡಿ ಎಂದು ಹೇಳಿದ್ದು, ವಿಪಕ್ಷಗಳು ಸಹಕಾರ ನೀಡಬೇಕು ಎಂದರು.
ಯಾವುದೇ ಮಸೂದೆಯನ್ನು ಮತ್ತಷ್ಟು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸುವುದು ಸದನದ ಹಕ್ಕು. ಈ ವಿಚಾರದಲ್ಲಿ ಅಸಾಧ್ಯವೆಂದು ಹೇಳಲು ಸಾಧ್ಯವೇ ಇಲ್ಲ. ಅಲ್ಲದೆ ಮಸೂದೆ ವಿಚಾರದಲ್ಲಿ ನಮಗೆ ಆಕ್ಷೇಪವಿಲ್ಲ. ಆದರೆ, ಮಸೂದೆ ಯಲ್ಲಿನ ಕೆಲವು ವಿಷಯದಲ್ಲಿ ಮಾತ್ರ ನಮ್ಮ ಆಕ್ಷೇಪವಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದರು.
ಸದ್ಯ ಮಸೂದೆಯಲ್ಲಿರುವ ತ್ರಿವಳಿ ತಲಾಖ್ ನೀಡುವಂಥ ಪತಿಗೆ 3 ವರ್ಷಗಳ ಜೈಲು ಎಂಬ ವಿಷಯವನ್ನು ತೆಗೆಯಬೇಕು. ಆತ ಜೈಲಿಗೆ ಹೋದರೆ ಆತನ ಪತ್ನಿ ಮತ್ತು ಅವಲಂಬಿತರ ಪಾಡೇನು ಎಂಬುದೇ ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು. ಅಲ್ಲದೆ ಇದನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರವಾಗಲಿ, ನಿರ್ಣಯವನ್ನು ಮತಕ್ಕೆ ಹಾಕಿ ಎಂದೂ ಅವರು ಉಪಸಭಾಪತಿ ಕುರಿಯನ್ ಅವರಿಗೆ ಮನವಿ ಮಾಡಿದರು.
ಆದರೆ ಮೇಲ್ಮನೆಯಲ್ಲಿ ಬಹುಮತದ ಕೊರತೆ ಅನುಭವಿಸುತ್ತಿರುವ ಸರ್ಕಾರ, ಈ ಮನವಿಗೆ ಒಪ್ಪಲಿಲ್ಲ. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಕಾಂಗ್ರೆಸ್‌ಗೆ ಟಿಎಂಸಿ, ಎಐಎಡಿಎಂಕೆ ಮತ್ತು ಬಿಜು ಜನತಾ ದಳದ ಬೆಂಬಲವೂ ಇದೆ. ಇನ್ನೊಂದೆಡೆ ಎನ್‌ಡಿಎ ಅಂಗಪಕ್ಷ ಗಳಾದ ಶಿವಸೇನೆ ಹಾಗೂ ಟಿಡಿಪಿ ಕೂಡ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.