ಕೈ ಅಂತಾರಾಷ್ಟ್ರೀಯ ಮೈತ್ರಿ
Team Udayavani, Sep 26, 2018, 6:42 PM IST
ಹೊಸದಿಲ್ಲಿ/ಅಮೇಠಿ/ಭೋಪಾಲ್: ರಫೇಲ್ ಡೀಲ್‌ಗೆ ಸಂಬಂಧಿಸಿದ ವಾಗ್ವಾದದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರವೇಶಿಸಿದ್ದಾರೆ. ಭೋಪಾಲ್‌ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದರ ಬದಲು ವೃಥಾ ಆರೋಪ ಮಾಡಿ, ಮಣ್ಣೆರಚುವ ಕೆಲಸ ಮಾಡುತ್ತಿದೆ. ದೇಶದೊಳಗೆ ಮೈತ್ರಿಕೂಟ ರಚಿಸಲು ವಿಫಲವಾಗಿರುವ ಆ ಪಕ್ಷ ಈಗ ಅಂತಾರಾಷ್ಟ್ರೀಯ ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಮಾಜಿ ಸಚಿವ ರೆಹಮಾನ್ ಮಲಿಕ್ ಸೋಮವಾರ ಟ್ವೀಟ್ ಮಾಡಿ “ರಫೇಲ್ ವಿವಾದವನ್ನು ಸಮರ್ಥವಾಗಿ ಬಳಸಿಕೊಂಡರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು’ ಎಂದು ಬರೆದುಕೊಂಡಿದ್ದರು. ಅದನ್ನು ಪರೋಕ್ಷವಾಗಿ ಉಲ್ಲೇಖೀಸಿದ ಪ್ರಧಾನಿ ಮೋದಿ, “ದೇಶದ ಒಳಗೆ ಪ್ರಬಲ ಮೈತ್ರಿಕೂಟ ರಚಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಹೀಗಾಗಿಯೇ ಇತರ ದೇಶಗಳಿಂದ ನೆರವು ಪಡೆದುಕೊಳ್ಳಲಾಗುತ್ತಿದೆ’ ಎಂದಿದ್ದಾರೆ. ಆದರೆ, ಅವರು ಭಾಷಣದಲ್ಲಿ ಎಲ್ಲಿಯೂ ರಫೇಲ್ ವಿವಾದ ಪ್ರಸ್ತಾಪ ಮಾಡಲಿಲ್ಲ.
ಲೋಕಸಭೆಯಲ್ಲಿ ಪಕ್ಷದ ಸ್ಥಾನ 440ರಿಂದ 44 ಸ್ಥಾನಗಳಿಗೆ ಇಳಿಕೆಯಾಗಲು ಕಾಂಗ್ರೆಸ್‌ನ ಕೋಪೋದ್ರಿಕ್ತತೆಯೇ ಕಾರಣ. ಇದರ ಹೊರತಾಗಿಯೂ ಆ ಪಕ್ಷ ಆತ್ಮಾವಲೋಕನ ನಡೆಸಲಿಲ್ಲ ಎಂದು ಟೀಕಿಸಿದ ಪ್ರಧಾನಿ, 125 ವರ್ಷಗಳ ಇತಿಹಾಸ ಹೊಂದಿರುವ ಪಕ್ಷಕ್ಕೆ ಈಗ ಮೈತ್ರಿಗಾಗಿ ಸಣ್ಣಪುಟ್ಟ ಪಕ್ಷಗಳ ಜತೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ದಾಖಲೆ ವಶಪಡಿಸಿಕೊಳ್ಳಲಾಗಿತ್ತು: ಡೀಲ್‌ಗೆ ಸಂಬಂಧಿಸಿ 2016ರಲ್ಲಿ ನಡೆಸಲಾಗಿದ್ದ ದಾಳಿ ವೇಳೆ ರಾಬರ್ಟ್ ವಾದ್ರಾ ನಿಕಟವರ್ತಿ ಸಂಜಯ ಭಂಡಾರಿ ನಿವಾಸದಿಂದ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರು “ಆಫ್ಸೆಟ್ ಇಂಡಿಯಾ ಸೊಲ್ಯೂಷನ್ಸ್’ ಎಂಬ ಸಂಸ್ಥೆಯ ಒಡೆತನವನ್ನೂ ಹೊಂದಿದ್ದರು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ. ಜತೆಗೆ ಭಂಡಾರಿ ಹೊಂದಿರುವ ಖಾಸಗಿ ಬ್ಯಾಂಕ್‌ನ 2 ಖಾತೆಗೆ ಹಣ ವರ್ಗಾವಣೆಯಾಗಿದ್ದ ವಿವರಗಳನ್ನೂ ಪಾತ್ರಾ ನೀಡಿದ್ದಾರೆ. ಜತೆಗೆ 8 ಲಕ್ಷ ರೂ. ಮೌಲ್ಯದ ವಿಮಾನ ಟಿಕೆಟ್‌ಗಳನ್ನು ಭಂಡಾರಿ ಇ-ಮೇಲ್‌ಗೆ ಕಳುಹಿಸಲಾಗಿತ್ತು ಎಂದೂ ಆರೋಪಿಸಿದ್ದಾರೆ.
ಕೆಸರೆರಚಿದಷ್ಟೂ ಕಮಲ ಅರಳುತ್ತೆ
“ಅಭಿವೃದ್ಧಿಯ ಕುರಿತಾಗಿ ಮಾತನಾಡಲು ಆಗದ ಕಾಂಗ್ರೆಸ್, ಸರಕಾರದ ವಿರುದ್ಧ ಮಣ್ಣಿನ ಕವಚವೊಂದನ್ನು ನಿರ್ಮಿಸುತ್ತಿದೆ” ಎಂದು ಮೋದಿ ಕಾಂಗ್ರೆಸ್‌ಗೆ ಲೇವಡಿ ಮಾಡಿದ್ದಾರೆ. ಅದೆಷ್ಟು ಬಾರಿ ನಮ್ಮ ಮೇಲೆ ಕೆಸರು ಎರಚುತ್ತೀರೋ ಎರಚಿ. ನೀವು ಮಣ್ಣೆರಚಿದಷ್ಟೂ, ಮನೆ ಮನೆಯಲ್ಲೂ, ಮೂಲೆ ಮೂಲೆಯಲ್ಲೂ ಕಮಲ ಅರಳುತ್ತಾ ಸಾಗುತ್ತದೆ ಎಂದಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಪಣತೊಟ್ಟ “ಸಬ್ಕಾ ಸಾತ್, ಸಬ್ಕಾ ವಿಕಾಸ್’ ಕೇವಲ ಘೋಷಣೆಯಲ್ಲ. ಬಿಜೆಪಿಗೆ ಇದರ ಮೇಲೆ ವಿಶ್ವಾಸವಿದೆ. ಈ ಸಾಧನೆಯ ತಳಹದಿಯ ಮೇಲೆ ಮುಂಬರುವ ಮಧ್ಯಪ್ರದೇಶ ಸೇರಿ ಉಳಿದ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಲಿದೆ. ದೇಶವನ್ನು ಒಡೆಯುತ್ತಿರುವ ಕಾಂಗ್ರೆಸ್‌ನಿಂದ ಬಿಜೆಪಿ ಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಾಧ್ಯವಿಲ್ಲ” ಎಂದೂ ಹೇಳಿದ್ದಾರೆ.
ಮಹತ್ವದ ವಿಚಾರಗಳು ಹೊರ ಬರಲಿವೆ
ಅಮೇಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಇನ್ನೂ ಮಹತ್ವದ ವಿಚಾರಗಳು ಹೊರಬರಲಿವೆ. ಉದ್ಯಮಿ ವಿಜಯ ಮಲ್ಯ ಸಾಲ ಹೊಂದಿದ್ದಂತೆ ರಿಲಯನ್ಸ್‌ನ ಅನಿಲ್ ಅಂಬಾನಿ ಕೂಡ 45 ಸಾವಿರ ಕೋಟಿ ರೂ. ಸಾಲ ಹೊಂದಿದ್ದಾರೆ.’ ಎಂದಿದ್ದಾರೆ.
ಯಾರಿಗೂ ಗೊತ್ತಿರಲಿಲ್ಲ
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್, ರಫೇಲ್ ಡೀಲ್ ಬಗ್ಗೆ ಕೇಂದ್ರ ಸಚಿವರಾಗಿದ್ದ ಮನೋಹರ್ ಪರ್ರಿಕರ್, ಹಾಲಿ ಸಚಿವರಾಗಿರುವ ಅರುಣ್ ಜೇಟಿÉ, ನಿರ್ಮಲಾ ಸೀತಾರಾಮನ್‌ಗೆ ಮಾಹಿತಿಯೇ ಇರಲಿಲ್ಲ. ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾಗಿದ್ದ ಫ್ರಾನ್‌ಸ್ವ ಒಲಾಂದ್‌ಗೆ ಮಾತ್ರ ಗೊತ್ತಿತ್ತು ಎಂದಿದ್ದಾರೆ. 2015ರ ಎ.8ರಂದು ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ರಫೇಲ್ ಡೀಲ್ 2015ರ ಎ.10ರಂದು ಪ್ರಧಾನಿ ಮೋದಿ ಫ್ರಾನ್ಸ್‌ಗೆ ಭೇಟಿ ವೇಳೆ ಪ್ರಸ್ತಾಪವಾಗುವುದಿಲ್ಲ ಎಂದು ಹೇಳಿದ್ದರು. ಆದರೆ, ಪ್ರವಾಸದ ವೇಳೆ 36 ವಿಮಾನಗಳ ಖರೀದಿ ಒಪ್ಪಂದವನ್ನು ನರೇಂದ್ರ ಮೋದಿ ಘೋಷಿಸಿದರು ಎಂದಿದ್ದಾರೆ. ರಿಲಯೆನ್ಸ್ ಡಿಫೆನ್ಸ್ ಲಿಮಿಟೆಡ್ ಸಂಸ್ಥೆ ರಚನೆಯಾದದ್ದೇ 2015ರ ಮಾ.28ರಂದು. ಡಸ್ಸಾಲ್ಟ್ ಏವಿಯೇಷನ್ ಅಧ್ಯಕ್ಷ ಎರಿಕ್ ಥಪರ್ ಮಾ.25ರಂದು ಎಚ್‌ಎಎಲ್ ಜತೆಗೆ ಡೀಲ್ ಅಂತಿಮ ವಾಗಿದೆ ಎಂದಿದ್ದರು ಎಂದು ಸಿಬಲ್ ಹೇಳಿದ್ದಾರೆ. “ನಾವು ರಫೇಲ್ ತಂತ್ರಜ್ಞಾನದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಅದರ ಬೆಲೆಯ ಬಗ್ಗೆ ಮಾತ್ರ ಪ್ರಶ್ನಿಸುತ್ತಿದ್ದೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.