One Nation, One Election ಸ್ವಾಗತಿಸಿದ ಕಾಂಗ್ರೆಸ್ ನಾಯಕ ಟಿ.ಎಸ್.ಸಿಂಗ್ ದಿಯೋ
Team Udayavani, Sep 1, 2023, 1:36 PM IST
ಹೊಸದಿಲ್ಲಿ: ಕೇಂದ್ರ ಸರ್ಕಾರವು ಇಂದು ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಸಾಧ್ಯತೆಗಳ ಬಗ್ಗೆ ಅವಲೋಕನ ನಡೆಸಲು ಸಮಿತಿ ರಚಿಸಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ದೇಶದ ಕುತೂಹಲ ಕೆರಳಿಸಿದೆ.
ಇದೀಗ ಕಾಂಗ್ರೆಸ್ ನ ಹಿರಿಯ ನಾಯಕ, ಛತ್ತೀಸಗಢ ಡಿಸಿಎಂ ಟಿಎಸ್ ಸಿಂಗ್ ದಿಯೋ ಅವರು ಕೇಂದ್ರ ಸರ್ಕಾರದ ಪ್ರಸ್ತಾಪಿಸಿರುವ ‘ಒಂದು ರಾಷ್ಟ್ರ ಒಂದು ಚುನಾವಣೆ’ ಯನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
“ವೈಯಕ್ತಿಕವಾಗಿ ನಾನು ಈ ‘’ಒಂದು ರಾಷ್ಟ್ರ ಒಂದು ಚುನಾವಣೆ’ಯನ್ನು ಸ್ವಾಗತಿಸುತ್ತೇನೆ. ಆದರೆ ಇದು ಹೊಸ ಯೋಜನೆಯೇನಲ್ಲ. ಇದು ಹಳೆಯದ್ದು” ಎಂದಿದ್ದಾರೆ.
‘ಒಂದು ರಾಷ್ಟ್ರ ಒಂದು ಚುನಾವಣೆ’, ಹೆಸರೇ ಸೂಚಿಸುವಂತೆ, ಲೋಕಸಭೆ ಮತ್ತು ರಾಜ್ಯಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಯೋಜಿಸಲಾಗಿದೆ. ಸೆಪ್ಟೆಂಬರ್ 18 ಮತ್ತು 22 ರ ನಡುವೆ ನಿಗದಿಯಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಮಸೂದೆಯನ್ನು ಪರಿಚಯಿಸಬಹುದು ಎಂಬ ವರದಿಯಾಗುತ್ತಿದೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ISRO ಸೂರ್ಯ ಯಾನದ ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ: ಪೇಜಾವರ ಶ್ರೀ ಕರೆ
ಉದ್ಧವ್ ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಮುಂಬರುವ ಚುನಾವಣೆಗಳನ್ನು ವಿಳಂಬಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
“ಒಂದು ರಾಷ್ಟ್ರ, ಒಂದು ಚುನಾವಣೆ” ಪರವಾಗಿಲ್ಲ, ಆದರೆ ನ್ಯಾಯಯುತ ಚುನಾವಣೆ ನಡೆಯಬೇಕು. ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಬೇಡಿಕೆಯನ್ನು ಮುಂದೂಡಲು ಅವರು (ಕೇಂದ್ರ) ಇದನ್ನು ಈಗ ತಂದಿದ್ದಾರೆ. ಇದು ಚುನಾವಣೆಯನ್ನು ವಿಳಂಬಗೊಳಿಸುವ ಪಿತೂರಿ ಎಂದು ನಾನು ಭಾವಿಸುತ್ತೇನೆ” ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದರು.
ಮಾಜಿ ಕೇಂದ್ರ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಯಶವಂತ್ ಸಿನ್ಹಾ, “ನೀವು ಪ್ರಸ್ತುತ ಸಂಸದೀಯ ವ್ಯವಸ್ಥೆಯನ್ನು ಅಧ್ಯಕ್ಷೀಯ ವ್ಯವಸ್ಥೆಯೊಂದಿಗೆ ಬದಲಾಯಿಸದ ಹೊರತು ನಿಮಗೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಸಾಧ್ಯವಿಲ್ಲ. ಇದು ಸರ್ಕಾರದ ಉದ್ದೇಶವೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.