ಭುಗಿಲೇಳಲಿದೆಯೇ ಉತ್ತರಾಧಿಕಾರಿ ವಿವಾದ?
Team Udayavani, Aug 9, 2018, 6:00 AM IST
ಚೆನ್ನೈ: ಡಿಎಂಕೆ ಪರಮೋಚ್ಚ ನಾಯಕರಾಗಿ ಮುತ್ತುವೇಲು ಕರುಣಾನಿಧಿ ಇದ್ದಾಗಲೇ ಅವರ ನಂತರ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬ ಬಗ್ಗೆ ಭಾರಿ ವಿವಾದ ಉಂಟಾಗಿತ್ತು. ಇದೀಗ ಕರುಣಾನಿಧಿ ನಿಧನದ ಬಳಿಕ ಉತ್ತರಾಧಿಕಾರಿ ವಿವಾದ ಮತ್ತೂಮ್ಮೆ ಭುಗಿಲೇಳಲಿದೆಯೇ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ತ್ತೀಚೆಗಷ್ಟೇ ಜಯಲಲಿತಾ ನಿಧನದ ನಂತರ ತೆರವಾದ ಆರ್.ಕೆ.ನಗರ ಕ್ಷೇತ್ರದ ಚುನಾವಣೆಯಲ್ಲಿ ಡಿಎಂಕೆ ಹೀನಾಯವಾಗಿ ಸೋತಾಗಲೂ ಸ್ಟಾಲಿನ್ ವಿರುದ್ಧ ಅಳಗಿರಿ ಮಾತನಾಡಿದ್ದರು. ಸ್ಟಾಲಿನ್ ನೇತೃತ್ವದಲ್ಲಿ ಆರ್.ಕೆ.ನಗರ ಮಾತ್ರವಲ್ಲ ಎಲ್ಲ ಚುನಾವಣೆ ಯನ್ನೂ ಸೋಲಲಿದೆ. ಕರುಣಾನಿಧಿ ನೇತೃತ್ವ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅಳಗಿರಿ ಹೇಳಿದ್ದರು. ಜತೆಗೆ ಡಿಎಂಕೆಯನ್ನು ಮಠ ಎಂದು ಹೀಯಾಳಿಸಿದ್ದರು. ಅಲ್ಲಿ ಸ್ವಾಮೀಜಿ ತನ್ನ ಉತ್ತರಾಧಿಕಾರಿಯನ್ನು ನೇಮಿಸುತ್ತಾರೆ. ಅದೇ ವ್ಯವಸ್ಥೆ ಡಿಎಂಕೆಯಲ್ಲಿಯೂ ಇದೆ ಎಂದು ಛೇಡಿಸಿದ್ದರು.
2014ರಲ್ಲಿ ಚುನಾವಣೆಗೂ ಮುನ್ನ ಪಕ್ಷದಿಂದ ಉಚ್ಛಾಟಿತರಾಗಿದ್ದ ಅಳಗಿರಿ ಮದುರೆಯಲ್ಲಿಯೇ ಇದ್ದರು. ಮುಂದಿನ ದಿನಗಳಲ್ಲಿ ಸ್ಟಾಲಿನ್ ವಿರುದ್ಧದ ತಮ್ಮ ಹೋರಾಟಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈಗಾಗಲೇ ಸ್ಟಾಲಿನ್‌ರನ್ನು ತನ್ನ ಉತ್ತರಾಧಿಕಾರಿ ಎಂಬುದಾಗಿ ಕರುಣಾನಿಧಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಿಂದಲೂ ಪಕ್ಷದ ದೈನಂದಿನ ಚಟುವಟಿಕೆಗಳನ್ನು ಸ್ಟಾಲಿನ್ ನಿರ್ವಹಿಸುತ್ತಿದ್ದಾರೆ.
ಎಲ್ಲೆಡೆ ನೂಕು ನುಗ್ಗಲು: ಕರುಣಾನಿಧಿ ಅಂತ್ಯಸಂಸ್ಕಾರದ ವೇಳೆ ಮರೀನಾ ಬೀಚ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಜನರು ಗುಂಪುಗೂಡಿದ್ದರಿಂದ ನೂಕುನುಗ್ಗಲು ಉಂಟಾಗತ್ತು.
ಸಂಸತ್‌ನಲ್ಲಿ ಕರುಣಾನಿಧಿಗೆ ಗೌರವ
ಡಿಎಂಕೆ ಪರಮೋಚ್ಚ ನಾಯಕ ಮುತ್ತುವೇಲು ಕರುಣಾನಿಧಿ ಅವರಿಗೆ ಲೋಕಸಭೆ, ರಾಜ್ಯಸಭೆ ಬುಧವಾರ ಗೌರವ ಸಲ್ಲಿಸಿ, ಕಲಾಪ ಮುಂದೂಡಿಕೆ ಮಾಡಿವೆ. ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೂ, ಅವರು ಲೋಕಸಭೆ ಅಥವಾ ರಾಜ್ಯಸಭೆ ಸದಸ್ಯರಾಗಿಲಿಲ್ಲ. ಇದೇ ಮೊದಲ ಬಾರಿಗೆ ರಾಜ್ಯಸಭೆ ಅಥವಾ ಲೋಕಸಭೆ ಸದಸ್ಯರಾಗಿರದೇ ಇದ್ದ ಪ್ರಮುಖ ನಾಯಕರೊಬ್ಬರ ನಿಧನ ಗೌರವಾರ್ಥ ಸಂತಾಪ ಸೂಚಿಸಿ, ಕಲಾಪ ಮುಂದೂಡುವ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಕಲಾಪ ಮುಂದೂಡುವ ಬಗ್ಗೆ ಪ್ರಮುಖ ರಾಜಕೀಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕರುಣಾನಿಧಿ ದೇಶದ ಪ್ರಮುಖ ನಾಯಕ. ಹೀಗಾಗಿ, ಅವರ ಗೌರವಾರ್ಥ ಕಲಾಪ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಮಾತನಾಡಿ, ಸರ್ಕಾರ ಕೂಡ ಅದೇ ನಿಲುವು ಹೊಂದಿದೆ ಎಂದು ಹೇಳಿದ್ದರು. ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅಗಲಿದ ನಾಯಕನಿಗೆ ಗೌರವ ಸಲ್ಲಿಸುವ ಸಂದೇಶ ಓದಿ, ಕೆಲ ನಿಮಿಷಗಳ ಕಾಲ ಗೌರವ ಸಲ್ಲಿಸುವಂತೆ ಕೋರಿದರು. ಬಳಿಕ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ನನಗೆ ಕರುಣಾನಿಧಿ ತಂದೆಗೆ ಸಮಾನ
ಕರುಣಾನಿಧಿಯವರ ನಿಧನ ತಮಗಾದ ವೈಯಕ್ತಿಕ ನಷ್ಟ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್‌ಗೆ ಬರೆದಿರುವ ಪತ್ರದಲ್ಲಿ ಈ ಅಂಶ ಪ್ರಸ್ತಾಪಿಸಿದ್ದಾರೆ. ಕಲೈನಾರ್ ವಿಶ್ವ ರಾಜಕೀಯದ ಅತ್ಯುನ್ನತ ನಾಯಕ. ತಮಿಳುನಾಡು ಮತ್ತು ದೇಶದ ಪ್ರಮುಖ ನೇತಾರರಲ್ಲಿ ಒಬ್ಬರು ಎಂದು ಹೇಳಿಕೊಂಡಿದ್ದಾರೆ. “ನನ್ನ ಪಾಲಿಗೆ ಕರುಣಾನಿಧಿಯವರ ತಂದೆ ಸಮಾನ. ಅವರು ನನಗೆ ಒಬ್ಬ ಅತ್ಯುತ್ತಮ ಮಾರ್ಗದರ್ಶಿಯಾಗಿದ್ದರು. ಅನೇಕ ಸಂದರ್ಭಗಳಲ್ಲಿ ನನಗೆ ಮಾರ್ಗದರ್ಶನ ಸಿಕ್ಕಿದೆ. ಮತ್ತೂಬ್ಬ ಕಲೈನಾರ್ ಅನ್ನು ನಾವು ಕಾಣಲು ಸಾಧ್ಯವೇ ಇಲ್ಲ” ಎಂದಿದ್ದಾರೆ.
ಶ್ರೀಲಂಕಾ ನಾಯಕರ ಸಂತಾಪ
ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಪ್ರಧಾನಿ ರನಿಲ್ ವಿಕ್ರಮಸಿಂಘೆ, ಮಾಜಿ ರಾಷ್ಟ್ರಪತಿ ಮಹಿಂದ್ರಾ ರಾಜಪಕ್ಸೆ, ಕರುಣಾನಿಧಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿರುವ ಸಿರಿಸೇನಾ, “ಕರುಣಾನಿಧಿ ನಿಧನ ಸುದ್ದಿ ಆಂತರ್ಯವನ್ನೇ ಅಲ್ಲೋಲ ಕಲ್ಲೋಲಗೊಳಿಸಿದೆ’ ಎಂದಿದ್ದರೆ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು, ತಮಿಳು ಸಾಹಿತ್ಯ, ಸಿನಿಮಾ ಹಾಗೂ ರಾಜಕೀಯಕ್ಕೆ ಕರುಣಾನಿಧಿ ನೀಡಿದ ಕೊಡುಗೆ ಸರಿಸಾಟಿಯಿಲ್ಲದ್ದು ಎಂದು ಬಣ್ಣಿಸಿದ್ದಾರೆ. ಇನ್ನು, ಶ್ರೀಲಂಕಾದಲ್ಲಿ ತಮಿಳರ ಪ್ರಾಬಲ್ಯ ಅಧಿಕವಿರುವ ಶ್ರೀಲಂಕಾದ ಉತ್ತರ ಭಾಗದ ಮುಖ್ಯಮಂತ್ರಿ ಸಿ.ವಿ. ವಿಘ್ನೇಶ್ವರನ್ ಸಂತಾಪ ಸೂಚಿಸಿದ್ದಾರೆ.
ದುಃಖದ ವಾತಾವರಣ
ಮುತ್ತುವೇಲು ಕರುಣಾನಿಧಿ 1924ರ ಜೂ.3ರಂದು ನಾಗ ಪಟ್ಟಿಣಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ಜನಿಸಿದ್ದರು. ಅವರ ನಿಧನ ದಿಂದಾಗಿ ಗ್ರಾಮಕ್ಕೆ ಇರುವ ಗುರುತು ನಷ್ಟವಾಗಿದೆ ಎಂದು ಸ್ಥಳೀಯರು ಶೋಕಿಸಿದ್ದಾರೆ. ಅವರು ಹುಟ್ಟಿ ಬೆಳೆದ ಮನೆ ಯ ಲ್ಲೀಗ ಗ್ರಂಥಾಲಯ ಇದೆ. ಅದಕ್ಕೆ ಅವರ ಹೆತ್ತವರ ಹೆಸ ರನ್ನೇ ಇರಿಸಲಾಗಿದೆ. 2009ರಲ್ಲಿ ಕರುಣಾ ಕೊನೆಯ ಬಾರಿಗೆ ಹುಟ್ಟಿದ ಗ್ರಾಮಕ್ಕೆ ಭೇಟಿ ನೀಡಿದ್ದರು.2006-2011ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕೈಗಾರಿಕಾ ತರಬೇತಿ ಸಂಸ್ಥೆ ಆರಂಭಿಸಿದ್ದರು. ಜತೆಗೆ ಅವರು ಓದಿದ್ದ ಶಾಲೆಯ ಅಭಿವೃದ್ಧಿಗೂ ನೆರವು ನೀಡಿದ್ದರು.
ಆಸ್ಪತ್ರೆಗಾಗಿ ಮನೆ ದಾನ
ಚೆನ್ನೈನ ಗೋಪಾಲಪುರಂನಲ್ಲಿರುವ ತಮ್ಮ ಅದ್ಧೂರಿ ನಿವಾಸವನ್ನು 2010ರಲ್ಲಿ ಬಡವರಿಗಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ನಿರ್ಮಾಣಕ್ಕೆ ಬಿಟ್ಟುಕೊಟ್ಟಿದ್ದರು. ತಮ್ಮ 86ನೇ ಹುಟ್ಟಿದ ದಿನ ಪ್ರಯುಕ್ತ ತಾಯಿ ಹೆಸರಲ್ಲಿ ರಚಿಸಲಾಗಿರುವ “ಅನ್ನೈ ಅಂಜುಗಂ ಟ್ರಸ್ಟ್’ ಗೆ ನಿವಾಸ ಬಿಟ್ಟುಕೊಟ್ಟಿದ್ದರು. 1968ರಲ್ಲಿ ಈ ನಿವಾಸವನ್ನು ಪುತ್ರರಾದ ಅಳಗಿರಿ, ಸ್ಟಾಲಿನ್ ಮತ್ತು ತಮಿಳರಸು ಹೆಸರಿನಲ್ಲಿ ನೋಂದಣಿ ಮಾಡಿಸಿದ್ದರು. 2009ರಲ್ಲಿ ಪುತ್ರರಿಂದ ಒಪ್ಪಿಗೆ ಪಡೆದುಕೊಂಡ ಬಳಿಕ ಆಸ್ಪತ್ರೆಗಾಗಿ ಮನೆ ಬಿಟ್ಟುಕೊಟ್ಟಿದ್ದರು.
ಶಾಲೆ ನಿರ್ಮಾಣಕ್ಕೆ ನೆರವು
ಮುಂಬಯಿಯಲ್ಲಿರುವ ಧಾರಾವಿ ಕೊಳೆಗೇರಿಯಲ್ಲಿ ತಮಿಳು ಭಾಷಿಕರಿಗಾಗಿ ಶಾಲೆ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಡಿಎಂಕೆ ನಾಯಕ ಎಂ.ಕರುಣಾನಿಧಿ ನೆರವು ನೀಡಿದ್ದರು. 1983ರಲ್ಲಿ ದಾದರ್-ಪಾರ್ಸಿ ಜಿಮ್ಕಾನಾ ಮತ್ತು ವರ್ಲಿ ಯಲ್ಲಿರುವ ಆದರ್ಶ ನಗರ ಮೈದಾನದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮಕ್ಕೂ ಅವರು ಆಗಮಿಸಿದ್ದರು ಎಂದು ಡಿಎಂಕೆಯ ಮುಂಬೈ ಘಟಕದ ನಾಯಕ ಆರ್.ಪಳನಿಸ್ವಾಮಿ ನೆನಪಿಸಿಕೊಂಡಿದ್ದಾರೆ. ಸಮಸ್ಯೆ ಬಗ್ಗೆ ಕರುಣಾನಿಧಿ ಅವರಲ್ಲಿ ವಿವರಿಸಿದ ಕೂಡಲೇ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರು ಎಂದರು. 1983ರ ಬಳಿಕ ಅವರು ಮುಂಬಯಿಗೆ ಭೇಟಿ ನೀಡಲಿಲ್ಲ.
ಅಪ್ಪಾ ಎಂದು ಕರೆಯಲೇ?
ಇದು ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್‌ರ ಕವಿತೆ. ಇಡೀ ರಾಜ್ಯವೇ ತಲೈವರ್ ಎಂದು ಕರೆಯುತ್ತಿದ್ದರೆ, ಅವರ ಕುಟುಂಬದ ಸದಸ್ಯರೂ ಹೀಗೆಯೇ ಹೇಳುತ್ತಿದ್ದರು. ಸ್ಟಾಲಿನ್ ಆಗಲಿ ಅಥವಾ ಅಳಗಿರಿಯಾಗಲೀ ಕರುಣಾನಿಧಿಯನ್ನು ಅಪ್ಪಾ ಎಂದು ಕರೆಯುತ್ತಿರಲಿಲ್ಲ. ಹೀಗಾಗಿ ಇದೇ ಶೀರ್ಷಿಕೆಯಲ್ಲಿ ತಂದೆಯನ್ನು ನೆನೆಸಿಕೊಂಡು ಸ್ಟಾಲಿನ್ ಕವಿತೆ ರಚಿಸಿದ್ದಾರೆ. ಅಪ್ಪಾ ಅಪ್ಪಾ ಎಂದು ಕರೆದಿದ್ದಕ್ಕಿಂತ ಹೆಚ್ಚಾಗಿ ನಾನು ಜೀವನಪೂರ್ತಿ ನಿಮ್ಮನ್ನು ತಲೈವರ್ ತಲೈವರ್ ಎಂದೇ ಕರೆದೆ. ಹೀಗಾಗಿ ಕೊನೆಗೆ ಒಮ್ಮೆ ನಾನು ನಿಮ್ಮನ್ನು ಅಪ್ಪಾ ಎಂದು ಕರೆಯಬಹುದೇ? ನೀವು ಎಲ್ಲಿ ಹೋಗುವಾಗಲೂ ನನ್ನ ಬಳಿ ಹೇಳಿಯೇ ಹೋಗುತ್ತಿದ್ದಿರಿ. ಆದರೆ ಈ ಬಾರಿ ಯಾಕೆ ಹೇಳದೇ ಹೋದಿರಿ.? ಎಂದು ಭಾವುಕರಾಗಿ ಸ್ಟಾಲಿನ್ ಬರೆದಿದ್ದಾರೆ. ಕವನದ ಪ್ರತಿಯನ್ನು ಸ್ಟಾಲಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.