ಮಧುಚಂದ್ರಕ್ಕೆ ಇಡೀ ರೈಲು ಬುಕ್ ಮಾಡಿದ್ದ ನವ ದಂಪತಿ
Team Udayavani, Sep 2, 2018, 6:00 AM IST
ಕೊಯಮತ್ತೂರು: ಹನಿಮೂನ್‌ಗೆಂದು ಭಾರತಕ್ಕೆ ಬಂದಿರುವ ಇಂಗ್ಲೆಂಡ್‌ನ ಜೋಡಿ ದಕ್ಷಿಣ ರೈಲ್ವೇಯ ಮೆಟ್ಟುಪಾಳಯಂ-ಉದಕಮಂಡಲಂ ವಿಶೇಷ ರೈಲಿನಲ್ಲಿ ನೀಲಗಿರೀಸ್ (ಊಟಿ)ಗೆ ತೆರಳಿ ಸಂಭ್ರಮಿಸಿದೆ. ಇದರಲ್ಲೇನು ವಿಶೇಷ ಅನ್ನುವಿರಾ? ವಿಶೇಷ ಇದೆ. ಈ ದಂಪತಿ ಸಂಚರಿಸಿದ ರೈಲಿನಲ್ಲಿ ಅವರನ್ನು ಬಿಟ್ಟು ಬೇರಾರೂ ಇರಲಿಲ್ಲ. ತಮ್ಮ ಮಧುಚಂದ್ರದ ಖುಷಿಗೆಂದು ಒಂದಿಡೀ ರೈಲನ್ನೇ ಬುಕ್ ಮಾಡಿ, ಮೆಟ್ಟುಪಾಳಯಂನಿಂದ ಊಟಿವರೆಗಿನ ಪ್ರಕೃತಿಯ ಸೌಂದರ್ಯವನ್ನು ಈ ದಂಪತಿ ಸವಿದಿದ್ದಾರೆ.
ಇತ್ತೀಚೆಗಷ್ಟೇ ಮದುವೆಯಾಗಿರುವ ಗ್ರಹಾಂ ವಿಲಿಯಂ ಲಿಯನ್ (30) ಹಾಗೂ ಸಿಲ್ವಿಯಾ ಪ್ಲಾಸಿಕ್ (27) ದಂಪತಿ ವಿಶೇಷ ರೈಲಿನ ಎಲ್ಲ ಬೋಗಿಗಳನ್ನೂ ಕಾಯ್ದಿರಿಸಿಕೊಂಡು ನೀಲಗಿರೀಸ್ ಬೆಟ್ಟದ ತನಕ ಪ್ರಯಾಣ ಬೆಳೆಸಿದೆ. ಈ ವಿಶೇಷ ಅವಕಾಶಕ್ಕಾಗಿ ಅವರು ಪಾವತಿಸಿದ್ದು ಬರೋಬ್ಬರಿ 2.5 ಲಕ್ಷ ರೂ.! ಅಷ್ಟೇ ಅಲ್ಲ, ಈ ರೀತಿಯಾದ ಸೇವೆ ಪಡೆದ ಮೊದಲ ದಂಪತಿ ಎನ್ನುವ ಹೆಗ್ಗಳಿಕೆ ಈಗ ಇಂಗ್ಲಿಷ್ ಜೋಡಿಯದಾಗಿದೆ. ಭಾರತೀಯ ರೈಲ್ವೇ ಈ ದಂಪತಿಯ ಇಚ್ಛೆಯಂತೆ ಆಹಾರಗಳನ್ನು ಪೂರೈಸಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ. ಪ್ರವಾಸೋದ್ಯಮ ನಿಗಮ ತನ್ನ ವೆಬ್‌ಸೈಟ್‌ನಲ್ಲೂ ಈ ಕುರಿತು ಪ್ರಕಟಿಸಿದೆ.
ನೀಲಗಿರೀಸ್ ಹಿಲ್‌ನ ಪ್ರಚಾರ, ಅಭಿವೃದ್ಧಿಗಾಗಿ ಸೇಲಂ ರೈಲ್ವೇ ವಿಭಾಗ ಈ ವಿಶೇಷ ರೈಲು ಸೇವೆ ನೀಡುತ್ತಿದ್ದು, ಇದರಲ್ಲಿ 143 ಆಸನಗಳಿವೆ. ಮೆಟ್ಟುಪಾಳಯಂನಿಂದ 9.10ಕ್ಕೆ ಹೊರಟ ರೈಲು ಊಟಿಗೆ ಮಧ್ಯಾಹ್ನ 2.40ಕ್ಕೆ ತಲುಪಿದ್ದು, ಪ್ರಯಾಣದ ದೂರ 48 ಕಿ.ಮೀ. ಆಗಿತ್ತು. ದಾರಿಯುದ್ದಕ್ಕೂ ಅರಣ್ಯ ಹಾಗೂ 13 ಸುರಂಗ ಮಾರ್ಗಗಳು ಸ್ವಾಗತಿಸುವ ಅಂದಾಜು ಐದು ಗಂಟೆಗಳ ವಿಶೇಷ ಪ್ರಯಾಣ ಇದಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.