ಮನೆಯೊಳಗೇ ಇದ್ದು ಕೊರೊನಾ ಮಣಿಸೋಣ
Team Udayavani, Mar 22, 2020, 7:40 AM IST
ಎಲ್ಲರ ಊಹೆಯನ್ನು ಮೀರುತ್ತಿರುವ ಕೋವಿಡ್ 19 ಸೋಂಕು ನಿಯಂತ್ರಣದ ಸಲುವಾಗಿ ಇಂದು ದೇಶ “ಜನತಾ ಕರ್ಫ್ಯೂ’ ಆಚರಿಸುತ್ತಿದೆ. ಎರಡು ದಿನಗಳ ಹಿಂದೆಯೇ ಪ್ರಧಾನಿ ಮೋದಿ ಈ ರವಿವಾರ ಸ್ವಯಂ ನಿಯಂತ್ರಣಕ್ಕಾಗಿ ಕರೆ ನೀಡಿದ್ದಾರೆ. ಕೊರೊನಾ ಸೋಂಕು ಸಾಮುದಾಯಿಕವಾಗಿ ಹರಡುವ ಹಂತ ತಲುಪುವ ಮುನ್ನ ಅದಕ್ಕೆ ತಡೆ ವಿಧಿಸುವುದಕ್ಕಾಗಿ ಮನೆಯಿದ ಹೊರಗೆ ಕಾಲಿಡದಿರೋಣ. ನಮ್ಮೆಲ್ಲರ ಹೆಜ್ಜೆಗಳೂ ದೇಶವನ್ನು ಕಾಡುತ್ತಿರುವ ಮಹಾಮಾರಿಯ ಸದ್ದಡಗಿಸುವಲ್ಲಿ ಸಹಕಾರಿಯಾಗಲಿ.
ಹೊಸದಿಲ್ಲಿ/ ಬೆಂಗಳೂರು: ಪ್ರಧಾನಿ ಮೋದಿ ಕರೆ ನೀಡಿರುವ “ಜನತಾ ಕರ್ಫ್ಯೂ’ಗೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಇಡೀ ದೇಶ ಮತ್ತು ಕರ್ನಾಟಕ ರಾಜ್ಯ ರವಿವಾರ ಬಹುತೇಕ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಅಗತ್ಯ ಸೇವೆಗಳು ಮಾತ್ರ ಲಭ್ಯವಾಗಲಿವೆ.
ವಿವಿಧ ಕ್ಷೇತ್ರಗಳ ಸರಕಾರಿ ಮತ್ತು ಸರಕಾ ರೇತರ ಸಂಘ-ಸಂಸ್ಥೆಗಳು ಪ್ರಧಾನಿ ಕರೆಗೆ ದನಿಗೂಡಿಸಿವೆ. ಜನರೂ ಮನೆಯಿಂದ ಸ್ವಯಂ ಪ್ರೇರಿತವಾಗಿ ಹೊರಬರದಿರಲು ಮಾನಸಿಕ ವಾಗಿ ಸಜ್ಜಾಗಿದ್ದಾರೆ. ಹಾಗಾಗಿ “ಜನತಾ ಕರ್ಫ್ಯೂ’ ಹೆಚ್ಚು ಪರಿಣಾಮಕಾರಿ ಆಗಲಿದೆ. ಗ್ರಾಮೀಣ ಭಾಗಗಳಲ್ಲಿ ಜನಜೀವನ ಎಂದಿನಂತೆ ಇರಲಿದ್ದು, ಬಸ್ ಸೇವೆಗಳ ಕೊರತೆ ತಟ್ಟಲಿದೆ. ರವಿವಾರ ಆಗಿರುವುದರಿಂದ ಸರಕಾರಿ ಸೇವೆಗಳಂತೂ ಸಿಗುವುದಿಲ್ಲ.
ದೂರದ ಊರುಗಳಿಗೆ ತೆರಳುವ ರೈಲು, ನಗರದಲ್ಲೇ ಸಂಚರಿಸುವ ಮೆಟ್ರೋ, ಸರಕು ಸಾಗಣೆಯ ಲಾರಿಗಳು, ಪ್ರವಾಸಿ ವಾಹನಗಳು, ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳು, ಖಾಸಗಿ ಎಕ್ಸ್‌ಪ್ರೆಸ್ ಮತ್ತು ಸಿಟಿ ಬಸ್‌ಗಳು ಅಗತ್ಯ ಇದ್ದಲ್ಲಿ ಮಾತ್ರ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಕಾರ್ಯಾಚರಿಸುವುದಾಗಿ ಘೋಷಿಸಿವೆ. ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ಔಷಧ ಅಂಗಡಿ, ಹಾಲು, ಆ್ಯಂಬುಲೆನ್ಸ್, ತುರ್ತು ವೈದ್ಯಕೀಯ ಸೌಲಭ್ಯಗಳು ಎಂದಿನಂತೆ ಇರಲಿವೆ. ಹೊಟೇಲ್‌ಗಳಲ್ಲಿ ಕಾಫಿ-ಟೀ, ತಿಂಡಿ, ಊಟ ಪೂರೈಕೆ ಇರುವುದಿಲ್ಲ. ಪಾರ್ಸೆಲ್ ಒಯ್ಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇವೆಲ್ಲದರಿಂದ ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ.
ಹೊಟೇಲ್‌ಗಳು, ವಾಣಿಜ್ಯ ಮತ್ತು ಕೈಗಾರಿಕೆ ಗಳು, ದಿನಸಿ ಅಂಗಡಿಗಳು, ಆ್ಯಪ್ ಆಧಾ ರಿತ ಟ್ಯಾಕ್ಸಿಗಳು, ಮಾರುಕಟ್ಟೆಗಳು ಕೂಡ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮುನ್ಸೂ ಚನೆ ನೀಡಿವೆ. ಬ್ಯಾಂಕಿಂಗ್ ಸೇವೆಗಳು ಅನು ಮಾನ ಎಂದು ವಿವಿಧ ಬ್ಯಾಂಕ್ ನೌಕರರ ಸಂಘ ಟನೆಗಳ ಮುಖಂಡರು ತಿಳಿಸಿದ್ದಾರೆ. ಮಾಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲು ಸರಕಾರವೇ ಸೂಚಿಸಿದೆ.
ಈಗಾಗಲೇ “ಕರ್ಫ್ಯೂ’ ಬಿಸಿ!
ಆಟೋ, ಟ್ಯಾಕ್ಸಿಗಳಿಗೆ ಕೆಲವು ದಿನಗಳಿಂದ ಈಚೆಗೆ ಕೊರೊನಾ ಬಿಸಿ ತಟ್ಟಿದ್ದು, ಗ್ರಾಹಕರ ಬರ ಎದುರಿಸುತ್ತಿವೆ. ಆದ್ದರಿಂದ ಅಧಿಕೃತವಾಗಿ ಸ್ಥಗಿತ ಘೋಷಣೆ ಮಾಡಿಲ್ಲ. ಜನಸಂಚಾರ ವಿರಳ ಇರುವುದರಿಂದ ಈ ಸೇವೆಗಳು ಅಷ್ಟಕ್ಕಷ್ಟೇ ಇರಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಎಂದಿನಂತೆ ಇರಲಿದೆ.
ಒಂದೆಡೆ ಸಮೂಹ ಸಾರಿಗೆಗಳು ಇರುವುದಿಲ್ಲ; ಮತ್ತೂಂದೆಡೆ ಖಾಸಗಿ ವಾಹನಗಳಿಗೆ ಪೆಟ್ರೋಲ್-ಡೀಸೆಲ್ ಕೂಡ ಅಲಭ್ಯವಾದರೆ ಜನ ಪರದಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇವಲ ನೈತಿಕ ಬೆಂಬಲ ನೀಡಲಾಗುತ್ತದೆ ಎಂದು ಪೆಟ್ರೋಲಿಯಂ ವಿತರಕರ ಸಂಘವು ಸ್ಪಷ್ಟಪಡಿಸಿದೆ.
ಈ ಮಧ್ಯೆ ಕರ್ಫ್ಯೂ ಮುನ್ನಾದಿನವೇ ಬೆಂಗಳೂರಿನಲ್ಲಿ ಬಂದ್ ವಾತಾವರಣ ಇತ್ತು. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೆಚ್ಚು ಜನಸಂದಣಿಯಿಂದ ಕೂಡಿರುತ್ತಿದ್ದ ಕಬ್ಬನ್ ಉದ್ಯಾನ, ಲಾಲ್‌ಬಾಗ್, ದೇವಾಲಯಗಳು, ಮನೋರಂಜನಾ ತಾಣಗಳು ಬಿಕೋ ಎನ್ನುತ್ತಿದ್ದವು. ಶನಿವಾರ ಸಂಜೆಯಿಂದಲೇ ಮಾರ್ಚ್ 31ರ ವರೆಗೆ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲು ಸೂಚಿಸಿರುವುದರಿಂದ ಬೆಳಗ್ಗಿನಿಂದಲೇ ಗ್ರಾಹಕರು ಮದ್ಯದಂಗಡಿಗಳಿಗೆ ಮುಗಿ ಬಿದ್ದುದು ಕಂಡುಬಂತು.
ಒಡಿಶಾ ವಾರ ಕಾಲ ಬಂದ್
ದೇಶದಲ್ಲಿ ಇದೇ ಮೊದಲ ಬಾರಿಗೆ ಒಡಿಶಾ ಒಂದು ವಾರದ ಮಟ್ಟಿಗೆ ಸಂಪೂರ್ಣ ಬಂದ್ ಆಚರಿಸಲಿದೆ. ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಂಪೂರ್ಣ ಶಟ್ ಡೌನ್‌ಗೆ ಅಲ್ಲಿನ ಸರಕಾರ ಆದೇಶಿಸಿದೆ. ಈ ರವಿವಾರದಿಂದಲೇ ಈ ಬಂದ್ ಆರಂಭವಾಗಲಿದ್ದು, ಜನತೆ ಸಹಕಾರ ನೀಡಬೇಕು, ಯಾರೊಬ್ಬರೂ ಮನೆಯಿಂದ ಹೊರಗೆ ಬರಬಾರದು ಎಂದು ಸಿಎಂ ನವೀನ್ ಪಟ್ನಾಯಕ್ ಮನವಿ ಮಾಡಿದ್ದಾರೆ.
ನಿಯಮ ಮುರಿದ ಮೇರಿ ಕೋಮ್
ಇತ್ತೀಚೆಗಷ್ಟೇ ವಿದೇಶ ಪ್ರವಾಸದಿಂದ ವಾಪಸ್ ಬಂದಿದ್ದ ಬಾಕ್ಸರ್ ಮತ್ತು ರಾಜ್ಯಸಭೆ ಸದಸ್ಯೆ ಮೇರಿ ಕೋಮ್ 14 ದಿನಗಳ ಕಾಲ ಸ್ವಯಂ ನಿಯಂತ್ರಣದಲ್ಲಿ, ಎಲ್ಲರಿಂದ ಪ್ರತ್ಯೇಕವಾಗಿ ಇರುವುದಾಗಿ ಹೇಳಿದ್ದರು. ಆದರೆ ಈ ನಿಯಮ ಮುರಿದಿರುವ ಅವರು, ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ಮಾ.14ರಂದು ಜೋರ್ಡಾನ್‌ನಿಂದ ಬಂದಿದ್ದ ಇವರು 14 ದಿನ ಪ್ರತ್ಯೇಕವಾಗಿ ಇರಬೇಕಿತ್ತು. ಆದರೆ ಮಾ.18ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಯುಪಿಯಲ್ಲಿ 1,000 ರೂ. ಭತ್ತೆ
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಉತ್ತರ ಪ್ರದೇಶದ 15 ಲಕ್ಷ ಕೂಲಿ ಕಾರ್ಮಿಕರು ಮತ್ತು 20.37 ಲಕ್ಷ ದಿನಗೂಲಿ ನೌಕರರಿಗೆ ತಿಂಗಳಿಗೆ 1,000 ರೂ. ಭತ್ತೆ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ನೇರ ಲಾಭ ವರ್ಗಾವಣೆ ಮೂಲಕ ಕಾರ್ಮಿಕರಿಗೆ ಈ ಹಣ ಸಂದಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕರ್ಫ್ಯೂ ಬೆಂಬಲಿಸಿ
ರವಿವಾರ “ಜನತಾ ಕರ್ಫ್ಯೂ’ ಆಚರಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಸಂಬಂಧಿ ಪತ್ರಿಕಾ ಹೇಳಿಕೆಯಲ್ಲಿ, ರಾತ್ರಿ 9ಕ್ಕೆ ಕರ್ಫ್ಯೂ ಮುಗಿದಿದೆ ಎಂದುಕೊಳ್ಳಬೇಡಿ, ಸ್ವಯಂ ನಿರ್ಬಂಧ ಅನಂತರವೂ ಮುಂದುವರಿಯಲಿ ಎಂದು ಮನವಿ ಮಾಡಿದ್ದಾರೆ. ಸಂಜೆ 5 ಗಂಟೆಗೆ ನಿಮ್ಮ ಮನೆ ಕಿಟಿಕಿ ಮತ್ತು ಛಾವಣಿಯಿಂದ ಚಪ್ಪಾಳೆ ತಟ್ಟಿ, ಸರಕಾರ ಮತ್ತು ರೋಗ ತಡೆಯುವಲ್ಲಿ ಭಾಗಿಯಾಗಿರುವ ಜನರಿಗೆ ನೈತಿಕ ಬೆಂಬಲ ಸೂಚಿಸಲು ಮರೆಯಬೇಡಿ ಎಂದಿದ್ದಾರೆ.
ಅನಗತ್ಯ ಸಂಚಾರ ಬೇಡ
ಕೊರೊನಾ ಬಗ್ಗೆ ಆತಂಕ ಬೇಡ, ಮುಂಜಾಗ್ರತೆ ಇರಲಿ ಎಂದು ಮತ್ತೆ ಒತ್ತಿಹೇಳಿರುವ ಪ್ರಧಾನಿ ಮೋದಿ, ಈಗ ಎಲ್ಲಿದ್ದೀರೋ ಅಲ್ಲಿಯೇ ಇರಿ ಎಂದೂ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನೀವಿರುವ ಪ್ರದೇಶದಿಂದ ಮತ್ತೂಂದೆಡೆ ಅಥವಾ ನಿಮ್ಮ ಸ್ವಂತ ಸ್ಥಳಕ್ಕೆ ಹೋಗುವ ಪ್ರಯತ್ನ ಮಾಡಬೇಡಿ. ಅನಾವಶ್ಯಕ ಪ್ರಯಾಣವೂಬೇಡ ಎಂದಿದ್ದಾರೆ. ಈಚೆಗೆ ವಿವಿಧ ರೈಲುಗಳಲ್ಲಿ ಪ್ರಯಾಣಿಸಿದ 12 ಮಂದಿಗೆ ಸೋಂಕು ದೃಢಪಟ್ಟದ್ದರಿಂದ ಈ ಮನವಿ ಮಹತ್ವದ್ದಾಗಿದೆ.
ಪರೀಕ್ಷಾ ನಿಯಮ ಬದಲು
ಇನ್ನು ಮುಂದೆ ಉಸಿರಾಟದ ಸಮಸ್ಯೆ, ಜ್ವರ ಮತ್ತು ಕೆಮ್ಮು ಎಂದು ಆಸ್ಪತ್ರೆಗೆ ದಾಖಲಾಗುವ ಎಲ್ಲರನ್ನೂ ಕೋವಿಡ್ -19 ಪರೀಕ್ಷೆಗೆ ಒಳಪಡಿಸುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ಘೋಷಿಸಿದೆ. ದೇಶವಿನ್ನೂ 3ನೇ ಹಂತ ಅಂದರೆ ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ತಲುಪಿಲ್ಲ. ಒಂದು ವೇಳೆ ಅಂಥ ಸ್ಥಿತಿಗೆ ತಲುಪಿದರೆ ಆಗ ಮತ್ತೆ ಪರೀಕ್ಷಾ ಕಾರ್ಯತಂತ್ರಗಳಲ್ಲಿ ಬದ ಲಾವಣೆ ಮಾಡಲಾಗುತ್ತದೆ. ಪರೀಕ್ಷಾ ಸಲಹೆಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಬದಲಿಸಲಾಗುತ್ತದೆ ಎಂದು ಮಂಡಳಿ ಹೇಳಿದೆ.
ಎರಡು ತಿಂಗಳುಗಳ ಪಡಿತರ ವಿತರಣೆ
ರಾಜ್ಯದ ಪಡಿತರ ಬಳಕೆದಾರರ ಅನುಕೂಲ ಕ್ಕಾಗಿ ತಾತ್ಕಾಲಿಕವಾಗಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಎಪ್ರಿಲ್ ಮೊದಲ ವಾರದಲ್ಲೇ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂತ್ಯೋದಯ ಕಾರ್ಡ್‌ದಾರರಿಗೆ ತಿಂಗಳಿಗೆ 35 ಕೆ.ಜಿ.ಯಂತೆ ಎರಡು ತಿಂಗಳಿಗೆ 70 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುವುದು. ಬಿಪಿಎಲ್ ಕಾರ್ಡ್‌ದಾರ ಪ್ರತಿ ಫಲಾನುಭವಿಗೆ ತಿಂಗಳಿಗೆ ಐದು ಕೆ.ಜಿ.ಯಂತೆ ಎರಡು ತಿಂಗಳಿಗೆ ಹತ್ತು ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.