ಕೋವಿಡ್ -19 ವೈರಸ್ ಸಮರಕ್ಕೆ ಏಕತೆಯ ಉತ್ತರ
ಮನೆಯಲ್ಲೇ ಉಳಿದ ಜನ; ಬಿಕೋ ಎಂದ ರಸ್ತೆಗಳು ; ಆರೋಗ್ಯ ಯೋಧರಿಗೆ ಚಪ್ಪಾಳೆ ಮೂಲಕ ಕೃತಜ್ಞತೆ
Team Udayavani, Mar 23, 2020, 6:00 AM IST
ಬೆಂಗಳೂರು/ಹೊಸದಿಲ್ಲಿ: ಬರಿಗಣ್ಣಿಗೂ ಕಾಣದ ವೈರಸ್ ಒಂದು ಕರ್ನಾಟಕ ರಾಜ್ಯದ ಸುಮಾರು ಏಳು ಕೋಟಿ ಜನರ ಸಹಿತ ಇಡೀ ದೇಶದ ಸಮಸ್ತ ಜನತೆಯನ್ನು ರವಿವಾರ ಮನೆಯಲ್ಲಿ ಕೂಡಿಹಾಕಿತು. ಪ್ರಧಾನಿ ಮೋದಿ ಅವರು ಕರೆ ನೀಡಿದ “ಜನತಾ ಕರ್ಫ್ಯೂ’ಗೆ ವ್ಯಾಪಕ ಬೆಂಬಲ ನೀಡಿದ ಜನತೆ ಮನೆ ಯಿಂದ ಆಚೆಗೆ ಬರಲಿಲ್ಲ. ರವಿವಾರದ ಈ “ಗೃಹ ಬಂಧನ’ ಕೇವಲ ಸ್ಯಾಂಪಲ್ ಮಾತ್ರ ಆಗಿದ್ದು, ಮುಂದಿನ ಒಂಬತ್ತು ದಿನ ರಾಜ್ಯದ ಒಂಬತ್ತು ಜಿಲ್ಲೆಗಳ ಲಕ್ಷಾಂತರ ಮಂದಿ ಇದೇ ರೀತಿ ಕೋವಿಡ್ -19 ಗೃಹಬಂಧನ ಅನು ಭವಿಸಬೇಕಿದೆ.
ರಾಜ್ಯದಲ್ಲಿ ಕೋವಿಡ್ -19 ಪೀಡಿತರ ಸಂಖ್ಯೆ ರವಿವಾರ ರಾತ್ರಿ 26ಕ್ಕೆ ಏರಿದೆ. ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರುವ 130 ಮಂದಿಯ ಸಹಿತ ಒಟ್ಟಾರೆ ಶಂಕಿತರ ಸಂಖ್ಯೆ 3,500 ಮುಟ್ಟಿದೆ. ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಅಕ್ಷರಶಃ ದಿಗ್ಬಂಧನ ವಿಧಿಸಲಾಗಿದೆ. ಜಾಗತಿಕ ಮಹಾಮಾರಿ ನಿಯಂತ್ರಣ ಕಾಯ್ದೆ- 1897ರ ಕಲಂ 2, 3 ಮತ್ತು 4ರ ಅನ್ವಯ ಈ ಭಾಗಗಳಲ್ಲಿ ಅಗತ್ಯ ಸೇವೆಗಳ ವಿನಾ ಉಳಿದೆಲ್ಲ ಸೇವೆಗಳು ಬಹುತೇಕ ಅಲಭ್ಯವಾಗಲಿವೆ. ಮಾರ್ಚ್ 31ರ ವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ.
“ಜನತಾ ಕರ್ಫ್ಯೂ’ ಆಚರಣೆ ದಿನವೇ ರಾಜ್ಯದಲ್ಲಿ ಆರು ಪ್ರಕರಣಗಳು ದೃಢಪಟ್ಟಿವೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರಿಕೆಯ ಕ್ರಮದಲ್ಲಿ ಸಾಗುತ್ತಿದ್ದು, ಜನರ ಚಲನವಲನಗಳನ್ನು ಅನಿವಾರ್ಯವಾಗಿ ನಿಯಂತ್ರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರಮುಖ “ಸಂಚಾರ ನಾಡಿ’ಗಳನ್ನು ಕಡಿತಗೊಳಿಸಲಾಗಿದೆ.
ಕರ್ಫ್ಯೂಗೆ ಭಾರೀ ಸ್ಪಂದನೆ
ಪ್ರಧಾನಿ ಮೋದಿ ನೀಡಿದ “ಜನತಾ ಕರ್ಫ್ಯೂ’ ಕರೆಗೆ ಕನ್ನಡಿಗರಿಂದ ರವಿವಾರ ಅಭೂತಪೂರ್ವ ಸ್ಪಂದನೆ ದೊರಕಿತು. ಬಹುತೇಕ ಎಲ್ಲ ಭಾಗಗಳ ಜನ ಬೆಳಗ್ಗಿನಿಂದಲೇ ಸ್ವಯಂಪ್ರೇರಿತವಾಗಿ ಹೊರಬೀಳಲಿಲ್ಲ. ಮನೆಗಳಲ್ಲೇ ಇದ್ದು ಸರಕಾರದ ಆದೇಶವನ್ನು ಪಾಲಿಸಿದರು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಂತೂ ಅಕ್ಷರಶಃ ಸ್ಮಶಾನಮೌನ ಆವರಿಸಿತ್ತು. ಪ್ರಮುಖ ರಸ್ತೆಗಳು, ಅಂಗಡಿ-ಮುಂಗಟ್ಟುಗಳು, ಬೀದಿಬದಿ ವ್ಯಾಪಾರಿಗಳು, ತರಕಾರಿ ಮಾರುಕಟ್ಟೆಗಳು, ಬೀಡಿ ಅಂಗಡಿಗಳು, ಕೈಗಾರಿಕೆಗಳು, ಹೋಟೆಲ್‌ಗಳು, ಸರಕಾರಿ ಮತ್ತು ಖಾಸಗಿ ಬಸ್‌ಗಳು ಸ್ತಬ್ಧವಾಗಿದ್ದವು.
“ಕರ್ಫ್ಯೂ’ ಸುಳಿವು ಮೊದಲೇ ಸಿಕ್ಕಿದ್ದರಿಂದ ಬೆಳಗಿನ ಜಾವ ಹಾಲು, ಪತ್ರಿಕೆ, ತರಕಾರಿ-ಹಣ್ಣು, ಮೀನು-ಮಾಂಸ ಮಾರುಕಟ್ಟೆಗಳಿಗೆ ಜನ ಮುಗಿಬಿದ್ದರು. ಸ್ವಲ್ಪವೇ ಹೊತ್ತಿನಲ್ಲಿ ನಿತ್ಯದ ವಸ್ತುಗಳು ಖಾಲಿ ಆದವು. ಬೆಳಿಗ್ಗೆ 8ರ ಹೊತ್ತಿಗಾಗಲೇ ಬಹುತೇಕ ಅಂಗಡಿಗಳಿಗೆ ಬೀಗ ಹಾಕಿರುವುದು ಕಂಡುಬಂದಿತು. ಸಂಜೆ 5 ಗಂಟೆ ಆಗುತ್ತಿದ್ದಂತೆ ಜನ ಪ್ರಧಾನಿ ಸೂಚನೆಯಂತೆ ಮನೆ ಹೊರಗೆ, ಕಿಟಕಿ, ಮೇಲ್ಛಾವಣಿಯಲ್ಲಿ ನಿಂತು ಚಪ್ಪಾಳೆ ತಟ್ಟುವುದು ಮಾತ್ರವಲ್ಲದೆ ಶಂಖ, ಜಾಗಟೆಗಳನ್ನು ಬಾರಿಸುವ ಮೂಲಕವೂಅಭಿನಂದನೆ ಸಲ್ಲಿಸಿದರು. ಕೆಲವೆಡೆ ತಮಟೆ, ಗಂಟೆ ಬಾರಿಸಿದ್ದೂ ಕಂಡುಬಂತು.
ಬಿಎಸ್‌ವೈ ನಿವಾಸದಲ್ಲಿ ಸಭೆ
ರವಿವಾರ ಬೆಳಗ್ಗೆ 6 ಗಂಟೆಗೆ ಸಿಎಂ ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿಯಲ್ಲಿರುವ ಖಾಸಗಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ , ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹಾಗೂ ನಾರಾಯಣ ಹೃದಯಾಲಯದ ಡಾ| ದೇವಿ ಶೆಟ್ಟಿ ಪಾಲ್ಗೊಂಡಿದ್ದರು.
ಸಭೆಯ ಮುಖ್ಯಾಂಶಗಳು
– ಸರಕಾರಿ ಮತ್ತು ಸರಕಾರೇತರ ಆಸ್ಪತ್ರೆಗಳಿಗೂ ಕೋವಿಡ್-19 ತಪಾಸಣೆಗೆ ಪರವಾನಿಗೆ
-ಸ್ಥಳೀಯ ವಿಮಾನ ಪ್ರಯಾಣಿಕರಿಗೂ ಕಡ್ಡಾಯವಾಗಿ ತಪಾಸಣೆ
-ಎಲ್ಲ ಚುನಾವಣೆಗಳ ಮುಂದೂಡಿಕೆ
-ಬಾಲಬ್ರೂಯಿ ಅತಿಥಿ ಗೃಹ ಕೋವಿಡ್ -19 ವಾರ್ ರೂಂ ಆಗಿ ಪರಿವರ್ತನೆ
-ಮುಂದಿನ 15 ದಿನ ನಗರಗಳಿಂದ ಯಾರೂ ಹಳ್ಳಿಗಳಿಗೆ ಹೋಗದಂತೆ ಮನವಿ
-1,700 ಹಾಸಿಗೆಗಳ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್ -19 ಚಿಕಿತ್ಸೆಗಾಗಿ ಮಾತ್ರ ಮೀಸಲಿಡಲು ತೀರ್ಮಾನ
-ಎಸೆಸೆಲ್ಸಿ ಪರೀಕ್ಷೆ ಮತ್ತು ಇತರ ಎಲ್ಲ ಪರೀಕ್ಷೆ ಮುಂದೂಡಿಕೆ
-ರಾಜ್ಯದ ಎಲ್ಲ ಗಡಿ ಭಾಗ ಬಂದ್
ಎಲ್ಲರಿಗೂ ಕೃತಜ್ಞತೆಗಳು
ಕೋವಿಡ್ -19 ಹೊಡೆದೊಡಿಸುವಲ್ಲಿ ಮೊದಲ ಹೆಜ್ಜೆ”ಜನತಾ ಕರ್ಫ್ಯೂ ’ ಯಶಸ್ವಿಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ “ಉದಯವಾಣಿ’ವತಿಯಿಂದ ಧನ್ಯವಾದಗಳು. ಅಂದರೆ ಆರೋಗ್ಯ ಯೋಧರಾದ ವೈದ್ಯರು,ಆಸ್ಪತ್ರೆ ಸಿಬಂದಿ, ಆ್ಯಂಬುಲೆನ್ಸ್ ಸಿಬಂದಿ,ಸಾರಿಗೆ ಸಿಬಂದಿ, ಪೊಲೀಸರು,ಅಗ್ನಿಶಾಮಕ ದಳ,ಗೃಹರಕ್ಷಕ ದಳ, ಯೋಧರು,ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ಏಜೆಂಟರು,ಪತ್ರಿಕಾ ವಿತರಕರಿಗೆ ಕೃತಜ್ಞತೆಗಳು.
ಒಂದೇ ದಿನ 6 ಮಂದಿಗೆ ಸೋಂಕು
ರಾಜ್ಯದಲ್ಲಿ ರವಿವಾರ ಒಂದೇ ದಿನ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿ ಆರು ಮಂದಿಯಲ್ಲಿ ಕೋವಿಡ್ -19 ದೃಢಪಟ್ಟಿದ್ದು, ರಾಜ್ಯದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಸೋಂಕು ಪೀಡಿತರ ಪೈಕಿ ಈಗಾಗಲೇ ಒಬ್ಬರು ಮೃತರಾಗಿದ್ದು, ಮತ್ತೂಬ್ಬರು ಗುಣಮುಖರಾಗಿ ಮನೆ ಸೇರಿದ್ದಾರೆ. ರವಿವಾರ ಬೆಂಗಳೂರಿನಲ್ಲಿ ಇಬ್ಬರು ಪುರುಷರು, ಒಬ್ಬ ಮಹಿಳೆ, ಧಾರವಾಡ, ಮಂಗಳೂರು ತಲಾ ಒಬ್ಬ ಪುರುಷ ಹಾಗೂ ಚಿಕ್ಕಬಳ್ಳಾಪುರದ ಗೌರಿ ಬಿದನೂರಿನಲ್ಲಿ ಒಬ್ಬ ಮಹಿಳೆಯಲ್ಲಿ ಸೋಂಕು ದೃಢವಾಗಿದೆ.ಈ ಎಲ್ಲ ಸೋಂಕು ಪೀಡಿತರನ್ನು ನಿಗಾ ಆಸ್ಪತ್ರೆಗಳಿಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗು ತ್ತಿದ್ದು,ಅವರೊಂದಿಗಿನ ಪ್ರಥಮ ಮತ್ತು ಎರಡನೇ ಹಂತದ ಸಂಪರ್ಕಿತ ವ್ಯಕ್ತಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಬಳಿಕ ಅವರ ಸೋಂಕು ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
9 ಜಿಲ್ಲೆ ಲಾಕ್ ಡೌನ್
ಕೋವಿಡ್ -19 ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಸೋಮವಾರದಿಂದ ಮಾ. 31ರ ವರೆಗೂ ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಸೇರಿದಂತೆ ಕೋವಿಡ್-19 ಪ್ರಕರಣ ಕಂಡುಬಂದಿರುವ ಈ 9 ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗುತ್ತದೆ. ಈ ಜಿಲ್ಲೆ ಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ, ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿ ಸುವುದು. ಹಾಗೆಯೇ ಈ 9 ಜಿಲ್ಲೆಗಳ ಅಂತರ್ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು 31ನೇ ಮಾರ್ಚ್ 2020ರ ವರೆಗೆ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ.
ಯುದ್ಧ ಗೆಲ್ಲೋಣ
ಇದು ಸುದೀರ್ಘ ಸಮರದ ವಿರುದ್ಧದ ಹೋರಾಟದ ಆರಂಭವಷ್ಟೇ… ನಾವು ಮುಂದೆಯೂ ಸಾಮಾ ಜಿಕ ಅಂತ ರವನ್ನು ಕಾಪಾಡಿಕೊಂಡು, ಕೆಲವು ನಿರ್ಬಂಧಗಳನ್ನು ಅಳವಡಿಸಿಕೊಂಡು ಈ ಯುದ್ಧದಲ್ಲಿ ಜಯಗಳಿಸೋಣ ಎಂದು
ಹೇಳಿದವರು ಪ್ರಧಾನಿ ನರೇಂದ್ರ ಮೋದಿ.
75 ಜಿಲ್ಲೆಗಳು ಬಂದ್
ಕೋವಿಡ್ -19 ಬೃಹತ್ ಪ್ರಮಾಣದಲ್ಲಿ ಹಬ್ಬುತ್ತಿರುವ ಹಿನ್ನೆ ಲೆಯಲ್ಲಿ ದೇಶದ 75 ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲೂ ಸೋಂಕುಪೀಡಿತರು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರಾವ ಸೇವೆಯೂ ಲಭ್ಯವಿರುವುದಿಲ್ಲ.
ಈ ಸೇವೆ ಮಾತ್ರ
-ದಿನಸಿ ಅಂಗಡಿ, ಹಾಲು, ತರಕಾರಿ, ಮಾಂಸ, ಮೀನು, ಹಣ್ಣು ಮಾರುಕಟ್ಟೆ ಮತ್ತು ಮಳಿಗೆಗಳು
-ಸರಕು ವಾಹನ ಓಡಾಟ
-ಪೊಲೀಸ್ ಮತ್ತು ಅಗ್ನಿಶಾಮಕ ಸೇವೆ
-ಸರಕಾರಿ ಕಚೇರಿಗಳು, ಪುರಸಭೆ, ನಗರಸಭೆ, ಎಲ್ಲ ಪಂಚಾಯತ್‌ಗಳು, ಅಂಚೆ ಸೇವೆ
-ವಿದ್ಯುತ್, ನೀರು, ಬ್ಯಾಂಕ್, ಎಟಿಎಂ, ಟೆಲಿಕಾಂ
-ಫುಡ್ ಡೆಲಿವರಿ, ಫಾರ್ಮಸುÂಟಿಕಲ್,ವೈದ್ಯಕೀಯ ಸಲಕರಣೆ ಮಳಿಗೆ
-ಎಲ್ಲ ಹೊಟೇಲ್‌ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ
-ಕೃಷಿ, ತೋಟಗಾರಿಕೆ, ಮೀನುಗಾರಿಕೆ,ಪಶುಸಂಗೋಪನೆ ಸಂಬಂಧಿ ಮಳಿಗೆ
-ಮಾಧ್ಯಮ ಸಂಸ್ಥೆಗಳು
7ಕ್ಕೇರಿದ ಸಾವಿನ ಸಂಖ್ಯೆ
ಕೋವಿಡ್ -19ದಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಾ ಗಿದೆ. ರವಿವಾರ ಮತ್ತೆ ಮೂವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ,ಬಿಹಾರ ಮತ್ತು ಗುಜರಾತ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ ಕರ್ನಾಟಕ, ದಿಲ್ಲಿ ಮಹಾ ರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇಂಡಿಯಾ @387
ರವಿವಾರ ಸಂಜೆ ವೇಳೆಗೆ ದೇಶಾದ್ಯಂತ ಸೋಂಕುಪೀಡಿತರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಹೊಸದಾಗಿ 15 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 5 ಕಾಸರಗೋ ಡಿನಲ್ಲಿ ದೃಢಪಟ್ಟಿವೆ. ಕಣ್ಣೂರಿನಲ್ಲಿ 4, ಮಲಪ್ಪುರಂ ಮತ್ತು ಕಲ್ಲಿಕೋಟೆಯಲ್ಲಿ ತಲಾ 2, ಎರ್ನಾಕುಳಂನಲ್ಲಿ ಒಂದು ಪ್ರಕ ರಣ ಪತ್ತೆಯಾಗಿದೆ. ಈ ಮೂಲಕ ಈ ರಾಜ್ಯದಲ್ಲಿನ ಸೋಂಕುಪೀಡಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು,ಇಲ್ಲಿ 74 ಪ್ರಕರಣಗಳು ಪತ್ತೆಯಾಗಿವೆ.
ರೈಲು, ರಸ್ತೆ ಸಾರಿಗೆ ಬಂದ್
ರೈಲ್ವೇಯು ಎಲ್ಲ ಪ್ಯಾಸೆಂಜರ್ ಮತ್ತು ಪ್ರೀಮಿಯಂ ಸೇವೆಗಳನ್ನು ರದ್ದುಗೊಳಿಸಿದ್ದು, ನೈಋತ್ಯ ರೈಲ್ವೇ ವಿಭಾಗದ ಇಂಟರ್‌ಸಿಟಿ, ಪ್ಯಾಸೆಂಜರ್, ಉಪನಗರ ಸೇರಿದಂತೆ ಸುಮಾರು 134 ರೈಲು ಸ್ಥಗಿತಗೊಳ್ಳಲಿವೆ. ಕೆಎಸ್ಸಾರ್ಟಿಸಿ ಕೂಡ ಸೋಮವಾರ ಕೂಡ ಯಾವುದೇ ಬಸ್‌ಗಳನ್ನು ರಸ್ತೆಗಿಳಿಸ ದಿರಲು ತೀರ್ಮಾನಿಸಿದೆ. ಒಂಬತ್ತು ಜಿಲ್ಲೆಗಳಲ್ಲಿ ಅಂತರ್‌ಜಿಲ್ಲಾ ಬಸ್ ಸೇವೆಯನ್ನೂ ಸ್ಥಗಿತಗೊಳಿಸಲು ಉದ್ದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.