ದೇಶಾದ್ಯಂತ ಬಹುತೇಕ ರಾಜ್ಯಗಳು ಸ್ತಬ್ಧ ; ಕೊರೊನಾ ವಿರುದ್ಧ ಸಮರ ಸಾರಿದ ಸರಕಾರಗಳು
ವೈರಸ್ ವ್ಯಾಪಿಸುವಿಕೆಗೆ ಕಡಿವಾಣ ಹಾಕಲು ಕಠಿನ ಕ್ರಮ
Team Udayavani, Mar 14, 2020, 4:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್-19 ವೈರಸ್‌ನ ವಿರುದ್ಧ ದೇಶಾದ್ಯಂತ ಎಲ್ಲ ರಾಜ್ಯಗಳೂ ಸಮರ ಸಾರಿದ್ದು, ಕೊರೊನಾ ವೈರಸ್‌ನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ಸಲುವಾಗಿ ಶುಕ್ರವಾರದಿಂದ ಬಹುತೇಕ ರಾಜ್ಯಗಳು ಲಾಕ್‌ಡೌನ್ ಸ್ಥಿತಿಗೆ ತಲುಪಿವೆ.
ಕರ್ನಾಟಕ, ಉತ್ತರಪ್ರದೇಶ, ದಿಲ್ಲಿ, ಬಿಹಾರ, ಒಡಿಶಾ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣ, ಜಮ್ಮು- ಕಾಶ್ಮೀರ, ಛತ್ತೀಸ್‌ಗಡ ಸೇರಿದಂತೆ ಬಹುತೇಕ ರಾಜ್ಯಗಳು ಶುಕ್ರವಾರದಿಂದಲೇ ಅನ್ವಯವಾಗುವಂತೆ ರಾಜ್ಯಾ ದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿ ಸಿದ್ದು, ಸಾರ್ವಜನಿಕವಾಗಿ ಜನಸಂದಣಿ ಸೇರುವಂಥ ಎಲ್ಲ ಪ್ರದೇಶಗಳಿಗೂ ನಿರ್ಬಂಧ ಹೇರಿವೆ. ಕಾರ್ಯಾಗಾರ, ವಿಚಾರ ಸಂಕಿರಣಗಳು, ಧಾರ್ಮಿಕ ಸಮಾರಂಭಗಳು, ವಿವಾಹ, ಪಾರ್ಟಿಗಳನ್ನೂ ಮಾ. 31 ರ ವರೆಗೆ ಹಮ್ಮಿಕೊಳ್ಳದಂತೆ ಸೂಚಿಸಲಾಗಿದೆ.
ದಿಲ್ಲಿಯ ಜೆಎನ್‌ಯು, ಜಾಮಿಯಾ, ದಿಲ್ಲಿ ವಿವಿಗಳಲ್ಲಿ ತರಗತಿಗಳನ್ನು ರದ್ದು ಮಾಡಲಾಗಿದೆ. ಐಐಟಿ ಕಾನ್ಪುರದಲ್ಲೂ ತರಗತಿ, ಪರೀಕ್ಷೆ ನಡೆಸದೇ ಇರಲು ತೀರ್ಮಾನಿಸಲಾಗಿದೆ. ಐಐಟಿ ದಿಲ್ಲಿಯು ಮಾ. 15ರೊಳಗಾಗಿ ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದೆ.
ದೇಶಾದ್ಯಂತ ಸೋಂಕಿತರ ಸಂಖ್ಯೆ 81ಕ್ಕೇರುತ್ತಿದ್ದಂತೆ, ಎಲ್ಲ ರಾಜ್ಯಗಳೂ ಎಚ್ಚೆತ್ತುಕೊಂಡು ಇಂಥ ನಿರ್ಧಾರ ಕೈಗೊಂಡಿವೆ. ಕನಿಷ್ಠ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ದೇಶಾದ್ಯಂತ 42 ಸಾವಿರ ಮಂದಿ ಸಾಮೂಹಿಕ ನಿಗಾದಲ್ಲಿ ಇದ್ದಾರೆ. ಒಟ್ಟಾರೆ ವಿಶ್ವದ 116 ದೇಶಗಳ 1.31 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಇದು ಬಲಿಪಡೆದಿದೆ. ಭಾರತ-ಬಾಂಗ್ಲಾದೇಶ ಗಡಿಗಳಲ್ಲಿನ ಪ್ರಯಾಣಿಕ ರೈಲುಗಳು ಹಾಗೂ ಬಸ್ಸುಗಳ ಸಂಚಾರವನ್ನು ಏ.15 ರವರೆಗೆ ರದ್ದು ಮಾಡಲಾಗಿದೆ.
ಏರಿಂಡಿಯಾ ವಿಮಾನ ರದ್ದು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಏರ್ ಇಂಡಿಯಾವು ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್, ದಕ್ಷಿಣ ಕೊರಿಯಾ ಮತ್ತು ಶ್ರೀಲಂಕಾಗೆ ಏಪ್ರಿಲ್ 30ರವರೆಗೆ ವಿಮಾನ ಸಂಚಾರ ರದ್ದು ಮಾಡಿದೆ. ಈಗಾಗಲೇ ಕುವೈಟ್‌ಗೆ ಏರ್ ಇಂಡಿಯಾ ವಿಮಾನ ಸಂಚರಿಸುತ್ತಿಲ್ಲ. ಇನ್ನೊಂದೆಡೆ, ಟಿಕೆಟ್ ರದ್ದು ಶುಲ್ಕದಲ್ಲಿ ಗ್ರಾಹಕರಿಗೆ ವಿನಾಯ್ತಿ ನೀಡುವಂತೆ ಅಂತಾರಾಷ್ಟ್ರೀಯ ವೈಮಾನಿಕ ಕಂಪೆನಿಗಳಿಗೆ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸಲಹೆ ನೀಡಿದೆ.
ಇವಾಂಕಾರನ್ನು ಭೇಟಿಯಾಗಿದ್ದ ಸೋಂಕಿತ!: ಆಸ್ಟ್ರೇಲಿಯಾದ ಹಿರಿಯ ಸಚಿವರೊಬ್ಬರಿಗೆ ಸೋಂಕು ತಗುಲಿದ್ದು, ಸದ್ಯ ಅವರು ಬ್ರಿಸ್ಬೇನ್‌ನ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ವಿಶೇಷವೆಂದರೆ, ಅವರು ಅಮೆರಿಕದಲ್ಲಿ ಅಧ್ಯಕ್ಷ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್, ಅಟಾರ್ನಿ ಜನರಲ್ ವಿಲಿಯಂ ಬಾರ್‌ರನ್ನು ಭೇಟಿಯಾಗಿ ಮರಳಿದ ಬೆನ್ನಲ್ಲೇ ಅವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿದೆ. ಹೀಗಾಗಿ ಇವಾಂಕಾ ಸಹಿತ ಶ್ವೇತಭವನದಲ್ಲಿರುವವರಿಗೂ ಆತಂಕ ಉಂಟಾಗಿದೆ. ಆಸ್ಟ್ರೇಲಿಯಾದಲ್ಲಿ ಒಟ್ಟು 196 ಮಂದಿ ಸೋಂಕಿತರಿದ್ದು, ಮೂವರು ಸಾವಿಗೀಡಾಗಿದ್ದಾರೆ.
ಷೇರುಪೇಟೆಯಲ್ಲಿ ಆಘಾತ, ಗಾಬರಿ, ನಿಟ್ಟುಸಿರು…
ಶುಕ್ರವಾರ ಷೇರುಪೇಟೆಯಲ್ಲಾದ ಏರಿಳಿತದ ತಲ್ಲಣಗಳು ಹೂಡಿಕೆದಾರರನ್ನು ಆಘಾತಕ್ಕೆ ತಳ್ಳಿ, ಅನಂತರ ನಿಟ್ಟುಸಿರು ಬಿಡುವಂತೆ ಮಾಡಿದೆ. ವಹಿವಾಟಿನ ಆರಂಭದಲ್ಲಿ ದಾಖಲೆಯ ಸೆನ್ಸೆಕ್ಸ್ ಶೇ.10ರಷ್ಟು ಅಂದರೆ 3 ಸಾವಿರ ಅಂಕಗಳ ಇಳಿಕೆ ಕಾಣುವ ಮೂಲಕ ಹೂಡಿಕೆದಾರರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿತ್ತು.
ಹೀಗಾಗುತ್ತಿದ್ದಂತೆ, ಒಂದು ಹಂತದಲ್ಲಿ 45 ನಿಮಿಷಗಳ ಕಾಲ ವಹಿವಾಟನ್ನೇ ಸ್ಥಗಿತಗೊಳಿಸಲಾಯಿತು. ಈ ರೀತಿ ವಹಿವಾಟು ಅರ್ಧದಲ್ಲೇ ಸ್ಥಗಿತಗೊಂಡಿದ್ದು 12 ವರ್ಷ ಗಳಲ್ಲೇ ಮೊದಲು. ಆದರೆ, ಅನಂತರ ಬ್ಯಾಂಕಿಂಗ್, ಫೈನಾನ್ಸ್ ಮತ್ತು ಇಂಧನ ಕ್ಷೇತ್ರ ಷೇರುಗಳ ಖರೀದಿ ಹೆಚ್ಚಳವಾದ ಕಾರಣ, ಷೇರುಪೇಟೆ ಚೇತರಿಸಿಕೊಂಡಿತು. ಪರಿಣಾಮ ದಿನಾಂತ್ಯಕ್ಕೆ ಸೆನ್ಸೆಕ್ಸ್ 1,325 ಅಂಕ ಏರಿಕೆಯಾಗಿ, 34,103ಕ್ಕೆ ಅಂತ್ಯ ಗೊಂಡಿತು. ನಿಫ್ಟಿ 365 ಅಂಕ ಏರಿ, 9,955ಕ್ಕೆ ತಲುಪಿತು.
ಚಿನ್ನದ ದರ ಗಣನೀಯ ಇಳಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಾಣುತ್ತಿದ್ದಂತೆ ಹೂಡಿಕೆದಾರರು ಚಿನ್ನದ ಖರೀದಿಯಲ್ಲಿ ಆಸಕ್ತಿ ವಹಿಸದ ಕಾರಣ, ಹಳದಿ ಲೋಹದ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಹೊಸದಿಲ್ಲಿ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 1,097 ರೂ. ಕುಸಿತವಾಗಿ, 10 ಗ್ರಾಂಗೆ 42,600 ರೂ. ಆಗಿದೆ. ಬೆಳ್ಳಿ ದರವೂ 1,574 ರೂ. ಇಳಿಕೆಯಾಗಿ, ಕೆ.ಜಿ.ಗೆ 45,704 ರೂ.ಗೆ ತಲುಪಿದೆ. ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 48 ಪೈಸೆ ಏರಿಕೆಯಾಗಿ, 73.80ಕ್ಕೆ ತಲುಪಿದೆ.
ಸಾರ್ಕ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಸಲಹೆ
ಕೊರೊನಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾರ್ಕ್ ರಾಷ್ಟ್ರಗಳು ಒಗ್ಗಟ್ಟಾಗಿ ಜಂಟಿ ಕಾರ್ಯಯೋಜನೆ ರೂಪಿಸಬೇಕು ಎಂಬ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ನೇಪಾಳ ಮತ್ತು ಶ್ರೀಲಂಕಾಗಳು ಕೂಡ ಇಂಥದ್ದೇ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ, ವೈರಸ್‌ಗೆ ಕಡಿವಾಣ ಹಾಕುವ ಕುರಿತು ಕಾರ್ಯತಂತ್ರ ರೂಪಿಸಬೇಕು. ಆ ಮೂಲಕ ಜಗತ್ತಿಗೇ ನಾವು ಮಾದರಿಯಾಗಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಅವರ ಸಲಹೆಗೆ ಶ್ರೀಲಂಕಾ, ಮಾಲ್ಡೀವ್ಸ್, ನೇಪಾಲ, ಭೂತಾನ್ ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಅಮೆರಿಕವೇ ಕಾರಣ!
ಕೋವಿಡ್-19 ಕುರಿತು ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ವಾಕ್ಸಮರ ಆರಂಭವಾಗಿರುವಂತೆಯೇ, ‘ಅಮೆರಿಕದ ಸೇನೆಯೇ ವುಹಾನ್‌ಗೆ ಮಾರಣಾಂತಿಕ ಕೊರೊನಾ ವೈರಸ್ ಅನ್ನು ಬಿಟ್ಟುಹೋಗಿರಬಹುದು’ ಎಂಬ ವಿವಾದಾತ್ಮಕ ಟ್ವೀಟ್‌ವೊಂದನ್ನು ಚೀನದ ಅಧಿಕಾರಿಯೊಬ್ಬರು ಮಾಡಿದ್ದಾರೆ. ಅಲ್ಲದೆ, ಈ ಕುರಿತು ಅಮೆರಿಕ ನಮಗೆ ವಿವರಣೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ. ಇದು ವಿವಾದಕ್ಕೆ ಎಡೆಮಾಡಬಹುದು ಎಂಬುದನ್ನು ಅರಿತ ಚೀನ ಸರಕಾರ, ಅಧಿಕಾರಿಯ ಹೇಳಿಕೆಯಿಂದ ದೂರ ಉಳಿದಿದೆ.
ಸೋಂಕು ನ.17ಕ್ಕೆ ಪತ್ತೆ
ಕೊರೊನಾ ವೈರಸ್ ಮೊದಲು ಹುಟ್ಟಿಕೊಂಡಿದ್ದೇ ಚೀನದ ಹ್ಯುಬೈ ಪ್ರಾಂತ್ಯದಲ್ಲಿ ಮತ್ತು ಮೊದಲ ಸೋಂಕಿತ ಪತ್ತೆಯಾಗಿದ್ದು ಕಳೆದ ವರ್ಷದ ನವೆಂಬರ್ 17ರಂದು ಎಂಬ ಮಾಹಿತಿ ಈಗ ಹೊರಬಿದ್ದಿದೆ. 55 ವರ್ಷದ ವ್ಯಕ್ತಿಗೆ ಮೊದಲು ಸೋಂಕು ತಗುಲಿತ್ತು, ಅನಂತರ ಅದು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಸಾಗಿತು. 2019ರಲ್ಲಿ ಒಟ್ಟು 266 ಮಂದಿ ಸೋಂಕಿತರಾಗಿದ್ದರು ಎಂದು ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ವೈರಲ್ ನ್ಯೂಸ್
– ಮಾಸಿಕ ಪೂಜೆಗಾಗಿ ತೆರೆದ ಶಬರಿಮಲೆ ದೇಗುಲದ ಬಾಗಿಲು. ಬೆರಳೆಣಿಕೆಯ ಭಕ್ತರಷ್ಟೇ ಭಾಗಿ
– ಕೇಂದ್ರ ಸರಕಾರಿ ಅಧಿಕಾರಿಗಳ ಕಡ್ಡಾಯ ವಾರ್ಷಿಕ ಆರೋಗ್ಯ ತಪಾಸಣೆಗೆ ಜೂ. 30ರ ವರೆಗೆ ವಿನಾಯ್ತಿ
– ಮಾ. 21ರಿಂದ 2 ದಿನಗಳ ಕಾಲ ನಡೆಯಬೇಕಿದ್ದ ಪ್ರಧಾನಿ ಮೋದಿ ಗುಜರಾತ್ ಪ್ರವಾಸ ಮುಂದೂಡಿಕೆ
– ಇರಾನ್‌ನಲ್ಲಿ ಸಿಲುಕಿಕೊಂಡಿದ್ದ 44 ಭಾರತೀಯ ಯಾತ್ರಿಗಳನ್ನು ಹೊತ್ತ 2ನೇ ವಿಮಾನ ಭಾರತಕ್ಕೆ ಆಗಮನ.
– ಕೇರಳದ ಚೆಂಗಾಲಂನಲ್ಲಿ ಕೊರೊನಾ ದೃಢಪಟ್ಟ ವ್ಯಕ್ತಿಯ ನೆರೆಮನೆಯಾತ ಸಾವು. ಸ್ಥಳೀಯರಲ್ಲಿ ಹೆಚ್ಚಿದ ಆತಂಕ.
– ಇರಾನ್‌ನಲ್ಲಿ ಮತ್ತೆ 85 ಮಂದಿ ಸಾವು, ಒಟ್ಟು ಸಾವಿನ ಸಂಖ್ಯೆ 514ಕ್ಕೇರಿಕೆ.
– ಶುಕ್ರವಾರ ಸಂಜೆಯಿಂದಲೇ ಅಟ್ಟಾರಿ-ವಾಘಾ ಗಡಿಯಲ್ಲಿ ವಿದೇಶಿಯರ ಪ್ರವೇಶಕ್ಕೆ ನಿರ್ಬಂಧ – ಬಿಎಸ್‌ಎಫ್
– ಮೌಂಟ್ ಎವರೆಸ್ಟ್ ಸಹಿತ ಎಲ್ಲ ಪರ್ವತಾರೋಹಣಕ್ಕೂ ನಿರ್ಬಂಧ ಹೇರಿದ ನೇಪಾಲ. ಪ್ರವಾಸಿ ವೀಸಾ ರದ್ದು.
– ರೋಮ್‌ನಾದ್ಯಂತ ಕ್ಯಾಥೊಲಿಕ್ ಚರ್ಚುಗಳಿಗೆ ಬೀಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.