ಕೋವಿಡ್ 4ನೇ ಅಲೆಯ ಆತಂಕ ಬೇಡ; ಲಸಿಕೆ ವಿತರಣೆಗೆ ವೇಗ ನೀಡಲು ತಜ್ಞರ ಸಲಹೆ
ಶೇ.1 ದಾಟಿದ ಕೋವಿಡ್ ಪಾಸಿಟಿವಿಟಿ ದರ
Team Udayavani, Jun 5, 2022, 7:48 PM IST
ನವದೆಹಲಿ: ದೇಶಾದ್ಯಂತ ಶನಿವಾರದಿಂದ ಭಾನುವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 4,270 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನ 4ನೇ ಅಲೆಯ ಭೀತಿ ಆರಂಭವಾಗಿದೆ. 34 ದಿನಗಳ ಬಳಿಕ ದೈನಂದಿನ ಪಾಸಿಟಿವಿಟಿ ದರ ಶೇ.1ಕ್ಕಿಂತಲೂ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಆದರೆ, ಪ್ರಸ್ತುತ ಸೋಂಕು ಪ್ರಕರಣಗಳಲ್ಲಿ ಆಗುತ್ತಿರುವ ಹೆಚ್ಚಳವು ಕೊರೊನಾ 4ನೇ ಅಲೆಯ ಮುನ್ಸೂಚನೆಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಸೋಂಕು ಏರಿಕೆಯಾಗುತ್ತಿರುವುದು ನಿಜ. ಆದರೆ, ಅದು 4ನೇ ಅಲೆಯ ಲಕ್ಷಣವಲ್ಲ. ಬದಲಿಗೆ ಒಮಿಕ್ರಾನ್‌ನ ಬಿಎ.4 ಮತ್ತು ಬಿಎ.5 ಉಪತಳಿಗಳಿಂದಾಗಿ ಸ್ವಲ್ಪಮಟ್ಟಿಗೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರಬಹುದು. ಲಸಿಕೆ ವಿತರಣೆಗೆ ವೇಗ ನೀಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಈಶ್ವರ್ ಗಿಲಾಡಾ ಹೇಳಿದ್ದಾರೆ.
ಮುಂಬೈನಲ್ಲಿ ಭಾರೀ ಏರಿಕೆ:
ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 24,052ಕ್ಕೇರಿದ್ದರೆ, ಸಾವಿನ ಸಂಖ್ಯೆ 5,24,692 ಆಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮುಂಬೈನಲ್ಲಂತೂ ಮಾರ್ಚ್ ತಿಂಗಳಿಡೀ ದಾಖಲಾದ ಸೋಂಕು ಪ್ರಕರಣಗಳ ಸಂಖ್ಯೆಗಿಂತ ದುಪ್ಪಟ್ಟು ಪ್ರಕರಣಗಳು ಜೂನ್‌ನ ಮೊದಲ 4 ದಿನಗಳಲ್ಲೇ ಪತ್ತೆಯಾಗಿವೆ.
ಶನಿವಾರ ಮುಂಬೈನಲ್ಲಿ 889 ಪ್ರಕರಣಗಳು ಪತ್ತೆಯಾಗಿದ್ದು, ಫೆಬ್ರವರಿಯ ನಂತರ ದೈನಂದಿನ ಪ್ರಕರಣಗಳಲ್ಲಿ ಈ ಮಟ್ಟದ ಏರಿಕೆ ಕಂಡಿರುವುದು ಇದೇ ಮೊದಲು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಕಳೆದ 5 ದಿನಗಳಿಂದೀಚೆಗೆ ಪ್ರತಿ ದಿನ ಒಂದು ಸಾವಿರದಷ್ಟು ಮಂದಿಗೆ ಸೋಂಕು ದೃಢಪಡುತ್ತಿದೆ. ಎರ್ನಾಕುಳಂ, ತಿರುವನಂತಪುರಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಶನಿವಾರ ಕೇರಳದಲ್ಲಿ 1,544 ಮಂದಿಗೆ ಸೋಂಕು ದೃಢಪಟ್ಟಿದೆ.
ಸದ್ಯದಲ್ಲೇ ಮಾಸ್ಕ್ ಕಡ್ಡಾಯ
ಮಹಾರಾಷ್ಟ್ರದಲ್ಲಿ ಸೋಂಕಿನ ಏರುಗತಿ ನೋಡಿದರೆ, ನಾವು ಸದ್ಯದಲ್ಲೇ ಕೊರೊನಾ 4ನೇ ಅಲೆಯನ್ನು ಎದುರಿಸಲಿರುವ ಲಕ್ಷಣ ಕಾಣಿಸುತ್ತಿದೆ. ಹಾಗಂತ, ನಾಗರಿಕರಾರೂ ಆತಂಕ ಪಡಬೇಕಾಗಿಲ್ಲ ಎಂದು ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಭಾನುವಾರ ಹೇಳಿದ್ದಾರೆ. ಜತೆಗೆ, ಮನೆಯಿಂದ ಹೊರಗೆ ಕಾಲಿಡುವಾಗ ಎಲ್ಲರೂ ಮಾಸ್ಕ್ ಧರಿಸಿಕೊಳ್ಳಿ. ನಾವು ಇನ್ನೂ ಮಾಸ್ಕ್ ಕಡ್ಡಾಯಗೊಳಿಸಿಲ್ಲ. ಆದರೆ, ಸದ್ಯದಲ್ಲೇ ಅದನ್ನು ಜಾರಿ ಮಾಡುವ ಸ್ಥಿತಿ ಬರಲಿದೆ. ಅಲ್ಲದೇ, ಜನರು ಬೂಸ್ಟರ್ ಡೋಸ್ ಅನ್ನೂ ಸಮಯಕ್ಕೆ ಸರಿಯಾಗಿ ಪಡೆದುಕೊಂಡರೆ ಉತ್ತಮ ಎಂದೂ ಅವರು ಹೇಳಿದ್ದಾರೆ.
ಶಾರುಖ್, ಕತ್ರೀನಾ, ಫಡ್ನವೀಸ್‌ಗೆ ಸೋಂಕು
ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಸೋಂಕಿತ ಸೆಲೆಬ್ರಿಟಿಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್, ಆದಿತ್ಯ ರಾಯ್ ಕಪೂರ್ ಬಳಿಕ ಭಾನುವಾರ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ಗೂ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಭಾನುವಾರ ಕೊರೊನಾ ಸೋಂಕು ದೃಢಪಟ್ಟಿದೆ. ಮನೆಯಲ್ಲೇ ಐಸೋಲೇಟ್ ಆಗಿರುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ, ಸದ್ಯಕ್ಕೆ ಯಾವುದೇ ಪಾರ್ಟಿಗಳನ್ನು ಆಯೋಜನೆ ಮಾಡದಂತೆ ಮುಂಬೈನ ಫಿಲಂ ಸ್ಟುಡಿಯೋಗಳಿಗೆ ಬೃಹನ್ಮುಂಬೈ ಮಹಾನಗರ ಪಾಲಿಕೆ ಸೂಚಿಸಿದೆ.
ಮನೆ-ಮನೆಗೆ ಲಸಿಕೆ 2.0ಗೆ ವೇಗ
ಮನೆ ಮನೆಗೆ ಲಸಿಕೆ ಯೋಜನೆಯ ಎರಡನೇ ಭಾಗವಾಗಿ ಜುಲೈ 31ರೊಳಗಾಗಿ 4.7 ಕೋಟಿ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ವಿತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. 60 ವರ್ಷ ಮೇಲ್ಪಟ್ಟ 13.75 ಕೋಟಿ ನಾಗರಿಕರ ಪೈಕಿ 11.91 ಕೋಟಿ ಮಂದಿ ಜೂ.3ರವರೆಗೆ ಎರಡು ಬಾರಿ ಲಸಿಕೆ ತೆಗೆದುಕೊಂಡಿದ್ದಾರೆ. ಇನ್ನು 6.67 ಕೋಟಿ ಹಿರಿಯ ನಾಗರಿಕರು ಜು.31ರೊಳಗೆ ಮುನ್ನೆಚ್ಚರಿಕಾ ಡೋಸ್ ತೆಗೆದುಕೊಳ್ಳಬೇಕು. ಈ ಪೈಕಿ 1.94 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. ಗಮನಾರ್ಹ ಸಂಗತಿಯೆಂದರೆ 1.04 ಕೋಟಿ ಹಿರಿಯ ನಾಗರಿಕರು ಇನ್ನೂ ಮೊದಲ ಲಸಿಕೆಯನ್ನೇ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘರ್ ಘರ್ ದಸ್ತಕ್ 2.0 ಅಭಿಯಾನದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಲಾಗುತ್ತದೆ. ಸತತ 2 ತಿಂಗಳ ಈ ಅಭಿಯಾನ ಜೂ.1ರಿಂದಲೇ ಶುರುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.