ಅಂಫಾನ್ ಕಂಪನ : ಪಶ್ಚಿಮ ಬಂಗಾಲ, ಒಡಿಶಾಕ್ಕೆ ಇಂದು ಅಪ್ಪಳಿಸಲಿದೆ ಚಂಡಮಾರುತ
ಸಮರೋಪಾದಿ ಮುನ್ನೆಚ್ಚರಿಕೆ 12 ಲಕ್ಷ ಮಂದಿ ಸ್ಥಳಾಂತರ
Team Udayavani, May 20, 2020, 6:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉದ್ಭವಿಸಿರುವ ಅಂಫಾನ್ ಮಹಾ ಚಂಡಮಾರುತ ಕೋವಿಡ್ ಆಘಾತದ ನಡುವೆಯೇ ದೇಶದಲ್ಲಿ ಕಂಪನ ಸೃಷ್ಟಿಸಲಾರಂಭಿಸಿದೆ.
ಅಂಫಾನ್ ಈಗಾಗಲೇ ರಣಭೀಕರ ಸ್ವರೂಪ ಪಡೆದುಕೊಂಡಿದ್ದು, ಬುಧವಾರ ಪಶ್ಚಿಮ ಬಂಗಾಲದ ಕರಾವಳಿಗೆ ಅಪ್ಪಳಿಸಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
ಮಂಗಳವಾರ ಸಂಜೆಯ ಹೊತ್ತಿಗಾಗಲೇ ಪಶ್ಚಿಮ ಬಂಗಾಲದ ದಿಘಾ ಪ್ರಾಂತ್ಯದಲ್ಲಿ ಮಹಾಮಳೆ ಆರಂಭವಾಗಿದೆ. ಸದ್ಯದಲ್ಲೇ ಒಡಿಶಾಕ್ಕೂ ಅಪ್ಪಳಿಸಲಿರುವ ಈ ಚಂಡಮಾರುತ ತಾನು ಹೋದ ದಾರಿಯಲ್ಲೆಲ್ಲ ಭಾರೀ ಹಾನಿ ಉಂಟು ಮಾಡಲಿದೆ ಎಂದು ಐಎಂಡಿ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಸಮರೋಪಾದಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಎರಡೂ ರಾಜ್ಯಗಳಿಂದ 12 ಲಕ್ಷ ಮಂದಿಯನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಎರಡೂ ರಾಜ್ಯಗಳತ್ತ ಸಹಾಯಹಸ್ತ ಚಾಚಿರುವ ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್)ಯ 41 ತುಕಡಿಗಳನ್ನು ರವಾನಿಸಿದೆ. ಜತೆಗೆ ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಕಾವಲು ಪಡೆಯ ತುಕಡಿಗಳನ್ನೂ ಕಳುಹಿಸಿದೆ.
ಈ ಎಲ್ಲ ಪರಿಹಾರ ಕಾರ್ಯಪಡೆಯ ಸಹಾಯದಿಂದ ಪ. ಬಂಗಾಲ ಮತ್ತು ಒಡಿಶಾ ಕರಾವಳಿಯಿಂದ ಲಕ್ಷಾಂತರ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇವೆಲ್ಲ ಸಂಕಟಗಳ ನಡುವೆ ಕೋವಿಡ್, ನಿರಾಶ್ರಿತ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಧ್ಯವೇ ಎಂಬ ಆತಂಕ.
ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಅಂಫಾನ್ ವೇಗ ತಾಸಿಗೆ 155-166 ಕಿ.ಮೀ. ಇದ್ದು, ಕ್ರಮೇಣ 185 ಕಿ.ಮೀ. ಗಳಿಗೆ ಹೆಚ್ಚಲಿದೆ. 10 ರಿಂದ 15 ಸೆಂ.ಮೀಗಳಷ್ಟು ಮಳೆ ಸುರಿಯುವುದಲ್ಲದೇ, ಹಲವೆಡೆ ಭೂಕುಸಿತ ಆಗಬಹುದು. 2019ರಲ್ಲಿ ಪ.ಬಂಗಾಲದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ‘ಬುಲ್‌ಬುಲ್’ ಚಂಡಮಾರುತಕ್ಕಿಂತ ಅಂಫಾನ್ ಭೀಕರವಾಗಿರಲಿದೆ ಎಂದು ಐಎಂಡಿ ಹೇಳಿದೆ. ಹೀಗಾಗಿ ಕರಾವಳಿ ಪ್ರದೇಶದ ಜನರನ್ನು ಮಂಗಳವಾರ ಸಂಜೆಯ ಹೊತ್ತಿಗೆ ಸ್ಥಳಾಂತರಿಸಲಾಗಿದ್ದು, ಎಲ್ಲರಿಗೂ ಮಾಸ್ಕ್ ವಿತರಿಸಲಾಗಿದೆ.
ಆಹಾರ, ಔಷಧ, ನೀರು ಮತ್ತಿತರ ವಸ್ತುಗಳ ದಾಸ್ತಾನು ಕೈಗೊಳ್ಳಲಾಗುತ್ತಿದೆ. ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ. ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜತೆಗೆ ದೂರವಾಣಿ ಮಾತುಕತೆ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ.
ಚಂಡಮಾರುತ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ಒಟ್ಟು ಸುಮಾರು 12 ಲಕ್ಷ ಮಂದಿಯನ್ನು ಸ್ಥಳಾಂತರಿಸಿ ಶಾಲಾ-ಕಾಲೇಜುಗಳಲ್ಲಿ ಆಶ್ರಯ ನೀಡಲಾಗಿದೆ. ಆದರೆ ಇಷ್ಟು ಮಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
12 ಲಕ್ಷ ಜನರ ಸ್ಥಳಾಂತರ
ಒಡಿಶಾದಲ್ಲೂ ಅಂಫಾನ್ ಭೀಕರ ಪರಿಣಾಮ ಉಂಟುಮಾಡುವ ನಿರೀಕ್ಷೆಯಿದೆ. ಜಗಸ್ತಿಪುರ, ಕೇಂದ್ರಪಾರಾ, ಭದ್ರಕ್, ಜಾಜ್‌ಪುರ ಮತ್ತು ಬಾಲಾಸೋರ್‌ಗಳಲ್ಲಿ ಇದು ಸಾಕಷ್ಟು ಹಾನಿ ಮಾಡಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.
ಹಾಗಾಗಿ ಅಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಒಡಿಶಾ ಮತ್ತು ಪ. ಬಂಗಾಲ ಕರಾವಳಿಯಿಂದ 12 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಆಯೋಗದ (ಎಸ್‌ಆರ್‌ಸಿ) ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ನ 14 ಮತ್ತು ಒಡಿಶಾ ವಿಪತ್ತು ನಿರ್ವಹಣ ಪಡೆಯ (ಒಡಿಆರ್‌ಎಎಫ್) 20 ತಂಡಗಳು ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ಒಡಿಶಾ ಸರಕಾರ ತಿಳಿಸಿದೆ. ಮೀನುಗಾರರಿಗೆ ಮೇ 21ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.