BJP ಹಿನ್ನಡೆಯಾದ್ರೂ ಉತ್ತರ ಪ್ರದೇಶಕ್ಕೆ ಸಿಂಹಪಾಲು: 37 ಮಂದಿಗೆ ಸಚಿವ ಸ್ಥಾನ ಮಿಸ್!
ಸೋತವರಿಗೂ ಕ್ಯಾರೆ ಅಂದಿಲ್ಲ ಮೋದಿ.. ಸೋತರೂ ಮುರುಗನ್ ಗೆ ಸ್ಥಾನ ... ಅಣ್ಣಾಮಲೈ ಯಾಕೆ ಸಚಿವರಾಗಲಿಲ್ಲ?
Team Udayavani, Jun 10, 2024, 6:30 AM IST
ನವದೆಹಲಿ: ಭಾನುವಾರ ಸಂಜೆ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಸಂಪುಟದ 72 ಸಚಿವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ನರೇಂದ್ರ ಮೋದಿ ಅವರ ನೇತೃತ್ವದ 3ನೇ ಅವಧಿ ಸರ್ಕಾರವು ವಿಧ್ಯುಕ್ತವಾಗಿ ಆರಂಭವಾಗಿದೆ.
ಒಟ್ಟು 30 ಸಂಸದರು ಸಂಪುಟ ದರ್ಜೆ ಸಚಿವರಾಗಿ, ಐವರು ಸ್ವತಂತ್ರ ಖಾತೆ ಸಚಿವರಾಗಿ, 36 ಸಂಸದರು ರಾಜ್ಯ ಸಹಾಯಕ ಸಚಿವರಾಗಿ ಪ್ರಮಾಣವನ್ನು ವಚನವನ್ನು ಸ್ವೀಕರಿಸಿದ್ದಾರೆ. ಸಂಪುಟದ ದರ್ಜೆ ಸಚಿವರಾದವರ ಪೈಕಿ 9 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಒಟ್ಟು 6 ಮಾಜಿ ಮುಖ್ಯಮಂತ್ರಿಗಳು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಒಟ್ಟು 24 ರಾಜ್ಯಗಳ 72 ಸಂಸದರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಪೈಕಿ ಉತ್ತರ ಪ್ರದೇಶಕ್ಕೆ ಸಿಂಹಪಾಲು ಅಂದರೆ 10 ಸ್ಥಾನಗಳನ್ನು ನೀಡಲಾಗಿದೆ. ನಂತರದ ಸ್ಥಾನದಲ್ಲಿ ಬಿಹಾರ(8), ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶಕ್ಕೆ ತಲಾ 5 ಸ್ಥಾನಗಳನ್ನು ನೀಡಲಾಗಿದೆ.
20 ಪ್ರಮುಖರು ಮಿಸ್
ನರೇಂದ್ರ ಮೋದಿ 2.0 ಸಂಪುಟದಲ್ಲಿದ್ದ ಬಿಜೆಪಿಯ 20 ಸಚಿವರು ಮೋದಿ 3.0 ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಈ ಪೈಕಿ ಸ್ಮೃತಿ ಇರಾನಿ, ಅನುರಾಗ್ ಠಾಕೂರ್, ನಾರಾಯಣ ರಾಣೆ, ಅಶ್ವಿನ ಚುಭೆ, ಸಾಧ್ವಿ ನಿರಂಜನ ಜ್ಯೋತಿ, ಮೀನಾಕ್ಷಿ ಲೇಖಿ, ಜನರಲ್ ವಿ.ಕೆ. ಸಿಂಗ್, ರಾಜೀವ್ ಚಂದ್ರಶೇಖರ್ ಮತ್ತಿತರಿದ್ದಾರೆ.
ಚೌಹಾಣ್‌ಗೆ ಕರತಾಡನ
ಮಧ್ಯ ಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿ ಕೆಲಸ ಮಾಡಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಬಾರಿ ವಿಧಿಶಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ದ್ದಾರೆ. ಭಾನುವಾರ ಅವರು ಪ್ರಮಾಣವಚನ ಸ್ವೀಕರಿಸುವಾಗ ನೆರೆದಿದ್ದ ಜನರಿಂದ ಭಾರೀ ಕರತಾಡನ ಕೇಳಿ ಬಂತು. ಹೆಚ್ಚಿನ ಜನರು ಬೆಂಬಲಿಸಿದರು.
33 ಹೊಸಬರು
ಮೋದಿ ಸಂಪುಟದಲ್ಲಿ ಒಟ್ಟು 33 ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಈ ಪೈಕಿ ಬಹುತೇಕರ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಎಚ್.ಡಿ.ಕುಮಾರಸ್ವಾಮಿ ಇದ್ದಾರೆ.
ಸಂಪುಟಕ್ಕೆ ಮರಳಿದ ಪ್ರಭಾವಿ ಸಚಿವರು!
ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದ ಪ್ರಮುಖರು ನರೇಂದ್ರ ಮೋದಿ 3.0 ಆಡಳಿತಕ್ಕೂ ಪ್ರವೇಶ ಪಡೆದುಕೊಂಡಿದ್ದಾರೆ. ಈ ಪೈಕಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಪ್ರಮುಖರಾಗಿದ್ದಾರೆ. ಮೋದಿ ನಂತರದ ಹಿರಿಯರೆನಿಸಿಕೊಂಡಿರುವ ರಾಜನಾಥ್ ಸಿಂಗ್ ಅವರು ಸಂಪುಟಕ್ಕೆ ಮರಳುವುದು ಖಚಿತವಾಗಿತ್ತು. ಅದೇ ರೀತಿ, ಗೃಹ ಸಚಿವರಾಗಿದ್ದ ಅಮಿತ್ ಶಾ ಹಾಗೂ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆಯ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರ ಪ್ರವೇಶವೂ ನಿರೀಕ್ಷಿತವಾಗಿತ್ತು. ಇನ್ನು ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ಪಿಯೂಷ್ ಗೋಯೆಲ್, ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಜ್ಯೋತಿರಾಧಿತ್ಯ ಸಿಂಧಿಯಾ, ಕಿರೆನ್ ರಿಜಿಜು, ಹರ್ದೀಪ್ ಸಿಂಗ್ ಪುರಿ ಅವರು ಮತ್ತೆ ಮೋದಿ ಸಂಪುಟಕ್ಕೆ ಮರಳಿದ್ದಾರೆ. ಈ ನಾಯಕರು ಮೋದಿ ಆಡಳಿತದಲ್ಲಿ ಹೆಚ್ಚು ಗಮನ ಸೆಳೆದಿದ್ದರು. ಈ ಹಳಬರ ಜೊತೆಗೆ ಎಚ್.ಡಿ.ಕುಮಾರಸ್ವಾಮಿ, ಶಿವರಾಜ್ ಸಿಂಗ್ ಚೌಹಾಣ್, ಜಿತನ್ ರಾಮ್ ಮಾಂಜಿ ಅವರಂಥ ಬಲಾಡ್ಯ ನಾಯಕರೂ ಮೋದಿ ಸಂಪುಟವನ್ನು ಸೇರಿದ್ದಾರೆ.
ಅನುರಾಗ್, ಸ್ಮತಿ ಸೇರಿ 37 ಮಂದಿಗೆ ಸಚಿವ ಸ್ಥಾನ ಮಿಸ್!
ನರೇಂದ್ರ ಮೋದಿ 3.0 ಆಡಳಿತದಲ್ಲಿ 2ನೇ ಅವಧಿಯಲ್ಲಿ ಸಚಿವರಾಗಿದ್ದ 37 ಮಂದಿಗೆ ವಿವಿಧ ಕಾರಣಗಳಿಂದ ಅವಕಾಶ ತಪ್ಪಿದೆ. ಈ ಪೈಕಿ 7 ಮಂದಿ ಕ್ಯಾಬಿನೆಟ್ ದರ್ಜೆಯವರೇ ಆಗಿದ್ದಾರೆ. ಅವರೆಂದರೆ ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ನಾರಾಯಣ ರಾಣೆ, ಪುರುಷೋತ್ತಮ ರುಪಾಲಾ, ಅರ್ಜುನ್ ಮುಂಡಾ, ಆರ್.ಕೆ. ಸಿಂಗ್ ಮತ್ತು ಮಹೇಂದ್ರ ನಾಥ್ ಪಾಂಡೆ.
ಮೋದಿಯ ಈ ಹಿಂದಿನ ಎರಡು ಅವಧಿಯಲ್ಲೂ ಮಂತ್ರಿ ಯಾಗಿದ್ದ ಸ್ಮೃತಿ ಇರಾನಿ ಈ ಬಾರಿ, ಲೋಕಸಭೆ ಚುನಾ ವಣೆಯಲ್ಲಿ ಸೋಲುಂಡಿದ್ದಾರೆ. ಜತೆಗೆ, ಅವರಿಗೆ ಸಚಿವ ಸ್ಥಾನವೂ ಕೈತಪ್ಪಿದೆ. ಈ ಹಿಂದೆ ಅವರು ಜವಳಿ ಖಾತೆ, ಮಹಿಳಾ ಮತ್ತು ಮಕ್ಕಳ ಖಾತೆಗಳನ್ನು ನಿರ್ವಹಿಸಿದ್ದರು. ಅಮೇಠಿ ಯಲ್ಲಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸೋಲುಂಡಿದ್ದಾರೆ.
ಹಿಮಾಚಲ ಪ್ರದೇಶದ ಬಿಜೆಪಿಯ ಅಗ್ರನಾಯಕ ರಾಗಿರುವ ಅನುರಾಗ್ ಠಾಕೂರ್ ಈ ಹಿಂದೆ ಕ್ರೀಡಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ದ್ದರು. ಇವರಿಗೂ ಸಚಿವ ಸ್ಥಾನ ಮಿಸ್ ಆಗಿದೆ. 5ನೇ ಬಾರಿ ಸಂಸದರಾಗಿದ್ದಾರೆ. ಕೇರಳ ತಿರುವನಂತಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಸೋತಿರುವ ರಾಜೀವ್ ಚಂದ್ರಶೇಖರ್ ಅವರಿಗೂ ಸ್ಥಾನ ತಪ್ಪಿದೆ.
ಮಹಾರಾಷ್ಟ್ರದ ಪ್ರಮುಖ ನಾಯಕರೆನಿಸಿಕೊಂಡಿ ರುವ ನಾರಾಯಣ ರಾಣೆ ಅವರೂ ಸಚಿವರಾಗಿಲ್ಲ. ಈ ಹಿಂದೆ ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದ ರಾಣೆ ಈ ಬಾರಿಯೂ ಸಚಿವರಾಗಬಹುದು ಎನ್ನಲಾಗಿತ್ತು. ಚುನಾವಣೆಯಲ್ಲಿ ಗೆದ್ದೂ ಅವರು ಸಚಿವರಾಗಿಲ್ಲ. ಇನ್ನು ಉತ್ತರ ಪ್ರದೇಶ ನಾಯಕ, ಇಂಧನ ಸಚಿವರಾಗಿದ್ದ ಆರ್.ಕೆ.ಸಿಂಗ್ ಅವರೂ ಮೋದಿ 3.0 ಆಡಳಿತದಲ್ಲಿ ಭಾಗಿಯಾಗುತ್ತಿಲ್ಲ. ಚುನಾವಣೆ ಪ್ರಚಾರದ ವೇಳೆ ಈ ಹಿಂದಿನ ಮಹಾರಾಜರನ್ನು ಟೀಕಿಸಿದ್ದ ಪುರುಷೋತ್ತಮ ರುಪಾಲ್ ಕೂಡ ಸಚಿವರಾಗಿಲ್ಲ. ರಾಜಕೋಟ್‌ನ ಈ ಸಂಸದ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವರಾಗಿದ್ದರು.
ಮುರುಗನ್ ಮಾತ್ರ: ನಿಕಟಪೂರ್ವ ಸಂಪುಟದಲ್ಲಿ ಚುನಾವಣೆಯಲ್ಲಿ ಕಣಕ್ಕೆ ಇಳಿದು ಸೋತಿದ್ದ 18 ಸಚಿವರ ಪೈಕಿ ಡಾ.ಎಲ್.ಮುರುಗನ್ ಅವರಿಗೆ ಮಾತ್ರ ಕೇಂದ್ರ ಸಂಪುಟದಲ್ಲಿ 3ನೇ ಬಾರಿಗೆ ಅವಕಾಶ ನೀಡಲಾಗಿದೆ.
ಇತರರು ಯಾರು?
ಹಿಂದಿನ ಬಾರಿ ಸಚಿವರಾಗಿದ್ದ ವಿ.ಕೆ.ಸಿಂಗ್, ಫಗ್ಗನ್ ಸಿಂಗ್ ಕುಲಸ್ತೇ, ಅಶ್ವಿನಿ ಚೌಬೆ, ದನ್ವಿ ರಾವ್ ಸಾಹೇಬ್ ದಾದಾ ರಾವ್, ಸಾಧ್ವಿ ನಿರಂಜನಾ ಜ್ಯೋತಿ, ಸಂಜೀವ್ ಬಾಲ್ಯಾನ್, ಸುಭಾಷ್ ಸರ್ಕಾರ್, ನಿತಿಶ್ ಪ್ರಾಮಾಣಿಕ್, ರಾಜ್‌ಕುಮಾರ್ ರಂಜನ್ ಸಿಂಗ್, ಪ್ರತಿಮಾ ಭೌಮಿಕ್ ಅವರಿಗೆ ಅವಕಾಶ ನೀಡಲಾಗಿಲ್ಲ.
ಅಣ್ಣಾಮಲೈ ಯಾಕೆ ಸಚಿವರಾಗಲಿಲ್ಲ?
ನವದೆಹಲಿ: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಮೋದಿ 3.0 ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದರೆ, ಸಂಜೆ ಹೊತ್ತಿಗೆ ಅವರು ಸಂಪುಟ ಸೇರುತ್ತಿಲ್ಲ ಎಂಬುದು ಖಚಿತವಾಯಿತು. ಇದರ ಹಿಂದೆಯೂ ಕಾರಣವಿದೆ. ತಮಿಳುನಾಡಿನಲ್ಲಿ ಡಿಎಂಕೆಗೆ ಪ್ರತಿಸ್ಪರ್ಧಿ ಸ್ಥಾನವನ್ನು ಬಿಜೆಪಿ ತುಂಬುವ ಸಾಧ್ಯತೆ ಇದೆ. ಹಾಗಾಗಿ, ಸದ್ಯಕ್ಕೆ ತಮಿಳುನಾಡಿನಲ್ಲಿ ಬಿಜೆಪಿಗೆ ಜನಪ್ರಿಯ ಮುಖ ಎಂದರೆ ಅದು ಅಣ್ಣಾಮಲೈ. ಅವರನ್ನು ಸಚಿವರನ್ನಾಗಿ ಮಾಡಿದರೆ ಆರು ತಿಂಗಳಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ, ಮುಂಬರುವ ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿಯನ್ನು ಮುನ್ನಡೆಸುವ ಪ್ರಮುಖ ನಾಯಕನನ್ನೇ ರಾಜ್ಯದಿಂದ ಹೊರಗೆ ಕಳುಹಿಸಿದಂತಾಗುತ್ತದೆ.
ತಂದೆಯ ಹಾದಿಯಲ್ಲಿ ಚಿರಾಗ್ ಪಾಸ್ವಾನ್
ಮಾಜಿ ಸಚಿವ ದಿ.ರಾಮ್ ವಿಲಾಸ್ ಪಾಸ್ವಾನ್ ಪುತ್ರ ಹಾಗೂ ಲೋಕ ಜನ ಶಕ್ತಿ(ರಾಮ್ ವಿಲಾಸ್)ನಾಯಕ ಚಿರಾಗ್ ಪಾಸ್ವಾನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 30 ವರ್ಷಕ್ಕೂ ಅಧಿಕ ವರ್ಷಗಳಿಂದ ಪಾಸ್ವಾನ್ ಕುಟುಂಬವು ಅಧಿಕಾರದಲ್ಲಿದೆ. ಚಿರಾಗ್ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರು ಅಧಿಕಾರಕ್ಕೇರುವ ಕೂಟಗಳ ಜತೆಗೆ ಗುರುತಿಸಿಕೊಂಡಿದ್ದರಿಂದ ಸತತವಾಗಿ ಅಧಿಕಾರದಲಿದ್ದರು. ಇದೀಗ ಅವರ ಪುತ್ರ ಚಿರಾಗ್ ಕೂಡ ಮೋದಿ ಸರ್ಕಾರದಲ್ಲಿ ಸಚಿವರಾಗಿ ನೇಮಕರಾಗಿದ್ದಾರೆ. ಎನ್‌ಡಿಎ ಮೈತ್ರಿ ಕೂಟದಲ್ಲಿ ಟಿಡಿಪಿ ಮತ್ತು ಜೆಡಿಯು ಬಳಿಕ ಚಿರಾಗ್ ಪಾಸ್ವಾನ್ ಅವರ ಪಕ್ಷವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಬಿಹಾರದ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಚಿರಾಗ್ ಪಾಸ್ವಾನ್ ಅವರ ಪಕ್ಷವು ಅಷ್ಟೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಮೈತ್ರಿ ಪಕ್ಷಗಳ 7 ಮಂದಿ ಹೊಸ ಸಚಿವರು
ಎನ್‌ಡಿಎ ಮೈತ್ರಿಕೂಟದ ವಿವಿಧ ಪಕ್ಷಗಳ 7 ಸಂಸದರು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಈ ಪೈಕಿ ಟಿಡಿಪಿಯ ಕೆ.ರಾಮಮೋನಹ್ ನಾಯ್ಡು, ಚಂದ್ರಶೇಖರ್ ಪೆಮ್ಮಸಾನಿ, ಜೆಡಿಯುವ ಲಲ್ಲನ್ ಸಿಂಗ್, ರಾಮನಾಥ್ ಠಾಕೂರ್, ಆರ್‌ಎಲ್‌ಡಿಯ ಜಯಂತ್ ಚೌಧರಿ, ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಮತ್ತು ಜೆಡಿಎಸ್‌ನ ಎಚ್.ಡಿ. ಕುಮಾರ ಸ್ವಾಮಿ ಪ್ರಮುಖರು.
ನಿರ್ಮಲಾ ಏಕೈಕ ಮಹಿಳೆ
ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ 30 ಸಂಪುಟ ದರ್ಜೆ ಸಚಿವರ ಪೈಕಿ ನಿರ್ಮಲಾ ಸೀತಾರಾಮನ್ ಅವರು ಏಕೈಕ ಮಹಿಳೆಯಾಗಿ ದ್ದಾರೆ. ಪ್ರಸಕ್ತ ವಿತ್ತ ಖಾತೆಯನ್ನು ನಿರ್ವಹಿಸುತ್ತಿದ್ದ ನಿರ್ಮಲಾ ಅವರು, ಈ ಹಿಂದಿನ ಅವಧಿಯಲ್ಲಿ ರಕ್ಷಣಾ ಖಾತೆಯನ್ನು ನಿಭಾಯಿಸಿದ್ದಾರೆ. ಮೂರೂ ಅವಧಿಯಲ್ಲಿ ಸಂಪುಟ ದರ್ಜೆ ಸ್ಥಾನ ಪಡೆಯುವ ಮೂಲಕ ನಿರ್ಮಲಾ ಸೀತಾ ರಾಮನ್ ಅವರು ದಾಖಲೆ ನಿರ್ಮಿಸಿದ್ದಾರೆ.
ಇದೇ ಮೊದಲು ತೃತೀಯ ಲಿಂಗಿಗಳಿಗೆ ಆಹ್ವಾನ
ನರೇಂದ್ರ ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ತೃತೀಯಲಿಂಗಿ ಸಮುದಾಯ ಹಾಗೂ ಪೌರಕಾರ್ಮಿಕರಿಗೆ ಆಹ್ವಾನ ನೀಡಲಾಗಿತ್ತು. ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ಪದಗ್ರಹಣ ಸಮಾ ರಂಭಕ್ಕೆ ತೃತೀಯಲಿಂಗ ಸಮುದಾಯಕ್ಕೆ ಅಧಿಕೃತ ಆಮಂತ್ರಣ ನೀಡಲಾಗಿದೆ. ಸಮಾರಂಭದಲ್ಲಿ ಉತ್ತರ ಪ್ರದೇಶದ 50 ತೃತೀಯಲಿಂಗ ಸಮುದಾಯದವರು ಹಾಗೂ ಪೌರಕಾರ್ಮಿಕರು ಭಾಗಿಯಾಗಿದ್ದರು. ಸಮಾರಂಭಕ್ಕೂ ಮೊದಲು ಮಾಜಿ ಕೇಂದ್ರ ಸಚಿವರಾದ ವೀರೇಂದ್ರ ಕುಮಾರ ಹಾಗೂ ಗಜೇಂದ್ರ ಸಿಂಗ್ ಶೇಖಾವತ್ ತೃತೀಯಲಿಂಗ ಸಮುದಾಯ ಹಾಗೂ ಪೌರಕಾರ್ಮಿಕರನ್ನು ಸತ್ಕರಿಸಿದರು.
ಭಾರತ ರತ್ನ ಕರ್ಪೂರಿ ಠಾಕೂರ್ ಪುತ್ರಗೆ ಸಂಪುಟದಲ್ಲಿ ಅವಕಾಶ
ಜೆಡಿಯುನ 2 ಬಾರಿಯ ರಾಜ್ಯಸಭಾ ಸದಸ್ಯ ಹಾಗೂ “ಭಾರತರತ್ನ’ ಕರ್ಪೂರಿ ಠಾಕೂರ್ ಪುತ್ರರೂ ರಾಮನಾಥ್ ಠಾಕೂರ್ ಮೋದಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಡಾ.ರಾಮ್ ಮನೋಹರ್ ಲೋಹಿಯಾ, ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್, ಕರ್ಪೂರಿ ಠಾಕೂರ್ ಆರಂಭಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮವನ್ನು ಇವರೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬಿಹಾರದ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳಲ್ಲಿ ಠಾಕೂರ್ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.1.60ರಷ್ಟು ಹೊಂದಿರುವ ನಾವಿ (ಸವಿತಾ ಸಮಾಜ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಭಾರತರತ್ನ’ ಪ್ರಶಸ್ತಿಯನ್ನು ಮೋದಿ ಸರ್ಕಾರ ಕರ್ಪೂರಿ ಠಾಕೂರ್ ಅವರಿಗೆ ನೀಡಿ ಗೌರವಿಸಿತ್ತು.
ಫಲಿಸಿದ ಮೋದಿ ಗ್ಯಾರಂಟಿ: ತ್ರಿಶೂರ್ ಎಂಪಿ ಸುರೇಶ್ ಸಚಿವ
‘ಈ ಬಾರಿ ತ್ರಿಶೂರ್‌ನಿಂದ ಕೇಂದ್ರ ಸಚಿವರಾಗುತ್ತಾರೆ ಇದು ಮೋದಿ ಗ್ಯಾರಂಟಿ’ ಹೀಗೆ ಹೇಳಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿ. ಲೋಕಸಭೆ ಚುನಾವಣೆಯಲ್ಲಿ ಕೇರಳದ ತ್ರಿಶೂರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮಲಯಾಳಂ ಚಿತ್ರ ನಟ ಸುರೇಶ್ ಗೋಪಿ ಪರ ಪ್ರಚಾರ ನಡೆಸುವ ವೇಳೆ ಜನತೆಗೆ ಮೋದಿ ಈ ಗ್ಯಾರಂಟಿ ನೀಡಿದ್ದರು. ಈಗ ಅವರ ಗ್ಯಾರಂಟಿ ಫಲಿಸಿದ್ದು, ಸುರೇಶ್ ಗೋಪಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಸುರೇಶ್ ಗೋಪಿ ಅವರ ಗೆಲುವು ಹಾಗೂ ಸಚಿವ ಸ್ಥಾನ ದೊರೆತಿರುವುದು ಒಂದು ದಾಖಲೆಯೇ ಆಗಿದೆ. ಕೇರಳದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಬಿಜೆಪಿ ಸಂಸದ ಇವರಾಗಿದ್ದು, ಜತೆಗೆ ಇದೇ ಮೊದಲ ಬಾರಿಗೆ ತ್ರಿಶೂರ್‌ನ ಸಂಸದರೊಬ್ಬರು ಕೇಂದ್ರ ಸಚಿವರಾಗಿದ್ದಾರೆ.
ಮೋದಿ ಸಂಪುಟದಲ್ಲಿ ರಾಜ್ಯವಾರು ಪ್ರಾತಿನಿಧ್ಯ
ಗುಜರಾತ್ 05
ಒಡಿಶಾ 03
ಕರ್ನಾಟಕ 05
ಮಹಾರಾಷ್ಟ್ರ 05
ಗೋವಾ 01
ಜಮ್ಮು ಮತ್ತು ಕಾಶ್ಮೀರ 01
ಹಿಮಾಚಲ ಪ್ರದೇಶ 01
ಮಧ್ಯಪ್ರದೇಶ 05
ಉತ್ತರ ಪ್ರದೇಶ 10
ಬಿಹಾರ 08
ಅರುಣಾಚಲ ಪ್ರದೇಶ 01
ರಾಜಸ್ಥಾನ 04
ಹರ್ಯಾಣ 03
ಕೇರಳ 02
ತೆಲಂಗಾಣ 02
ತಮಿಳುನಾಡು 01
ಜಾರ್ಖಂಡ್ 02
ಆಂಧ್ರ ಪ್ರದೇಶ 03
ಪಶ್ಚಿಮ ಬಂಗಾಳ 02
ಪಂಜಾಬ್ 01
ಅಸ್ಸಾಂ 02
ಉತ್ತರಾಖಂಡ 01
ದೆಹಲಿ 01
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.