ಕಕ್ಷಿದಾರರಿಗೂ ವಸ್ತ್ರ ಸಂಹಿತೆ
Team Udayavani, Aug 6, 2017, 7:05 AM IST
ಶಿಮ್ಲಾ: ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೂ ವಸ್ತ್ರಸಂಹಿತೆಯೇ ಎಂದು ಅಚ್ಚರಿ ಪಡಬೇಡಿ. ಕೋರ್ಟ್ ಸಭಾಂಗಣಕ್ಕೆ ಜೀನ್ಸ್, ಚೆಕ್ಸ್ ಶರ್ಟ್, ಬಣ್ಣದ ಸೀರೆ ಧರಿಸಿ ಬರುವುದರಿಂದ ಕಾನೂನಿನ ಘನತೆ ಹಾಳಾಗುತ್ತದೆ ಎಂದು ಹೇಳಿರುವ ಹಿಮಾಚಲ ಪ್ರದೇಶದ ಹೈಕೋರ್ಟ್, ಇಂಥ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದೆ.
ಕೋರ್ಟ್‌ಗೆ ಬರುವ ಮಹಿಳಾ ದೂರುದಾರರು ಇಂಥ ವಸ್ತ್ರಗಳನ್ನು ಧರಿಸಿ ಬರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಮುಖ್ಯವಾಗಿ ಸರ್ಕಾರಿ ನೌಕರರು ಇಂಥ ವಸ್ತ್ರಗಳನ್ನು ಕಡ್ಡಾಯವಾಗಿ ಧರಿಸುವಂತಿಲ್ಲ ಎಂದು ಸೂಚಿಸಿದೆ. ಈ ಕುರಿತು ಅಗತ್ಯ ನಿರ್ದೇಶನ ಹೊರಡಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಹೈಕೋರ್ಟ್ ಸೂಚಿಸಿದೆ. ಕೋರ್ಟ್ ಆವರಣ ಪ್ರವೇಶಿಸುವ ಎಲ್ಲರೂ ಈ ಸ್ಥಳದ ಸಭ್ಯಾಚಾರ ಪಾಲಿಸಬೇಕು. ಸಭ್ಯವಾದ ವಸ್ತ್ರ ಧರಿಸಿದರೆ ವಿಚಾರಣೆಗೆ ಗಂಭೀರತೆ ಬರುತ್ತದೆ. ಅಲ್ಲದೇ ನ್ಯಾಯ ತೀರ್ಮಾನಕ್ಕೆ ಅನುಕೂಲಕರ ಎಂದು ನ್ಯಾ| ತಾರ್‌ಲೋಕ್ ಸಿಂಗ್ ಚೌಹಾಣ್, ಅಜಯ್ ಮೋಹನ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಇತ್ತೀಚೆಗೆ ಮಹಿಳಾ ಅಧಿಕಾರಿಯೊಬ್ಬರು ಕೇಸಿನ ಸಂಬಂಧ ಕೋರ್ಟ್‌ಗೆ ಬಂದಿದ್ದರು. ಅವರು ಜೀನ್ಸ್ ಮತ್ತು ಚೆಕ್ಸ್ ಶರ್ಟ್ ತೊಟ್ಟಿದ್ದರು. ಅವರ ವಸ್ತ್ರದ ಬಗ್ಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ವೇಳೆ ಅವರು, ತಾವು ಕಚೇರಿಗೆ ಇಂಥ ವಸ್ತ್ರ ಧರಿಸಿಯೇ ಹೋಗುವುದಾಗಿ ಹೇಳಿದ್ದರು. ಅವರ ವಸ್ತ್ರವನ್ನು “ಅಸಭ್ಯ’ ಎಂದು ಕರೆದಿದ್ದ ಕೋರ್ಟ್ ಈ ನಿರ್ದೇಶನ ನೀಡಿದೆ. ಅಷ್ಟಕ್ಕೂ ಹೈಕೋರ್ಟ್ ಡ್ರೆಸ್ ಕೋಡ್ ಹೇರುತ್ತಿರುವುದಕ್ಕೆ ಇದು ಮೊದಲನೇ ನಿದರ್ಶನವಲ್ಲ. ಎಪ್ರಿಲ್‌ನಲ್ಲಿ ಝಾರ್ಖಂಡ್ ಹೈಕೋರ್ಟ್ ಎಲ್ಲ ಸರ್ಕಾರಿ ಮಹಿಳಾ ನೌಕರರಿಗೆ ವಸ್ತ್ರ ಸಂಹಿತೆ ಸೂಚಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.