ಬದುಕಿನ ಪ್ರತಿಕ್ಷಣವೂ ದೇಶಕ್ಕೆ ಅರ್ಪಣೆ
Team Udayavani, May 24, 2019, 6:00 AM IST
ಪ್ರತಿಯೊಂದು ಕೋಶವೂ ಈ ದೇಶಕ್ಕಾಗಿ ಮೀಸಲು.’ಇದು ಲೋಕಸಭೆ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮನದಾಳದ ಮಾತು.
ಈ ಚುನಾವಣೆಯಲ್ಲಿ ಬಿಜೆಪಿ ಪರ ಭರ್ಜರಿ ಜನಾದೇಶ ಬಂದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಲಕ್ಷಾಂತರ ಬೆಂಬಲಿಗರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಮೋದಿ ಅವರು ಪಕ್ಷದ ಪ್ರಧಾನ ಕಚೇರಿಯತ್ತ ನಡೆದು ಬರುತ್ತಲೇ ‘ಹರ್ ಹರ್ ಮೋದಿ’ ಘೋಷಣೆ ಎಲ್ಲೆಲ್ಲೂ ಅನುರಣಿಸುತ್ತಿತ್ತು. ಗುಲಾಬಿ ಹೂವುಗಳ ದಳಗಳಿಂದ ಪುಷ್ಪವೃಷ್ಟಿಯು ಮೋದಿಯವರನ್ನು ಸ್ವಾಗತಿಸಿತು. ಅದರ ಜೊತೆಗೇ ವರುಣನ ಸಿಂಚನವೂ ಆಯಿತು.
ಮಾತು ಆರಂಭಿಸುತ್ತಲೇ ಮೋದಿ ಅವರು, ಮೇಘರಾಜನೂ ಇವತ್ತು ನಮ್ಮ ಈ ಸಂಭ್ರಮದಲ್ಲಿ ಕೈಜೋಡಿಸಿದ್ದಾನೆ ಎಂದಾಗ ಅಲ್ಲಿ ಸೇರಿದ್ದ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು. ನಂತರ ತಮ್ಮ ಅಭೂತಪೂರ್ವ ಗೆಲುವಿಗಾಗಿ ದೇಶದ ಜನತೆಗೆ ಮೋದಿ ಧನ್ಯವಾದ ಸಲ್ಲಿಸಿದರು.
ಮೋದಿ ಮನ್ ಕಿ ಬಾತ್
-ನಾನು ದುರುದ್ದೇಶದಿಂದ ಏನನ್ನೂ ಮಾಡುವುದಿಲ್ಲ, ವೈಯಕ್ತಿಕ ಸಂಪತ್ತಿಗಾಗಿ ಏನನ್ನೂ ಮಾಡುವುದಿಲ್ಲ. ನನಗೆ ಸಿಗುವ ಪ್ರತಿ ಕ್ಷಣವೂ, ನನ್ನ ಜೀವದ ಪ್ರತಿಯೊಂದು ಕೋಶವೂ ಈ ದೇಶಕ್ಕಾಗಿ ಮೀಸಲು.
-ದೇಶದಲ್ಲಿ ಎರಡೇ ಎರಡು ಜಾತಿಗಳಿರಬೇಕು. ಒಂದು ಬಡ ಜಾತಿ. ಮತ್ತೂಂದು ಆ ಬಡವರನ್ನು ಮೇಲೆತ್ತುವಂಥ ಜಾತಿ.
-ನೀವೆಲ್ಲರೂ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದೀರಿ. ಆದರೆ, ಇದು ಮೋದಿಗೆ ಸಂದ ಜಯವಲ್ಲ. ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ತರಲು ಹವಣಿಸುತ್ತಿರುವ ಜನರಿಗೆ ಸಂದ ಜಯ
-ದೇಶಕ್ಕೆ ಅನ್ನ ಉಣಿಸಲು ಶ್ರಮ ವಹಿಸುತ್ತಿರುವ ರೈತರಿಗೆ ಸಿಕ್ಕ ಜಯ, ಮೂಲಸೌಕರ್ಯಗಳನ್ನು ಬಯಸುತ್ತಿರುವ ಜನರಿಗೆ ಸಂದ ಜಯ, ನಿಯಮಗಳನ್ನು ಅನುಸರಿಸುತ್ತಾ, ತೆರಿಗೆಗಳನ್ನು ಪಾಲಿಸುತ್ತಾ ಬಂದ ಮಧ್ಯಮ ವರ್ಗದ ಜನರಿಗೆ ಸಂದ ಜಯ.
-ಯಾವ ಪಕ್ಷವೂ ಜಾತ್ಯತೀತತೆಯ ಮುಖವಾಡ ತೊಟ್ಟು ಮತದಾರರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.
-ಬಿಜೆಪಿಯು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಬದ್ಧವಾಗಿದೆ. ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ.
-ಇಂದು ಕೋಟ್ಯಂತರ ಜನರು ಈ ‘ಫಕೀರನ ಜೋಳಿಗೆ’ಯನ್ನು ತುಂಬಿದರು. ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ಗಳಿಗೆ.
ಸೋಲೊಪ್ಪಿದ ರಾಹುಲ್
ಜನರೇ ಮಾಲೀಕರು. ಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಅವರ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ತಿಳಿಸಿದ್ದಾರೆ. ಫಲಿತಾಂಶ ಘೋಷಣೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಹುಲ್, ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದರು. ಜನತಾ ಮಾಲೀಕ್ ಹೈ ಎನ್ನುವ ಮೂಲಕ ‘ಜನರು ನಮ್ಮ ಮಾಲೀಕರು, ಅವರ ನಿರ್ಧಾರಕ್ಕೆ ತಲೆಬಾಗುತ್ತೇವೆ’ ಎಂದರು. ಈ ಸೋಲು ನನ್ನ ಮತ್ತು ನಮ್ಮ ಪಕ್ಷದ ಸೋಲಾಗಿದೆ. ಸೋಲಿಗೆ ಶೇ.100ರಷ್ಟು ಹೊಣೆಯನ್ನೂ ನಾನೇ ಹೊರುತ್ತೇನೆ. ಬಿಜೆಪಿಯೊಂದಿಗಿನ ಸೈದ್ಧಾಂತಿಕ ಸಮರ ಮುಂದುವರಿಯುತ್ತದೆ. ನಮ್ಮ ಅಭ್ಯರ್ಥಿಗಳು ಹೃದಯ ಪೂರ್ವಕವಾಗಿ ಹಾಗೂ ಧೈರ್ಯವಾಗಿ ಚುನಾವಣೆಯಲ್ಲಿ ಹೋರಾಡಿದರು. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಕಾಂಗ್ರೆಸ್‌ನ ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿರುವ ಸಾಕಷ್ಟು ಜನರಿದ್ದಾರೆ. ಹಾಗಾಗಿ ಯಾರೂ ಧೈರ್ಯ ಕಳೆದುಕೊಳ್ಳುವುದು ಬೇಡ ಎಂದೂ ರಾಹುಲ್ ಹೇಳಿದ್ದಾರೆ. ಇದೇ ವೇಳೆ, ಹೀನಾಯ ಸೋಲು ಅನುಭವಿಸುತ್ತಿದ್ದಂತೆ, ರಾಹುಲ್ಗಾಂಧಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ, ಅವರ ನಿರ್ಧಾರಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ತಡೆಯೊಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.