ಕೆಂಪುಕೋಟೆಯಲ್ಲಿ ಕೋಲಾಹಲ

ಹಿಂಸೆಗೆ ತಿರುಗಿದ ಟ್ರ್ಯಾಕ್ಟರ್‌ ರ್ಯಾಲಿ, ಬ್ಯಾರಿಕೇಡ್‌ ಕಿತ್ತೆಸೆದ ಪ್ರತಿಭಟನಕಾರರು, ಗಣತಂತ್ರಕ್ಕೆ ಅವಮಾನ, ಪೊಲೀಸರ ಮೇಲೆಯೇ ಟ್ರ್ಯಾಕ್ಟರ್‌ ಹರಿಸಲು ಯತ್ನ ರಣಾಂಗಣವಾದ ದಿಲ್ಲಿಯ ಕೆಲವು ಪ್ರದೇಶಗಳು

Team Udayavani, Jan 27, 2021, 6:50 AM IST

ಕೆಂಪುಕೋಟೆಯಲ್ಲಿ ಕೋಲಾಹಲ

ಹೊಸದಿಲ್ಲಿ,: ಟ್ರ್ಯಾಕ್ಟರ್‌ ರ್ಯಾಲಿಗೆ ನಿಗದಿಪಡಿಸಿದ ಮಾರ್ಗ ಬಿಟ್ಟು ದಿಲ್ಲಿಗೆ ದಾಂಗುಡಿ ಇಟ್ಟ ಪ್ರತಿಭಟನಕಾರರು ಕೆಂಪುಕೋಟೆಯನ್ನೇರಿ ಧ್ವಜ ಹಾರಿಸಿದರು. ಪೊಲೀಸರ ಜತೆಗೆ ಘರ್ಷಣೆ, ಮಾರಾಮಾರಿ ನಡೆಸಿದರು.

-ಇದು ಮಂಗಳವಾರ ರೈತರು ನಡೆಸಲು ಮುಂದಾಗಿದ್ದ ಟ್ರ್ಯಾಕ್ಟರ್‌ ರ್ಯಾಲಿಯಲ್ಲಿ ನಡೆದ ಘಟನೆಗಳು. ದೇಶದಲ್ಲಿ ಮಂಗಳವಾರ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಕಪ್ಪು ಚುಕ್ಕೆ ಯಾಗುವಂಥ ಬೆಳವಣಿಗೆ ಘಟಿಸಿದೆ. ಈ ಸಂದರ್ಭದಲ್ಲಿ ದಿಲ್ಲಿಯ ಪ್ರಮುಖ ಪ್ರದೇಶಗಳು ಯುದ್ಧ ಭೂಮಿಯಂತೆ ಭಾಸವಾಗುತ್ತಿದ್ದವು. ಐಟಿಒ ಜಂಕ್ಷನ್‌ನಲ್ಲಿ ಟ್ರ್ಯಾಕ್ಟರ್‌ ಉರುಳಿ ಬಿದ್ದ ಪರಿಣಾಮ ಉತ್ತರಾಖಂಡದ ನವದೀಪ್‌ ಸಿಂಗ್‌ ಹುಂದಾಲ್‌ (26) ಅಸುನೀಗಿದ್ದಾನೆ.

ಪರಿಸ್ಥಿತಿ ಕೈಮೀರಿ ಹೋದ ಹಿನ್ನೆಲೆಯಲ್ಲಿ ಸಂಜೆ ತುರ್ತು ಸಭೆ ನಡೆಸಿದ ಗೃಹ ಸಚಿವ ಅಮಿತ್‌ ಶಾ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಬಳಿಕ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ 10 ತುಕಡಿಗಳನ್ನು ನಿಯೋಜಿಸ ಲಾಯಿತು. ರ್ಯಾಲಿ ಹೆಸರಿನಲ್ಲಿ ನಡೆದ ಅಹಿತಕರ ಘಟನೆಗಳನ್ನು ಎಲ್ಲ ಮುಖಂಡರೂ ಖಂಡಿಸಿದ್ದಾರೆ.

ನುಗ್ಗಿ ಬಂದರು :

ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವಂತೆಯೇ ರೈತರ ಟ್ರ್ಯಾಕ್ಟರ್‌ ರ್ಯಾಲಿ ಶಾಂತಿಯುತವಾಗಿ ಆರಂಭವಾಗಿತ್ತು. ಒಂದು ಹಂತದಲ್ಲಿ  ತಿಕ್ರಿ ಮತ್ತು ಸಿಂಘು ಗಡಿ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಕಿತ್ತೆಸೆಯಲಾಯಿತು. ಘಾಜಿಪುರ ಗಡಿಯಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿತ್ತು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದ ವರೆಗೆ ತಿಕ್ರಿ, ಸಿಂಘು ಮತ್ತು ಘಾಜಿಪುರ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣವಿತ್ತು.

ನಾವು ಕಾರಣರಲ್ಲ :

ರ್ಯಾಲಿ ಹಿಂಸಾತ್ಮಕವಾಗುತ್ತಿದ್ದಂತೆಯೇ 41 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕರು “ಹಿಂಸಾತ್ಮಕ ಘಟನೆ ಗಳಿಗೆ ರೈತರು ಕಾರಣರಲ್ಲ. ಸಮಾಜ ವಿರೋಧಿ ಅಂಶಗಳು ಇಂಥ ಕೃತ್ಯ ನಡೆಸಿವೆ. ಕೂಡಲೇ ರ್ಯಾಲಿ ಮುಕ್ತಾಯವಾಗಿದೆ’ ಎಂದು ಪ್ರಕಟಿಸಿದರು. ಎಲ್ಲರೂ ದಿಲ್ಲಿಯ ಗಡಿ ಪ್ರದೇಶದ ಪ್ರತಿಭಟನ ಸ್ಥಳಗಳಿಗೆ ವಾಪಸಾಗ ಬೇಕು ಎಂದು ಮನವಿ ಮಾಡಿದರು.

12 ತಾಸು ಇಂಟರ್‌ನೆಟ್‌ ಸ್ಥಗಿತ :

ಪ್ರತಿಭಟನೆ ಹಿಂಸಾತ್ಮಕವಾದ  ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಮಂಗಳವಾರ ಮಧ್ಯರಾತ್ರಿಯ ತನಕ ಇಂಟರ್‌ನೆಟ್‌ ಸ್ಥಗಿತಗೊಳಿಸಿ ಆದೇಶಿಸಿತ್ತು.

ಕೆಂಪುಕೋಟೆಗೆ ಲಗ್ಗೆ  :

ದೇಶದ ಇತಿಹಾಸದಲ್ಲಿ ಕಪ್ಪುಚುಕ್ಕೆ ಎನ್ನುವಂತೆ ಕೆಂಪು ಕೋಟೆಯತ್ತ ನೂರಾರು ಮಂದಿ ಪ್ರತಿಭಟನಕಾರರು ಧಾವಿಸಿದರು. ವಿವಿಧ ಬುರುಜುಗಳಲ್ಲಿ ನಿಂತು ಘೋಷಣೆ ಹಾಕಿದರು. ಧ್ವಜಸ್ತಂಭವನ್ನೇರಿದ ವ್ಯಕ್ತಿಯೊಬ್ಬ ಸಿಕ್ಖ್ ಸಮುದಾಯದ ಮತ್ತು ರೈತ ಸಂಘಟನೆಗಳ ಧ್ವಜ ಹಾರಿಸಿದ. ಕೆಲವೇ ಕ್ಷಣಗಳಲ್ಲಿ ಮತ್ತೂಬ್ಬ  ವ್ಯಕ್ತಿ  ಅದೇ ರೀತಿಯ ಧ್ವಜ ಹಾರಿಸಿದ. ಕೆಂಪು ಕೋಟೆ ಸುತ್ತಮುತ್ತ ಪೊಲೀಸರು ಮತ್ತು ರೈತರ ನಡುವೆ ಕಾಳಗ ನಡೆಯಿತು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ದಿಲ್ಲಿ ಮೆಟ್ರೋ ಸಂಚಾರ ರದ್ದು ಮಾಡಿತು.

ಕೆಂಪುಕೋಟೆಯಲ್ಲಿ ಸಿಕ್ಖ್ ಧಾರ್ಮಿಕ ಧ್ವಜ :

ಕೆಂಪುಕೋಟೆಯಲ್ಲಿ ಸಿಕ್ಖ್ ಧಾರ್ಮಿಕ ಸಂಘಟನೆಗೆ ಸೇರಿದ ಧ್ವಜ ಹಾರಿಸಲಾಗಿದೆ. ಇಲ್ಲಿ ಭಾರತದ ತ್ರಿವರ್ಣ ಧ್ವಜ ಮಾತ್ರ ಹಾರಿಸಬೇಕಾದುದು ನಿಯಮ.

83 ಮಂದಿಗೆ ಗಾಯ :

ಘರ್ಷಣೆಯಲ್ಲಿ 83 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸ್‌ ಇಲಾಖೆ ತಿಳಿಸಿದೆ. ಪರಿಸ್ಥಿತಿ ತಹಬದಿಗೆ ತರಲು ಎಲ್ಲ ಪ್ರಯತ್ನ ನಡೆಸಲಾಗಿತ್ತು ಎಂದು ಹೇಳುವ ಮೂಲಕ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗವನ್ನು ಅದು ಸಮರ್ಥಿಸಿಕೊಂಡಿಸಿದೆ.

ರೈತರ ಚಳವಳಿಯ ಹಿಂಸೆ ನುಂಗಿತ್ತಾ? :

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೋರಿ ಕಳೆದ 60 ದಿನಗಳಿಂದ ನಡೆಯುತ್ತಿದ್ದ ಅನ್ನದಾತರ ಶಾಂತಿಯುತ ಹೋರಾಟ ಮಂಗಳವಾರ ಹಿಂಸೆಗೆ ತಿರುಗಿ ಅತಿರೇಕವಾಗಿ ಬದಲಾಯಿತು.

ರೈತರು ಆರಂಭಿಸಿದ ಟ್ರ್ಯಾಕ್ಟರ್‌ ರ್ಯಾಲಿಯು ರಾಷ್ಟ್ರ ರಾಜಧಾನಿಯಲ್ಲಿ ಅರಾಜಕತೆ ಸೃಷ್ಟಿಸಿದ್ದು ಮಾತ್ರವಲ್ಲದೇ, ಪೊಲೀಸರೊಂದಿಗೆ ಘರ್ಷಣೆ, ಹಲ್ಲೆ, ವಾಹನಗಳಿಗೆ ಹಾನಿ, ಹಲವರಿಗೆ ಗಾಯ, ಕೊನೆಗೆ ಐತಿಹಾಸಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದ್ದ ಸ್ಥಳವನ್ನು ಸಿಖ್ಖರ ಧಾರ್ಮಿಕ ಧ್ವಜ ಆಕ್ರಮಿಸುವವರೆಗೆ  ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

72ನೇ ಗಣರಾಜ್ಯೋತ್ಸವದ ದಿನದಂದು ನಡೆದ ಈ ಅನಿರೀಕ್ಷಿತ ಘಟನೆಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದವು. ರೈತ ಚಳವಳಿಯು ದಿಕ್ಕು ತಪ್ಪಿದ್ದನ್ನು ನೋಡಿ ಪ್ರತಿಕ್ರಿಯಿಸಿದ ರೈತ ಮುಖಂಡರು, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಗುಂಪಿನೊಳಗೆ ನುಸುಳಿದ ದುಷ್ಕರ್ಮಿಗಳೇ ಈ ಎಲ್ಲ ಕೃತ್ಯಗಳಿಗೆ ಕಾರಣ ಎಂದು ಆರೋಪಿಸಿದರು. ರಾತ್ರಿ 8 ಗಂಟೆಯ ವೇಳೆಗೆ ಟ್ರ್ಯಾಕ್ಟರ್‌ ಪರೇಡ್‌ ಅನ್ನು ವಾಪಸ್‌ ಪಡೆದು, ಎಲ್ಲರೂ ಸಿಂಘು ಗಡಿಗೆ ಮರಳುವಂತೆ ಮನವಿ ಮಾಡಿದರು. ಶಾಂತಿ ಕಾಪಾಡುವಂತೆ ಕೋರಿಕೊಂಡರು.

ಆಗಿದ್ದೇನು?: ಗಣರಾಜ್ಯ ದಿನದಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದಾಗಿ ಈ ಹಿಂದೆಯೇ ರೈತ ಸಂಘಟನೆಗಳು ಘೋಷಿಸಿದ್ದವು. ಅದಕ್ಕೆ ಒಪ್ಪಿಗೆ ನೀಡಿದ್ದ ದಿಲ್ಲಿ ಪೊಲೀಸರು, ಕೆಲವೊಂದು ಷರತ್ತುಗಳನ್ನು ವಿಧಿಸಿದ್ದರು. ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ ಮುಗಿದ ಬಳಿಕವೇ ಟ್ರ್ಯಾಕ್ಟರ್‌ ರ್ಯಾಲಿ ಆರಂಭಿಸಬೇಕು ಹಾಗೂ ನಿರ್ದಿಷ್ಟ ರಸ್ತೆಗಳಲ್ಲೇ ರೈತರು ಆಗಮಿಸಬೇಕು ಎಂದೂ ಸೂಚಿಸಲಾಗಿತ್ತು. ಅದರಂತೆ, ಸೋಮವಾರ ರಾತ್ರಿಯಿಂದಲೇ ಪಂಜಾಬ್‌, ಹರ್ಯಾಣ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಅನ್ನದಾತರು ಟ್ರ್ಯಾಕ್ಟರ್‌ ಹತ್ತಿ ಸಿಂಘು ಗಡಿಯತ್ತ ಬರಲಾರಂಭಿಸಿದರು. ಮಂಗಳವಾರ ಬೆಳಗ್ಗೆ “ರಂಗ್‌ ದೇ ಬಸಂತಿ,’ “ಜೈ ಜವಾನ್‌ ಜೈ ಕಿಸಾನ್‌’ ಎಂದು ಘೋಷಣೆ ಕೂಗುತ್ತಾ ಭಾರೀ ಸಂಖ್ಯೆ ಯಲ್ಲಿ ರೈತರು ಟ್ರ್ಯಾಕ್ಟರ್‌ಗಳು, ಮೋಟಾರು ಬೈಕುಗಳು, ಕುದುರೆಗಳು ಹಾಗೂ ಕ್ರೇನ್‌ಗಳಲ್ಲಿ ಆಗಮಿಸಲಾರಂಭಿಸಿದರು. ಕೇವಲ ಪುರುಷರಷ್ಟೇ ಅಲ್ಲದೆ, ಮಹಿಳೆಯರು ಕೂಡ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬಂದಿದ್ದರು.

ಷರತ್ತುಗಳ ಉಲ್ಲಂಘನೆ: ಪೊಲೀಸರು ನಿಗದಿಪಡಿಸಿದ್ದ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿಯೇ ರೈತರ ಟ್ರ್ಯಾಕ್ಟರ್‌ಗಳು ದೆಹಲಿಯತ್ತ ನುಗ್ಗಲಾರಂಭಿಸಿದವು. ಕೂಡಲೇ ಅವರನ್ನು ತಡೆಯಲು ಪೊಲೀಸರು ಮುಂದಾದರು. ಆದರೆ, ಬಗ್ಗದ ರೈತರು, ಅಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿ, ಉಕ್ಕು ಮತ್ತು ಕಾಂಕ್ರೀಟ್‌ ಬ್ಯಾರಿಕೇಡ್‌ಗಳನ್ನು ಜರುಗಿಸಿ ನಗರಕ್ಕೆ ನುಗ್ಗಿದರು. ಈ ವೇಳೆ ಪ್ರತಿಭಟ ನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ಮಾಡಿ, ಅಶ್ರುವಾಯು ಸಿಡಿಸಿದರು. ಈ ಬೆಳವಣಿಗೆಯ ನಡುವೆಯೇ, ಇನ್ನಷ್ಟು ರೈತರ ಟ್ರ್ಯಾಕ್ಟರ್‌ಗಳು ನಿಗದಿಪಡಿಸಿದ್ದ ಮಾರ್ಗ ಹೊರತುಪಡಿಸಿ ಇತರೆ ಮಾರ್ಗಗಳಿಂದ ಪ್ರವಾ ಹದಂತೆ ನುಗ್ಗಿಬರಲಾರಂಭಿಸಿದವು. ಈ ಸಮಯದಲ್ಲಿ ರಾಜಧಾನಿಯ ಹಲವು ಭಾಗಗಳಲ್ಲಿ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆಗಳು ನಡೆದವು.

ಟ್ರ್ಯಾಕ್ಟರ್‌ಗಳಿಂದ  ಡಿಕ್ಕಿ ಹೊಡೆಸಿ ಬಸ್ಸನ್ನೇ  ಉರುಳಿಸಿದರು! :

ಒಂದು ಹಂತದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಬಂದಿದ್ದ ಪೊಲೀಸರ ಸಮೂಹವನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಅವರ ಮೇಲೆ ಕೋಲು, ಖಡ್ಗಗಳಿಂದ ಹಲ್ಲೆ ನಡೆಸಿದ ಘಟನೆಗಳೂ ನಡೆದಿವೆ. ರಸ್ತೆ ತಡೆಗೆಂದು ಪೊಲೀಸರು ನಿಲ್ಲಿಸಿದ್ದ ಬಸ್‌ವೊಂದಕ್ಕೆ ರೈತರು ಟ್ರ್ಯಾಕ್ಟರ್‌ಗಳಿಂದ ಡಿಕ್ಕಿ ಹೊಡೆಸಿ, ಕೆಳಗುರುಳಿಸಿದ್ದಾರೆ. ಬಸ್ಸನ್ನು ದಾರಿಯಿಂದ ತೆರವುಗೊಳಿಸಲು ಆಗದ್ದಕ್ಕೆ ಹಲವು ಟ್ರ್ಯಾಕ್ಟರ್‌ಗಳನ್ನು ತಂದು ಡಿಕ್ಕಿ ಹೊಡೆಸಲಾಗಿದೆ. ಕೆಲವೆಡೆ ಪೊಲೀಸರ ಮೇಲೆಯೇ ಟ್ರ್ಯಾಕ್ಟರ್‌ ಹತ್ತಿಸಲು ಯತ್ನಿಸಿರುವ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಅಸಹಾಯಕ ಪೊಲೀಸರು :

ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನಾಕಾರ ರೈತರ ಗುಂಪು ಏಕಾಏಕಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ಲಗ್ಗೆಯಿಟ್ಟಿತು. ನಿಹಂಗಾ(ಸಾಂಪ್ರದಾಯಿಕ ಸಿಕ್ಖ್ ಹೋರಾಟಗಾರರು) ಸಿಕ್ಖ್ ಯುವಕರು ಕೆಂಪುಕೋಟೆಯ ಕಮಾನುಗಳ ಮೇಲೆ ಹತ್ತಿ ಸಿಖVರ ಧಾರ್ಮಿಕ ಧ್ವಜವನ್ನು ಹಾರಿಸಿದರು. ಸ್ವಾತಂತ್ರೊéàತ್ಸವದಂದು ಪ್ರಧಾನಮಂತ್ರಿಗಳು ಧ್ವಜಾರೋಹಣ ನಡೆಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡುವಂಥ ಸ್ಥಳವಿದು. ಇಲ್ಲಿನ ಪ್ರಮುಖ ಧ್ವಜ ಸ್ತಂಭದಲ್ಲಿ ಸದಾಕಾಲ ತ್ರಿವರ್ಣ ಧ್ವಜ ಹಾರುತ್ತಿರುತ್ತದೆ. ಇಲ್ಲಿಗೆ ಬಂದ ಪ್ರತಿಭಟನಾಕಾರರು ಎರಡನೇ ಧ್ವಜ ಸ್ತಂಭದಲ್ಲಿ ಸಿಕ್ಖ್ ಧಾರ್ಮಿಕ ಧ್ವಜವನ್ನು ಹಾರಿಸಿದ್ದಾರೆ. ಜತೆಗೆ, ಕೆಂಪುಕೋಟೆಯ ಒಳಹೊರಗೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದು, ಅವರನ್ನು ತಡೆಯಲು ಸಾಧ್ಯವಾಗದೇ ಪೊಲೀಸರು ಅಸಹಾಯಕರಾಗಿ ನಿಂತಿದ್ದೂ ಕಂಡುಬಂತು. ಕೊನೆಗೆ, ಹೆಚ್ಚುವರಿ ಪೊಲೀಸ್‌ ಪಡೆಗಳು ಬಂದು, ಸಾಯಂಕಾಲದ ಅನಂತರ ಕೆಂಪುಕೋಟೆಯಲ್ಲಿದ್ದ ರೈತರನ್ನು ತೆರವುಗೊಳಿಸಿದವು.

ಸಿಜೆಐಗೆ ಪತ್ರ: ಇದೇ ವೇಳೆಯಲ್ಲೇ ಮುಂಬೈ ಮೂಲದ ಕಾನೂನು ವಿದ್ಯಾರ್ಥಿಯೊಬ್ಬ ಸಿಜೆಐಗೆ ಪತ್ರ ಬರೆದಿದ್ದು, ಘಟನೆಯ ಕುರಿತು ತ್ವರಿತ ಕ್ರಮ ಕೈಗೊಳ್ಳುವುದಕ್ಕಾಗಿ ವಿಶೇಷ ತನಿಖಾ ಸಮಿತಿಯೊಂದನ್ನು ರಚಿಸಬೇಕೆಂದು ಕೋರಿದ್ದಾನೆ.

ದಿಲ್ಲಿ ಹಿಂಸಾಚಾರ,  ಪೊಲೀಸರು ಹೇಳಿದ್ದೇನು? :

ದೆಹಲಿಯಲ್ಲಿ ರೈತ ಸಂಘಟನೆಗಳಿಂದ ನಡೆದ ಹಿಂಸಾಚಾರದ ಬಗ್ಗೆ ಪೊಲೀಸರಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, “”ಪ್ರತಿಭಟನಾನಿರತ ರೈತರು ಟ್ರ್ಯಾಕ್ಟರ್‌ ಪರೇಡ್‌ಗಾಗಿ ನಡೆದಿದ್ದ ಪೂರ್ವ ಒಪ್ಪಂದವನ್ನು ಉಲ್ಲಂಖೀಸಿ, ಹಿಂಸಾಚಾರದಲ್ಲಿ ತೊಡಗಿದರು. ಇದರಿಂದಾಗಿ ಅನೇಕ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದು ದಿಲ್ಲಿ ಪೊಲೀಸ್‌ ಹೇಳಿದೆ.

“”ಪೂರ್ವ ನಿಗದಿಯಂತೆ ನಿರ್ದಿಷ್ಟ ಮಾರ್ಗದಲ್ಲೇ ಪರೇಡ್‌ ನಡೆಯಬೇಕಿತ್ತು, ಆದರೆ ಪ್ರತಿಭಟನಾಕಾರರು ನಿಗದಿತ ಸಮಯಕ್ಕೂ ಮುನ್ನವೇ ಪರೇಡ್‌ ಆರಂಭಿಸಿದ್ದಷ್ಟೇ ಅಲ್ಲದೇ, ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ ಮಾಡಿದ್ದಾರೆ. ಹಿಂಸಾಚಾರದ ವೇಳೆಯಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದಾರೆ. ನಾವು ಭರವಸೆ ನೀಡಿದ್ದಂತೆ ಎಲ್ಲಾ ಷರತ್ತುಗಳನ್ನೂ ಪಾಲಿಸಿದೆವು” ಎಂದು ದಿಲ್ಲಿ ಪೊಲೀಸ್‌ ಪಿಆರ್‌ಒ ಐಶ್‌ ಸಿಂಘಾಲ್‌ ಹೇಳಿದ್ದಾರೆ. ಕಟ್ಟಿಗೆ, ಧ್ವಜಗಳನ್ನು ಹಿಡಿದ ಪ್ರತಿಭಟನೆಗೆ ಇಳಿದ ರೈತರು, ಬ್ಯಾರಿಕೇಡ್‌ಗಳನ್ನು ಕೆಡವಿಹಾಕಿ, ಬಸ್‌ಗಳಿಗೆ ಹಾನಿ ಮಾಡಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗುವಂತೆ ಮಾಡಿದರು. ಒಂದೆಡೆಯಂತೂ ಕತ್ತಿ ಹಿಡಿದ ವ್ಯಕ್ತಿಯೊಬ್ಬ ಬ್ಬ ಪೊಲೀಸರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ಹಾಗೂ ಅಶ್ರುವಾಯು ಸಿಡಿಸಬೇಕಾಯಿತು.

ಕೂಡಲೇ ವಾಪಸ್‌ ಹೋಗಿ :

ಟ್ರ್ಯಾಕ್ಟರ್‌ ಪರೇಡ್‌ ಹಿಂಸಾಚಾರದ ಸ್ವರೂಪಕ್ಕೆ ತಿರುಗಿ ದೆಹಲಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತಿದ್ದಂತೆ 41 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ), “ಇದು ಸಮಾಜವಿದ್ರೋಹಿ ಶಕ್ತಿಗಳು ನಮ್ಮ ಗುಂಪಿನೊಳಕ್ಕೆ ನುಸುಳಿ ಎಸಗಿದ ಕುಕೃತ್ಯ. ಟ್ರ್ಯಾಕ್ಟರ್‌ ರ್ಯಾಲಿಯನ್ನು ನಾವು ಈ ಕ್ಷಣವೇ ವಾಪಸ್‌ ಪಡೆಯುತ್ತಿದ್ದೇವೆ. ದಯವಿಟ್ಟು ಎಲ್ಲರೂ ನಿಮ್ಮ ನಿಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಸಿಂಘು ಗಡಿಗೆ ವಾಪಸಾಗಿ’ ಎಂದು ಮನವಿ ಮಾಡಿತು. ಜತೆಗೆ, ನಮ್ಮ ಶಾಂತಿಯುತ ಪ್ರತಿಭಟನೆಯು ಮುಂದುವರಿಯುತ್ತದೆ. ನಮ್ಮ ಮುಂದಿನ ನಡೆಯೇನು ಎಂಬ ಬಗ್ಗೆ ಸದ್ಯದಲ್ಲೇ ಚರ್ಚಿಸಿ ತಿಳಿಸುತ್ತೇವೆ ಎಂದೂ ಹೇಳಿತು.

ಹರ್ಯಾಣದಲ್ಲಿ ಹೈಅಲರ್ಟ್‌ :

ದಿಲ್ಲಿ ಘಟನೆ ಹಿನ್ನೆಲೆಯಲ್ಲಿ ಪಂಜಾಬ್‌, ದಿಲ್ಲಿ ಹಾಗೂ ಹರ್ಯಾಣದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡಿದ್ದು ಕಂಡುಬಂದಲ್ಲಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹರ್ಯಾಣ ಸರಕಾರ ಎಚ್ಚರಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲೆಡೆ‌ಯೂ ಹದ್ದಿನ ಕಣ್ಣಿಡುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಅಮೆರಿಕದಿಂದ ಅಲರ್ಟ್‌ :

ಹಿಂಸಾಚಾರ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರಿಕೆಯಿಂದಿರುವಂತೆ ಅಮೆರಿಕವು ಭಾರತದಲ್ಲಿರುವ ತನ್ನ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್‌ಗಳಿಗೆ ಸಲಹೆ ನೀಡಿದೆ.

ದಿನವಿಡೀ ಏನಾಯಿತು? :

7-9.00 : ತಿಕ್ರಿ, ಸಿಂಘು, ಘಾಜಿಪುರ ಮೂಲಕ ರೈತರ ಪ್ರವೇಶ.ತಿಕ್ರಿ,  ಸಿಂಘುವಿನಲ್ಲಿ ಘರ್ಷಣೆ, ಬ್ಯಾರಿಕೇಡ್‌ ಧ್ವಂಸ

10.00 ; ಸಂಜಯ ಗಾಂಧಿ ಟ್ರಾನ್ಸ್‌ ಪೋರ್ಟ್‌ ನಗರ್‌ ನಲ್ಲಿ ಪೊಲೀಸರೊಂದಿಗೆ ಘರ್ಷಣೆ. ಅಶ್ರುವಾಯು ಪ್ರಯೋಗ.

10.30 : ಅಕ್ಷರ್‌ಧಾಮ್‌ ರಸ್ತೆಯಲ್ಲಿ  ಪೊಲೀಸರೊಂದಿಗೆ ಘರ್ಷಣೆ. ವಾಹನಗಳು, ಡಿಟಿಸಿ ಬಸ್‌ ಧ್ವಂಸ.

11.00 : ಅಶ್ರುವಾಯು ಪ್ರಯೋಗ,ಲಘು ಲಾಠಿಚಾರ್ಜ್‌. ಕೆಲವು ಖಡ್ಗಧಾರಿ ಗಳಿಂದ ಪೊಲೀಸರ ಮೇಲೆ ಹಲ್ಲೆ

12.00 ; ಮುಕರ್ಮಾ ಚೌಕದ ಬಳಿ ಪೊಲೀಸರನ್ನು ಟ್ರ್ಯಾಕ್ಟರ್‌ಗಳ ಮೂಲಕ  ಪ್ರತಿಭಟನಾಕಾರರು ಬೆನ್ನು ಹತ್ತಿದರು.

1.00 : ಟ್ರ್ಯಾಕ್ಟರ್‌ ಪಲ್ಟಿಯಾಗಿ ನವನೀತ್‌ ಸಿಂಗ್‌ ಸಾವು. ಐಟಿಒದಲ್ಲಿ ಶವದೊಂದಿಗೆ ಪ್ರತಿಭಟನಾ ನಿರತರ ಧರಣಿ.

2.30 : ಐಟಿಒ ಕೂಡುರಸ್ತೆ ಮತ್ತು ಕೆಂಪುಕೋಟೆಯಲ್ಲಿ ಮತ್ತೆ ಪೊಲೀಸ ರೊಂದಿಗೆ ಘರ್ಷಣೆ, ಕಲ್ಲುತೂರಾಟ.

3.00 : ಲಘು ಲಾಠಿ ಚಾರ್ಜ್‌, ಕೆಂಪು ಕೋಟೆ ಯಿಂದ ಪ್ರತಿಭಟನಕಾರರ ತೆರವು. ಇಂಟರ್‌ನೆಟ್‌ ಸಂಪರ್ಕ ಸ್ಥಗಿತ.

4-6.00 ; ಕೇಂದ್ರ ಗೃಹ ಸಚಿವ ಅಮಿತ್‌ ಶಾರಿಂದ ಸಭೆ, ಅರೆಸೇನಾ ಪಡೆ ನಿಯೋಜನೆಗೆ ನಿರ್ಧಾರ.

60 ದಿನಗಳ ಹೋರಾಟದ ಹಾದಿ :

ನ.26, 2020 ;

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್‌-ಹರ್ಯಾಣ ರೈತರಿಂದ ದಿಲ್ಲಿ ಚಲೋಗೆ ಕರೆ. ಪೊಲೀಸರ ಜಲಫಿರಂಗಿ, ಅಶ್ರುವಾಯು ನಡುವೆ ದಿಲ್ಲಿ ಗಡಿ ತಲುಪಿ ವಾಸ್ತವ್ಯ ಹೂಡಿದ ಪ್ರತಿಭಟನಾಕಾರರು.

ಡಿ.1, 2020 :

5 ರೈತ ಸಂಘಟನೆಗಳು ಹಾಗೂ ಕೇಂದ್ರ ಕೃಷಿ ಸಚಿವರ ನಡುವೆ ಮಾತುಕತೆ. ಕೇಂದ್ರದ ಸಮಿತಿ ರಚನೆ ಪ್ರಸ್ತಾಪಕ್ಕೆ ರೈತರ ವಿರೋಧ. ಮಾತುಕತೆ ವಿಫ‌ಲ.

ಡಿ. 3, 2020 :

8 ಗಂಟೆಗಳ ಮ್ಯಾರಥಾನ್‌ ಸಭೆ ನಡೆದರೂ 2ನೇ ಸುತ್ತಿನ ಮಾತುಕತೆಯೂ ವಿಫ‌ಲ

ಡಿ. 8, 2020 :

ಪ್ರತಿಭಟನಾಕಾರ ರೈತರಿಂದ ಭಾರತ್‌ ಬಂದ್‌ಗೆ ಕರೆ. ಪಂಜಾಬ್‌- ಹರ್ಯಾಣ ಸಂಪೂರ್ಣ ಸ್ತಬ್ಧ. ಒಡಿಶಾ, ಮಹಾರಾಷ್ಟ್ರ, ಬಿಹಾರದಲ್ಲೂ ಅನ್ನದಾತರ ಪ್ರತಿಭಟನೆ

ಡಿ. 16, 2020 :

ರೈತರನ್ನು ತೆರವುಗೊಳಿಸಲು ಕೋರಿದ್ದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ. ನಿಷ್ಪಕ್ಷ ಸಮಿತಿ ರಚನೆ ಕುರಿತು ಕೋರ್ಟ್‌ ಪ್ರಸ್ತಾಪ

ಡಿ. 21, 2020 :

ಒಂದು ದಿನದ ಉಪವಾಸ  ನಡೆಸಿದ ರೈತರು

ಡಿ. 30, 2020 :

ಸರಕಾರ ಮತ್ತು ಅನ್ನದಾತರ ನಡುವಿನ 6ನೇ ಸುತ್ತಿನ  ಮಾತುಕತೆಯೂ ವಿಫ‌ಲ.

ಜ. 4, 2021 :

7ನೇ ಸುತ್ತಿನ ಮಾತುಕತೆ. ಕೃಷಿ ಕಾಯ್ದೆಗಳನ್ನು ರದ್ದು  ಮಾಡಲೇಬೇಕೆಂದು ರೈತರ ಪಟ್ಟು.

ಜ. 12, 2021 :

ಕೃಷಿ ಕಾಯ್ದೆಯ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ತಡೆ. ಬಿಕ್ಕಟ್ಟು ಶಮನಕ್ಕಾಗಿ 4 ತಜ್ಞರ ಸಮಿತಿ ರಚನೆ

ಜ.21, 2021 :

10ನೇ ಸುತ್ತಿನ ಮಾತುಕತೆ. ಒಂದೂವರೆ ವರ್ಷಗಳ ಕಾಲ ಕಾಯ್ದೆಗೆ ತಡೆ ತರುವುದಾಗಿ ಸರಕಾರ ಪ್ರಸ್ತಾಪ.  ಪಟ್ಟುಬಿಡದ ರೈತರು.

ಜ.22, 2021  :

11ನೇ ಸುತ್ತಿನ ಮಾತುಕತೆಯೂ ವಿಫ‌ಲ. ಕಾಯ್ದೆ ವಾಪಸ್‌ ಪಡೆಯಲೇಬೇಕು ಎಂದ ರೈತರು. ಇನ್ನು ಮಾತುಕತೆಯಿಲ್ಲ ಎಂದು ನಿಲುವು ಪ್ರಕಟಿಸಿದ ಸರ್ಕಾರ.

ಜ. 26, 2021 :

ಟ್ರ್ಯಾಕ್ಟರ್‌ ರ್ಯಾಲಿ ನಡೆಸಿ ದೆಹಲಿಗೆ ನುಗ್ಗಿದ ರೈತರು. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ.

ಹಿಂಸೆ ಯಾವುದೇ ವಿಷಯದ ಪರಿಹಾರಕ್ಕೆ ದಾರಿ ಅಲ್ಲ. ಯಾರಿಗೇ ಆಗಲಿ ನೋವಾದರೆ ಅದು ದೇಶಕ್ಕೆ ಆಗುವ ನೋವು. ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು.ರಾಹುಲ್‌ ಗಾಂಧಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷ

ಹಿಂಸೆಯಿಂದ ತಲೆತಗ್ಗಿಸುವಂತಾಗಿದೆ. ಇದರಿಂದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ ನಾನು ಅವಮಾನದಿಂದ ತಲೆತಗ್ಗಿಸುವಂತಾಗಿದೆ. ಘಟನೆಗಳ ಹೊಣೆಯನ್ನು ಹೊರುತ್ತೇನೆ.ಯೋಗೇಂದ್ರ ಯಾದವ್‌, ಹೋರಾಟಗಾರ

ಶಿರೋಮಣಿ ಅಕಾಲಿ ದಳವು ಶಾಂತಿ ಮತ್ತು ಸೌಹಾರ್ದತೆಯಲ್ಲಿ ಅಚಲ ನಂಬಿಕೆಯಿಟ್ಟಿದ್ದು, ದಿಲ್ಲಿಯಲ್ಲಿ ಪ್ರತಿಭಟನೆಗಳ ವೇಳೆ ನಡೆದ ಈ ಹಿಂಸಾಚಾರವನ್ನು ನಮ್ಮ ಪಕ್ಷವು ಖಂಡಿಸುತ್ತದೆ. ಶಿರೋಮಣಿ ಅಕಾಲಿ ದಳ

ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಕೆಲವು ಉಪದ್ರವಿ ಶಕ್ತಿಗಳು ಆಂದೋಲನದ ಹೆಸರಲ್ಲಿ ಅಪರಾಧವೆಸಗಿರುವುದು ಖಂಡಿತ ಸ್ವೀಕಾರಾರ್ಹವಲ್ಲ. ಲೋಕಜನಶಕ್ತಿ ಪಾರ್ಟಿಯು ಪ್ರತಿಭಟನಾಕಾರರ ಈ ವರ್ತನೆಯನ್ನು ವಿರೋಧಿಸುತ್ತದೆ. -ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ ನಾಯಕ

ನಾನು ಮೊದಲಿನಿಂದಲೂ ರೈತರ ಹೋರಾಟವನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಆದರೆ ಇಂಥ ಕೃತ್ಯವನ್ನು ಸಮರ್ಥಿಸಲು ಸಾಧ್ಯವಿಲ್ಲ. ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ಪವಿತ್ರ ತ್ರಿವರ್ಣ ಧ್ವಜ ಹಾರಬೇಕೇ ಹೊರತು, ಮತ್ಯಾವ ಧ್ವಜವೂ ಅಲ್ಲ. -ಶಶಿತರೂರ್‌, ಕಾಂಗ್ರೆಸ್‌ ನಾಯಕ

ಕೆಲವು ಶಕ್ತಿಗಳು ನಡೆಸಿದ ಹಿಂಸಾಚಾರ ನಿಜಕ್ಕೂ ಆಘಾತಕಾರಿ. ಈ ರೀತಿಯ ಹಿಂಸೆಯಿಂದಾಗಿ ಇಷ್ಟು ದಿನ ರೈತರು ಶಾಂತಿಯುತ ಪ್ರತಿಭಟನೆಯಿಂದ ಗಳಿಸಿದ್ದ ಸದ್ಭಾವನೆಗೆ ಧಕ್ಕೆಯಾಗುತ್ತದೆ.  ಎಲ್ಲ ರೈತರು ದಿಲ್ಲಿ ತೊರೆದು, ಗಡಿಗೆ ಹಿಂದಿರುಗಬೇಕೆಂದು ನಾನು ಕೋರುತ್ತೇನೆ. -ಅಮರೀಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

ನಮಗೆಲ್ಲ ಅಭಿವ್ಯಕ್ತಿ ಹಾಗೂ ವಾಕ್‌ ಸ್ವಾತಂತ್ರ್ಯವಿದೆ. ಹಾಗೆಂದು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪ್ರತಿಭಟನೆ ಮಾಡಲು ಅಧಿಕಾರವಿದೆ ಎಂದ ಮಾತ್ರಕ್ಕೆ ಆಂದೋಲನಗಳನ್ನು ಅರಾಜಕತೆಗೆ ಒಯ್ಯಬಹುದು ಎಂದರ್ಥವಲ್ಲ. -ಮನೋಹರ್‌ಲಾಲ್‌  ಖಟ್ಟರ್‌, ಹರಿಯಾಣ ಸಿಎಂ

ದಿಲ್ಲಿಯ ಬೀದಿಗಳಲ್ಲಿ ನಡೆದ ಬೆಳವಣಿಗೆಗಳು ಬಹಳ ಚಿಂತೆ ಹುಟ್ಟಿಸುವಂತಿವೆ. ರೈತ ಸಹೋದರರ ಬಗ್ಗೆ ಕೇಂದ್ರ ಸರಕಾರ ತೋರಿದ ಅಸೂಕ್ಷ್ಮತೆ ಮತ್ತು ಉದಾಸೀನತೆಯೇ ಈ ಪರಿಸ್ಥಿತಿಗೆ ಕಾರಣ. -ಮಮತಾ ಬ್ಯಾನರ್ಜಿ,  ಪಶ್ಚಿಮಬಂಗಾಲ ಸಿಎಂ

ಟಾಪ್ ನ್ಯೂಸ್

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

saavu

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.