ರಾಹುಲ್ ರೋಡ್‌ಶೋ ವೇಳೆ ಬೆಂಕಿ ಅವಘಡ
Team Udayavani, Oct 8, 2018, 6:00 AM IST
ನವದೆಹಲಿ/ಭೋಪಾಲ್: ದೇಶದಲ್ಲೇ ಅತಿ ಹೆಚ್ಚಿನ ಭದ್ರತೆಯಿರುವ ನಾಯಕರಲ್ಲಿ ಒಬ್ಬರಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಧ್ಯಪ್ರದೇಶದ ರ್ಯಾಲಿಯಲ್ಲಿ ಶನಿವಾರ ಅಗ್ನಿ ದುರಂತ ಸಂಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಬಲ್ಪುರದಲ್ಲಿ 8 ಕಿ.ಮೀ. ರೋಡ್ ಶೋ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಅದರ ವಿಡಿಯೋ ಭಾನುವಾರ ವೈರಲ್ ಆಗಿದೆ. ಘಟನೆಯಲ್ಲಿ ರಾಹುಲ್ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಜಬಲ್ಪುರದ ರೋಡ್ ಶೋ ವೇಳೆ ಕಾಂಗ್ರೆಸ್ ಬೆಂಬಲಿಗರು ರಾಹುಲ್‌ಗೆ ಆರತಿ ಎತ್ತಲೆಂದು ಬೃಹತ್ ದೀಪವೊಂದನ್ನು ತಂದಿದ್ದರು. ಆ ದೀಪದ ಮೇಲ್ಭಾಗದಲ್ಲಿ ಗ್ಯಾಸ್ ಬಲೂನ್‌ಗಳನ್ನು ಕಟ್ಟಲಾಗಿತ್ತು. ದೀಪದಲ್ಲಿನ ಬೆಂಕಿಯು ದಿಢೀರನೆ ಗ್ಯಾಸ್ ಬಲೂನ್‌ಗೆ ಹತ್ತಿಕೊಂಡ ಪರಿಣಾಮ, ಒಮ್ಮೆಲೇ ಬೆಂಕಿಯುಂಡೆ ಎದ್ದಿತು. ಕೂಡಲೇ ಅಲ್ಲಿದ್ದವರೆಲ್ಲರೂ ಭಯಭೀತರಾಗಿ ಓಡತೊಡಗಿದರು. ಘಟನೆ ನಡೆದ ಕೆಲವೇ ಮೀಟರ್ ದೂರದಲ್ಲಿ ರಾಹುಲ್ ಗಾಂಧಿ, ಕಮಲ್‌ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತಿತರ ನಾಯಕರು ತೆರೆದ ಜೀಪಿನಲ್ಲಿದ್ದರು. ಅವರ ಕಣ್ಣೆದುರೇ ಅವಘಡ ಸಂಭವಿಸಿದ್ದು, ಎಲ್ಲರೂ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಲೋಪವಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಅಮಿತ್ ಸಿಂಗ್, ಯಾವುದೇ ಭದ್ರತಾ ಲೋಪ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ತಂದಿದ್ದ ಆರತಿಯಿಂದ ಬೆಂಕಿ ಹತ್ತಿಕೊಂಡಿದ್ದು. ಅಲ್ಲದೆ, ರಾಹುಲ್‌ರಿಂದ 15 ಅಡಿ ಅಂತರ ಕಾಯ್ದುಕೊಳ್ಳಲಾಗಿತ್ತು. ಘಟನಾ ಸ್ಥಳದಲ್ಲಿ ಲಾಠಿಪ್ರಯೋಗ ಕೂಡ ಆಗಿಲ್ಲ. ಅಲ್ಲದೆ, ಕಾರ್ಯಕರ್ತರು ಆರತಿ ಮಾಡಬಾರದು, ಬಲೂನ್ ಹಿಡಿದುಕೊಳ್ಳಬಾರದು ಎಂಬ ನಿಯಮಗಳೇನೂ ಇಲ್ಲ ಎಂದಿದ್ದಾರೆ.
ಮಂಡ್ಯದಲ್ಲೂ ನಡೆದಿತ್ತು: ಏಪ್ರಿಲ್‌ನಲ್ಲಿ ಕರ್ನಾಟಕ ಚುನಾವಣಾ ಪ್ರಚಾರ ವೇಳೆ ರಾಹುಲ್ ವಿಮಾನದಲ್ಲಿ ಲೋಪ ಕಂಡುಬಂದಿತ್ತು. ಮಾರ್ಚ್‌ನಲ್ಲಿ ಮಂಡ್ಯದಲ್ಲಿ ಅ ವರನ್ನು ಸ್ವಾಗತಿಸಲೆಂದು ತಂದಿದ್ದ ನೈಟ್ರೋಜನ್ ಬಲೂನ್ ಸ್ಫೋಟಗೊಂಡು, 6 ಮಕ್ಕಳು ಸೇರಿ 11 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷ ಗುಜರಾತ್‌ನಲ್ಲಿ ಅವರ ವಾಹನದ ಮೇಲೆ ಕಲ್ಲುತೂರಾಟವೂ ನಡೆದಿತ್ತು. ಇದಾದ ಬಳಿಕ ಅವರ ಭದ್ರತೆ ವಿಚಾರ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು.
ಲಾಲು ಪ್ರಚಾರ ಇಲ್ಲ: ಏತನ್ಮಧ್ಯೆ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಈ ಬಾರಿ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೇವು ಹಗರಣದಲ್ಲಿ ಜೈಲು ಸೇರಿರುವ ಲಾಲು ಅವರಿಗೆ ಇನ್ನೂ 5 ಪ್ರಕರಣಗಳಲ್ಲಿ ಜಾಮೀನು ಸಿಕ್ಕಿಲ್ಲ. ಹೀಗಾಗಿ ಅವರು ಜೈಲಿನಿಂದ ಹೊರಬರುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಬಿಜೆಪಿಗೆ ಹಿನ್ನಡೆ
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದ ಚುನಾವಣೆ ಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್- ಸಿವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆಯಿದ್ದು, ಸಚಿನ್ ಪೈಲಟ್ ಅವರು ಸಿಎಂ ಹುದ್ದೆಗೆ ಅರ್ಹ ವ್ಯಕ್ತಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆಯಿದ್ದರೂ, ಎರಡೂ ಪಕ್ಷಗಳ ಪರ ಅಲೆ ಇರುವ ಕಾರಣ ಫಲಿತಾಂಶ ಯಾವ ಕಡೆಗೆ ಬೇಕಿದ್ದರೂ ವಾಲಬಹುದು ಎಂದೂ ಸಮೀಕ್ಷೆ ಹೇಳಿದೆ.
ರಾಯ್‌ಬರೇಲಿಯಲ್ಲಿ ಜೇಟ್ಲಿ ಅಭಿವೃದ್ಧಿ
2019ರ ಲೋಕಸಭೆ ಚುನಾವಣೆ ವೇಳೆ ಗಾಂಧಿ ಕುಟುಂಬದ ಭದ್ರಕೋಟೆಗೆ ಲಗ್ಗೆಯಿಡಲು ಬಿಜೆಪಿ ಎಲ್ಲ ರೀತಿಯ ಸಿದ್ಧತೆ ನಡೆಸಿಕೊಂಡಂತಿದೆ. ಅದಕ್ಕೆ ಪೂರಕ ಬೆಳವಣಿಗೆ ಎಂಬಂತೆ, ಕೇಂದ್ರ ವಿತ್ತ ಸಚಿವ ಜೇಟ್ಲಿ ಅವರು ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರಾಯ್‌ಬರೇಲಿ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದ್ದಾರೆ ಎಂದು ಉತ್ತರಪ್ರದೇಶ ಬಿಜೆಪಿ ವಕ್ತಾರ ಹೆರೋ ಬಾಜ್‌ಪೇಯಿ ಹೇಳಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರವಾದ ರಾಯ್‌ಬರೇಲಿ ಇನ್ನೂ ಹಿಂದುಳಿದಿದೆ. ಅಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕೆಂದು ಜೇಟ್ಲಿ ಅವರು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಅಲ್ಲದೆ, ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಜೇಟ್ಲಿ ರಾಯ್‌ಬರೇಲಿಗೆ ಭೇಟಿ ನೀಡಲಿದ್ದಾರೆ ಎಂದೂ ಬಾಜ್‌ಪೇಯಿ ಮಾಹಿತಿ ನೀಡಿದ್ದಾರೆ.
ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮೈತ್ರಿ ವೈಫಲ್ಯವು ಲೋಕಸಭೆ ಚುನಾವಣೆಯ ವೇಳೆ ರಚಿಸಲುದ್ದೇಶಿಸಿರುವ ಮಹಾಘಟಬಂಧನ್ ಮೇಲೆ ಯಾವುದೇ ಪರಿಣಾಮ ಬೀರದು.
ಪವನ್ ಖೇರಾ, ಕಾಂಗ್ರೆಸ್ ವಕ್ತಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.