ನಾಸಿಕ್-ತಿರುವನಂತಪುರ ಯಾತ್ರೆಗೆ 10 ತಿಂಗಳು!
2019ರ ಸೆ.1ರಂದು ಹೊರಟಿದ್ದ 74 ಚಕ್ರಗಳ ಟ್ರಕ್ ಈ ತಿಂಗಳು ಆಗಮನ
Team Udayavani, Jul 20, 2020, 7:15 AM IST
ತಿರುವನಂತಪುರ: ಮಹಾರಾಷ್ಟ್ರದ ನಾಸಿಕ್‌ನಿಂದ ತಿರುವನಂತಪುರಕ್ಕೆ ಹೋಗಲು ಎಷ್ಟು ದಿನ ಬೇಕಾದೀತು?
ಹತ್ತು ತಿಂಗಳು ಎಂದು ನಂಬುತ್ತೀರಾ? ಇದು ಅಚ್ಚರಿಯಾದರೂ ನಿಜ. ಎರಡೂ ನಗರಗಳ ನಡುವೆ 1,700 ಕಿಮೀ ದೂರ ಇದೆ.
ಸಾಮಾನ್ಯ ಟ್ರಕ್, ಲಾರಿ 5ರಿಂದ 7 ದಿನಗಳಲ್ಲಿ ಆ ದೂರ ಕ್ರಮಿಸುತ್ತವೆ. ತಿರುವನಂತಪುರದಲ್ಲಿರುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ದೊಡ್ಡದಾಗಿರುವ ಯಂತ್ರವನ್ನು ತರಲಾಗಿದೆ. ಒಟ್ಟು 74 ಟಯರ್‌ಗಳಿರುವ ಈ ಲಾರಿ ಭಾರೀ ತೂಕ ಹೊಂದಿರುವುದರಿಂದ ಇಷ್ಟು ನಿಧಾನವಾಗಿ ಕ್ರಮಿಸಿದೆ ಮತ್ತು ಹೆಚ್ಚು ಸಮಯ ತೆಗೆದುಕೊಂಡಿದೆ.
ಅಂದ ಹಾಗೆ ಅದು ಯಾತ್ರೆ ಆರಂಭ ಮಾಡಿದ್ದು 2019ರ ಸೆ.1ರಂದು. ಒಟ್ಟು ಐದು ರಾಜ್ಯಗಳ ಮೂಲಕ ಈ ಭಾರೀ ಗಾತ್ರದ ಟ್ರಕ್ ಸಾಗಿ ಬಂದಿದೆ. ಮಾ.25 ತಿರುವನಂತಪುರಕ್ಕೆ ತಲುಪಬೇಕಾಗಿದ್ದ ಈ ವಾಹನ ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಂದು ತಿಂಗಳು ವಿಳಂಬವಾಗಿ ತಲುಪಿದೆ.
ನೆರವು ನೀಡಿದ ಪೊಲೀಸರು: ಐದು ರಾಜ್ಯಗಳನ್ನು ಹಾದು ಬರುವ ಸಂದರ್ಭದಲ್ಲಿ ಆಯಾ ರಾಜ್ಯಗಳ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬಂದಿ ನೆರವು ನೀಡಿದ್ದಾರೆ. ರಸ್ತೆಯಲ್ಲಿ ಅದು ಸಂಚರಿಸುವಾಗ ಇತರ ವಾಹನಗಳ ಸಂಚಾರಕ್ಕೆ ಅನುವು ನೀಡಲಾಗಿರಲಿಲ್ಲ.
ಒಂದು ತಿಂಗಳು ಆಂಧ್ರದಲ್ಲಿ: ಬೃಹತ್ ವಾಹನ ಸಂಚಾರದ ಹೊಣೆ ಹೊತ್ತ ಖಾಸಗಿ ಸಂಸ್ಥೆಯ ಉದ್ಯೋಗಿ ಸುಭಾಷ್ ಯಾದವ್ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಆಂಧ್ರಪ್ರದೇಶದಲ್ಲಿ ಅದನ್ನು ತಡೆದು ನಿಲ್ಲಿಸಲಾಗಿತ್ತು. ಕಂಪೆನಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ಹೇಳಿದ್ದಾರೆ. ಎಂಜಿನಿಯರ್‌ಗಳು, ಸಿಬಂದಿ ಸೇರಿ ಒಟ್ಟು ಮೂವತ್ತು ಮಂದಿ ಸಿಬಂದಿ ಬೃಹತ್ ಟ್ರಕ್ ಜತೆ ಇದ್ದರು.
ಬೃಹತ್ ಯಂತ್ರ ಯಾಕಾಗಿ?
ಬಾಹ್ಯಾಕಾಶ ಯಾತ್ರೆಗೆ ಸಂಬಂಧಿಸಿದ ಉಪಕರಣಗಳನ್ನು ಸಿದ್ಧಪಡಿಸಲು ಅದನ್ನು ಬಳಕೆ ಮಾಡಲಾಗುತ್ತದೆ. ಸಂಸ್ಥೆಯ ಹಿರಿಯ ಅಧಿಕಾರಿಗಳ ಪ್ರಕಾರ ಅದರಲ್ಲಿ ಸೂಕ್ತ ಮಾರ್ಪಾಡು ಮಾಡಿದ ಬಳಿಕ ಅದನ್ನು ಉಪಯೋಗಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಎಷ್ಟಿದೆ ಗಾತ್ರ?
ವಿಎಸ್‌ಸ್‌ಸಿಗೆ ಬಂದಿರುವ ಯಂತ್ರದ ಎತ್ತರ 7.5 ಮೀಟರ್, 7 ಮೀಟರ್ ಅಗಲ ಇದೆ. ಹೆಚ್ಚಿನ ಸ್ಥಳಗ ಳಲ್ಲಿ ಪೂರ್ಣ ರಸ್ತೆಯನ್ನೇ ಅದು ಆಕ್ರಮಿಸಿಕೊಂಡಿತ್ತು. ಗುಂಡಿಗಳಿದ್ದ ರಸ್ತೆಗಳನ್ನು ದುರಸ್ತಿ ಮಾಡಿದ ಬಳಿಕವೇ ಅದು ಸಂಚರಿಸುತ್ತಿತ್ತು. ಕೆಲವೊಂದು ಸ್ಥಳಗಳಲ್ಲಿ ಮರಗಳನ್ನು ತುಂಡರಿಸಿ ತೆಗೆದ ಘಟನೆಗಳೂ ನಡೆದಿವೆ. ಸಂಚಾರಕ್ಕೆ ಅಡ್ಡಿಯಾದ ವಿದ್ಯುತ್ ಕಂಬಗಳನ್ನು ತೆಗೆಯಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.