ಸೇನಾ ಹೆಲಿಕಾಪ್ಟರ್ ಅಪಘಾತ: ಸಮರ ಸೇನಾನಿ ಜ| ರಾವತ್ ಅಮರ
ಸಿಡಿಎಸ್ ಜ| ಬಿಪಿನ್ ರಾವತ್, ಪತ್ನಿ ಸಹಿತ 13 ಮಂದಿ ಸಾವು
Team Udayavani, Dec 9, 2021, 7:00 AM IST
ದೇಶದ ಮೂರು ಸಶಸ್ತ್ರ ಪಡೆಗಳ ಮೊತ್ತಮೊದಲ ಮುಖ್ಯಸ್ಥ (ಸಿಡಿಎಸ್) ಜ| ಬಿಪಿನ್ ರಾವತ್ ಇನ್ನಿಲ್ಲ. 2019ರ ಜನವರಿಯಲ್ಲಿ ಸಿಡಿಎಸ್ ಆಗಿ ನೇಮಕವಾಗಿದ್ದ ಜ| ರಾವತ್ ಸೇನೆಯ ಸುಧಾರಣೆಯ ಕನಸು ಕಂಡಿದ್ದರಲ್ಲದೆ ಇಲ್ಲೂ ಆತ್ಮನಿರ್ಭರ ಭಾರತ ಮೂಲಕ ದೇಶೀಯವಾಗಿ ಶಸ್ತ್ರಾಸ್ತ್ರ ಉತ್ಪಾದಿಸಲು ಮುಂದಡಿ ಇರಿಸಿದ್ದರು. ಜತೆಗೆ ಹೊರಗಿನ ಎಂಥದ್ದೇ ಸವಾಲುಗಳನ್ನಾಗಲಿ ಎದುರಿಸುವ ನಿಟ್ಟಿನಲ್ಲಿ ಮೂರು ಪಡೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಪ್ರತ್ಯೇಕ ಕಮಾಂಡ್‌ಗಳ ರಚನೆಗೂ ಮುಂದಾಗಿದ್ದರು. ದುರದೃಷ್ಟವಶಾತ್ ಬುಧವಾರ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಜ| ರಾವತ್ ಅವರು ಇನ್ನಿಲ್ಲವಾಗಿದ್ದಾರೆ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿಗರೆಯುತ್ತಿದೆ.
ಕೂನೂರು (ತಮಿಳುನಾಡು)/ಹೊಸದಿಲ್ಲಿ: ದುರದೃಷ್ಟವಶಾತ್ ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಜ| ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಮಂದಿ ಸಾವನ್ನಪ್ಪಿದ್ದಾರೆ..
– ಸಂಜೆ ಆರು ಗಂಟೆ ವೇಳೆಗೆ ವಾಯುಸೇನೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೊರಬಿದ್ದ ಆಘಾತಕಾರಿ ಸಂದೇಶವಿದು. ಬುಧವಾರ ಮಧ್ಯಾಹ್ನ 12.20ರ ಸುಮಾರಿಗೆ ತಮಿಳುನಾಡಿನ ವೆಲ್ಲಿಂಗ್ಟನ್ ಬಳಿಯ ಕೂನೂರಿನಲ್ಲಿ ವಾಯುಸೇನೆಯ ಎಂಐ-17ವಿ5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲೇ ಈ ಹೆಲಿಕಾಪ್ಟರ್ ನಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳ ಮೊತ್ತಮೊದಲ ಮುಖ್ಯಸ್ಥ ಜ| ಬಿಪಿನ್ ರಾವತ್, ಅವರ ಪತ್ನಿ
ಮಧುಲಿಕಾ ರಾವತ್ ಮತ್ತು ಅವರ ಸಿಬಂದಿ ಇದ್ದರು ಎಂಬ ಮಾಹಿತಿಯೂ ಹೊರಬಿತ್ತು. ಈ ಹೆಲಿಕಾಪ್ಟರ್ ನಿಂದ ಮೂವರನ್ನು ರಕ್ಷಿಸಲಾಗಿದೆ, ಇವರಲ್ಲಿ ಜ| ರಾವತ್ ಅವರೂ ಇದ್ದಾರೆ ಎಂಬ ಸುದ್ದಿ ಸಂಜೆಯವರೆಗೂ ಹರಿದಾಡುತ್ತಲೇ ಇತ್ತು.
ಈ ಬೆಳವಣಿಗೆಗಳ ಮಧ್ಯೆ ದೇಶಾದ್ಯಂತ ಜ|ರಾವತ್ ಅವರು ಅಪಾಯದಿಂದ ಪಾರಾಗಿ ಬರಲಿ ಎಂಬ ಪ್ರಾರ್ಥನೆ ಕೇಳಿಬಂದಿತ್ತು. ರಾಜಕೀಯ ಗಣ್ಯರಿಂದ ಹಿಡಿದು, ಸಾಮಾನ್ಯ ಜನರೂ ಜ| ರಾವತ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಆದರೆ ಪ್ರಾರ್ಥನೆ ಫಲಿಸಲೇ ಇಲ್ಲ. ಈ ಹೆಲಿಕಾಪ್ಟರ್‌ನಲ್ಲಿ ಇದ್ದ 14 ಮಂದಿಯಲ್ಲಿ ಕೇವಲ ಒಬ್ಬರು ಮಾತ್ರ ಬದುಕುಳಿದರು. ಜ| ರಾವತ್ ಸಹಿತ ಉಳಿದವರೆಲ್ಲರೂ ಸಾವನ್ನಪ್ಪಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಎಸ್‌ಸಿ ಮಾತ್ರ ಬದುಕುಳಿದಿದ್ದು, ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ತನಿಖೆಗೆ ಆದೇಶ
ಸೂಲೂರಿನಿಂದ ಬೆಳಗ್ಗೆ 10.30ಕ್ಕೆ ಹೊರಟಿದ್ದ ಎಂಐ-17ವಿ5 ಹೆಲಿಕಾಪ್ಟರ್ 12.45ರ ವೇಳೆಗೆ ವೆಲ್ಲಿಂಗ್ಟನ್ ತಲುಪಬೇಕಿತ್ತು. ಅಲ್ಲಿನ ರಕ್ಷಣ ಸೇವಾ ಸಿಬಂದಿ ಕಾಲೇಜಿನಲ್ಲಿ ಅಪರಾಹ್ನ 3ಕ್ಕೆ ಜ| ರಾವತ್ ಅವರ ಉಪನ್ಯಾಸ ನಿಗದಿಯಾಗಿತ್ತು. ಆದರೆ 12.20ರ ವೇಳೆಗೆ ಈ ಅಪಘಾತ ಸಂಭವಿಸಿತು. ಮೊದಲಿಗೆ ಸ್ಥಳೀಯರೇ ಅಪಘಾತ ಸ್ಥಳಕ್ಕೆ ತೆರಳಿ ಬೆಂಕಿ ಆರಿಸಲು ಯತ್ನಿಸಿದರು. ಬಳಿಕ ಹತ್ತಿರದ ಅಗ್ನಿಶಾಮಕ ದಳ ಮತ್ತು ವಾಯುಸೇನಾ ಸಿಬಂದಿ ಆಗಮಿಸಿ ಬೆಂಕಿ ಆರಿಸಿದರು. ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಭಾರತೀಯ ವಾಯುಸೇನೆ ತನಿಖೆಗೆ ಆದೇಶಿಸಿದೆ.
ಪ್ರಧಾನಿಗೆ ಮಾಹಿತಿ
ಅಪಘಾತ ಸಂಭವಿಸಿದ ಕೂಡಲೇ ದಿಲ್ಲಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದ್ದ ವೇಳೆಯಲ್ಲೇ ಈ ಘಟನೆ ನಡೆದಿದ್ದು, ಅಲ್ಲೇ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು, ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು. ಬಳಿಕ ರಾಜನಾಥ್ ಸಿಂಗ್ ದಿಲ್ಲಿಯಲ್ಲಿರುವ ಜ| ಬಿಪಿನ್ ರಾವತ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದರು. ಬಳಿಕ ಭೂಸೇನಾ ಮುಖ್ಯಸ್ಥ ಜ| ನರವಾಣೆ ಅವರೂ ಜ| ರಾವತ್ ನಿವಾಸಕ್ಕೆ ತೆರಳಿದರು.
ಸಂಜೆ 6.30ಕ್ಕೆ ಪ್ರಧಾನಿ ನೇತೃತ್ವದಲ್ಲಿ ರಕ್ಷಣೆ ಮೇಲಿನ ಸಂಪುಟ ಸಭೆ ನಡೆದಿದ್ದು, ಘಟನೆಯ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ. ಬಳಿಕ ಸಂಪುಟ ಜ| ರಾವತ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿತು.
ಕೆಳಮಟ್ಟದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್
ಘಟನೆ ನಡೆದ ಕೂನೂರಿನ ಜನರ ಪ್ರಕಾರ, ಜ| ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿತ್ತು. ಕೂನೂರು ಬಳಿಯ ಗುಡ್ಡ ಪ್ರದೇಶದಲ್ಲಿ ಹೆಚ್ಚು ಮಂಜು ತುಂಬಿಕೊಂಡಿತ್ತು. ಆಗಸದಲ್ಲೇ ಹೆಲಿಕಾಪ್ಟರ್‌ಗೆ ಬೆಂಕಿ ಹತ್ತಿಕೊಂಡಿದ್ದು, ಬಳಿಕ ಅದು ಮರದ ಮೇಲೆ ಬಿದ್ದಿದೆ. ಆಗ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು ಎಂದು ಸ್ಥಳೀಯರು ಹೇಳಿದ್ದಾರೆ. ಮನೆಯೊಂದಕ್ಕೆ ಈ ಹೆಲಿಕಾಪ್ಟರ್ ಢಿಕ್ಕಿ ಹೊಡೆದಿದೆ ಎಂದು ಕೆಲವರು ಹೇಳಿದ್ದು, ಹೆಲಿಕಾಪ್ಟರ್‌ನಿಂದ ಮೂವರು ನೆಲಕ್ಕೆ ಜಿಗಿದಿದ್ದರು ಎಂದು ತಿಳಿಸಿದ್ದಾರೆ.
ಹೇಗೆ ಘಟಿಸಿರಬಹುದು ದುರಂತ?
ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಸಹಿತ ಒಟ್ಟು 13 ಮಂದಿ ಎಂಐ-17ವಿ5 ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ರಷ್ಯಾ ನಿರ್ಮಿತ ಈ ಹೆಲಿಕಾಪ್ಟರ್ ಅಷ್ಟು ಸುಲಭದಲ್ಲಿ ಅಪಘಾತ ಕ್ಕೀಡಾಗುವುದಿಲ್ಲ. ಇದನ್ನು ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್ ಎಂದೇ ಕರೆಯಲಾಗುತ್ತದೆ. ಆದರೂ ಈ ದುರಂತ ಸಂಭವಿಸಿದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಪ್ರತಿಕೂಲ ಹವಾಮಾನ
ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಾಪ್ಟರ್ ದುರಂತಕ್ಕೆ ಪ್ರತಿಕೂಲ ಹವಾಮಾನ ಕಾರಣ ಇರಬಹುದು. ಮೋಡ ಕವಿದು ಮುಂದೆ ಏನೂ ಕಾಣಿಸದೆ ಇದ್ದಿರಬಹುದು. ಎಂಐ-17ವಿ5 ಹೆಲಿಕಾಪ್ಟರ್‌ನ ಮಾಜಿ ಪೈಲಟ್ ಅಮಿತಾಭ್ ರಾಜನ್ ಇದೇ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಇಂಥ ಘಟನೆಗಳಿಗೆ ಪ್ರತಿ ಕೂಲ ಹವಾಮಾನವೇ ಪ್ರಮುಖ ಕಾರಣವಾಗು ತ್ತದೆ. ಅದರಲ್ಲೂ ಬೆಟ್ಟ ಪ್ರದೇಶದಲ್ಲಿನ ಹವಾಮಾನ ಇನ್ನೂ ಕೆಟ್ಟದಾಗಿರುತ್ತದೆ ಎಂದಿದ್ದಾರೆ.
ವಿದ್ಯುತ್ ತಂತಿಗಳು
ಅಪಘಾತ ಸಂಭವಿಸಿರುವ ಪ್ರದೇಶ, ಜನವಸತಿ ಪ್ರದೇಶದಿಂದ ಕೊಂಚವೇ ದೂರದಲ್ಲಿದೆ. ಇಲ್ಲಿ ವಿದ್ಯುತ್ ತಂತಿಗಳಿದ್ದು, ಇದಕ್ಕೆ ಹೆಲಿಕಾಪ್ಟರ್ ಢಿಕ್ಕಿ ಹೊಡೆದಿರಬಹುದು ಎಂಬ ಅನುಮಾನಗಳಿವೆ.
ತಾಂತ್ರಿಕ ತೊಂದರೆ
ಸಾಮಾನ್ಯವಾಗಿ ಇಂಥ ಅತ್ಯಾಧುನಿಕ ಹೆಲಿಕಾಪ್ಟರ್‌ಗಳಲ್ಲಿ ತಾಂತ್ರಿಕ ತೊಂದರೆ ಗಳು ಉಂಟಾಗುವುದಿಲ್ಲ. ಜತೆಗೆ ಈ ಹೆಲಿಕಾಪ್ಟರ್‌ಗಳಿಗೆ ನುರಿತ, ಉತ್ತಮ ತರಬೇತಿ ಹೊಂದಿದ ಪೈಲಟ್‌ಗಳೇ ಇರುತ್ತಾರೆ. ಹೀಗಾಗಿ ವಿವಿಐಪಿಗಳ ಓಡಾಟಕ್ಕೆ ಇದೇ ಹೆಲಿಕಾಪ್ಟರ್ ಬಳಕೆ ಮಾಡುತ್ತಾರೆ. ಒಂದು ವೇಳೆ ಅಪಘಾತಕ್ಕೆ ಈಡಾಗಿರುವ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿತ್ತೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಹೆಲಿಕಾಪ್ಟರ್ ಇಳಿಯುತ್ತಿದ್ದ ಎತ್ತರ
ಅವಘಡಕ್ಕೆ ಈಡಾಗುವ ಮುನ್ನ ಹೆಲಿಕಾಪ್ಟರ್ ಎಷ್ಟು ಎತ್ತರದಿಂದ ಇಳಿಯುತ್ತಿತ್ತು ಎಂಬ ಬಗ್ಗೆ ವಾಯುಸೇನೆ ತನಿಖೆ ಆರಂಭಿಸಿದೆ. ಇದರಿಂದ ಅಪಘಾತ ಸಂಭವಿಸಿತೇ ಎಂಬ ಬಗ್ಗೆ ಕಂಡುಕೊಳ್ಳಲಿದೆ.
ಅಪ್ರತಿಮ ಯೋಧ ಜ| ಬಿಪಿನ್ ರಾವತ್
1. ದೇಶದ ಮೂರು ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ಎಂಬ ಹೆಗ್ಗಳಿಕೆ. 2019ರ ಡಿ. 31ರಿಂದ ಕಾರ್ಯನಿರ್ವಹಣೆ.
2. ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯ ಸದಸ್ಯ. ಕಾಂಗೋದಲ್ಲಿ ವಿವಿಧ ದೇಶಗಳ ಬ್ರಿಗೇಡ್‌ನ ನಾಯಕತ್ವ.
3. ಈಶಾನ್ಯ ರಾಜ್ಯಗಳಲ್ಲಿ ಉಗ್ರವಾದವನ್ನು ಕಡಿಮೆ ಮಾಡಿದ ಖ್ಯಾತಿ.
4. 2016ರ ಸರ್ಜಿಕಲ್ ಸ್ಟ್ರೈಕ್ ಯೋಜನೆಗೆ ಸಹಕಾರ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯೋಧ ಸೇವಾ ಪದಕ, ಅತೀ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ, ಯೋಧ ಸೇವಾ ಪದಕ, ಸೇನಾ ಪದಕ ಅಲಂಕೃತ ಸೇನಾಧಿಕಾರಿ.
ಇಂದು ದಿಲ್ಲಿಗೆ ಪಾರ್ಥಿವ ಶರೀರ
ದುರಂತದಲ್ಲಿ ಸ್ಪಷ್ಟವಾಗಿ ಗುರುತು ಸಿಗಲಾರದಷ್ಟು ಶವಗಳು ಸುಟ್ಟು ಹೋಗಿವೆ. ಹೀಗಾಗಿ ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಅನಂತರ ವೆಲ್ಲಿಂಗ್ಟನ್‌ನಲ್ಲಿರುವ ಮಿಲಿಟರಿ ನೆಲೆಗೆ ಮೃತದೇಹಗಳನ್ನು ತರಲಾಗುತ್ತದೆ. ಇಲ್ಲಿ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ವಾಯುಸೇನಾ ಮುಖ್ಯಸ್ಥ ಜ| ವಿ.ಆರ್.ಚೌಧರಿ ಅವರು ಮೃತದೇಹಗಳಿಗೆ ಗೌರವ ಸಮರ್ಪಿಸಲಿದ್ದಾರೆ. ಬಳಿಕ ಪಾರ್ಥಿವ ಶರೀರಗಳನ್ನು ಕೊಯಮತ್ತೂರಿಗೆ ತೆಗೆದುಕೊಂಡು ಹೋಗಿ, ಅಲ್ಲಿಂದ ಸಂಜೆ ವೇಳೆಗೆ ದಿಲ್ಲಿಗೆ ಒಯ್ಯಲಾಗುತ್ತದೆ.
ತನಿಖೆಗೆ ಸುಬ್ರಮಣಿಯನ್ ಸ್ವಾಮಿ ಆಗ್ರಹ
ಉಡುಪಿ: ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತವನ್ನು ಕೇಂದ್ರ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಮತ್ತು ರಾಜ್ಯಸಭಾ ಸದಸ್ಯಡಾ| ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಸಿಡಿಎಸ್ ಜ| ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿರುವುದು ದಿಗ್ಭ್ರಮೆ ಉಂಟು ಮಾಡಿದೆ. ಕೇಂದ್ರ ಸರಕಾರ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ವಿದೇಶಗಳ ಕೈವಾಡದ ಬಗ್ಗೆಯೂ ಕೇಂದ್ರ ಸರಕಾರವೇ ಸ್ಪಷ್ಟಪಡಿಸಬೇಕು. ದೇಶದ ಸುರಕ್ಷೆಯ ದೃಷ್ಟಿಯಿಂದಲೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಕೃಷ್ಣಮಠದಲ್ಲಿ ಬುಧವಾರ ಅವರು ಒತ್ತಾಯಿಸಿದರು.
ಮೃತರಲ್ಲಿ ಓರ್ವರು ಕಾರ್ಕಳದ ಅಳಿಯ
ಕಾರ್ಕಳ: ದುರಂತದಲ್ಲಿ ಮಡಿದ ಸೇನಾಧಿಕಾರಿಗಳ ಪೈಕಿ ಒಬ್ಬರಾದ ಲೆ|ಕ| ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ. ಇವರು ಕಾರ್ಕಳ ಪುರಸಭೆ ಮಾಜಿ ಉಪಾಧ್ಯಕ್ಷ ದಿ| ಫಿಲಿಪ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ಅವರ ಪುತ್ರಿ ಕ್ಯಾ| ಪ್ರಫುಲ್ಲಾ ಮಿನೇಜಸ್ ಅವರ ಪತಿ ಎಂದು ತಿಳಿದು ಬಂದಿದೆ. ವಾಯುಪಡೆ ಅಧಿಕಾರಿಯಾಗಿದ್ದ ಪ್ರಫುಲ್ಲಾ ಮಿನೇಜಸ್ ಪ್ರೀತಿಸಿ ಲೆ|ಕ| ಹರ್ಜಿಂದರ್ ಸಿಂಗ್ ಅವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಲೆ|ಕ| ಸಿಂಗ್ ಕಾರ್ಕಳದ ಮಾವನ ಮನೆಗೂ ಬಂದಿದ್ದರು ಎಂದು ಪ್ರಫುಲ್ಲಾ ಮಿನೇಜಸ್ ಅವರ ಬಂಧುಗಳು ಹೇಳಿದ್ದಾರೆ.
ಅಸುನೀಗಿದವರು-
– ಜ| ಬಿಪಿನ್ ರಾವತ್ ರಕ್ಷಣ ಪಡೆಗಳ ಮುಖ್ಯಸ್ಥ
– ಮಧುಲಿಕಾ ರಾವತ್ ಜ| ರಾವತ್ ಪತ್ನಿ
– ಬ್ರಿಗೇಡಿಯರ್ ಎಲ್.ಎಸ್ ಲಿಡ್ಡರ್ ಎಸ್‌ಎಂ, ವಿಎಸ್‌ಎಂ- ಸಿಡಿಎಸ್ ಕಾರ್ಯದರ್ಶಿ
– ಲೆ|ಕ| ಹರ್ಜಿಂದರ್ ಸಿಂಗ್ ಹಿರಿಯ ಸೇನಾಧಿಕಾರಿ ಎನ್‌ಕೆ ಗುರುಸೇವಕ್ ಸಿಂಗ್ ಪ್ರಿನ್ಸಿಪಾಲ್ ಸ್ಟಾಫ್ ಆಫೀಸರ್
– ಎನ್‌ಕೆ ಜಿತೇಂದ್ರ ಕುಮಾರ್ ಪ್ರಿನ್ಸಿಪಾಲ್ ಸ್ಟಾಫ್ ಆಫೀಸರ್
– ವಿವೇಕ್ ಕುಮಾರ್ ಪ್ರಿನ್ಸಿಪಾಲ್ ಸ್ಟಾಫ್ ಆಫೀಸರ್
– ಬಿ. ಸಾಯಿತೇಜ ಪ್ರಿನ್ಸಿಪಾಲ್ ಸ್ಟಾಫ್ ಆಫೀಸರ್
– ಹವ್ ಸತ್ಪಾಲ್ ಪ್ರಿನ್ಸಿಪಾಲ್ ಸ್ಟಾಫ್ ಆಫೀಸರ್
ಇವರೊಂದಿಗೆ ಹೆಲಿಕಾಪ್ಟರ್‌ನ ಐವರು ಸೇನಾ ಸಿಬಂದಿಯೂ ಇದ್ದರು.
ನಿವೃತ್ತಿಗೆ ಒಂದು ದಿನವಿದ್ದಾಗ ಸಿಡಿಎಸ್ ಆಗಿ ನೇಮಕ
ರಕ್ಷಣ ಪಡೆ ಮುಖ್ಯಸ್ಥರಾಗಿ ನೇಮಕಗೊಳ್ಳುವುದಕ್ಕೆ ಮೊದಲು ಅಂದರೆ 2016ರ ಡಿ.31ರಂದು ಭೂಸೇನೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು. ಮೂರು ವರ್ಷಗಳ ಅಧಿಕಾರಾವಧಿ ಇರುವ ಆ ಸ್ಥಾನದಿಂದ ಅವರು 2019ರ ಡಿ. 31ರಂದು ನಿವೃತ್ತರಾಗಬೇಕಿತ್ತು. ಆದರೆ 2019ರ ಡಿ.30ಕ್ಕೇ ಕೇಂದ್ರ ಸರಕಾರವು ಅವರನ್ನು ರಕ್ಷಣ ಪಡೆಯ ಮುಖ್ಯಸ್ಥರಾಗಿ ನೇಮಕ ಮಾಡಿತು. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ರಕ್ಷಣ ಪಡೆಗಳ ಮುಖ್ಯಸ್ಥರ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಏರಿಸಲಾಯಿತು.
ದುರಂತದ ಬೆನ್ನಲ್ಲೇ ಅನುಮಾನ
ಹೆಲಿಕಾಪ್ಟರ್ ದುರಂತದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನದ ಬುಗ್ಗೆಯೆದ್ದಿದೆ. “2020ರ ಜನವರಿಯಲ್ಲಿ ತೈವಾನ್ ಸೇನಾ ಸಿಬಂದಿ ಮುಖ್ಯಸ್ಥ ಜ| ಶೆನ್- ಯಿ- ಮಿಂಗ್ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದರು. ಈಗ 2021ರ ಡಿಸೆಂಬರ್‌ನಲ್ಲಿ ಭಾರತದ ರಕ್ಷಣ ಸಿಬಂದಿ ಮುಖ್ಯಸ್ಥ ಜ| ಬಿಪಿನ್ ರಾವತ್ ಹೆಲಿಕಾಪ್ಟರ್ ಅವಘಡದಲ್ಲಿಯೇ ಅಂತ್ಯ ಕಂಡಿದ್ದಾರೆ. ನಿಶ್ಚಿತವಾಗಿ ಇದರ ಹಿಂದೆ ಸಂಚಿದೆ. ಎದುರಾಳಿ ರಾಷ್ಟ್ರಗಳ ಅತ್ಯುನ್ನತ ಸೇನಾಧಿಕಾರಿಗಳನ್ನು ಚೀನ ಮತ್ತು ಪಾಕಿಸ್ಥಾನ ಹೆಲಿಕಾಪ್ಟರ್ ಅಪಘಾತಗಳ ಮೂಲಕ ಟಾರ್ಗೆಟ್ ಮಾಡುತ್ತಿವೆ. ಲ್ಯಾಂಡಿಂಗ್‌ಗೆ 5 ನಿಮಿಷ ಇರುವಾಗಲೇ ರಾಡಾರ್‌ಗಳ ಮೂಲಕ ತಪ್ಪು ಸಿಗ್ನಲ್ ರವಾನಿಸಿ, ಮರಗಳಿಗೆ ಢಿಕ್ಕಿ ಹೊಡೆಯುವಂತೆ ಮಾಡಲಾಗುತ್ತಿದೆ’ ಎಂದು ಕೆಲವರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.