ಗುರುದ್ವಾರ ದಾಳಿ: ಪಕ್ಷಾತೀತ ಆಕ್ರೋಶ
Team Udayavani, Jan 4, 2020, 10:53 PM IST
ಹೊಸದಿಲ್ಲಿ: ಸಿಕ್ಖ್ರ ಪವಿತ್ರ ಯಾತ್ರಾಸ್ಥಳ, ಪಾಕಿಸ್ಥಾನದಲ್ಲಿರುವ ಐತಿಹಾಸಿಕ ನನ್‌ಕಾನಾ ಸಾಹಿಬ್ ಗುರುದ್ವಾರದಲ್ಲಿ ದುಷ್ಕರ್ಮಿಗಳು ನಡೆಸಿದ ಕುಕೃತ್ಯವು ಭಾರತಾದ್ಯಂತ ಕಿಚ್ಚು ಹೊತ್ತಿಸಿದೆ.
ನನ್‌ಕಾನಾ ಸಾಹಿಬ್ ಅನ್ನು ಧ್ವಂಸಗೊಳಿಸುವುದಾಗಿ ಮತ್ತು ಅದರ ಹೆಸರನ್ನು “ಗುಲಾಮ್-ಇ-ಮುಸ್ತಫಾ’ ಎಂದು ಮರುನಾಮಕರಣ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ ಹಾಗೂ ಅಲ್ಲಿದ್ದ ಸಿಕ್ಖ್ ಯಾತ್ರಿಕರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣವು ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಟ್ಟದಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರದ ಘಟನೆಯನ್ನು ಭಾರತದ ರಾಜಕೀಯ ನಾಯಕರು ಪಕ್ಷಭೇದ ಮರೆತು ಖಂಡಿಸಿದ್ದಾರೆ. ಅಲ್ಲದೆ ದಿಲ್ಲಿಯಲ್ಲಿ ಹಲವೆಡೆ ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು ಪ್ರತಿಭಟನೆ ಗಳನ್ನೂ ಆರಂಭಿಸಿವೆ. ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣ ಸಮಿತಿಯ ಸದಸ್ಯರು, ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು, ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಕ್ ಹೈಕಮಿಷನ್‌ಗೆ ಸಮೀಪದಲ್ಲೇ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಕೂಡ ಪ್ರತಿಭಟನೆ ನಡೆಸಿದ್ದು, ಪ್ರತಿಭಟ ನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಕ್ಕಿಂತಲೂ ಹೆಚ್ಚಿನ ಸಾಕ್ಷ್ಯ ಬೇಕೇ?: ಇನ್ನೊಂದೆಡೆ, ಈ ಘಟನೆಗೂ ಸಿಎಎ ವಿರುದ್ಧದ ಪ್ರತಿಭಟನೆಗೂ ತಳುಕು ಹಾಕಿರುವ ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ, “ಪಾಕ್‌ನಲ್ಲಿ ಅಲ್ಪ ಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನು ವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಅಗತ್ಯವಿದೆಯೇ’ ಎಂದು ಪ್ರತಿಭಟನಾ ಕಾರರನ್ನು ಪ್ರಶ್ನಿಸಿದ್ದಾರೆ.
ಪಾಕ್‌ಗೆ ನಿಯೋಗ: ಸಿಖ್ ಗುರುದ್ವಾರಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವಂಥ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ನಾಲ್ವರು ಸದಸ್ಯರ ನಿಯೋಗವನ್ನು ಪಾಕ್‌ಗೆ ಕಳುಹಿಸಿ, ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ನಿರ್ಧರಿಸಿದೆ.
ಹಾನಿಯಾಗಿಲ್ಲ ಎಂದ ಪಾಕ್: ನನ್‌ಕಾನಾ ಸಾಹಿಬ್‌ನಲ್ಲಿ ದುಷ್ಕರ್ಮಿಗಳು ದಾಂದಲೆ ಎಬ್ಬಿಸುತ್ತಿರುವ ವೀಡಿಯೋ ಬಹಿರಂಗವಾಗಿ ದ್ದರೂ ಅದನ್ನು ಅಲ್ಲಗಳೆದಿರುವ ಪಾಕಿಸ್ಥಾನ, ಗುರುದ್ವಾರಕ್ಕೆ ಯಾವುದೇ ಹಾನಿ ಆಗಿಲ್ಲ ಎಂದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಪಾಕ್ ಸರಕಾರ, ಎರಡು ಮುಸ್ಲಿಂ ಗುಂಪುಗಳ ನಡುವೆ ಜಗಳವಾಗಿದ್ದು ನಿಜ. ಟೀ ಅಂಗಡಿಯೊಂದರಲ್ಲಿ ನಡೆದ ಕ್ಷುಲ್ಲಕ ವಾಗ್ವಾದ ಇದಾಗಿದೆ. ಇದಕ್ಕೆ ಕೆಲವರು ಉದ್ದೇಶ ಪೂರ್ವಕವಾಗಿ ಕೋಮು ಬಣ್ಣ ನೀಡಿದ್ದಾರೆ ಎಂದು ಹೇಳಿದೆ.
ನನ್‌ಕಾನಾ ಸಾಹಿಬ್ ಮೇಲಿನ ದಾಳಿಯು ಖಂಡನೀಯ. ಧರ್ಮಾಂಧತೆ ಎನ್ನುವುದು ಯಾವತ್ತೂ ಅಪಾಯಕಾರಿ. ಅದು ಗಡಿಗಳೇ ಇಲ್ಲದ ಪುರಾತನವಾದ ವಿಷವಿದ್ದಂತೆ. ಅದಕ್ಕೆ ಪ್ರೀತಿ ಮತ್ತು ಪರಸ್ಪರ ನಂಬಿಕೆಯೇ ಮದ್ದು.
– ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸೇನೆಯ ಕೈಗೊಂಬೆ. ಬಾಲಕಿಯ ಒತ್ತಾಯಪೂರ್ವಕ ಮತಾಂತರವನ್ನು ಬೆಂಬಲಿಸುವುದು, ಅಮಾಯಕ ಪ್ರವಾಸಿಗರ ಮೇಲೆ ಕಲ್ಲು ತೂರಾಟ, ಜೀವ ಬೆದರಿಕೆ ಹಾಕುವುದು… ಇದುವೇ ಪಾಕಿಸ್ಥಾನ.
– ಗೌತಮ್ ಗಂಭೀರ್, ಬಿಜೆಪಿ ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.