ಸತ್ಯಕ್ಕೆ ಜಯ ಶತಃಸ್ಸಿದ್ಧ: ನಾಯ್ಡು
Team Udayavani, Apr 25, 2018, 9:00 AM IST
ಹೊಸದಿಲ್ಲಿ: ಸಿಜೆಐ ದೀಪಕ್ ಮಿಶ್ರಾ ವಿರುದ್ಧದ ಮಹಾಭಿಯೋಗ ನೋಟಿಸ್ ಅನ್ನು ತಿರಸ್ಕರಿಸಿರುವುದು ತರಾತುರಿಯ ನಿರ್ಧಾರವಲ್ಲ. ಈ ಬಗ್ಗೆ ಸುಮಾರು ಒಂದು ತಿಂಗಳು ಚರ್ಚಿಸಿಯೇ ಅಂತಿಮ ನಿರ್ಧಾರಕ್ಕೆ ಬಂದೆ ಎಂದು ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಇದು ತರಾತುರಿಯ ನಿರ್ಧಾರ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ಸುಪ್ರೀಂ ಕೋರ್ಟ್‌ನ 10 ಮಂದಿ ವಕೀಲರು ನಾಯ್ಡು ಭೇಟಿಯಾಗಿ, ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ, ಅವರೊಂದಿಗೆ ಮಾತನಾಡಿದ ನಾಯ್ಡು, ‘ನನ್ನ ನಿರ್ಧಾರವು ಸಂವಿಧಾನದ ನಿಬಂಧನೆಗಳಿಗೆ ಹಾಗೂ ನ್ಯಾಯಮೂರ್ತಿಗಳು (ವಿಚಾರಣೆ) ಕಾಯ್ದೆ, 1968ಕ್ಕೆ ಅನುಗುಣವಾಗಿಯೇ ಇದೆ. ನನ್ನ ಕರ್ತವ್ಯ ನಾನು ನಿಷ್ಠೆಯಿಂದ ಮಾಡಿದ್ದೇನೆ. ಅದಕ್ಕೆ ತೃಪ್ತಿಯಿದೆ. ಯಾರು ಏನೇ ಹೇಳಿದರೂ, ಕೊನೆಗೆ ಉಳಿಯುವುದು ಸತ್ಯವೊಂದೇ’ ಎಂದರು. ಅಲ್ಲದೆ, ಒಬ್ಬ ಸಭಾಪತಿಯಾಗಿ ನನ್ನಿಂದ ಏನನ್ನು ನಿರೀಕ್ಷಿಸಲಾಗಿತ್ತೋ ಅದನ್ನೇ ನಾನು ಮಾಡಿದ್ದೇನೆ. ಹಾಗಾಗಿ ನನ್ನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಅಗತ್ಯವೂ ಇಲ್ಲ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನ ಆತ್ಮಾಹುತಿ
ಸೋಮವಾರ ತಿರಸ್ಕೃತಗೊಂಡ ಕಾಂಗ್ರೆಸ್‌ನ ಮಹಾಭಿಯೋಗ ನೋಟಿಸ್, ಮುಖ್ಯ ನ್ಯಾಯಮೂರ್ತಿಗಳನ್ನು ಬೆದರಿಸಲು ಮಾಡಿದ ಸಮರ್ಥನೀಯವಲ್ಲದ ಆರೋಪವಾಗಿತ್ತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಜೇಟ್ಲಿ, ನ್ಯಾಯಮೂರ್ತಿಯೊಬ್ಬರು ತಮ್ಮ ಅವಧಿಯಲ್ಲಿ ತೀವ್ರತರವಾದ ದುರ್ನಡತೆ ತೋರಿದರೆ, ಅಂಥ ಅಪರೂಪದಲ್ಲಿ ಅಪರೂಪವೆನಿಸಿದ ಪ್ರಕರಣಗಳಲ್ಲಿ ಮಾತ್ರವೇ ಮಹಾಭಿಯೋಗ ನೋಟಿಸ್ ನೀಡಲಾಗುತ್ತದೆ. ಅಲ್ಲದೆ, ಆರೋಪಗಳಿಗೆ ಪ್ರಬಲ ಸಾಕ್ಷ್ಯಾಧಾರಗಳು ಇರಬೇಕಾಗುತ್ತದೆ. ಆದರೆ, ವಿಪಕ್ಷಗಳು ಸಲ್ಲಿಸಿದ ನೋಟಿಸ್‌ನಲ್ಲಿ ಅಂಥ ಸಾಕ್ಷ್ಯಗಳು ಇರಲಿಲ್ಲ. ಬರೀ ವದಂತಿಗಳನ್ನು ನಂಬಿಕೊಂಡು ಮಹಾಭಿಯೋಗ ನಡೆಸಲು ಆಗುವುದಿಲ್ಲ. ಒಟ್ಟಾರೆ ಈ ಯತ್ನವು ಕಾಂಗ್ರೆಸ್‌ನ ಭವಿಷ್ಯದ ಆತ್ಮಾಹುತಿ ಎಂದು ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.