ಕೇಸರಿ ಮೈತ್ರಿಗೆ ಮಹಾರಾಷ್ಟ್ರ; ಹರಿಯಾಣ ಅತಂತ್ರ
ಮಹಾರಾಷ್ಟ್ರದಲ್ಲಿ ದೇವೇಂದ್ರಗೆ ಆನಂದ ಹರಿಯಾಣದಲ್ಲಿ ಸಿಗದ ಮನೋಹರ ಫಲಿತಾಂಶ
Team Udayavani, Oct 25, 2019, 6:14 AM IST
2019ರ ಲೋಕಸಭೆ ಚುನಾವಣೆ ಅನಂತರ ದೇಶದಲ್ಲಿ ಎದುರಾದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಎಚ್ಚರಿಕೆಯ ತೀರ್ಪು ನೀಡಿದ್ದಾನೆ. ಮಹಾರಾಷ್ಟ್ರದಲ್ಲಿ ಭಾರೀ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಸಿಕ್ಕಿದೆ. ಹಾಗೆಯೇ ಹರಿಯಾಣದಲ್ಲಿ 70+ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದ ಬಿಜೆಪಿಗೆ ದೊಡ್ಡ ಪೆಟ್ಟು ಬಿದ್ದಿದೆ. ಕೇವಲ 40 ಸ್ಥಾನಗಳಲ್ಲಿ ಗೆಲ್ಲುವ ಮೂಲಕ, ಬಹುಮತಕ್ಕೆ ಆರು ಸ್ಥಾನಗಳ ಕೊರತೆ ಎದುರಾಗಿದೆ.
ಮುಂಬಯಿ/ಚಂಡೀಗಢ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಗೆ ಸಿಹಿ ಮತ್ತು ಕಹಿಯ ಮಿಶ್ರ ಅನುಭವವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆಡಳಿತಕ್ಕೆ ಜನ ಜೈ ಅಂದಿದ್ದರೂ, ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಬಂದಿಲ್ಲ. ಈ ಬಾರಿ ಸ್ವತಂತ್ರವಾಗಿಯೇ 145ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ಹೊಂದಿದ್ದ ಬಿಜೆಪಿಯ ಕನಸಿಗೆ ಮತದಾರ ಸೈ ಅಂದಿಲ್ಲ. ಆದರೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟಕ್ಕೆ 161 ಸ್ಥಾನ ಗಳನ್ನು ನೀಡುವ ಮೂಲಕ ಸರಕಾರ ರಚನೆಗೆ ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ.
ಅಂತೆಯೇ ಅತ್ತ ಹರಿಯಾಣದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. 70+ ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ತೀವ್ರ ನಿರಾಸೆ ಅನುಭವಿಸಿದೆ. ಕಳೆದ ಬಾರಿ 47ರಲ್ಲಿ ಗೆದ್ದಿದ್ದ ಕಮಲ ಪಕ್ಷ ಈ ಬಾರಿ ಕೇವಲ 40 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದಕ್ಕಿಂತ ಹೆಚ್ಚಾಗಿ ಚಿಗುರು ಮೀಸೆಯ ಯುವಕ ದುಷ್ಯಂತ್ ಚೌಟಾಲ ಅವರ ಜನನಾಯಕ ಜನತಾ ಪಾರ್ಟಿ (ಜೆಜೆಪಿ) 10 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಿಂಗ್ ಮೇಕರ್ ಸ್ಥಾನದಲ್ಲಿದ್ದಾರೆ. ಇನ್ನೂ ವಿಶೇಷವೆಂದರೆ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಮತದಾರ ಕಾಂಗ್ರೆಸ್‌ಗೆ 31 ಸ್ಥಾನಗಳನ್ನು ನೀಡುವ ಮೂಲಕ ಭೂಪಿಂದರ್ ಸಿಂಗ್ ಹೂಡಾ ಮೇಲೂ ಆಶೀರ್ವಾದ ತೋರಿದ್ದಾನೆ. ಆದರೆ ಒಂಬತ್ತು ಸ್ಥಾನಗಳಲ್ಲಿ ಇತರರು ಗೆದ್ದಿದ್ದು, ಇವರೇನಾದರೂ ಬಿಜೆಪಿ ಕಡೆಗೆ ಹೋದರೆ ಸರಕಾರ ರಚನೆ ಸಲೀಸಾಗಬಹುದು. ಫಲಿತಾಂಶ ಹೊರಬೀಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮತದಾರರಿಗೆ ಧನ್ಯವಾದ ಹೇಳಿದ್ದಾರೆ.
ಮಹಾರಾಷ್ಟ್ರ: ಕಸರತ್ತು ಶುರು
ಎರಡೂ ರಾಜ್ಯಗಳಲ್ಲೂ ಸರಕಾರ ರಚನೆಯ ಕಸರತ್ತು ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಚೌಕಾಸಿ ಶುರು ಮಾಡಿದೆ. ಈ ಬಾರಿ 50-50ರ ಮಾದರಿಯಲ್ಲೇ ಸರಕಾರ ರಚನೆಯಾಗಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಟ್ಟು ಹಿಡಿದಿದ್ದಾರೆ. ಅಂದರೆ ಸಚಿವ ಸ್ಥಾನದಲ್ಲೂ ಅರ್ಧ ಮತ್ತು ಮುಖ್ಯಮಂತ್ರಿ ಸ್ಥಾನವೂ ತಲಾ ಎರಡೂವರೆ ವರ್ಷ ಸಿಗಬೇಕು ಎಂದಿದ್ದಾರೆ. ಸೀಟು ಹಂಚಿಕೆಯಲ್ಲಿ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡೆವು ಎಂದಾಕ್ಷಣ ಸರಕಾರ ರಚನೆ ಸಂದರ್ಭದಲ್ಲೂ ಬಾಗುತ್ತೇವೆ ಎಂದರ್ಥವಲ್ಲ ಎಂದಿದ್ದಾರೆ.
ಹರಿಯಾಣ: ಜಂಜಾಟ ಆರಂಭ
ಹರಿಯಾಣದಲ್ಲಿ ಯಾರೊಬ್ಬರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಸರಕಾರ ರಚನೆಯ ಜಂಜಾಟ ಶುರುವಾಗಿದೆ. ಮುಖ್ಯಮಂತ್ರಿ ಮನೋಹರ್ ಖಟ್ಟರ್ ಅವರು ಗುರುವಾರ ಸಂಜೆಯೇ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿಗೆ ಸ್ವತಂತ್ರ ಅಭ್ಯರ್ಥಿಗಳು ಬೆಂಬಲ ನೀಡುವ ಸಾಧ್ಯತೆ ಇದೆ. ಇದರ ನಡುವೆಯೇ ಕಾಂಗ್ರೆಸ್ ಕೂಡ ಸರಕಾರ ರಚನೆಯ ಕಸರತ್ತು ಶುರು ಮಾಡಿದ್ದು, ಜೆಜೆಪಿ ನಾಯಕ ದುಷ್ಯಂತ್ ಚೌಟಾಲ ಅವರ ಓಲೈಕೆಯಲ್ಲಿ ತೊಡಗಿದೆ. ಆದರೆ ಚೌಟಾಲ ಮಾತ್ರ ಯಾರ ಕಡೆಗೂ ಇನ್ನೂ ವಾಲಿಲ್ಲ.
ಮಹಾರಾಷ್ಟ್ರ ಮತ್ತು ಹರಿಯಾಣದ ಜನ ಅಲ್ಲಿನ ಸಿಎಂಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಮುಂದೆಯೂ ಅವರಿಬ್ಬರೂ ಇನ್ನಷ್ಟು ಶ್ರಮದಿಂದ ಕೆಲಸ ಮಾಡಲಿದ್ದಾರೆ.
-ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.