ದೇಶಾದ್ಯಂತ ಒಂದೇದಿನ 386 ಸೋಂಕುದೃಢ; ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರೇ ಹೆಚ್ಚು
ಆರಂಭವಾಗಿದೆ ದೇಶದೆಲ್ಲೆಡೆ ಶೋಧ
Team Udayavani, Apr 2, 2020, 6:07 AM IST
ನಿಜಾಮುದ್ದೀನ್ ಆವರಣದಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಲಾಯಿತು.
ಹೊಸದಿಲ್ಲಿ/ಬೆಂಗಳೂರು: ಕೋವಿಡ್ 19 ವೈರಸ್ ಕಬಂಧ ಬಾಹು ವಿಸ್ತರಿಸುತ್ತಲೇ ಇದ್ದು, ಬುಧವಾರ ಒಂದೇ ದಿನ 386 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ ಇದು ದೇಶದಲ್ಲಿ ಹಾಲಿ ಚಾಲ್ತಿಯಲ್ಲಿರುವ ಸೋಂಕು ಪ್ರಸರಣದ ಟ್ರೆಂಡ್ ಅಲ್ಲ ಎಂದಿರುವ ಕೇಂದ್ರ ಆರೋಗ್ಯ ಇಲಾಖೆ, ದಿಲ್ಲಿ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ ಸೋಂಕು ದೃಢವಾಗಿರುವುದು ಏರಿಕೆಗೆ ಕಾರಣ ಎಂದಿದೆ.
ಸಮಾವೇಶದಲ್ಲಿ ಭಾಗಿಯಾಗಿದ್ದವರು ದೇಶದ ಉದ್ದಗಲಕ್ಕೂ ತೆರಳಿದ್ದು, ಪತ್ತೆ ಸವಾಲಾಗಿದೆ. ಇವರು ತಾವಾಗಿ ವರದಿ ಮಾಡಿಕೊಳ್ಳಬೇಕು ಎಂದು ವಿವಿಧ ರಾಜ್ಯ ಸರಕಾರಗಳು ಮನವಿ ಮಾಡಿಕೊಂಡಿವೆ.
154 ಮಂದಿಗೆ ಸೋಂಕು
ಈ ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ 154 ಮಂದಿಗೆ ಸೋಂಕು ದೃಢಪಟ್ಟಿದೆ. ಇದಾದ ಬಳಿಕ, ಅಲ್ಲಿದ್ದ ತಬ್ಲಿ ಜಮಾತ್ ಗುಂಪಿನ 2,300 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಸಮಾವೇಶದ ಪರಿಣಾಮವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿದೆ.
ತಮಿಳುನಾಡಿನಲ್ಲಿ ಮಂಗಳವಾರದಿಂದ ಈಚೆಗೆ 175ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಎಲ್ಲವೂ ಸಮಾವೇಶದಲ್ಲಿ ಭಾಗಿಯಾಗಿದ್ದವರಿಗೆ ಸಂಬಂಧಿಸಿದ್ದಾಗಿವೆ. ಆಂಧ್ರದಲ್ಲಿ ಪತ್ತೆಯಾಗಿರುವ 87 ಪ್ರಕರಣಗಳಲ್ಲಿ 64 ಈ ಸಮಾವೇಶದಲ್ಲಿ ಭಾಗಿಯಾಗಿದ್ದವರು. ಸಮಾವೇಶದಲ್ಲಿ ಭಾಗಿಯಾಗಿರುವವರನ್ನು ಸಮರೋಪಾದಿಯಲ್ಲಿ ಹುಡುಕುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.
ಏಳು ಮಂದಿಯ ವಿರುದ್ಧ ಎಫ್‌ಐಆರ್
ದಿಲ್ಲಿ ಸರಕಾರದ ಆದೇಶ ಉಲ್ಲಂಘಿಸಿ ಸಮಾವೇಶ ನಡೆಸಿದ ಆರೋಪದ ಮೇಲೆ ಒಟ್ಟು ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರಾಜ್ಯದಲ್ಲಿ ಸೋಂಕು 110ಕ್ಕೆ ಏರಿಕೆ
ರಾಜ್ಯದಲ್ಲಿ ಬುಧವಾರ ಒಂಬತ್ತು ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಒಟ್ಟಾರೆ ಸೋಂಕುಪೀಡಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಈವರೆಗೆ ಬೆಂಗಳೂರಿನ 8, ಕಲಬುರಗಿಯ ಒಬ್ಬರು ಸೇರಿದಂತೆ ಒಂಬತ್ತು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ವಿದೇಶಗಳಿಂದ ಬಂದವರಿಂದಲೇ ರಾಜ್ಯಕ್ಕೆ ಸೋಂಕು ಪಸರಿಸಿದೆ ಎಂಬ ಆರೋಪ ಕೇಳಿ ಬಂದಿರುವುದರ ನಡುವೆ ಇವರನ್ನು ಪತ್ತೆ ಮಾಡಿ ಸಂಪೂರ್ಣ ಗೃಹ ನಿಗಾದಡಿ ಇರಿಸದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಮಾರ್ಚ್ ಮೊದಲ ವಾರದಿಂದ ರಾಜ್ಯಕ್ಕೆ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಸುಮಾರು, 1.22 ಲಕ್ಷ ಮಂದಿ ಕೋವಿಡ್ 19 ವೈರಸ್ ವ್ಯಾಪಕವಾಗಿರುವ ದೇಶಗಳಿಂದ ಆಗಮಿಸಿದ್ದರು.
ಬುಧವಾರ ರಾತ್ರಿ ವೇಳೆಗೆ ದೇಶಾದ್ಯಂತ ಒಟ್ಟು 1,936 ಪ್ರಕರಣಗಳು ಪತ್ತೆಯಾಗಿದ್ದು, 159 ಮಂದಿ ಚೇತರಿಸಿಕೊಂಡಿದ್ದಾರೆ. 55 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕುಪೀಡಿತರ ಸಂಖ್ಯೆ 335ಕ್ಕೆ ಏರಿದೆ. ಕೇರಳದಲ್ಲಿ 265, ಉ.ಪ್ರದೇಶದಲ್ಲಿ 113, ರಾಜಸ್ಥಾನದಲ್ಲಿ 108, ದಿಲ್ಲಿಯಲ್ಲಿ 120 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಿಂದ 1,500 ಮಂದಿ
ನಿಜಾಮುದ್ದೀನ್‌ನ ಧಾರ್ಮಿಕ ಸಮಾವೇಶಕ್ಕೆ ರಾಜ್ಯದಿಂದ 1,500 ಮಂದಿ ತೆರಳಿರುವ ಬಗ್ಗೆ ಕೇಂದ್ರದಿಂದ ಮಾಹಿತಿ ಲಭ್ಯವಾಗಿದ್ದು, ಈ ಪೈಕಿ 143 ಮಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.
ಈ ಪೈಕಿ 800 ಮಂದಿಯನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಈ ಪೈಕಿ 143 ಮಂದಿಗೆ ಸೋಂಕು ಲಕ್ಷಣ ಕಾಣಿಸಿದ್ದು, ಪರೀಕ್ಷೆಗೆ ರವಾನಿಸಲಾಗಿದೆ. ಆರೋಗ್ಯ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ನಿಜಾಮುದ್ದೀನ್‌ಗೆ ಭೇಟಿ ನೀಡಿದ್ದವರು ಸ್ವಯಂ ಪ್ರೇರಿತವಾಗಿ ವರದಿ ಮಾಡಿಕೊಳ್ಳುತ್ತಿದ್ದಾರೆ. ಇನ್ನುಳಿದವರೂ ಮುಂದೆ ಬರಬೇಕು ಎಂದು ಮನವಿ ಮಾಡಿದ್ದಾರೆ.
– ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 8,85,687
– ಒಟ್ಟಾರೆ ಸಾವು: 44,216
– ಭಾರತದಲ್ಲಿ ಸೋಂಕು ಪೀಡಿತರು: 1,936
– ವೈರಸ್ ಸೋಂಕಿನಿಂದ ಸಾವಿಗೀಡಾದವರು: 55
– ಚೇತರಿಸಿಕೊಂಡವರು: 159
– ಕರ್ನಾಟಕದಲ್ಲಿ ಕೋವಿಡ್ 19 ಸೋಂಕುಪೀಡಿತರು: 110
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…