ಸೀಮಾ ಭವಾನಿಯರ ಸಾಹಸ ದರುಶನ
Team Udayavani, Jan 27, 2018, 9:50 AM IST
ಹೊಸದಿಲ್ಲಿ: ಇದೇ ಮೊದಲ ಬಾರಿಗೆ 10 ಮುಖ್ಯ ಅತಿಥಿಗಳ ಪಾಲ್ಗೊಳ್ಳುವಿಕೆ, ಬಿಎಸ್‌ಎಫ್ ಮಹಿಳಾ ಯೋಧರ ಮೋಟಾರ್ ಸೈಕಲ್ ಸಾಹಸ, ಆಕಾಶವಾಣಿಯಿಂದಲೂ ವಿಶಿಷ್ಟವಾದ ಸ್ತಬ್ಧಚಿತ್ರ… ಹೀಗೆ ಹಲವು ಪ್ರಥಮಗಳೊಂದಿಗೆ ರಾಜಪಥ್‌ನಲ್ಲಿ ನಡೆದ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಗಮನ ಸೆಳೆಯಿತು. ಬೆಳಗ್ಗೆ, ರಾಜಪಥದ ಇಂಡಿಯಾ ಗೇಟ್ ಬಳಿಯಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪುಷ್ಪಗುತ್ಛವಿರಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ, ಪರೇಡ್‌ಗೆ ಚಾಲನೆ ಸಿಕ್ಕಿತು.
ಆಸಿಯಾನ್ ರಾಷ್ಟ್ರಗಳ ಪ್ರತಿನಿಧಿಗಳ ಉಪಸ್ಥಿತಿ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಹಾಗೂ ವಿವಿಧ ಇಲಾಖೆಗಳ ವರ್ಣರಂಜಿತ ಟ್ಯಾಬ್ಲೋಗಳು ಕಣ್ಮನ ಸೆಳೆದರೆ, ಭಾರತೀಯ ಸೇನೆಯ ಶಕ್ತಿ ಪ್ರದರ್ಶನ, ಸೈನಿಕರ ಶಿಸ್ತುಬದ್ಧ ಪಥಸಂಚಲನಗಳು, ದೇಶದ ಸಾಂಸ್ಕೃತಿಕ ಪರಂಪರೆಯು ಅನಾವರಣವಾಯಿತು. ದಿಲ್ಲಿಯ ಜನರಲ್ ಕಮ್ಯಾಂಡಿಂಗ್ ಅಧಿಕಾರಿ ಯಾಗಿರುವ ಹಾಗೂ ಗಣರಾಜ್ಯ ಪರೇಡ್‌ನ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಲೆಫ್ಟಿನೆಂಟ್ ಜನರಲ್ ಅಸಿತ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳ ಯೋಧರು ನೀಡಿದ ಗೌರವ ವಂದನೆಯನ್ನು ವೇದಿಕೆಯಲ್ಲಿದ್ದ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಸ್ವೀಕರಿಸಿದರು.
ಕಣ್ಮನ ಸೆಳೆದ ಟ್ಯಾಬ್ಲೊ ಕಲೆ: ಸೈನಿಕರ ಪಥ ಸಂಚಲನದ ನಂತರ, ವಿವಿಧ ರಾಜ್ಯಗಳ ಹಾಗೂ ವಿವಿಧ ಇಲಾಖೆಗಳ ಟ್ಯಾಬ್ಲೋಗಳು ಎಲ್ಲರ ಕಣ್ಮನ ಸೆಳೆದವು. ಮೊದಲಿಗೆ ಆಸಿಯಾನ್ ರಾಷ್ಟ್ರಗಳ ವೈಶಿಷ್ಟéತೆ ಸಾರುವ ವಿದೇಶಾಂಗ ಇಲಾಖೆಯ ಎರಡು ಸ್ತಬ್ಧಚಿತ್ರಗಳು ಬಂದು ಹೋದವು. ಆನಂತರ, ಗಣರಾಜ್ಯೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಕಾಶವಾಣಿ (ಎಐಆರ್) ತನ್ನ ಟ್ಯಾಬ್ಲೋ ಪ್ರದರ್ಶಿಸಿತು. ನೌಕಾಪಡೆ ಹಾಗೂ ಡಿಆರ್‌ಡಿಒ ಕೂಡ ತಮ್ಮ ಟ್ಯಾಬ್ಲೋಗಳನ್ನು ಪ್ರದರ್ಶಿಸಿದವು. ಇದಾದ ಮೇಲೆ ಬಂದ ಕರ್ನಾಟಕ ಟ್ಯಾಬ್ಲೋದಲ್ಲಿ ರಾಜ್ಯದ ಅರಣ್ಯ, ವನ್ಯಜೀವಿ ಸಂಪತ್ತನ್ನು ಬಿಂಬಿಸಲಾಗಿತ್ತು. ಈ ಬಾರಿ, ಗಾಂಧಿ ಹಾಗೂ ಬುದ್ಧನ ಸಂದೇಶ, ಮಹತ್ವ ಸಾರುವ ಟ್ಯಾಬ್ಲೋಗಳು ಹೆಚ್ಚಾಗಿ ಕಂಡುಬಂದಿದ್ದು ವಿಶೇಷವಾಗಿತ್ತು.
ಸೇನಾ ಶಕ್ತಿ ಅನಾವರಣ: ನಂತರ ಸೇನಾ ಪಡೆಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದವು. ಭೂ ಸೇನೆ ವತಿಯಿಂದ ಭೀಷ್ಮ ಟ್ಯಾಂಕರ್, ಸ್ವಾತಿ ರೇಡಾರ್, ಬ್ರಹ್ಮೋಸ್, ಆಕಾಶ್ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಿತು. ಆನಂತರ, ಆಕಾಶ ಮಾರ್ಗದಲ್ಲಿ ಬಂದ ವಾಯು ಸೇನೆಯ ಯುದ್ಧ ವಿಮಾನಗಳು ಹಾರಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡವು.
ವಿದೇಶಗಳಲ್ಲೂ ಸಂಭ್ರಮ: ಚೀನ, ಜಕಾರ್ತಾ, ಬಾಲಿ, ಸಿಂಗಾಪುರ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಭಾರತೀಯರು ಗಣರಾಜ್ಯ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಮಹಿಳಾ ಡೇರ್‌ಡೆವಿಲ್‌ಗಳ ಅದ್ಭುತ ಸಾಹಸ
ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮಹಿಳಾ ಸಿಬಂದಿಯು ರಾಜಪಥದಲ್ಲಿ ತೋರಿದ ನಾನಾ ರೀತಿಯ ಸ್ಟಂಟ್‌ಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಡೀ ಪರೇಡ್‌ನಲ್ಲಿ ಸೀಮಾ ಭವಾನಿ ತಂಡವು ನಡೆಸಿದ ಅದ್ಭುತ ಸಾಹಸ ಹೆಚ್ಚಿನ ಚರ್ಚೆಗೆ ಗ್ರಾಸವಾಯಿತು. ಈ ತಂಡಕ್ಕೆ ಜಮ್ಮು ಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಬಿಎಸ್‌ಎಫ್ನ ಮಹಿಳಾ ಸಬ್-ಇನ್ಸ್ ಪೆಕ್ಟರ್ ಸ್ಟಾಜಿನ್ ನಯೊಂಗ್ (28) ನಾಯಕಿಯಾಗಿದ್ದರು. ಇವರು ತೋರಿದ ಸಾಹಸ ಮೆಚ್ಚಿದ ಪ್ರೇಕ್ಷಕರು ಕುಳಿತಿದ್ದ ಆಸನಗಳಿಂದ ಮೇಲೆದ್ದು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. 350 ಸಿಸಿ ಸಾಮರ್ಥ್ಯದ 26 ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ 100 ಮಂದಿ ಯೋಧರು ರಾಷ್ಟ್ರಪತಿಗೆ ಸೆಲ್ಯೂಟ್, ಫಿಶ್ ರೈಡಿಂಗ್, ಸೈಡ್ ರೈಡಿಂಗ್, ಫೌಲಾದ್, ಮೊಬೈಲ್ ಪಿಟಿ ನಡೆಸುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಈ ದಿಟ್ಟೆಯರು ತೋರಿಸಿಕೊಟ್ಟರು.
ಪಾಲಕ್ಕಾಡ್‌ನಲ್ಲಿ ಭಾಗವತ್ ಧ್ವಜಾರೋಹಣ
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಕೇರಳದ ಪಾಲಕ್ಕಾಡ್‌ನಲ್ಲಿರುವ ಶಾಲೆಯಲ್ಲಿ ಗಣರಾಜ್ಯ ನಿಮಿತ್ತ ಧ್ವಜಾರೋಹಣ ಮಾಡಿದ್ದಾರೆ. ಆ ಶಾಲೆ ವಿದ್ಯಾಭಾರತಿ ಎಂಬ ಸಂಸ್ಥೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಭಾಗವತ್, ದೇಶದ ಸಂವಿಧಾನವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಪ್ರತಿಪಾದಿಸಿದರು. ಕಳೆದ ವರ್ಷ ಸರಕಾರದ ಅನುದಾನ ಪಡೆಯುತ್ತಿರುವ ಕರ್ಣಕೈಮ್ಮನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ಮಾಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಭಾಗವತ್ ವಿರುದ್ಧ ಕೇಸು ದಾಖಲಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿತ್ತು.
“ಪದ್ಮಶ್ರೀ’ ಜತೆ ಮೋದಿ ಸೆಲ್ಫಿ
ಶುಕ್ರವಾರ ಸಂಜೆ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿ ಬ್ಯಾರಿಕೇಡ್‌ಗಳಾಚೆ ನಿಂತಿದ್ದ ಅಪಾರ ಜನಸ್ತೋಮದ ಕಡೆ ತಮ್ಮ ಎಂದಿನ ಸ್ಟೈಲ್‌ನಲ್ಲಿ ಕೈಬೀಸುತ್ತಾ ನಡೆದರು. ಸ್ವಲ್ಪ ದೂರ ನಡೆದ ಮೋದಿಯವರಿಗೆ ಬ್ಯಾರಿಕೇಡ್ ಪಕ್ಕದಲ್ಲೇ ಇದ್ದ 2017ರ ಪದ್ಮಶ್ರೀ ಪುರಸ್ಕೃತರಾದ ಪಶ್ಚಿಮ ಬಂಗಾಲದ ಕರೀಮುಲ್ ಹಕ್ ನಮಸ್ಕರಿಸಿ, ಸೆಲ್ಫಿಗಾಗಿ ಬೇಡಿಕೆಯಿ ತ್ತರು. ಇದಕ್ಕೆ ಮೋದಿ ಒಪ್ಪಿದರು. ಆದರೆ, ಆ ಖುಷಿಯಲ್ಲಿ ಕರೀಮುಲ್ ತಮ್ಮ ಫೋನ್ ಬಳಸುವಲ್ಲಿ ತಡವರಿಸಿದರು. ತಕ್ಷಣ, “ನಿಮಗೆ ನಾನೇ ಗೌರವ ಕೊಡುತ್ತೇನೆ ಕೊಡಿ’ ಎನ್ನುತ್ತಾ ಅವರ ಫೋನ್ ಪಡೆದ ಮೋದಿ, ಅವರ ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಟ್ಟು, ಉಚಿತ ಆಂಬ್ಯುಲೆನ್ಸ್ ಸೇವೆ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದರು.
ಸಾರ್ವಭೌಮತೆಯಲ್ಲೇ ಭಾರತಕ್ಕೆ ನಂಬಿಕೆ: ಪ್ರಧಾನಿ
ಭಾರತ ಆಸಿಯಾನ್ ರಾಷ್ಟ್ರಗಳ ನಡುವೆ ಯಾವುದೇ ರೀತಿ ತಾರತಮ್ಯವೆಸಗದೆ ಅವುಗಳ ಸಾರ್ವಭೌಮತೆಯಲ್ಲಿ ನಂಬಿಕೆ ಇರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹತ್ತು ಆಸಿಯಾನ್ ರಾಷ್ಟ್ರಗಳ ಹತ್ತು ಭಾಷೆಗಳಲ್ಲಿ ಪ್ರಕಟವಾಗುವ 27 ಪತ್ರಿಕೆಗಳಲ್ಲಿ ಬರೆಯಲಾಗಿರುವ ಲೇಖನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸಿಯಾನ್ ಮತ್ತು ಭಾರತ ನಡುವಿನ ಮೈತ್ರಿಗೆ 25 ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಸ್ಮರಣಾರ್ಥ ಸಮ್ಮೇಳನ ಆಯೋಜಿಸಿದ್ದು ಸಂತೋಷದ ವಿಚಾರ ಎಂದು ಬರೆದುಕೊಂಡಿದ್ದಾರೆ. ಈ ನಡುವೆ ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರು ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಮತ್ತು ಲಾವೋಸ್ ಪ್ರಧಾನಿ ತಾಂಗ್ಲೋನ್ ಸಿಸೋಲಿತ್ ಜತೆಗೆ ಮಾತುಕತೆ ನಡೆಸಿದರು.
ದೇವೇಗೌಡರಿಗೆ ಮೊದಲು, ರಾಹುಲ್‌ಗೆ 6ನೇ ಸಾಲು
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 6ನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್, “ಕೇಂದ್ರ ಸರಕಾರ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿತು. ಆದರೆ ಆರೋಪ ತಿರಸ್ಕರಿಸಿರುವ ಸರಕಾರದ ಮೂಲಗಳು, “ಶಿಷ್ಟಾಚಾರದ ಪ್ರಕಾರ ಪ್ರತಿಪಕ್ಷ ನಾಯಕರಿಗೆ 7ನೇ ಸಾಲಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕಿತ್ತು’ ಎಂದಿದೆ. ಇದೇ ವೇಳೆ, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಹಾಗೂ ಮನಮೋಹನ್ ಸಿಂಗ್ ಅವರು ಮೊದಲ ಸಾಲಲ್ಲಿ ಕುಳಿತಿದ್ದರು.
ಆಸಿಯಾನ್ ದೇಶಗಳ ಸಾಧಕರಿಗೆ ಪದ್ಮ ಗೌರವ
ಆಸಿಯಾನ್ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ವನ್ನು ಮತ್ತಷ್ಟು ಗಟ್ಟಿಯಾಗಿಸುವ ದೃಷ್ಟಿಯಿಂದ, ಇದೇ ಮೊದಲ ಬಾರಿಗೆ, ದೇಶದ 4ನೇ ಅತ್ಯುತ್ತಮ ನಾಗರಿಕ ಗೌರವವಾದ “ಪದ್ಮಶ್ರೀ’ಯನ್ನು ಆಸಿಯಾನ್ ಸದಸ್ಯತ್ವ ಹೊಂದಿರುವ ಒಂದೊಂದು ದೇಶದ ಒಬ್ಬೊಬ್ಬ ಸಾಧ ಕರಿಗೆ ನೀಡಲು ತೀರ್ಮಾನಿಸಲಾಗಿದೆ. ಅದರಂತೆ, 10 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. ಗುರುವಾರ ವಷ್ಟೇ, 85 ಸಾಧಕರಿಗೆ ಪ್ರದ್ಮಶ್ರೀ ಗೌರವ ಘೋಷಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರು: ಹಾಜಿ ಅಬ್ದುಲ್ಲಾ ಬಿನ್ ಮಲಾಯ್‌ಹಾಜಿ ಓಥ¾ನ್ (ಬ್ರೂನೈ, ವೈದ್ಯಕೀಯ ಕ್ಷೇತ್ರ), ಹುನ್ ಮೆನಿ (ಕಾಂಬೋಡಿಯಾ, ಸಾರ್ವಜನಿಕ ಸೇವೆ), ನ್ಯೋಮನ್ ನುವಾರ್ತಾ (ಇಂಡೋನೇಷ್ಯಾ, ಕಲೆ), ಬೌನಾÉಪ್ ಕಿಯೋಕಾಂಗ್ನಾ (ಲಾವೋಸ್, ಕಲೆ), ಥಾಂಟ್ ಮಿಯಿಂಟ್-ಯು (ಮ್ಯಾನ್ಮಾರ್, ಸಾರ್ವಜನಿಕ ಸೇವೆ), ಜೋಸ್ ಮಾ ಜೋಯ್ (ಪಿಲಿಪ್ಪೀನ್ಸ್, ಉದ್ಯಮ), ಟಾಮಿ ಕೊಹ್ (ಸಿಂಗಾಪುರ, ಸಾರ್ವಜನಿಕ ಸೇವೆ), ಸೋಮ್‌ಡೆಟ್ ಫÅ ಅರಿಯಾ ವಾಂಗಾÕಕೊಟ್ಟಾಯನ್ (ಥಾಯ್ಲೆಂಡ್, ಬೌದ್ಧ ಗುರು), ನುYéಯೆನ್ ಟಿಯೆನ್ ಥೆಯೆನ್ (ವಿಯೆಟ್ನಾಂ, ಧಾರ್ಮಿಕ ಕ್ಷೇತ್ರ).
ಸಿಹಿ ವಿನಿಮಯವಿಲ್ಲ
ಪ್ರತಿ ವರ್ಷ ಗಣರಾಜ್ಯ ದಿನದಂದು ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ಥಾನಿ ರೇಂಜರ್‌ಗಳ ಜತೆ ಸಿಹಿ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಕಳೆದ ಕೆಲ ದಿನಗಳಿಂದ ಪಾಕಿಸ್ಥಾನದ ಗುಂಡಿನ ದಾಳಿಯಿಂದಾಗಿ ಯೋಧರೂ ಸೇರಿ 13 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಬಾರಿ ಸಿಹಿ ವಿನಿಮಯ ನಡೆಯಲಿಲ್ಲ.
ವಿಎಚ್‌ಪಿ ರ್ಯಾಲಿ ವೇಳೆ ಹಿಂಸೆ: ಬಾಲಕ ಸಾವು
ವಿಎಚ್‌ಪಿ ಮತ್ತು ಎಬಿವಿಪಿ ಸದಸ್ಯರು ಮಥುರಾ- ಬರೇಲಿ ಹೆದ್ದಾರಿಯಲ್ಲಿ “ತಿರಂಗಾ ಬೈಕ್ ರ್ಯಾಲಿ’ ಹಮ್ಮಿಕೊಂಡಿದ್ದ ವೇಳೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಇದು ಹಿಂಸಾಚಾರಕ್ಕೆ ತಿರುಗಿ 16 ವರ್ಷದ ಬಾಲಕ ಸಾವಿಗೀಡಾಗಿದ್ದಾರೆ.
ಕಾನ್‌ಸ್ಟೆಬಲ್ ಆತ್ಮಹತ್ಯೆ : ಪಂಜಾಬ್‌ನ ಶಾಲೆಯೊಂದರಲ್ಲಿ ಪರೇಡ್ ವೇಳೆಯೇ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರು ಎಕೆ 47 ರೈಫಲ್ ಮೂಲಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಾರಿಯ ಪ್ರಥಮಗಳು
ಆಸಿಯಾನ್ ಸದಸ್ಯ ರಾಷ್ಟ್ರಗಳ 10 ನಾಯಕರು ಒಟ್ಟಿಗೆ ಅತಿಥಿಗಳಾಗಿ ಭಾಗಿ
ಬಿಎಸ್‌ಎಫ್ನ ಮಹಿಳಾ ಪಡೆ “ಸೀಮಾ ಭವಾನಿ’ ಯೋಧರಿಂದ ಬೈಕ್ ಸಾಹಸ
ಆಕಾಶವಾಣಿಯಿಂದ ಟ್ಯಾಬ್ಲೊ
ರಾಜಪಥದಲ್ಲಿ ಆಸಿಯಾನ್ ಧ್ವಜಾರೋಹಣ
“ರುದ್ರ’ ಕಾಪ್ಟರ್ ಪ್ರದರ್ಶನ
ಎನ್‌ಎಸ್‌ಜಿ ಪಡೆಯ ಪಥ ಸಂಚಲನ
ತೇಜಸ್ ಲಘು ಯುದ್ಧ ವಿಮಾನ ಪ್ರದರ್ಶನ
ವಿಕ್ರಾಂತ್ ಯುದ್ಧ ಹಡಗು ಪ್ರದರ್ಶನ
ವಾಯುಪಡೆಯ 21 ಫೈಟರ್ ಜೆಟ್, 12 ಕಾಪ್ಟರ್, 5 ಟ್ರಾನ್ಸ್‌ಪಾಂಡರ್ ಪ್ರದರ್ಶನ
20 ವರ್ಷಗಳ ನಂತರ, ಅರೆಸೇನಾ ಪಡೆಯಿಂದ ಟ್ಯಾಬ್ಲೊ
ದೇಶದ ವಿವಿಧ ಪ್ರಾಂತ್ಯಗಳ ಬುಡಕಟ್ಟು ಜನಾಂಗದ 61 ಮಂದಿಗೆ ವಿಶೇಷ ಆಹ್ವಾನ
ಕಾಂಬೋಡಿಯಾ, ಮಲೇಷ್ಯಾ, ಥಾಯ್ಲೆಂಡ್‌ಗಳ ಜಾನಪದ ನೃತ್ಯ
23 ಪರೇಡ್‌ನಲ್ಲಿ ಪ್ರದರ್ಶನಗೊಂಡ ಸ್ತಬ್ಧಚಿತ್ರಗಳು
500 ಲೋಕೋಪಯೋಗಿ ಇಲಾಖೆಯ ದೀಪಾವಳಿ ಥೀಮ್‌ನ ಟ್ಯಾಬ್ಲೋದಲ್ಲಿ ಕೆಲಸ ಮಾಡಿದ ಸಿಬಂದಿ
60 ದಿಲ್ಲಿಯಲ್ಲಿ ನಿಯೋಜನೆಯಾಗಿದ್ದ ಭದ್ರತಾ ಸಿಬಂದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.