ಸೇನೆ ಬಳಿ ಕೇವಲ 10 ದಿನಕ್ಕೆ ಸಾಲುವಷ್ಟು ಮದ್ದುಗುಂಡು: ಸಿಎಜಿ ವರದಿ
Team Udayavani, Jul 22, 2017, 11:29 AM IST
ಹೊಸದಿಲ್ಲಿ : ಸಂಸತ್ತಿನಲ್ಲಿ ನಿನ್ನೆ ಶುಕ್ರವಾರ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ (ಸಿಎಜಿ) ಮಂಡಿಸಿರುವ ತಾಜಾ ವರದಿಯ ಪ್ರಕಾರ, ‘ಒಂದೊಮ್ಮೆ ಯುದ್ಧ ನಡೆಯಿತೆಂದರೆ, ಭಾರತೀಯ ಸೇನೆಯ ಬಳಿ, ಕೇವಲ ಹತ್ತು ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ಮದ್ದು ಗುಂಡುಗಳು ಸಂಗ್ರಹದಲ್ಲಿವೆ’ ಎಂಬ ಕಳವಳಕಾರಿ ಅಂಶ ಬಹಿರಂಗವಾಗಿದೆ.
ಸೇನಾ ಶಸ್ತ್ರಾಸ್ತ್ರ ಕಾರ್ಖಾನೆಯ ದಕ್ಷತೆ ಮತ್ತು ಕಾರ್ಯ ನಿರ್ವಹಣೆಯ ಪರಿಸ್ಥಿತಿ 2013ರಲ್ಲಿ ಹೇಗಿತ್ತೋ ಈಗಲೂ ಹಾಗೆಯೇ ಇದೆ; ಅದರಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಹಾಗಾಗಿ ನಾಲ್ಕು ವರ್ಷಗಳ ಹಿಂದಿದ್ದ ಸೇನಾ ಮದ್ದುಗುಂಡು ಸಂಗ್ರಹ ಸ್ಥಿತಿಗತಿ ಈಗಲೂ ಹಾಗೆಯೇ ಕಳವಳಕಾರಿಯಾಗಿ ಮುಂದುವರಿದಿದೆ ಎಂದು ಸಿಎಜಿ ವರದಿ ಹೇಳಿದೆ.
ಸಿಕ್ಕಿಂ ಗಡಿಯಲ್ಲಿನ ತ್ರಿರಾಷ್ಟ್ರ ಚೌಕ ಪ್ರದೇಶದಲ್ಲಿ ಭಾರತ – ಚೀನ ಸೇನೆ ಕಳೆದ ಎರಡು ತಿಂಗಳಿಂದ ಮುಖಾಮುಖೀಯಾಗಿದ್ದು ಯುದ್ಧ ಸ್ಫೋಟಗೊಳ್ಳುವ ಸಂಭಾವ್ಯತೆಯ ಭೀತಿ ಇರುವ ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಮದ್ದುಗುಂಡು ಸಂಗ್ರಹದ ಸ್ಥಿತಿಗತಿಯು ಕಳವಳಕಾರಿಯಾಗಿರುವುದು ಚಿಂತೆಗೆ ಕಾರಣವಾಗಿದೆ ಎನ್ನಲಾಗಿದೆ.
ಸೇನೆಯ ಮದ್ದುಗುಂಡು ಶೇಖರಣೆ ಪ್ರಮಾಣವು ಯಾವ ಸಂದರ್ಭದಲ್ಲೂ ಶೇ.55ರಷ್ಟು ಇರುವುದು ಅಗತ್ಯ; ಆದರೆ ಈಗಿನ ಶೇಖರಣೆಯ ಶೇ.40ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಇದು ಒಂದೊಮ್ಮೆ ಯುದ್ಧ ಸ್ಫೋಟಗೊಂಡರೆ ಕೇವಲ ಹತ್ತು ದಿನಗಳಿಗೆ ಮಾತ್ರವೇ ಸಾಕಾಗುವ ಭಯವಿದೆ ಎಂದು ಸಿಎಜಿ ವರದಿ ಹೇಳಿದೆ.
ಆರ್ಟಿಲರಿ ಮತ್ತು ಟ್ಯಾಂಕ್‌ಗಳಿಗೆ ಅವಶ್ಯವಿರುವ ಮದ್ದುಗುಂಡುಗಳ ಪ್ರಮಾಣದಲ್ಲಿ ತೀವ್ರ ಕೊರತೆ ಇದ್ದು ಇದಕ್ಕೆ ಸೇನಾ ಶಸ್ತ್ರಾಸ್ತ್ರ ಕಾರ್ಖಾನೆಯ ಮಂಡಳಿಯ ಅದಕ್ಷತೆ ಮತ್ತು ನಿರ್ಲಕ್ಷ್ಯವೇ ಕಾರಣವಾಗಿದೆ. 2013ರಲ್ಲಿ ಇದ್ದ ಮದ್ದುಗುಂಡು ಕೊರತೆ ಪ್ರಮಾಣವನ್ನು ಲೆಕ್ಕಿಸಿ ಅದನ್ನು ಸುಧಾರಿಸುವ ನಿಟ್ಟಿನಲ್ಲಿ ರೂಪಿಸಲಾಗಿದ್ದ ಮಾರ್ಗನಕ್ಷೆಗೆ ಅನುಗುಣವಾದ ಅನುಷ್ಠಾನ ಕಾರ್ಯ ನಡೆದೇ ಇಲ್ಲ ಎಂದು ಸಿಎಜಿ ವರದಿ ತಿಳಿಸಿದೆ.
ಮಾಜಿ ಆರ್ಟಿಲರಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ವಿ ಕೆ ಚತುರ್ವೇದಿ (ನಿವೃತ್ತ) ಅವರು “ಸಿಜಿಎ ವರದಿಯು ಆರ್ಟಿಲರಿ ವಿಭಾಗದಲ್ಲಿ ಸ್ಫೋಟಕಗಳು ಹಾಗೂ ಕ್ಷಿಪಣಿಗಳನ್ನು ಪ್ರಯೋಗಿಸುವುದಕ್ಕೆ ಅಗತ್ಯವಿರು ಇಲೆಕ್ಟ್ರಾನಿಕ್ ಫ್ಯೂಸ್‌ಗಳು ಮತ್ತು ಮದ್ದುಗುಂಡುಗಳ ಕಳವಳಕಾರಿ ಕೊರತೆಯ ಮೇಲೆ ಬೆಳಕು ಚೆಲ್ಲಿದೆ’ ಎಂದು ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.