ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡ
ವಿದೇಶಿ ಮಣ್ಣಲ್ಲಿ ಭಾರತವನ್ನು ದೂಷಿಸುವ ಅಪ್ರಬುದ್ಧ ವ್ಯಕ್ತಿ ಎಂದ ಬಿಜೆಪಿ
Team Udayavani, May 22, 2022, 6:30 AM IST
ನವದೆಹಲಿ:”ಬಿಜೆಪಿಯು ದೇಶದಲ್ಲಿ ಖಾಸಗಿ ವಲಯದ ಏಕಸ್ವಾಮ್ಯವನ್ನು ಸೃಷ್ಟಿಸುತ್ತಿದೆ. ದೇಶದ ಎಲ್ಲ ವಿಮಾನನಿಲ್ದಾಣಗಳು, ಎಲ್ಲ ಬಂದರುಗಳು, ಎಲ್ಲ ಮೂಲಸೌಕರ್ಯಗಳು ಒಂದೇ ಕಂಪನಿಯ ನಿಯಂತ್ರಣದಲ್ಲಿರುವುದು ಅತ್ಯಂತ ಅಪಾಯಕಾರಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, “ವಿದೇಶಿ ಮಣ್ಣಿನಲ್ಲಿ ಭಾರತವು ದೂಷಿಸುವುದು ರಾಹುಲ್‌ಗೆ ಅಭ್ಯಾಸವಾಗಿಬಿಟ್ಟಿದೆ. ಅವರೊಬ್ಬ ಪಾರ್ಟ್‌ಟೈಂ, ಅಪ್ರಬುದ್ಧ, ವಿಫಲ ನಾಯಕ. ತಮ್ಮ ಹೇಳಿಕೆಗಳ ಮೂಲಕ ದೇಶಕ್ಕೆ ದ್ರೋಹವೆಸಗಿದ್ದಾರೆ’ ಎಂದು ಕಿಡಿಕಾರಿದೆ.
ಲಂಡನ್‌ನಲ್ಲಿ ಬ್ರಿಡ್ಜ್ ಇಂಡಿಯಾ ಎಂಬ ಸಂಸ್ಥೆ ಹಮ್ಮಿಕೊಂಡಿದ್ದ “ಐಡಿಯಾಸ್ ಫಾರ್ ಇಂಡಿಯಾ’ ಎಂಬ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್, ಈ ಹಿಂದೆ ಯಾವತ್ತೂ ಖಾಸಗಿ ಕಂಪನಿಗಳ ಏಕಸ್ವಾಮ್ಯ ನಮ್ಮ ದೇಶದಲ್ಲಿ ಇರಲಿಲ್ಲ. ಅಧಿಕಾರ ಮತ್ತು ಬಂಡವಾಳ ಈ ರೀತಿ ಕೇಂದ್ರೀಕರಣಗೊಂಡಿರಲಿಲ್ಲ. ಹಾಲಿ ಕೇಂದ್ರ ಸರ್ಕಾರವು ಇದರ ಮೂಲಕವೇ ಮಾಧ್ಯಮಗಳನ್ನೂ ನಿಯಂತ್ರಿಸುತ್ತಿದೆ ಎಂದೂ ದೂರಿದ್ದಾರೆ.
ಸೀಮೆಎಣ್ಣೆ ಆರೋಪ:
ಬಿಜೆಪಿಯು ದೇಶಾದ್ಯಂತ ಸೀಮೆಎಣ್ಣೆಯನ್ನು ಸುರಿಯುತ್ತಾ ಸಾಗುತ್ತಿದೆ. ಒಂದು ಕಿಡಿ ಅದಕ್ಕೆ ತಗುಲಿದರೆ ಸಾಕು, ನಾವೆಲ್ಲರೂ ದೊಡ್ಡ ಅಪಾಯಕ್ಕೆ ಸಿಲುಕುತ್ತೇವೆ. ಹೀಗಾಗಿ ಪ್ರತಿಪಕ್ಷವಾಗಿ ನಾವು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಕಾಂಗ್ರೆಸ್ ಯಾವತ್ತೂ ಜನರನ್ನು, ಸಮುದಾಯಗಳನ್ನು, ರಾಜ್ಯಗಳನ್ನು ಮತ್ತು ಧರ್ಮಗಳನ್ನು ಒಗ್ಗೂಡಿಸಲು ಬಯಸುತ್ತದೆ ಎಂದಿದ್ದಾರೆ ರಾಹುಲ್.
ಪ್ರಧಾನಿ ಆಲಿಸಲ್ಲ:
ಪ್ರಧಾನಮಂತ್ರಿಗಳಿಗೆ “ನಾನು ಆಲಿಸಲು ಬಯಸುತ್ತೇನೆ’ ಎಂಬ ಮನಸ್ಥಿತಿ ಇರಬೇಕು. ಆದರೆ, ನಮ್ಮ ಪ್ರಧಾನಿ ಯಾರನ್ನೂ ಆಲಿಸುವುದಿಲ್ಲ. ಆದರೆ, ಕಾಂಗ್ರೆಸ್ ಭಾರತೀಯರ ಅಭಿವ್ಯಕ್ತಿಯನ್ನು ಆಲಿಸುವಂಥ ಪಕ್ಷ. ಬಿಜೆಪಿ ಧ್ವನಿಯನ್ನು ಹತ್ತಿಕ್ಕುತ್ತದೆ, ನಾವು ಆಲಿಸುತ್ತೇವೆ ಎಂದೂ ರಾಹುಲ್ ಹೇಳಿದ್ದಾರೆ.
ಪ್ರಾದೇಶಿಕ ಪಕ್ಷಗಳ ಮನವೊಲಿಕೆ ಯತ್ನ
ಇತ್ತೀಚೆಗೆ ಪ್ರಾದೇಶಿಕ ಪಕ್ಷಗಳ ವಿರುದ್ಧ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದ ರಾಹುಲ್, ಲಂಡನ್‌ನಲ್ಲಿ ಆ ಪಕ್ಷಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಎಲ್ಲ ಪ್ರಾದೇಶಿಕ ಪಕ್ಷಗಳನ್ನೂ ಕಾಂಗ್ರೆಸ್ ಗೌರವಿಸುತ್ತದೆ. ನಾವು “ಬಿಗ್ ಡ್ಯಾಡಿ’ಯಂತೆ ವರ್ತಿಸಲು ಇಷ್ಟಪಡುವುದಿಲ್ಲ. ಪ್ರಾದೇಶಿಕ ಪಕ್ಷಗಳ ಜತೆಗೂಡಿ ನಾವು ಆಡಳಿತಪಕ್ಷದ ವಿರುದ್ಧ ದೊಡ್ಡ ಮಟ್ಟದ ರಾಷ್ಟ್ರವ್ಯಾಪಿ ಆಂದೋಲನ ಕೈಗೊಳ್ಳಲಿದ್ದೇವೆ. ಇದು “ಭಾರತವನ್ನು ಮರಳಿ ಪಡೆಯುವ’ ಹೋರಾಟ ಎಂದಿದ್ದಾರೆ.ಏ
“ದರ್ಪ’ ಹೇಳಿಕೆಗೆ ಜೈಶಂಕರ್ ತಿರುಗೇಟು
ಭಾರತದ ವಿದೇಶಾಂಗ ಸೇವೆಯು ಇತ್ತೀಚೆಗೆ ಸಂಪೂರ್ಣವಾಗಿ ಬದಲಾಗಿದೆ. ಅಲ್ಲಿನ ಅಧಿಕಾರಿಗಳು “ದರ್ಪ’ದಿಂದ ವರ್ತಿಸುತ್ತಾರೆ. ಯಾರ ಮಾತನ್ನೂ ಕೇಳಲ್ಲ. ದುರಹಂಕಾರದ ಮಾತುಗಳನ್ನಾಡುತ್ತಾರೆ ಎಂದು ಐರೋಪ್ಯದ ಹಲವಾರು ಅಧಿಕಾರಿಗಳು ನನ್ನೊಂದಿಗೆ ಹೇಳಿಕೊಂಡಿದ್ದಾರೆ ಎಂದೂ ರಾಹುಲ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, “ಹೌದು, ವಿದೇಶಾಂಗ ಇಲಾಖೆ ಈಗ ಬದಲಾಗಿದೆ. ಅವರು ಸರ್ಕಾರದ ಆದೇಶಗಳನ್ನು ಪಾಲಿಸುತ್ತಾರೆ. ಇತರರ ವಾದಗಳಿಗೆ ಪ್ರತ್ಯುತ್ತರ ನೀಡುತ್ತಾರೆ. ಇದನ್ನು ಅಹಂಕಾರ (ದರ್ಪ) ಎನ್ನುವುದಿಲ್ಲ. ಇದನ್ನು ಆತ್ಮವಿಶ್ವಾಸ ಎನ್ನುತ್ತಾರೆ. ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆ ಎನ್ನುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.
1984ರ ಸಿಖ್ ವಿರೋಧಿ ದಂಗೆಯಿಂದ ಇಂದಿನವರೆಗೂ ದೇಶದಲ್ಲಿ ಸೀಮೆಎಣ್ಣೆಯನ್ನು ಸುರಿಯುತ್ತಾ ಗಲಭೆ ಹೊತ್ತಿ ಉರಿಯುವಂತೆ ಮಾಡುತ್ತಾ ಬಂದಿರುವುದು ಕಾಂಗ್ರೆಸ್. ರಾಹುಲ್ ಗಾಂಧಿ ಅಮೆರಿಕ, ಯುಕೆ, ಸಿಂಗಾಪುರ ಸೇರಿದಂತೆ ವಿದೇಶಗಳಲ್ಲಿ ಭಾರತವನ್ನು ದೂಷಿಸುತ್ತಾ ಬಂದಿದ್ದಾರೆ. ಇದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ.
– ಗೌರವ್ ಭಾಟಿಯಾ, ಬಿಜೆಪಿ ವಕ್ತಾರ
ರಾಹುಲ್‌ಗಾಂಧಿ ಹೇಳಿರುವುದು ಸತ್ಯ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ, ಅಂಥವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದು ಪ್ರಜಾಸತ್ತೆಗೆ ಒಳ್ಳೆಯದಲ್ಲ. ದೇಶದ ಜನರು ಸತ್ಯ ಹೇಳಲು ಹೆದರುವಂತಾಗಿದೆ. ರಾಹುಲ್ ಹೇಳಿದ್ದನ್ನೇ ನಾವು ಈ ಹಿಂದೆಯೇ ಹೇಳಿದ್ದೇವೆ. ಸ್ವಲ್ಪ ಭಿನ್ನವಾಗಿ ಹೇಳಿದ್ದೆವು ಅಷ್ಟೆ.
– ಸಂಜಯ್ ರಾವತ್, ಶಿವಸೇನೆ ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.