ಕರ್ನಾಟಕ ಕದನ : ಮೇ 12 ಚುನಾವಣೆ, 15ಕ್ಕೆ ಫಲಿತಾಂಶ
Team Udayavani, Mar 28, 2018, 6:15 AM IST
ಹೊಸದಿಲ್ಲಿ: ಅಂತೂ ಇಂತೂ ಓಟಿನ ಬೇಟೆಗೆ ದಿನ ನಿಗದಿಯಾಗಿದೆ. ಮೇ 12ಕ್ಕೆ ಮತದಾನ ನಡೆದರೆ, ಮೇ 15ಕ್ಕೆ ಫಲಿತಾಂಶ ಹೊರಬೀಳಲಿದೆ. ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಒ.ಪಿ. ರಾವತ್ ಅವರು ದಿನಾಂಕ ಪ್ರಕಟಿಸಿದ್ದಾರೆ. ಮಂಗಳವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಸರಕಾರಿ ಕಾರ್ಯಕ್ರಮಗಳಿಗೆ, ಭರ್ಜರಿ ಘೋಷಣೆಗಳಿಗೆ ಕಡಿವಾಣ ಬಿದ್ದಿದೆ. ಒಂದೇ ಹಂತದಲ್ಲಿ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 2019ರ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ನಿರ್ಣಾಯಕ ಎಂದು ಹೇಳಲಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಪ್ರಚಾರ ಕಣ ತಾರಕಕ್ಕೇರಿದೆ. ಇನ್ನು ಮೇ 10ರವರೆಗೂ ಚುನಾವಣೆಯ ಬಹಿರಂಗ ಪ್ರಚಾರದ ಕಾವು ದಿನದಿಂದ ದಿನಕ್ಕೆ ಜೋರಾಗಿರಲಿದೆ.
ಬಿಜೆಪಿ, ಕಾಂಗ್ರೆಸ್ ಎಡವಟ್ಟು
ಈ ಮಧ್ಯೆ ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಕರ್ನಾಟಕದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ. ಶ್ರೀವತ್ಸ ಚುನಾವಣೆ ವಿವರಗಳನ್ನು ಬಹಿರಂಗಗೊಳಿಸಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಟ್ವೀಟ್‌ನಲ್ಲಿ ಮತದಾನ ಮೇ 12ರಂದು ಹಾಗೂ ಮತ ಎಣಿಕೆ ಮೇ 18ರಂದು ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ ಇದು ಭಾಗಶಃ ಸತ್ಯವಾಗಿತ್ತು. ಈ ಮಧ್ಯೆ ವಿವಾದವಾಗುತ್ತಿದ್ದಂತೆಯೇ ಇಬ್ಬರೂ ಟ್ವೀಟ್ ಅಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾವತ್, ತನಿಖೆಗಾಗಿ ಸಮಿತಿಯೊಂದನ್ನು ನೇಮಕ ಮಾಡಿದ್ದು 7 ದಿನಗಳಲ್ಲಿ ವರದಿ ನೀಡಲಿದೆ ಎಂದಿದ್ದಾರೆ. ಈ ಮಧ್ಯೆ ಟೀವಿ ಚಾನೆಲ್ ನೋಡಿ ಟ್ವೀಟ್ ಮಾಡಿದೆ ಎಂದು ಮಾಳವೀಯ ಸ್ಪಷ್ಟಪಡಿಸಿದ್ದಾರೆ. ಇದೇ ಸುದ್ದಿಯನ್ನು ಕರ್ನಾಟಕ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ. ಶ್ರೀ ವತ್ಸ ಕೂಡ ಟ್ವೀಟ್ ಮಾಡಿದ್ದರು ಎಂದು ಸಾಮಾಜಿಕ ಜಾಲತಾಣಗಳು ಬಹಿರಂಗ ಮಾಡಿವೆ.
ಕಾವೇರಿ ನಿರ್ವಹಣ ಮಂಡಳಿಗೆ ಅಡ್ಡಿ ಇಲ್ಲ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರಕಾರವು ಕಾವೇರಿ ಜಲ ನಿರ್ವಹಣ ಮಂಡಳಿಯನ್ನು ಸ್ಥಾಪಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಕೋರ್ಟ್ ಆದೇಶಕ್ಕೆ ಸರಕಾರಗಳು ಬದ್ಧವಾಗುವುದಕ್ಕೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ರಾವತ್ ಅವರು ಹೇಳಿದ್ದಾರೆ. ತಮಿಳುನಾಡು ಹಾಗೂ ಕರ್ನಾಟಕಕ್ಕೆ ಅನ್ವಯವಾಗುವ ಈ ಮಂಡಳಿ ರಚನೆ ರಾಜಕೀಯವಾಗಿಯೂ ಮಹತ್ವ ಪಡೆದಿರುವುದರಿಂದ ಸಮಸ್ಯೆ ಉದ್ಭವವಾಗಿತ್ತು.
ನೀತಿ ಸಂಹಿತೆಯ ಕಟ್ಟಪ್ಪಣೆ
ಏನು ಮಾಡುವಂತಿಲ್ಲ?
ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಅಥವಾ ಅನುಷ್ಠಾನ ಮಾಡುವಂತಿಲ್ಲ. ಉದ್ಘಾಟನೆ, ಅಡಿಗಲ್ಲು, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಹೊಸ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಹಣಕಾಸು ಮಂಜೂರು ಮಾಡುವಂತಿಲ್ಲ. ಹೊಸದಾಗಿ ಕ್ರಿಯಾ ಯೋಜನೆ ರೂಪಿಸುವಂತಿಲ್ಲ, ಟೆಂಡರ್ ಕರೆಯುವಂತಿಲ್ಲ, ಕರೆದಿದ್ದರೆ ಅದನ್ನು ಅಂತಿಮಗೊಳಿಸುವಂತಿಲ್ಲ, ಅಂತಿಮಗೊಂಡಿದ್ದರೆ ಕಾರ್ಯಾದೇಶ ನೀಡುವಂತಿಲ್ಲ.
ಯಾವುದಕ್ಕೆ ಅನ್ವಯವಾಗಲ್ಲ?
ಚಾಲ್ತಿ ಯೋಜನೆ, ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಆದರೆ ಅಂತಹ ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ. ಬರ, ಪ್ರವಾಹ ಪರಿಸ್ಥಿತಿ ಪರಿಶೀಲನೆ, ಪರಿಹಾರ ಬಿಡುಗಡೆ ಮತ್ತು ಕುಡಿಯುವ ನೀರು ಪೂರೈಕೆ, ಗೋಶಾಲೆಗಳನ್ನು ತೆರೆಯಲು ನೀತಿಸಂಹಿತೆ ಅಡ್ಡಿಬರುವುದಿಲ್ಲ. ಆದರೆ, ಇದಕ್ಕೆ ಚುನಾವಣಾ ಆಯೋಗದ ಪೂರ್ವಾನುಮತಿ ಬೇಕು. ನಾಗರಿಕ ಸೌಲಭ್ಯಗಳಾದ ರಸ್ತೆ, ಸಮುದಾಯ ಭವನ, ಆಟದ ಮೈದಾನ ಪೂರ್ಣಗೊಂಡಿದ್ದರೆ, ಅಧಿಕೃತ ಕಾರ್ಯಕ್ರಮಗಳಲ್ಲದೆ ಅಧಿಕಾರಿಗಳ ಮೂಲಕ ಅವುಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸಬಹುದು.
ಮತ್ತಿನ್ನೇನು ಮಾಡಬಹುದು?
ಸರಕಾರ ಸಚಿವ ಸಂಪುಟ ಸಭೆ ನಡೆಸಬಹುದು. ಆದರೆ, ಹೊಸ ಘೋಷಣೆ ಮಾಡುವಂತಿಲ್ಲ, ನಿರ್ಣಯ ಕೈಗೊಳ್ಳುವಂತಿಲ್ಲ.
ವಿಧಾನಸಭಾ ಚುನಾವಣೆ ವೇಳಾಪಟ್ಟಿ
ನಾಮಪತ್ರ ಸಲ್ಲಿಕೆ ಆರಂಭ : ಎಪ್ರಿಲ್ 17
ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಎಪ್ರಿಲ್ 24
ನಾಮಪತ್ರ ವಾಪಸ್ ಗೆ ಕೊನೆ ದಿನಾಂಕ: ಎಪ್ರಿಲ್ 27
ಮತದಾನ ದಿನಾಂಕ: ಮೇ 12
ಮತ ಎಣಿಕೆ, ಫಲಿತಾಂಶ: ಮೇ 15
28 ಲಕ್ಷ ರೂ.ಮಾತ್ರ
ಜಾಹೀರಾತು ಪ್ರಕಟಿಸಲು ಅಥವಾ ಪ್ರಸಾರ ಮಾಡುವ ಮೊದಲು ಜಿಲ್ಲಾ ಚುನಾವಣಾಧಿಕಾರಿಯ ನೇತೃತ್ವದ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಭಾರೀ ಶಬ್ದದ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಪ್ರತಿ ಅಭ್ಯರ್ಥಿಗೆ 28 ಲಕ್ಷ ರೂ. ವೆಚ್ಚ ಮಾಡಲು ಅವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ .
ಫ್ಲೆಕ್ಸ್ ತೆರವು
ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಎಲ್ಲ ಫ್ಲೆಕ್ಸ್, ಬ್ಯಾನರ್‌ಗಳ ತೆರವು ಕಾರ್ಯ ಶುರುವಾಗಿದೆ. ಈಗಾಗಲೇ ಸರಕಾರಿ ಕಾರ್ಯಕ್ರಮಗಳ ಜಾಹೀರಾತುಗಳನ್ನು ಗುರುತಿಸಲಾಗಿದ್ದು, ಪಾಲಿಕೆಯಿಂದ ರಚಿಸಲಾಗಿರುವ ತಂಡಗಳು ತೆರವು ಕಾರ್ಯದಲ್ಲಿ ತೊಡಗಿವೆ. ತೆರವುಗೊಳಿಸಿದ ಅನಂತರವೂ ಅಳವಡಿಸುವವರ ವಿರುದ್ಧ ಕ್ರಿಮಿನಲ್ ಕೇಸು ಹಾಕಲಾಗುತ್ತದೆ.
ಹಣ ನಿಗಾ
ಅಕ್ರಮ ಹಣ ಸಾಗಾಣಿಕೆ ತಡೆಗೆ ಆದಾಯ ತೆರಿಗೆ ಇಲಾಖೆಯ ಗುಪ್ತಚರ ವಿಭಾಗದ ಸಹ ಕಾರ. ಈಗಾಗಲೇ ಆದಾಯ ತೆರಿಗೆ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆಯೂ ನಡೆದಿದೆ.
14ರವರೆಗೆ ನೋಂದಾಯಿಸಿ
ಮತದಾರರ ಪಟ್ಟಿಗೆ ಇನ್ನೂ ನಿಮ್ಮ ಹೆಸರು ಸೇರಿಸಿಲ್ಲವೇ? ಹಾಗಿದ್ದರೆ ಇನ್ನು ತಡ ಮಾಡಬೇಡಿ. ಈ ಕೂಡಲೇ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿ. ಎ.14ರವರೆಗೆ ನಿಮ್ಮ ಹೆಸರನ್ನು ಸೇರಿಸಲು ಆಯೋಗ ಅವಕಾಶ ಮಾಡಿಕೊಟ್ಟಿದೆ.
224 ಮಹಿಳಾ ಮತಗಟ್ಟೆ
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಮತಗಟ್ಟೆಯನ್ನು ಸಂಪೂರ್ಣ ಮಹಿಳಾ ಮತಗಟ್ಟೆಯನ್ನಾಗಿ ರೂಪಿಸಲಾಗುತ್ತದೆ. ಈ ಮತಗಟ್ಟೆಗಳಲ್ಲಿ ಭದ್ರತಾ ಸಿಬಂದಿ , ಪೊಲೀಸರು ಸಹಿತ ಎಲ್ಲ ಸಿಬಂದಿಯೂ ಮಹಿಳೆಯರಾಗಿರುತ್ತಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಟ್ಟು 224 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
ಮನೆಗೇ ಮತದಾರರ ಸ್ಲಿಪ್
ಯಾವ ಮತಗಟ್ಟೆಯಲ್ಲಿ ಮತ ಹಾಕಬೇಕು ಎಂಬುದನ್ನು ಮತದಾರರಿಗೆ ಮೊದಲೇ ತಿಳಿಯಪಡಿಸುವ ಉದ್ದೇಶದಿಂದ, 7 ದಿನಗಳ ಮೊದಲೇ ಮತದಾರರ ಸ್ಲಿಪ್ ಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಮತದಾರರ ಫೋಟೋ ಕೂಡ ಇರಲಿದೆ. ಇದನ್ನು ಜಿಲ್ಲಾ ಚುನಾವಣಾ ಅಧಿಕಾರಿ ನಿರ್ವಹಿಸಲಿದ್ದಾರೆ. ಈ ಸ್ಲಿಪ್ ಗಳ ಹಿಂಬದಿಯಲ್ಲಿ ಮತಗಟ್ಟೆಗೆ ತೆರಳುವ ನಕ್ಷೆ ಕೂಡ ಇರಲಿದೆ.
ಮತ ಮಾರ್ಗದರ್ಶಿ
ಪ್ರತಿ ಕುಟುಂಬಕ್ಕೂ ಮತದಾರರ ಮಾರ್ಗದರ್ಶಿ ನೀಡಲು ಆಯೋಗ ನಿರ್ಧರಿಸಿದೆ. ಇದರಲ್ಲಿ ಮತದಾನದ ದಿನಾಂಕ ಮತ್ತು ಸಮಯ, ಬೂತ್ ಅಧಿಕಾರಿಗಳ ಸಂಪರ್ಕ ವಿವರಗಳು, ಪ್ರಮುಖ ವೆಬ್‌ಸೈಟ್ ಗಳು, ಸಹಾಯವಾಣಿ ಸಂಖ್ಯೆ, ಮತಗಟ್ಟೆಯಲ್ಲಿ ಅಗತ್ಯವಿರುವ ದಾಖಲೆಗಳು,ಇತರ ಮಾಹಿತಿಗಳು ಇರಲಿವೆ. ಇವು ಕನ್ನಡ, ಇಂಗ್ಲಿಷ್‌ನಲ್ಲಿವೆೆ.
ಮತ ಹಾಕಿ, ಖಚಿತ ಮಾಡಿಕೊಳ್ಳಿ
ಇವಿಎಂಗಳ ಜತೆಗೆ ಮತ ಹಾಕಿದ ಖಚಿತತೆಗಾಗಿ ವಿವಿ ಪ್ಯಾಟ್ ಗಳನ್ನೂ ಬಳಕೆ ಮಾಡಲಾಗುತ್ತದೆ. ಈ ಯಂತ್ರದಲ್ಲಿ ಹೊರಬರುವ ರಸೀದಿಯನ್ನು ನೋಡಿ, ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಮತದಾರರು ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರಾಯೋಗಿಕವಾಗಿ ಪ್ರತಿ ವಿಧಾನಸಭೆ ಕ್ಷೇತ್ರದ ಯಾವುದಾದರೂ ಒಂದು ಮತಗಟ್ಟೆ ಆಯ್ಕೆ ಮಾಡಿ, ಆ ಮತಗಟ್ಟೆಯ ಎಲ್ಲ ಮತ ರಸೀದಿಗಳನ್ನು ಲೆಕ್ಕ ಮಾಡಲಾಗುತ್ತದೆ.
ಇ- ಅಟ್ಲಾಸ್
ಚುನಾವಣೆ ಸಂಬಂಧಿ ಚಟುವಟಿಕೆಗಳಿಗೆ ಜಿಐಎಸ್ ಆಧಾರಿತ ಮ್ಯಾಪಿಂಗ್ ಮಾಡಲಾಗುತ್ತಿದೆ.
ಎಲೆಕ್ಟ್ರಾನಿಕ್ ರೂಪದಲ್ಲಿ ಪಾವತಿ
ಚುನಾವಣೆ ಸಂಬಂಧಿ ಎಲ್ಲ ಪಾವತಿಗಳನ್ನೂ ಈ ಬಾರಿ ಇಲೆಕ್ಟ್ರಾನಿಕ್ ರೂಪದಲ್ಲೇ ಮಾಡಲಾಗುತ್ತದೆ. ನಗದು ವ್ಯವಹಾರ ನಿಷಿದ್ಧ.
ಧರ್ಮ ವಿಚಾರ: ಚುನಾವಣೆ ಸಮಯದಲ್ಲಿ ಧಾರ್ಮಿಕ ವಿಚಾರಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವ ಯಾವುದೇ ದೂರು ಬಂದಲ್ಲಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾವತ್ ಹೇಳಿದ್ದಾರೆ.
ಕದನ ಕಲಿಗಳು
ಸಿದ್ದರಾಮಯ್ಯ: ಐದು ವರ್ಷ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಸಿದ್ದರಾಮಯ್ಯ ನೇತೃತ್ವದಲ್ಲೇ ಸಹಜವಾಗಿ ಈಗಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಈಗಾಗಲೇ ರಾಜ್ಯದ 224 ಕ್ಷೇತ್ರಗಳಲ್ಲಿ ಜನಾಶೀರ್ವಾದ ಯಾತ್ರೆ ಮೂಲಕ ಒಂದಷ್ಟು ಹುಮ್ಮಸ್ಸು ತಂದುಕೊಂಡಿರುವ ಸಿದ್ದರಾಮಯ್ಯ, ಮತ್ತೂಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಜತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಸಿ ಸಮಾವೇಶ ಮಾಡಿಸಿ ತಮ್ಮ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ ಎಂಬುದನ್ನೂ ತೋರಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತಿರುವುದಿಂದ ಒಂದೊಮ್ಮೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವರೇ ಮುಖ್ಯಮಂತ್ರಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವುದಂತೂ ಹೌದು.
ಬಿ.ಎಸ್.ಯಡಿಯೂರಪ್ಪ: ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿರುವ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷರೂ ಹೌದು. ಬಿಜೆಪಿಯದೇ ಸರಕಾರ ಬಂದರೂ ಐದು ವರ್ಷ ಭರ್ತಿ ಆಡಳಿತ ನಡೆಸಲು ಮತ್ತೂಮ್ಮೆ ಮುಖ್ಯಮಂತ್ರಿಯಾಗಿಯೇ ತೀರಬೇಕು ಎಂಬ ಹಠ ತೊಟ್ಟಿದ್ದಾರೆ. ಇತ್ತೀಚೆಗಷ್ಟೇ ಪರಿವರ್ತನಾ ಯಾತ್ರೆ ನಡೆಸಿ ರಾಜ್ಯದ 224 ಕ್ಷೇತ್ರಗಳನ್ನು ಸುತ್ತಿ ಬಂದಿದ್ದಾರೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಕಷ್ಟ.
ಎಚ್.ಡಿ.ಕುಮಾರಸ್ವಾಮಿ: ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾಗಿದ್ದು ಜೆಡಿಎಸ್‌ನಲ್ಲಿ. ಎಚ್.ಡಿ.ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರೂ ಹೌದು. ವರ್ಷಕ್ಕೆ ಮುಂಚೆಯೇ ವಿಧಾನಸಭೆ ಚುನಾವಣೆ ಅಖಾಡ ಪ್ರವೇಶಿಸಿದ ಅವರು ವಿಕಾಸ ಪರ್ವ ಯಾತ್ರೆಯ ಮೂಲಕ ರಾಜ್ಯ ಸುತ್ತುತ್ತಿದ್ದಾರೆ. ಜೆಡಿಎಸ್ ಕಿಂಗ್ ಮೇಕರ್ ಆಗಲು ಹವಣಿಸುತ್ತಿದೆ ಎಂಬ ಆರೋಪಗಳಿಗೆ ಸಡ್ಡು ಹೊಡೆದು ಸ್ವಂತ ಶಕ್ತಿಯ ಮೇಲೆ ಸರಕಾರ ರಚನೆ ಮಾಡಿಯೇ ತೀರುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.