ಕೇಸು ತಾರ್ಕಿಕ ಅಂತ್ಯ ಕಾಣಲಿ: ಕಾರ್ತಿ ಬಂಧನ
Team Udayavani, Mar 1, 2018, 8:15 AM IST
ಸಿಬಿಐ ದೊಡ್ಡ ಕುಳವನ್ನು ಮುಟ್ಟುವ ಧೈರ್ಯ ತೋರಿಸಿದೆ. ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದರೆ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ನಂಬಬಹುದು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಕೆಸರೆರಚಾಟಕ್ಕೆ ಕಾರಣವಾಗಿದೆ. ಐಎನ್‌ಎಕ್ಸ್ ಮೀಡಿಯಾ ಕಂಪೆನಿಯ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ಕಾರ್ತಿಯ ಬಂಧನವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲೇ ಸಿಬಿಐ ಕಾರ್ತಿಯ ವಿರುದ್ಧ ಕೇಸು ದಾಖಲಿಸಿತ್ತು. ಸಾಕ್ಷ್ಯ ಸಂಗ್ರಹ, ದಾಳಿ ತನಿಖೆ ಎಂದು ಸುಮಾರು ಎಂಟು ತಿಂಗಳಾದ ಬಳಿಕ ಕಾರ್ತಿಯ ಬಂಧನವಾಗಿದೆ. ರಾಜಕೀಯವಾಗಿ ಕಾರ್ತಿ ಬಂಧನ ತುಸು ಸಂಚಲನ ವುಂಟುಮಾಡಿದ್ದರೂ ಇದರಿಂದ ಅಚ್ಚರಿಯೇನೂ ಆಗಿಲ್ಲ. ಏಕೆಂದರೆ ಯಾವಾಗ ತನಿಖಾ ಸಂಸ್ಥೆಗಳು ಚಿದಂಬರಂ ಪರಿವಾರದ ಹಿಂದೆ ಬಿದ್ದಿತ್ತೋ ಆಗಲೇ ಹೀಗೆ ದೊಡ್ಡ ಕುಳಗಳು ಕಂಬಿಯ ಹಿಂದೆ ಕುಳಿತುಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿತ್ತು. ಕೆಲ ದಿನಗಳ ಹಿಂದೆ ಕಾರ್ತಿಯ ಸಿಎ ಎಸ್.ಭಾಸ್ಕರರಾಮನ್ ಅವರ ಬಂಧನವಾದಾಗಲೇ ಸದ್ಯದಲ್ಲೇ ದೊಡ್ಡದೊಂದು ಮಿಕ ಬಲೆಗೆ ಬೀಳಲಿದೆ ಎಂಬ ಸುಳಿವು ಸಿಕ್ಕಿತ್ತು.
ಸ್ವತಹ ಚಿದಂಬರಂ ವಿರುದ್ಧವೇ ಏರ್‌ಸೆಲ್-ಮ್ಯಾಕ್ಸಿಸ್ ಹಗರಣದ ಆರೋಪ ವಿದೆ. ಇದು 2ಜಿ ಸ್ಪೆಕ್ಟ್ರಂ ಹಗರಣದೊಂದಿಗೆ ತಳಕು ಹಾಕಿಕೊಂಡಿ ರುವ ಪ್ರಕರಣ. ಅಂತೆಯೇ ಚಿದಂಬರಂ ಪತ್ನಿ ನಳಿನಿ ಚಿದಂಬರಂ ಅವರೂ ಶಾರದಾ ಚಿಟ್‌ಫಂಡ್ ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಪ್ರಕರಣ ವೊಂದರಲ್ಲಿ ಸಿಲುಕಿದ್ದಾರೆ. 2014ರಲ್ಲಿ ಯುಪಿಎಗೆ ಅಧಿಕಾರ ಕೈತಪ್ಪಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಚಿದಂಬರಂ ಕುಟುಂಬದ ವಿರುದ್ಧ ನಿರಂತರವಾಗಿ ತನಿಖೆ ನಡೆಯುತ್ತಿದೆ. ಅವರ ಮನೆ ಮತ್ತು ಕಚೇರಿಗಳಿಗೆ ಅಸಂಖ್ಯಾತ ಬಾರಿ ದಾಳಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಚಿದಂಬರಂ ತನ್ನ ಮನೆಗೆ ಇಡಿ ಮತ್ತು ಆದಾಯ ಕರ ಇಲಾಖೆಗಳು ಪದೇ ಪದೇ ದಾಳಿ ನಡೆಸುವುದರಿಂದ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟಿಗೆ ದೂರು ನೀಡಿದ್ದರು.ಕಾರ್ತಿ ಕೂಡ ಇತ್ತೀಚೆಗೆ ಅನುಷ್ಠಾನ ನಿರ್ದೇಶ ನಾಲಯ ತನ್ನ ವಿರುದ್ಧ ಹೊರಡಿಸಿದ್ದ ಸಮನ್ಸ್‌ಗೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ಗಳು ಇತ್ಯರ್ಥವಾಗುವ ಮೊದಲೇ ಅವರ ಬಂಧನವಾಗಿದೆ.
ಕಾಂಗ್ರೆಸ್ ಸಹಜವಾಗಿಯೇ ಇದು ರಾಜಕೀಯ ಸೇಡು ತೀರಿಸುವ ಕ್ರಮ ಎಂದು ಹೇಳಿ ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಇತ್ತೀಚೆಗಿನ ದಿನಗಳಲ್ಲಿ ಬಯಲಾಗಿರುವ ಬ್ಯಾಂಕ್ ವಂಚನೆ ಪ್ರಕರಣಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸರಕಾರ ಸಿಬಿಐಯನ್ನು ಛೂ ಬಿಟ್ಟು ಕಾರ್ತಿಯನ್ನು ಬಂಧಿಸಿದೆ ಎನ್ನುವುದು ಕಾಂಗ್ರೆಸಿನ ಆರೋಪ. ಇದೇ ಕಾಂಗ್ರೆಸ್ ಕೆಲ ತಿಂಗಳ ಹಿಂದೆ ಸಾಕ್ಷ್ಯಾಧಾರಗಳಿದ್ದರೆ ಚಿದಂಬರಂ ಅಥವಾ ಅವರ ಕುಟುಂಬ ದವರನ್ನು ಬಂಧಿಸಿ ನೋಡಿ ಎಂದು ಸರಕಾರಕ್ಕೆ ಸವಾಲು ಹಾಕಿತ್ತು. ಅದನ್ನು ಇಷ್ಟು ಬೇಗ ಮರೆತು ಈಗ ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿರುವುದು ತಮಾಷೆಯಾಗಿದೆ. ರಾಜಕೀಯ ವ್ಯಕ್ತಿಗಳ ಬಂಧನವಾದಾಗಲೆಲ್ಲ ವಿಪಕ್ಷಗಳು ರಾಜಕೀಯ ಸೇಡು ಎಂದು ಆರೋಪಿ ಸುವುದು ಮಾಮೂಲಿ ಆಗಿರುವುದರಿಂದ ಕಾಂಗ್ರೆಸ್ ಆರೋಪವನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಐಎನ್‌ಎಕ್ಸ್ ಮೀಡಿಯಾದ ವಿರುದ್ಧ ನಿಯಮಗಳನ್ನು ಗಾಳಿಗೆ ತೂರಿ ವಿದೇಶಿ ಹೂಡಿಕೆದಾರರಿಗೆ ಶೇರುಗಳನ್ನು ನೀಡುವ ಮೂಲಕ 305 ಕೋ. ರೂ. ಬಂಡವಾಳ ಸಂಗ್ರಹಿಸಿದ ಆರೋಪವಿದೆ. ಮಗಳನ್ನು ಕೊಂದ ಆರೋಪದಲ್ಲಿ ಸದ್ಯ ಜೈಲಿನಲ್ಲಿರುವ ಪೀಟರ್ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿಯೇ ಐಎನ್‌ಎಕ್ಸ್ ಮೀಡಿಯಾದ ನಿರ್ದೇಶಕರು. ಕಾರ್ತಿ ಆಗ ಹಣಕಾಸು ಸಚಿವರಾಗಿದ್ದ ತಂದೆಯ ಪ್ರಭಾವ ಬಳಸಿ ಐಎನ್‌ಎಕ್ಸ್ ಮೀಡಿಯಾಕ್ಕೆ ಅಕ್ರಮ ಹಣ ವರ್ಗಾವಣೆಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಚಿದಂಬರಂ ವಿತ್ತ ಸಚಿವರಾಗಿದ್ದ ದಿನಗಳಲ್ಲಿ ಕಾರ್ತಿ ಹಣಕಾಸು ಇಲಾಖೆ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ಇಲಾಖೆಗಳಲ್ಲಿ ಅತಿ ಎನ್ನುವಷ್ಟು ಮೂಗುತೂರಿಸುತ್ತಿದ್ದಾರೆ ಎಂಬ ಆರೋಪವೂ ಇತ್ತು. ಕಾರ್ತಿ ವಿದೇಶಗಳಲ್ಲಿ ಅಪಾರ ಸಂಪತ್ತು ಹೊಂದಿರುವ ಕುರಿತು ಯುಪಿಎ ಸರಕಾರ ಅಧಿಕಾರದಲ್ಲಿರುವಾಗಲೇ ಗುಸುಗುಸು ಕೇಳಿ ಬರುತ್ತಿತ್ತು. ಸದ್ಯಕ್ಕೆ ಆಗಿರುವುದು ಕಾರ್ತಿಯ ಬಂಧನ ಮಾತ್ರ. ಆರೋಪ ಸಾಬೀತಾಗಿ ಶಿಕ್ಷೆಯಾಗಲು ಇನ್ನೆಷ್ಟು ಕಾಲ ಬೇಕಾದೀತು ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಇಂತಹ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು ಬಹಳ ಕಡಿಮೆ. ಕಾರ್ತಿ ನಿರ್ದೋಷಿ ಎಂದು ಸಾಬೀತಾಗಲೂಬಹುದು. ಆದರೆ ಅವರನ್ನು ಬಂಧಿಸುವ ಮೂಲಕ ಸಿಬಿಐ ದೊಡ್ಡದೊಂದು ಕುಳವನ್ನು ಮುಟ್ಟುವ ಧೈರ್ಯ ತೋರಿಸಿದೆ. ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದರೆ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ನಂಬಬಹುದು. ಸದ್ಯದಲ್ಲೇ ಇನ್ನೂ ಕೆಲವು ದೊಡ್ಡ ಮನುಷ್ಯರು ಬಲೆಗೆ ಬೀಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಚಿದಂಬರಂ ಇರಬಹುದಾ? ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.