ಕಿಕ್‌ಬ್ಯಾಕ್,ನಿಯಮ ಉಲ್ಲಂಘನೆ:ಚಿದು ಪುತ್ರ ಕಾರ್ತಿ ಬಂಧನ
Team Udayavani, Mar 1, 2018, 12:23 AM IST
ಹೊಸದಿಲ್ಲಿ /ಚೆನ್ನೈ: ಕರ್ನಾಟಕ ವಿಧಾನಸಭೆ ಚುನಾವಣೆಗೆ ತಿಂಗಳುಗಳು ಬಾಕಿ ಇರುವಂತೆಯೇ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ (46) ಅವರನ್ನು ಸಿಬಿಐ ಚೆನ್ನೈಯಲ್ಲಿ ಬಂಧಿಸಿದೆ.
ಐಎನ್‌ಎಕ್ಸ್ ಮಾಧ್ಯಮ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಮತ್ತು 10 ಲಕ್ಷ ರೂ. ಗೂ. ಹೆಚ್ಚು ಮೊತ್ತವನ್ನು ಕಿಕ್‌ಬ್ಯಾಕ್ ಆಗಿ ಸ್ವೀಕರಿಸಿದ ಆರೋಪವನ್ನೂ ಚಿದಂಬರಂ ಪುತ್ರನ ಮೇಲೆ ಹೊರಿಸಲಾಗಿದೆ. ಬುಧವಾರ ಬೆಳಗ್ಗೆ ಯುನೈಟೆಡ್ ಕಿಂಗ್‌ಡಮ್‌ನಿಂದ ಚೆನ್ನೈಗೆ ಬಂದಿಳಿಯುತ್ತಿದ್ದಂತೆಯೇ ಸಿಬಿಐಯ ವಿಶೇಷ ತಂಡ ಅವರನ್ನು ಬಂಧಿಸಿತು. ಕೂಡಲೇ ಅವರನ್ನು ವಿಶೇಷ ವಿಮಾನದಲ್ಲಿ ತನಿಖಾ ಸಂಸ್ಥೆಯ ಪ್ರಧಾನ ಕಚೇರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ಸಹಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಈ ಮಧ್ಯೆ ಕಾರ್ತಿ ಅವ ರನ್ನು ಒಂದು ದಿನದ ಸಿಬಿಐ ವಶಕ್ಕೆ ನೀಡಲಾಗಿದೆ.
ಕಾರ್ತಿ ವಿರುದ್ಧ ದೇಶಾದ್ಯಂತ ತನಿಖೆ ನಡೆಸುವ ಅಧಿಕಾರ ಪಡೆದುಕೊಂಡಿರುವ ಸಿಬಿಐ ಚೆನ್ನೈಯ ಸ್ಥಳೀಯ ಕೋರ್ಟ್‌ನಲ್ಲಿ ಅವರನ್ನು ಹಾಜರುಪಡಿಸದೆ ನೇರವಾಗಿ ದಿಲ್ಲಿಗೆ ಕರೆದುಕೊಂಡು ಬರಲಾಗಿದೆ. ಸದ್ಯ ಕಾರ್ತಿ ಅವರನ್ನು ಸಿಬಿಐ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 15 ದಿನ ತನ್ನ ವಶಕ್ಕೆ ನೀಡುವಂತೆ ತನಿಖಾ ಸಂಸ್ಥೆ ಮನವಿ ಮಾಡಿದೆ.
ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಲ್ಲಿರುವ ಪೀಟರ್ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ಒಡೆತನದಲ್ಲಿದ್ದ ಐಎನ್‌ಎಕ್ಸ್ ಮಾಧ್ಯಮ ಸಂಸ್ಥೆಗೆ 370 ಕೋಟಿ ರೂ. ವಿದೇಶಿ ಹೂಡಿಕೆಗೆ ಅನುಮತಿ ಪಡೆಯುವಲ್ಲಿ ನಿಯಮ ಉಲ್ಲಂ ಸಿದ ಪ್ರಕರಣ ಇದಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ತನಿಖಾ ಸಂಸ್ಥೆ ಹಲವು ಬಾರಿ ಸಮನ್ಸ್ ಕಳುಹಿಸಿದ್ದರೂ ಕಾರ್ತಿ ಚಿದಂಬರಂ ಹಾಜರಾಗಿರಲಿಲ್ಲ. ಸಮನ್ಸ್ ವಿರುದ್ಧ ವಿವಿಧ ಕೋರ್ಟ್‌ಗಳಿಂದ ತಡೆಯಾಜ್ಞೆೆ ತಂದಿದ್ದರು. ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ.
ಪ್ರತೀಕಾರದ ಕ್ರಮ: ಕರ್ನಾಟಕ ವಿಧಾನಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಬಂಧನಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಪ್ರತೀ ಕಾರದ ಕ್ರಮ ಎಂದು ಟೀಕಿಸಿದೆ. ಕೇಂದ್ರ ಸರಕಾರದ ವಿರುದ್ಧ ಹಲವು ಹಗರಣಗಳ ಆರೋಪ ಇದೆ. ಹೀಗಾಗಿ ಅದರಿಂದ ಜನರ ದೃಷ್ಟಿಯನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಇಂಥ ಕ್ರಮಕ್ಕೆ ಸರಕಾರ ಮುಂದಾಗಿದೆ ಎಂದು ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸುಜೇìವಾಲಾ ಹೇಳಿದ್ದಾರೆ. “ಉತ್ತಮ ಆಡಳಿತ ನೀಡುವಲ್ಲಿ, ಸರಿಯಾದ ರೀತಿ ಯಲ್ಲಿ ಸರಕಾರವನ್ನು ನಿರ್ವಹಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿಫಲವಾಗಿದೆ.
ಅದನ್ನು ಮರೆ ಮಾಚುವ ನಿಟ್ಟಿನಲ್ಲಿ ಈ ಬಂಧನ ನಡೆಸಲಾಗಿದೆ. ಇದೊಂದು ಉತ್ತಮ ರೀತಿಯ ಮರೆಮಾಚುವ ತಂತ್ರ’ ಎಂದು ಸುಜೇìವಾಲಾ ಹೇಳಿದ್ದಾರೆ. ಹತ್ತು ದಿನಗಳ ಅವಧಿಯಲ್ಲಿ 30 ಸಾವಿರ ಕೋಟಿ ರೂ. ಮೌಲ್ಯದ ಹಗರಣದ ಅನಾವರಣಗೊಂಡಿದೆ. ಆದರೆ ಮೌನ ಮೋದಿಯಾಗಿರುವ ಪ್ರಧಾನಿ ಬೋಲ್ ಮೋದಿ (ಹಗರಣಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂಬರ್ಥದಲ್ಲಿ) ಆಗಿಲ್ಲ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಛೋಟಾ ಮೋದಿ (ನೀರವ್ ಮೋದಿ) ಮತ್ತು ಮೆಹುಲ್ ಚೌಸ್ಕಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದ್ದಾರೆ.
ದ್ವಂದ್ವ ನೀತಿ: ಶೀಘ್ರದಲ್ಲಿಯೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೆ ಪೂರಕವಾಗಿ ಹಿರಿಯ ನಾಯಕನ ಪುತ್ರನನ್ನು ಬಂಧಿಸಲಾಗಿದೆ. ಹೀಗಾಗಿ ಕೇಂದ್ರ ಸರಕಾರದ ಉದ್ದೇಶವನ್ನೇ ಪ್ರಶ್ನಿಸಬೇಕಾಗುತ್ತದೆ ಎಂದು ಪಕ್ಷದ ಮತ್ತೂಬ್ಬ ನಾಯಕ ಡಾ| ಅಭಿಷೇಕ್ ಮನು ಸಿಂ ಟ್ವೀಟ್ ಮಾಡಿದ್ದಾರೆ. ಬ್ಯಾಂಕ್‌ಗಳಿಗೆ ವಂಚಿಸಿದ ಉದ್ಯಮಿ ವಿಜಯ ಮಲ್ಯ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 12 ಸಾವಿರ ಕೋಟಿ ನಷ್ಟಕ್ಕೆ ಕಾರಣನಾಗಿರುವ ನೀರವ್ ಮೋದಿಯನ್ನು ವಿದೇಶಕ್ಕೆ ತೆರಳಲು ಅನುಮತಿ ನೀಡಿದ ಸರಕಾರ, ಚಿದಂಬರಂ ಪುತ್ರ ಯುನೈಟೆಡ್ ಕಿಂಗ್‌ಡಮ್‌ನಿಂದ ಸ್ವದೇಶಕ್ಕೆ ಆಗಮಿಸುತ್ತಿರುವಂತೆಯೇ ಬಂಧಿಸಲಾಗಿದೆ. ಕೇಂದ್ರ ಅನುಸರಿಸುತ್ತಿರುವ ದ್ವಂದ್ವ ನೀತಿಯನ್ನು ಪ್ರಶಂಸಿಸಲೇ ಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅರ್ಜಿ ಸಲ್ಲಿಸಿದ್ದ ಚಿದು: ಕುತೂಹಲಕಾರಿ ಬೆಳವಣಿಗೆ ಯೊಂದರಲ್ಲಿ ಕೇಂದ್ರದ ಮಾಜಿ ಸಚಿವ ಚಿದಂಬರಂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಹಾಗೂ ಕುಟುಂಬ ಸದಸ್ಯರನ್ನು ನಿರಂತರವಾಗಿ ಗುರಿ ಮಾಡುವ ಸಾಧ್ಯತೆ ಇದೆ ಎಂದು ಶಂಕಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಕಾರ್ತಿ ಚಿದಂಬರಂ ಬಂಧನದಿಂದ ಅದು ನಿಜವಾಗಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ನಿರಂತರವಾಗಿ ತನಿಖೆ ನಡೆಸದಂತೆ ಸೂಚನೆ ನೀಡಬೇಕು. ಇದರಿಂದಾಗಿ ತಮಗೆ, ಪುತ್ರನಿಗೆ ಮತ್ತು ಕುಟುಂಬಕ್ಕೆ ತೊಂದರೆಯಾಗುತ್ತಿದೆ ಎಂದು ಅರಿಕೆ ಮಾಡಿಕೊಂಡಿದ್ದರು. ಕೇಂದ್ರ ತನಿಖಾ ಸಂಸ್ಥೆಗಳು ಅಕ್ರಮವಾಗಿ ತನಿಖೆ ನಡೆಸುತ್ತಿವೆ. ಇದರಿಂದಾಗಿ ತಮ್ಮ ಮೂಲಭೂತಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ವಾದಿಸಿದ್ದರು.
ಇಂದು ವಿಚಾರಣೆ
ಐಎನ್‌ಎಕ್ಸ್ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂರ ಚಾರ್ಟರ್ಡ್ ಅಕೌಂಟೆಂಟ್ ಎಸ್. ಬಾಲಕೃಷ್ಣನ್‌ರ ಜಾಮೀನು ಅರ್ಜಿ ವಿಚಾರಣೆ ಹೊಸ ದಿಲ್ಲಿಯ ಸ್ಥಳೀಯ ಕೋರ್ಟ್‌ನಲ್ಲಿ ಗುರುವಾರ ನಡೆಯಲಿದೆ. ಫೆ. 26ರಂದು ಅವರನ್ನು ಸ್ಥಳೀಯ ಕೋರ್ಟ್ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು.
ನಮ್ಮ ಪಾತ್ರವಿಲ್ಲ: ಕಾರ್ತಿ ಚಿದಂಬರಂ ಬಂಧನ ವಿಚಾರ ದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪವಿಲ್ಲ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ.
ಏನಿದು ಪ್ರಕರಣ?
ಸದ್ಯ ರದ್ದಾಗಿರುವ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್ಐಪಿಬಿ) ಮೂಲಕ ಐಎನ್‌ಎಕ್ಸ್ ಮಾಧ್ಯಮ ಸಂಸ್ಥೆಗೆ 2008ರಲ್ಲಿ ಮಾರಿಷಸ್ ಮೂಲದ ಕಂಪೆನಿಗಳಿಂದ 305 ಕೋಟಿ ರೂ. ವಿದೇಶಿ ಹೂಡಿಕೆಗೆ ಅನುಮತಿ ಕೋರಲಾಗಿತ್ತು. ಮಾಧ್ಯಮ ಸಂಸ್ಥೆ ವಿರುದ್ಧ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ ದಾಖಲಾಗಿರುವುದರಿಂದ ಇ.ಡಿ.ಅದಕ್ಕೆ ಆಕ್ಷೇಪಿಸಿತ್ತು. ಯುಪಿಎ-1ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಪ್ರಭಾವದಿಂದ ನಿಯಮಗಳನ್ನು ಉಲ್ಲಂ ಸಿ ಅನುಮತಿ ಪಡೆದುಕೊಂಡಿತ್ತು ಎಂದು ಆರೋಪಿಸಲಾಗಿತ್ತು.
ಯಾವಾಗ ಎಫ್ಐಆರ್?
ಸಿಬಿಐ ಕಳೆದ ಮೇ ತಿಂಗಳಲ್ಲಿ ಎಫ್ಐಆರ್ ದಾಖಲಿಸಿತ್ತು. ಸಿಬಿಐ ಮತ್ತು ಇ.ಡಿ. ಹಲವು ಬಾರಿ ಕಾರ್ತಿ ಚಿದಂಬರಂ ಕಚೇರಿ, ನಿವಾಸ ಸಹಿತ ಹಲವು ಸ್ಥಳಗಳ ಮೇಲೆ ದಾಳಿಗೈದು ಶೋಧವನ್ನೂ ನಡೆಸಿತ್ತು.
ಆರೋಪವೇನು?
ಐಎನ್‌ಎಕ್ಸ್ ಮಾಧ್ಯಮ ಸಂಸ್ಥೆಯ ಪರವಾಗಿ 3.5 ಕೋಟಿ ರೂ. ಮೊತ್ತ ಸಂಗ್ರಹಿಸಲಾಗಿತ್ತು. ಕಾರ್ತಿ ಚಿದಂಬರಂಗೆ ನೇರ ಮತ್ತು ಅವರೇ ಇರುವ ಕಂಪೆನಿಗಳ ಮೂಲಕ ಅದನ್ನು ಸಂಗ್ರಹಿಸಲಾಗಿತ್ತು. ನಿಯಮ ಮೀರಿ ಪರವಾನಿಗೆ ಪಡೆಯಲು ಮಾಜಿ ಸಚಿವರ ಪುತ್ರ ಪರೋಕ್ಷವಾಗಿ ನಿಯಂತ್ರಣ ಹೊಂದಿರುವ ಕಂಪೆನಿ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ (ಪ್ರೈ) ಲಿಮಿಟೆಡ್‌ಗೆ 10 ಲಕ್ಷ ರೂ. ನೀಡಿರುವ ಬಗ್ಗೆ ಐಎನ್‌ಎಕ್ಸ್ ದಾಖಲೆ ಗಳಲ್ಲಿ ಉಲ್ಲೇಖವಾಗಿದೆ.
ನಿರೀಕ್ಷೆಯಂತೆಯೇ ಬಂಧನ ನಡೆದಿದೆ. ಇದು ನಿಜಕ್ಕೂ ಸಿಬಿಐನ ಸಾಧನೆ. ಚಿದಂಬರಂ ವಿರುದ್ಧವೂ ಶೀಘ್ರ ವಿಚಾರಣೆ ನಡೆಯಲಿದೆ. ಅವರು ಸಚಿವರಾಗಿದ್ದಾಗ ಈ ಅಕ್ರಮಗಳು ನಡೆದಿದ್ದವು.
-ಡಾ| ಸುಬ್ರಹ್ಮಣ್ಯನ್ ಸ್ವಾಮಿ, ರಾಜ್ಯಸಭಾ ಸದಸ್ಯ
ಸರಕಾರದ ಕ್ರಮ ಚಿದಂಬರಂಗೆ ತೊಂದರೆ ನೀಡುವುದೇ ಆಗಿದೆ. ಇದೊಂದು ದುರುದ್ದೇಶದ ಕ್ರಮ ಎನ್ನುವುದು ಸ್ಪಷ್ಟ.
-ಕಪಿಲ್ ಸಿಬಲ್, ಕೇಂದ್ರದ ಮಾಜಿ ಸಚಿವ
ರಾಜಕೀಯ ದ್ವೇಷದಿಂದ ಚಿದಂಬರಂ ಪುತ್ರನ ಬಂಧನ ಮಾಡಲಾಗಿದೆ. ಕೇಂದ್ರ ದ್ವೇಷ ರಾಜಕಾರಣ ಮಾಡುತ್ತಿದೆ. ಇದು ಬಹಳ ದಿನ ನಡೆಯಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.