ಶಿಕ್ಷಣ ವ್ಯವಸ್ಥೆಗೆ “ಕಸ್ತೂರಿ” ಸರ್ಜರಿ
ಎಚ್‌ಆರ್‌ಡಿಗೆ ಶಿಕ್ಷಣ ಸಚಿವಾಲಯ ಹೆಸರು?
Team Udayavani, Jun 2, 2019, 6:00 AM IST
ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡುವ ಮಹತ್ವದ ಪ್ರಸ್ತಾವನೆಯನ್ನು ಡಾ. ಕೆ.ಕಸ್ತೂರಿರಂಗನ್ ಸಮಿತಿ ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಇದರಂತೆ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ಈಗಿನ ಪದವಿಪೂರ್ವ ಶಿಕ್ಷಣದ ಬದಲಿಗೆ ಪ್ರೌಢಶಾಲೆಯನ್ನೇ ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ.
ಈಗಿನ ವ್ಯವಸ್ಥೆಯನ್ನು 10 + 2 ಎಂದು ಕರೆಯಲಾಗಿದ್ದು, ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ಸಮಿತಿಯ ಶಿಫಾರಸಿನ ಪ್ರಕಾರ 5 + 3 + 3 + 4 ವಿಧಾನದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ಪ್ರಸ್ತಾವನೆ ಮಾಡಿದೆ. ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ಪುರಾತನ ಕಾಲದಲ್ಲಿ ಹೊಂದಿದ್ದ ಶಿಕ್ಷಣ ವ್ಯವಸ್ಥೆಯನ್ನೇ ಆಧುನಿಕ ಕಾಲಕ್ಕೆ ಅಳವಡಿಸುವ ವಿಶಿಷ್ಟ ಶಿಫಾರಸು ಇದಾಗಿದ್ದು, ಇದರಲ್ಲಿ ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಜ್ಞಾನವನ್ನು ಒದಗಿಸುವುದು ಪ್ರಮುಖವಾಗಿರಲಿದೆ. ಇದರೊಂದಿಗೆ ನೈತಿಕತೆಯ ಪಾಠ, ಸಾಂವಿಧಾನಿಕ ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಮೂಡಿಸುವ ಧ್ಯೇಯವನ್ನೂ ಹೊಂದಿದೆ.
ರಾಷ್ಟ್ರೀಯ ಶಿಕ್ಷಾ ಆಯೋಗ ಎಂಬ ವಿಶಿಷ್ಟ ಸಂಸ್ಥೆಯನ್ನು ಸ್ಥಾಪಿಸುವ ಶಿಫಾರಸು ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ಸಿಜೆಐ, ಲೋಕಸಭೆ ಸ್ಪೀಕರ್, ಲೋಕ ಸಭೆಯಲ್ಲಿ ವಿಪಕ್ಷ ನಾಯಕ, ಶಿಕ್ಷಣ ಸಚಿವ ಮತ್ತು ಪ್ರಮುಖ ಶಿಕ್ಷಣ ತಜ್ಞರು ಸದಸ್ಯರಾಗಿರಲಿದ್ದಾರೆ. ಅಲ್ಲದೆ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ಶಿಕ್ಷಣ ಸಚಿವಾಲಯ ಎಂದು ಕರೆಯುವಂತೆ ಸೂಚಿಸಲಾಗಿದೆ.
ಸೆಮಿಸ್ಟರ್ ಆಧರಿತ ಶಿಕ್ಷಣ: ದ್ವಿತೀಯ ಹಂತದ ಪ್ರತಿ ವರ್ಷವನ್ನೂ ಎರಡು ಸೆಮಿಸ್ಟರ್ ಆಗಿ ವಿಭಜಿಸಲಾಗುತ್ತದೆ. ಅಂದರೆ ಒಟ್ಟು ಎಂಟು ಸೆಮಿಸ್ಟರ್ ಈ ವಿಭಾಗದಲ್ಲಿರುತ್ತದೆ. ಐದರಿಂದ ಆರು ವಿಷಯಗಳನ್ನು ಪ್ರತಿ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಅಭ್ಯಸಿಸುತ್ತಾರೆ. ಇದರಲ್ಲಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ವಿದ್ಯಾರ್ಥಿಗಳಿಗೆ ಇರುತ್ತದೆ. ಸಾಮಾನ್ಯವಾಗಿ ಈಗ 11ನೇ ತರಗತಿಯಲ್ಲಿ ಕೋರ್ಸ್‌ಗಳನ್ನು ವಿಭಜಿಸಿ, ಅಲ್ಲಿ ತಮಗೆ ಇಷ್ಟವಾದ ಕೋರ್ಸ್ ಆಯ್ಕೆ ಮಾಡುವ ಅವಕಾಶವಿದೆ. ಆದರೆ ಹೊಸ ನೀತಿಯಲ್ಲಿ 9ನೇ ತರಗತಿಯಲ್ಲೇ ಕೋರ್ಸ್ ಆಯ್ಕೆ ಅವಕಾಶ ಇರುತ್ತದೆ.
ಉನ್ನತ ಶಿಕ್ಷಣಕ್ಕೆ ಎನ್‌ಎಚ್ಇಆರ್‌ಎ: ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣಾ ಪ್ರಾಧಿಕಾರ (ಎನ್‌ಎಚ್ಇಆರ್‌ಎ) ಸ್ಥಾಪಿಸಿ ಎಲ್ಲ ಉನ್ನತ ಶಿಕ್ಷಣವನ್ನೂ ಇದರ ವ್ಯಾಪ್ತಿಗೆ ತರಬೇಕು. ಈಗಿರುವ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಕೇವಲ ಅನುದಾನ ಮಂಜೂರಾತಿ ಮಂಡಳಿಯಾಗಿರಬೇಕು. ಉಳಿದಂತೆ ತಾಂತ್ರಿಕ ಶಿಕ್ಷಣ ಮಂಡಳಿ, ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮತ್ತು ಎನ್‌ಸಿಟಿಇಗಳು ವೃತ್ತಿಪರ ಮಾನದಂಡಗಳನ್ನು ರೂಪಿಸುವ ಸಂಸ್ಥೆಯಾಗಿರಬೇಕು. ಅಲ್ಲದೆ ದೇಶದಲ್ಲಿ ಮೂರು ವಿಧದ ವಿಶ್ವವಿದ್ಯಾಲಯಗಳು ಇರಬೇಕು. ಸಂಶೋಧನೆ ಕೇಂದ್ರಿತ, ಸಮಗ್ರ ಬೋಧನೆ ಹಾಗೂ ಸಂಶೋಧನೆ ವಿವಿಗಳು ಇರಬೇಕು ಎಂದು ಶಿಫಾರಸು ಮಾಡಲಾಗಿದೆ.
ಪ್ರಮುಖ ಶಿಫಾರಸುಗಳು: ಮಿಷನ್ ನಳಂದಾ: 2030ರ ವೇಳೆಗೆ ಕನಿಷ್ಠ 100 ಸಂಶೋಧನೆ ಕೇಂದ್ರಿತ ವಿಶ್ವವಿದ್ಯಾಲಯಗಳು, 500 ಉನ್ನತ ಗುಣಮಟ್ಟದ ವಿಶ್ವವಿದ್ಯಾಲಯಗಳ ಸ್ಥಾಪನೆ
ಮಿಷನ್ ತಕ್ಷಶಿಲಾ: ಪ್ರತಿ ಜಿಲ್ಲೆಯಲ್ಲಿ ಅಥವಾ ಸಮೀಪದಲ್ಲಿ ಕನಿಷ್ಠ 1 ಉನ್ನತ ಗುಣಮಟ್ಟದ ವಸತಿ ಶಿಕ್ಷಣ ಸಂಸ್ಥೆ ಭಾರತದಲ್ಲಿ ಕಾರ್ಯನಿರ್ವಹಿಸಲು ವಿಶ್ವದ ಪ್ರಮುಖ 200 ವಿವಿಗಳಿಗೆ ಅನುಮತಿ ನೀಡಲು ಕಾನೂನು ತಿದ್ದುಪಡಿ ಸಂಶೋಧನೆಗಾಗಿ 20 ಸಾವಿರ ಕೋಟಿ ವಾರ್ಷಿಕ ಅನುದಾನದಲ್ಲಿ ರಾಷ್ಟ್ರೀಯ ಸಂಶೋಧನೆ ಫೌಂಡೇಶನ್ ಸ್ಥಾಪನೆ ವಿಶ್ವವಿದ್ಯಾಲಯ ಅಲ್ಲದ ಶಿಕ್ಷಣ ಸಂಸ್ಥೆಗಳೂ ಪದವಿ ನೀಡಲು ಅವಕಾಶ ಅಲ್ಪಸಂಖ್ಯಾತರಿಗೆ ಆದ್ಯತೆ: ಮುಸ್ಲಿಂ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಉನ್ನತ ಗುಣಮಟ್ಟದ ಶಾಲೆಗಳು
ನೈತಿಕ ಶಿಕ್ಷಣ: 6ರಿಂದ 8ನೇ ತರಗತಿಯವರೆಗೆ ನೈತಿಕ ಶಿಕ್ಷಣ 1 ವರ್ಷ ಕಡ್ಡಾಯ ಕೋರ್ಸ್, 9-12 ನೇ ತರಗತಿಯವರೆಗೆ ಕರೆಂಟ್ ಅಫೇರ್ಸ್ ಕೋರ್ಸ್, 7 ಹಾಗೂ 8ನೇ ತರಗತಿಯಲ್ಲಿ ಪ್ರತಿ ವಾರ ಒಂದು ತರಗತಿ ಹವಾಮಾನ ವೈಪರೀತ್ಯ, ನೈರ್ಮಲ್ಯ, ನೀರು, ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿ ವಿಷಯದ ಮೇಲೆ ಒಂದು ಪೀರಿಯೆಡ್.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಲ್ಲಿ ತ್ರಿಭಾಷಾ ಸೂತ್ರವನ್ನು ಅನುಸರಿಸಿದ್ದಕ್ಕೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ತ್ರಿಭಾಷಾ ಸೂತ್ರವನ್ನು ಶಾಲೆಗಳಲ್ಲಿ ಅಳವಡಿಸುವ ಶಿಫಾರಸಿನ ಅರ್ಥ, ಹಿಂದಿಯನ್ನು ಕಡ್ಡಾಯ ಭಾಷೆಯನ್ನಾಗಿಸಲಾಗುತ್ತದೆ. ಹಿಂದಿ ಕಡ್ಡಾಯವಾದರೆ ಇದು ತಮಿಳುನಾಡಿನವರ ಮೇಲೆ ಹೇರಿಕೆಯಾಗುತ್ತದೆ ಎಂದು ಅವರು ಆಕ್ಷೇಪಿಸಿದ್ದಾರೆ. ಇನ್ನೊಂದೆಡೆ ಟ್ವಿಟರ್‌ನಲ್ಲಿ ಹಿಂದಿ ಹೇರಿಕೆ ನಿಲ್ಲಿಸಿ ಎಂಬ ಅಭಿಯಾನವನ್ನೂ ಆರಂಭಿಸಲಾಗಿದೆ. ಈ ನೀತಿ ದೇಶವನ್ನೇ ಒಡೆಯುತ್ತದೆ ಎಂಬ ಆತಂಕವನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ ಈ ಮಧ್ಯೆ ಹಿಂದಿಯನ್ನು ಹೇರುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಶಾಸ್ತ್ರೀಯ ಭಾಷೆಗಳಿಗೆ ಉತ್ತೇಜನ: ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ, ತಮಿಳು, ತೆಲುಗುನಂಥ ಶಾಸ್ತ್ರೀಯ ಭಾಷೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಶಿಫಾರಸು ಮಾಡಲಾಗಿದೆ. ತ್ರಿಭಾಷಾ ಸೂತ್ರದಲ್ಲೇ ಎರಡು ವರ್ಷ ವಿದ್ಯಾರ್ಥಿಗಳು ಶಾಸ್ತ್ರೀಯ ಭಾಷೆಗಳಲ್ಲಿ ಒಂದನ್ನು ಕಲಿಯಲು ಆಸ್ಪದ ಕೊಡಬೇಕು. ಅಂದರೆ, ಉತ್ತರ ಭಾರತದಲ್ಲಿ ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆ ಇದ್ದರೆ, ಇದರಲ್ಲಿ ಸಂಸ್ಕೃತವನ್ನು ಬಿಟ್ಟು ಕನ್ನಡ ಅಥವಾ ತಮಿಳು ಅಥವಾ ತೆಲುಗು ಭಾಷೆ ಕಲಿಯಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ಈ ಭಾಷೆಗಳ ಜೀವಂತಿಕೆಗೆ ಸಹಾಯ ಮಾಡಿದಂತಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಅಲ್ಲದೆ, ಶಾಸ್ತ್ರೀಯ ಭಾಷೆಗಳ ಕುರಿತಂತೆ ಕೋರ್ಸ್‌ಗಳನ್ನು ಮಾಡಿ ಲಭ್ಯವಿರುವೆಡೆಯಲ್ಲಿ ಕಲಿಸಬೇಕು ಎಂದೂ ಸಲಹೆ ನೀಡಲಾಗಿದೆ. ಇಷ್ಟೇ ಅಲ್ಲ, ದೇಶದ ಶಾಸ್ತ್ರೀಯ ಭಾಷೆಗಳಲ್ಲಿ ಅಪಾರವಾದ ಶ್ರೀಮಂತ ಸಾಹಿತ್ಯವಿದೆ. ಇದು ಎಲ್ಲೆಡೆಗೂ ಪಸರಿಸುವಂತಾಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.