ಸಗಣಿ ಎರಚಾಡಿ ಯುಗಾದಿ ಆಚರಿಸಿದ ಗ್ರಾಮಸ್ಥರು..!
Team Udayavani, Apr 15, 2021, 4:07 PM IST
ಕರ್ನೂಲ್ : ಬೇವು-ಬೆಲ್ಲ ಹಂಚಿ, ಸಿಹಿ ತಿಂಡಿ ಒಬ್ಬಟ್ಟು (ಹೂರಣದ ಹೋಳಿಗೆ) ಸವಿದು ಸಂಭ್ರಮಿಸುವ ಹಬ್ಬ ಯುಗಾದಿ. ಆದರೆ, ಇಲ್ಲೊಂದು ಕಡೆ ಪರಸ್ಪರ ಸಗಣಿ ಎರಚಿ ಯುಗಾದಿ ಹಬ್ಬ ಆಚರಿಸುತ್ತಾರೆ. ಕೇಳುವುದಕ್ಕೆ ಇದು ವಿಚಿತ್ರ ಎನ್ನಿಸಿದರೂ ಇಂತಹ ವಿಭಿನ್ನ ಸಗಣಿಯಾಟಕ್ಕೆ ಸಾಕ್ಷಿಯಾಗಿರುವುದು ಆಂಧ್ರಪ್ರದೇಶದ ಕರ್ನೂಲ್.
ಹೌದು, ಕರ್ನೂಲಿನ ಕೈರುಪ್ಪಾ ಗ್ರಾಮದಲ್ಲಿ ಯುಗಾದಿ ಹಬ್ಬದ ಜತೆ ಸಗಣಿ ಎರಚಾಟದ ಸಂಭ್ರಮ ಕೂಡ ಬೆಸೆದುಕೊಂಡಿದೆ. ಪ್ರತಿ ವರ್ಷ ಈ ಗ್ರಾಮದ ಜನ ಪರಸ್ಪರ ಸಗಣಿ ಎರಚಿಕೊಂಡು ಯುಗಾದಿ ಸಂಭ್ರಮಕ್ಕೆ ಮೆರಗು ನೀಡುತ್ತಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಜನ ಗ್ರಾಮಸ್ಥರು ಸಗಣಿಯಾಟದಲ್ಲಿ ಪಾಲ್ಗೊಂಡು ಹಬ್ಬವನ್ನು ಆಚರಿಸಿದ್ದಾರೆ. ಈ ಹಬ್ಬಕ್ಕಾಗಿ ಒಂದು ತಿಂಗಳಿಂದ ಸಗಣಿ ಸಂಗ್ರಹ ನಡೆದಿರುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷ. ಕೈರುಪ್ಪಾದಲ್ಲಿ ಯುಗಾದಿ ಹಬ್ಬದ ಮರುದಿನ (ಬುಧವಾರ) ಸಗಣಿ ಎರಚಾಟ ನಡೆದಿದೆ. ಕೋವಿಡ್ ಭೀತಿಯ ನಡುವೆಯೂ ಸಾವಿರಾರು ಜನ ಪಾಲ್ಗೊಂಡು ಸಗಣಿಯಾಟ ನಡೆಸಿದ್ದಾರೆ. ಈ ವೇಳೆ 100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ, ಯಾರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಗಿರಿ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕತ್ತೆಗಳ ಮೆರವಣೆಗೆ:
ಇನ್ನು ಈ ಗ್ರಾಮದ ಚೌಡೇಶ್ವರ ದೇವಸ್ಥಾನದ ಸುತ್ತಲೂ ಮೂರು ಅಡಿ ಆಳದಲ್ಲಿ ಸಿದ್ಧಪಡಿಸಲಾದ ಕೆಸರಿನಲ್ಲಿ ಕತ್ತೆಗಳ ಮೆರವಣೆಗೆ ನಡೆಯಿತು. ಕರ್ನೂಲ್‍ನ ವಿವಿಧ ಭಾಗಗಳಿಂದ ಕರೆತಂದ ಕತ್ತೆಗಳನ್ನು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ಅವುಗಳಿಗೆ ಸ್ನಾನ ಮಾಡಿಸಿ ಪೂಜೆ ಮಾಡಿಸಲಾಯಿತು. ಹೀಗೆ ಕತ್ತೆಗಳಿಗೆ ಪೂಜೆ ಮಾಡುವುದರಿಂದ ಊರಿನ ಶಾಂತಿ ನೆಲೆಸುತ್ತದೆ ಎನ್ನುವುದು ಇಲ್ಲಿಯ ಜನರ ನಂಬಿಕೆ ಎಂದು ದೇವಸ್ಥಾನದ ಅರ್ಚಕ ಶ್ರೀನಿವಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.