ನಮ್ಮ ಬಗ್ಗೆ ಲೋಹಿಯಾ ಹೆಮ್ಮೆಪಡುತ್ತಿದ್ದರು!
ಬ್ಲಾಗ್‌ನಲ್ಲಿ ಲೋಹಿಯಾರನ್ನು ನೆನಪಿಸಿಕೊಂಡ ಮೋದಿ
Team Udayavani, Mar 24, 2019, 6:34 AM IST
ಹೊಸದಿಲ್ಲಿ: “ಸಮಾಜ ಸುಧಾರಕ ರಾಮ ಮನೋಹರ ಲೋಹಿಯಾ ಅವರು ಎನ್‌ಡಿಎ ಸರಕಾರದ ಬಗ್ಗೆ ಹೆಮ್ಮೆ ಹೊಂದಿರುತ್ತಿದ್ದರು. ಆದರೆ ತನ್ನನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವವರು ದೇಶ ಹಿತದ ಬದಲಿಗೆ ಸ್ವಕುಟುಂಬ ಹಿತವನ್ನೇ ಸಾಧಿಸುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಕಾಂಗ್ರೆಸ್ ವಿರುದ್ಧ ಟೀಕಿಸಿರುವ ಅವರು, ಎನ್‌ಡಿಎ ಸರಕಾರದ ಮಂತ್ರವೇ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂಬುದಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಸರಕಾ ರದ ಕೆಲಸಗಳನ್ನು ನೋಡಿದರೆ ಅರಿವಾಗುತ್ತದೆ. ಲೋಹಿಯಾ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿಯೇ ನಾವು ಹೆಜ್ಜೆಯಿಟ್ಟಿದ್ದೇವೆ. ಮಹಿಳೆ ಮತ್ತು ಪುರುಷರ ಮಧ್ಯದ ಅಸಮಾನತೆ ಹಾಗೂ ಜಾತಿ ತಾರತಮ್ಯವು ಲೋಹಿಯಾರಿಗೆ ವಿಪರೀತ ನೋವುಂಟು ಮಾಡುತ್ತಿತ್ತು ಎಂದು ಮೋದಿ ಬರೆದಿದ್ದಾರೆ.
ಸಂಸತ್ತಿನ ಹೊರಗಾಗಲಿ ಅಥವಾ ಒಳಗಾಗಲೀ ಲೋಹಿಯಾ ಮಾತನಾಡಿದರೆ ಕಾಂಗ್ರೆಸ್ ಥರಗುಡುತ್ತಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಕೃಷಿ, ಉದ್ಯಮ ಹಾಗೂ ಸೇನೆ ಸೇರಿದಂತೆ ಯಾವುದೂ ಅಭಿವೃದ್ಧಿಯಾಗಿಲ್ಲ ಎಂದು 1962ರಲ್ಲಿ ಲೋಹಿಯಾ ಹೇಳಿದ್ದರು. ಇಂದು ಲೋಹಿಯಾ ಇದ್ದಿದ್ದರೆ ರಾಜಕೀಯ ಬೆಳವಣಿಗೆ ಗಳನ್ನು ನೋಡಿ ಅಚ್ಚರಿಪಡುತ್ತಿದ್ದರು. ಈ ಪಕ್ಷಗಳು ಲೋಹಿಯಾ ಸಿದ್ಧಾಂತವನ್ನು ಸಂಪೂರ್ಣವಾಗಿ ಕೈಬಿಟ್ಟಿವೆ. ಲೋಹಿಯಾರಿಗೆ ಅವಮಾನ ಮಾಡುವ ಎಲ್ಲ ಕೆಲಸಗಳನ್ನೂ ಅವರು ಮಾಡುತ್ತಿದ್ದಾರೆ. ಕುಟುಂಬ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಡಾ| ಲೋಹಿಯಾ ಹಿಂದಿನಿಂದಲೂ ಹೇಳುತ್ತಿದ್ದರು. ಲೋಹಿಯಾರಿಗೆ ಮೋಸ ಮಾಡಿದವರು ದೇಶಕ್ಕೆ ಹೇಗೆ ಸೇವೆ ಮಾಡ ಬಲ್ಲರು ಎಂದು ಈಗ 130 ಕೋಟಿ ಜನರು ಅನುಮಾನಿಸುತ್ತಿದ್ದಾರೆ. ಈಗ ಇವರು ಲೋಹಿಯಾರಿಗೆ ಮೋಸ ಮಾಡುತ್ತಿದ್ದಾರೆ, ಮುಂದೆ ದೇಶದ ಜನರಿಗೂ ಇವರು ಮೋಸ ಮಾಡುತ್ತಾರೆ ಎಂದು ಜನರು ಭಾವಿಸುತ್ತಿದ್ದಾರೆ. ಮಹಾಮೈತ್ರಿಯ ಪ್ರಯತ್ನದ ಮೂಲಕ ಇವರು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬ್ಲಾಗ್‌ನಲ್ಲಿ ಕಿಡಿಕಾರಿದ್ದಾರೆ.
ಹುತಾತ್ಮರಿಗೆ ಕಾಂಗ್ರೆಸ್ ಅವಮಾನ: ಶಾ: ಪುಲ್ವಾಮಾ ದಾಳಿಯ ಅನಂತರ ಐಎಎಫ್ ನಡೆಸಿದ ಪ್ರತಿ ದಾಳಿಯನ್ನು ಟೀಕಿಸಿದ ರಾಹುಲ್ ಗಾಂಧಿ ಪರಮಾಪ್ತ ಸ್ಯಾಮ್ ಪಿತ್ರೋಡಾರ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ. ಹೊಸದಿಲ್ಲಿಯಲ್ಲಿ ಶನಿವಾರ ಮಾತನಾಡಿದ ಅವರು, ವಿಪಕ್ಷ ಹುತಾತ್ಮ ಯೋಧರಿಗೆ ಅವಮಾನ ಮಾಡಿದೆ. ಜತೆಗೆ ರಾಷ್ಟ್ರೀಯ ಭದ್ರತೆ ಮೇಲೆ ಪ್ರಶ್ನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಸ್ಯಾಮ್ ಪಿತ್ರೋಡಾ ಹೇಳಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು. ವಿಪಕ್ಷಗಳು ತುಷ್ಟೀಕರಣ ರಾಜಕೀಯ ಮತ್ತು ಮತ ಬ್ಯಾಂಕ್ ಬಗ್ಗೆ ಮಾತ್ರ ಯೋಚಿಸುತ್ತವೆ ಎಂದು ಆರೋಪಿಸಿದ್ದಾರೆ.
ಮೋದಿ ಪ್ರಶ್ನಿಸಲೆಂದು 1500 ಕಿ.ಮೀ. ನಡೆದಾತ ಈಗ ಕಾಂಗ್ರೆಸ್ ಅಭ್ಯರ್ಥಿ!
ಒಡಿಶಾದ ಮುಕ್ತಿಕಾಂತ ಲಾಲ್ ಎಂಬ ಈ ವ್ಯಕ್ತಿ ಕಳೆದ ವರ್ಷ ಸುದ್ದಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಉದ್ದೇಶದೊಂದಿಗೆ ಕೈಯ್ಯಲ್ಲಿ ತ್ರಿವರ್ಣ ಧ್ವಜ ಹಿಡಿದು ತನ್ನೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು 71 ದಿನಗಳಲ್ಲಿ 1,500 ಕಿ.ಮೀ. ದೂರದವರೆಗೆ ಪ್ರಯಾಣಿಸಿದ್ದರು. ರೂರ್ಕೆಲಾದಲ್ಲಿನ ಇಸ್ಪಾತ್ ಸರಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿಸುವುದಾಗಿ ಮೋದಿ ಭರವಸೆ ನೀಡಿದ್ದು, ಅದನ್ನು ಅವರಿಗೆ ನೆನಪಿಸುವುದು ಇವರ ಉದ್ದೇಶವಾಗಿತ್ತು. ಆದರೆ, ಮಾರ್ಗಮಧ್ಯೆ ಸುಸ್ತಾಗಿ ಕುಸಿದುಬಿದ್ದ ಅವರನ್ನು ಆಗ್ರಾದ ಆಸ್ಪತ್ರೆಯೊಂದರಲ್ಲಿ ಉಪಚರಿಸಿ ಮನೆಗೆ ಕಳುಹಿಸಲಾಗಿತ್ತು.
ಹೀಗೆ ಮೋದಿ ಭೇಟಿಗೆ ಹಂಬಲಿಸಿದ್ದ ವ್ಯಕ್ತಿ ಈಗ ಕಾಂಗ್ರೆಸ್‌ನ ಚುನಾವಣ ಅಭ್ಯರ್ಥಿ! ಒಡಿಶಾ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಇವರು ರೂರ್ಕೆಲಾದಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಂಥ ಒಂದೆರಡು ಅಚ್ಚರಿಗಳಿವೆ. ಮುಕ್ತಿಕಾಂತ ಮಾತ್ರವಲ್ಲ, ಸದ್ಯಕ್ಕೆ ಜೈಲಿನಲ್ಲಿರುವ ಮಾವೋವಾದಿ ಸಬಸಾಚಿ ಪಾಂಡಾ ಅವರ ಪತ್ನಿ ಸುಭಶ್ರೀ ಪಾಂಡಾ (ರಾನ್ಪುರ), ಮಾಜಿ ಮಾವೋವಾದಿ ದಂಡಪಾಣಿ ಮೊಹಾಂತಿ ಪುತ್ರ ಸಂಗ್ರಾಮ್ ಮೊಹಾಂತಿ (ಸುರುಡಾ ಕ್ಷೇತ್ರ) ಅವರಿಗೂ ಟಿಕೆಟ್ ನೀಡಲಾಗಿದೆ.
ಮೋದಿ, ದೀದಿ ಇಬ್ಬರೂ ಸುಳ್ಳರು: ರಾಹುಲ್‌ಗಾಂಧಿ ಗುಡುಗು
ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಇವರಿಬ್ಬರ ಕಾರ್ಯನಿರ್ವಹಣ ಶೈಲಿ ಒಂದೇ ಆಗಿದೆ. ಇಬ್ಬರದ್ದು ಕೂಡ ಭಾಷಣಗಳಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡುವುದರಲ್ಲಿ ಎತ್ತಿದ ಕೈ.’ ಹೀಗೆಂದು ಆರೋಪಿಸಿರುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಪ್ರತಿ ಬಾರಿ ಭಾಷಣದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸುವ ರಾಹುಲ್, ಶನಿವಾರ ಒಂದು ಹೆಜ್ಜೆ ಮುಂದೆ ಹೋಗಿ, ಪಶ್ಚಿಮ ಬಂಗಾಲದ ನೆಲದಲ್ಲೇ ನಿಂತು ದೀದಿ ವಿರುದ್ಧ ಗುಡುಗಿದ್ದಾರೆ. ಮಾಲ್ಡಾದಲ್ಲಿ ಮೊದಲ ಬಾರಿಗೆ ರ್ಯಾಲಿ ನಡೆಸಿ ಮಾತನಾಡಿದ ರಾಹುಲ್, “ಮೋದಿ ಮತ್ತು ದೀದಿ ಯಾರನ್ನೂ ಸಂಪರ್ಕಿಸದದೇ ಆಡಳಿತ ನಡೆಸುತ್ತಾರೆ, ಜನರ ಧ್ವನಿಯನ್ನು ನಿರ್ಲಕ್ಷಿಸುತ್ತಾರೆ ಮತ್ತು ಸುಳ್ಳೇ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾರೆ’ ಎಂದು ಆರೋಪಿಸಿದ್ದಾರೆ. ಅಲ್ಲದೆ, ಬಂಗಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ನೀವು ಯಾರೂ ಹೆದರಬೇಕಾಗಿಲ್ಲ. ಕೇಂದ್ರದಲ್ಲಿ ನಾವು ಅಧಿಕಾರ ಹಿಡಿಯುತ್ತೇವೆ. ನಂತರ ನಾವೇನು ಮಾಡುತ್ತೇವೆಂದು ನೋಡುತ್ತಿರಿ ಎಂದಿದ್ದಾರೆ.
ಮೋದಿ ಭ್ರಷ್ಟರ ಚೌಕಿದಾರ: ಪಶ್ಚಿಮ ಬಂಗಾಲ ಹಾಗೂ ಬಿಹಾರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿರುವ ರಾಹುಲ್, ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಲು ಮರೆಯಲಿಲ್ಲ. ಮೋದಿ ಆರಂಭಿಸಿರುವ ಚೌಕಿದಾರ ಅಭಿಯಾನದ ಬಗ್ಗೆ ಲೇವಡಿ ಮಾಡಿರುವ ಅವರು, “ಬಡವರ ಮನೆಗೆ ಎಲ್ಲಾದರೂ ಚೌಕಿದಾರ(ಕಾವಲುಗಾರ) ಇರುವುದನ್ನು ನೋಡಿದ್ದೀರಾ? ಖಂಡಿತಾ ಇಲ್ಲ. ಕಾವಲುಗಾರ ಇರುವುದು ಶ್ರೀಮಂತರ ಮನೆಗೆ. ಅಂತೆಯೇ ಮೋದಿ ಅವರು ಭ್ರಷ್ಟರ ಹಾಗೂ ಶ್ರೀಮಂತ ಉದ್ಯಮಿಗಳ ಚೌಕಿದಾರ’ ಎಂದು ಆರೋಪಿಸಿದ್ದಾರೆ.
ರಾಹುಲ್ ಆದಾಯ 55 ಲಕ್ಷದಿಂದ 9 ಕೋಟಿಗೆ ಏರಿಕೆ!
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಆದಾಯ 2004 ರಿಂದ 2014ರ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗಿದೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ. ಮೂಲವೇ ಇಲ್ಲದೆ ಆದಾಯ ಈ ಅವಧಿಯಲ್ಲಿ ಏರಿಕೆ ಯಾಗಿದೆ. 2004ರಲ್ಲಿ ಇವರ ಆದಾಯ 55 ಲಕ್ಷ ರೂ. ಇತ್ತು. 2014ಕ್ಕೆ ಇದು 9 ಕೋಟಿ ರೂ. ಆಗಿದೆ. ಇದು ಅವರ ಚುನಾವಣೆ ಅಫಿಡವಿಟ್‌ನಲ್ಲೇ ದಾಖಲಾಗಿದೆ. ಓರ್ವ ಸಾಮಾನ್ಯ ಸಂಸದನ ಆದಾಯ ಈ ಮಟ್ಟದಲ್ಲಿ ಏರಿಕೆ ಯಾಗಲು ಹೇಗೆ ಸಾಧ್ಯ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ರಾಹುಲ್ ತಮ್ಮ ಆದಾಯವನ್ನು 2009ರಲ್ಲಿ 2 ಕೋಟಿ ರೂ. ಎಂದು ಚುನಾವಣೆ ಅಫಿದವಿತ್‌ನಲ್ಲಿ ತೋರಿಸಿ ದರು. ಆದಾಯದ ಮೂಲವೇ ಇಲ್ಲದೆ ಈ ರೀತಿ ಏರಿಕೆಯಾಗಿದ್ದರ ಹಿಂದಿನ ಕಾರಣವನ್ನು ರಾಹುಲ್ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಧಾನಿ ಮೋದಿಗೆ ತಮಿಳು ನಾಡಿನ 111 ರೈತರ ಸಡ್ಡು!
ತಮ್ಮ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ದಿಲ್ಲಿಯವರೆಗೂ ಹೋಗಿ ಪ್ರತಿಭಟನೆ ನಡೆ ಸಿದ್ದ ತಮಿಳುನಾಡಿನ ರೈತರು, ಹೊಸ ರೀತಿಯ ಪ್ರತಿ ಭಟನೆಗೆ ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿ ಸ ಲಿರುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ತಮಿಳುನಾಡಿನ 111 ರೈತರು ಸ್ಪರ್ಧಿಸಲು ನಿರ್ಧರಿಸಿದ್ದು, ಸದ್ಯದಲ್ಲೇ ನಾಮಪತ್ರ ಸಲ್ಲಿಸಲು ಸಜ್ಜಾಗುತ್ತಿದ್ದಾರೆ. ತಿರುಚನಾ ಹಳ್ಳಿಯಲ್ಲಿ ರೈತ ನಾಯಕ ಹಾಗೂ “ದಕ್ಷಿಣ ಭಾರತೀಯ ನದಿ ಜೋಡಣೆ ಯೋಜನೆಯ ಪ್ರಾಂತ್ಯ ಗಳ ರೈತರ ಅಧ್ಯಕ್ಷ ಪಿ. ಅಯ್ಯಕಣ್ಣು ಈ ವಿಚಾರ ತಿಳಿಸಿದ್ದಾರೆ. ತಮಿಳುನಾಡು ರೈತರ ಬೇಡಿಕೆಗಳನ್ನು ಈಡೇರಿಸುವುದು ಹಾಗೂ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿ ಸುವುದನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಯಲ್ಲಿ ಸೇರ್ಪಡೆಗೊಳಿಸಬೇಕೆಂಬ ಆಗ್ರಹದೊಂದಿಗೆ ವಾರಾಣಸಿ ಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲು ರೈತರು ತೀರ್ಮಾ ನಿಸಿದ್ದಾರೆ. ಒಂದು ವೇಳೆ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆ ಗಳನ್ನು ಸೇರಿಸಿದರೆ, ನಾಮಪತ್ರ ಸಲ್ಲಿಸುವ ನಿರ್ಧಾರ ವಾಪಸ್ ಪಡೆಯುತ್ತೇವೆ ಎಂದೂ ಹೇಳಿದ್ದಾರೆ.
ಶತ್ರುಘ್ನಗೆ ಕೊಕ್; ಪ್ರಸಾದ್‌ಗೆ ಟಿಕೆಟ್
ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಎನ್‌ಡಿಎ ಮೈತ್ರಿಕೂಟ ಪ್ರಕಟಿಸಿದೆ. ಬಿಜೆಪಿಯಲ್ಲಿದ್ದುಕೊಂಡೇ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದುಕೊಂಡು ಬಂದಿರುವ ಸಂಸದ ಶತ್ರುಘ್ನ ಸಿನ್ಹಾ ಪ್ರತಿನಿಧಿಸುತ್ತಿರುವ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಈ ಬಾರಿ ಅವರಿಗೆ ಟಿಕೆಟ್ ನೀಡಿಲ್ಲ. ಅವರ ಬದಲಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ರನ್ನು ಇಲ್ಲಿ ಕಣಕ್ಕಿಳಿಸಲಾಗಿದೆ. ಇದೇ ವೇಳೆ, ಸಿನ್ಹಾ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡು, ಇದೇ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಉಮಾಗೆ ಉಪಾಧ್ಯಕ್ಷ ಸ್ಥಾನ: ಇದೇ ವೇಳೆ, ಚುನಾವಣಾ ರಾಜಕೀಯಕ್ಕೆ ಕಳೆದ ವರ್ಷವೇ ನಿವೃತ್ತಿ ಘೋಷಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಿ ಬಿಜೆಪಿ ಶನಿವಾರ ಘೋಷಿಸಿದೆ.
ರಾಜ್‌ಬಬ್ಬರ್‌ಗೆ ಫತೇಪುರ ಸಿಕ್ರಿ, ದಿಗ್ವಿಜಯ್ ಸಿಂಗ್‌ಗೆ ಭೋಪಾಲ್ ಟಿಕೆಟ್
ಉತ್ತರಪ್ರದೇಶದಲ್ಲಿ ರಾಜ್ಯಾಧ್ಯಕ್ಷ ರಾಜ್‌ಬಬ್ಬರ್‌ಗೆ ಈ ಹಿಂದೆ ನೀಡಲಾಗಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಬದಲಿಸಿದ್ದು, ಮೊರಾದಾಬಾದ್ ಬದಲಿಗೆ ಫತೇಪುರ ಸಿಕ್ರಿಯ ಟಿಕೆಟ್ ನೀಡಿದೆ. ಮೊರಾದಾಬಾದ್‌ನಲ್ಲಿ ಇಮ್ರಾನ್ ಪ್ರತಾಪ್‌ಗ್ರಿಯಾ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಬಿಜೆಪಿ ಹಾಲಿ ಸಂಸದ ಕುನ್ವರ್ ಸರ್ವೇಶ್ ಕುಮಾರ್‌ಗೆ ಟಿಕೆಟ್ ನೀಡಿರುವ ಕಾರಣ, ರಾಜ್‌ಬಬ್ಬರ್ ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಈ ನಡುವೆ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ 3 ದಶಕ ಗಳಿಂದಲೂ ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಭೋಪಾಲ್‌ನಲ್ಲಿ ಅವರು ಸ್ಪರ್ಧಿಸಲಿದ್ದಾರೆ. ದಿಗ್ವಿಜಯ್ ಸ್ಪರ್ಧಿಸುವುದಿದ್ದರೆ ಕಠಿಣ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಇತ್ತೀಚೆಗೆ ಸಿಎಂ ಕಮಲ್‌ನಾಥ್ ಆಗ್ರಹಿಸಿದ್ದರು.
ಮೋದಿಗಾಗಿ ಮಹಿಳೆಯರಿಂದ ಯಜ್ಞ
ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಭಾರೀ ಬೆಂಬಲದೊಂದಿಗೆ ಮತ್ತೆ ಪ್ರಧಾನಿ ಯಾಗ ಬೇಕೆಂದು ಆಶಿಸಿ ಗುಜರಾತ್‌ನ ಮಹಿಳೆಯರ ಗುಂಪು ಶನಿ ದೇವರ ಯಜ್ಞ ನೆರವೇರಿಸಿ¨ªಾರೆ. 500ಕ್ಕೂ ಹೆಚ್ಚು ಮಹಿಳೆಯರ ಸಮೂಹ ಕಾಪೋದರದ ತಪಿ ನದಿ ತೀರದಲ್ಲಿರುವ ಸಿದ್ಧ ಕುಟೀರದಲ್ಲಿ ಶನಿವಾರ ಮೊದಲ ದಿನದ “108 ಶನಿ ಮಹಾಯಜ್ಞ ನಡೆಸಿದ್ದಾರೆ. ಎರಡು ದಿನ ನಡೆಯುವ ಈ ಯಜ್ಞವನ್ನು ನರೇಂದ್ರ ಮೋದಿ ವಿಚಾರ ಮಂಚ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ರಾವಲ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಟಿಎಂಸಿಯಲ್ಲೀಗ “ಕಾಂಗ್ರೆಸ್’ ಇಲ್ಲ!
ಕಾಂಗ್ರೆಸ್‌ನಿಂದ ಅಧಿಕೃತವಾಗಿ ಪ್ರತ್ಯೇಕಗೊಂಡು ತೃಣಮೂಲ ಕಾಂಗ್ರೆಸ್(ಟಿಎಂಸಿ) ಸ್ಥಾಪಿಸಿ 21 ವರ್ಷಗಳು ಕಳೆದ ಬಳಿಕ ಇದೀಗ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಚಿಹ್ನೆಯಲ್ಲಿ “ಕಾಂಗ್ರೆಸ್’ ಪದವನ್ನು ಕೈಬಿಟ್ಟಿದ್ದಾರೆ. ಪಕ್ಷದ ಚಿಹ್ನೆಯಲ್ಲಿ ಈಗ ಕೇವಲ “ತೃಣಮೂಲ್’ ಎಂದು ಬರೆಯಲಾಗಿದೆ. ಟಿಎಂಸಿಯನ್ನು 21 ವರ್ಷಗಳ ಬಳಿಕ ತೃಣಮೂಲ ಎಂದು ಕರೆಯಲಾಗಿದೆ. ಆದರೆ ಚುನಾವಣೆ ಆಯೋಗಕ್ಕೆ ಪಕ್ಷದ ಹೆಸರನ್ನು ದಾಖಲಿಸುವ ವೇಳೆ ತೃಣಮೂಲ ಕಾಂಗ್ರೆಸ್ ಎಂದೇ ದಾಖಲಿಸಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. 1998ರಲ್ಲಿ ಮಮತಾ ಕಾಂಗ್ರೆಸ್ ತೊರೆದಿದ್ದರು.
ಸುರೇಂದ್ರನ್‌ಗೆ ಪಟ್ಟಣಂತಿಟ್ಟ ಟಿಕೆಟ್
ಶಬರಿಮಲೆ ಅಯ್ಯಪ್ಪ ದೇಗುಲವಿರುವಂಥ ಕೇರಳದ ಪಟ್ಟಣಂತಿಟ್ಟ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಕಳೆದ ಗುರುವಾರ ಕೇರಳದ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದ ಬಿಜೆಪಿ, ಈ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿರಲಿಲ್ಲ. ಶನಿವಾರ ಸುರೇಂದ್ರನ್ ಹೆಸರನ್ನು ಘೋಷಿಸಲಾಗಿದೆ.
ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವುದಾಗಿ ಹೇಳಿಕೊಂಡಿರುವ ಎಸ್‌ಪಿ ಮತ್ತು ಬಿಎಸ್ಪಿ ಎರಡೂ ಪಕ್ಷಗಳಿಗೆ ಸ್ವಹಿತಾಸಕ್ತಿಯಷ್ಟೇ ಮುಖ್ಯ. ಅಲ್ಪಸಂಖ್ಯಾತರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ಉತ್ತರಪ್ರದೇಶದ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ನೋಡೋಣ.
ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.