ಇತ್ತಂಡಗಳಿಗೂ ಬಾಳಾ ಬೇಕು: ಬಾಳಾ ಠಾಕ್ರೆ ಉತ್ತರಾಧಿಕಾರಿತ್ವಕ್ಕೆ ಇಬ್ಬಣಗಳ ಗುದ್ದಾಟ
ಭಿನ್ನ ಸಚಿವರನ್ನು ಕೈಬಿಡಲು ಶಿವಸೇನೆ ಸಭೆಯಲ್ಲಿ ನಿರ್ಧಾರ
Team Udayavani, Jun 26, 2022, 7:20 AM IST
ಮುಂಬಯಿ/ಗುವಾಹಟಿ: ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರಕಾರ ಪತನಗೊಳ್ಳಲಿರುವುದರ ಜತೆಗೆ ಶಿವಸೇನೆ ಕೂಡ ಎರಡು ಹೋಳಾಗುವುದು ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಎರಡೂ ಕಡೆಯವರು ತಾವೇ ಬಾಳಾ ಠಾಕ್ರೆಯವರ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಏಕನಾಥ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಗುಂಪಿಗೆ “ಶಿವಸೇನೆ ಬಾಳಾ ಸಾಹೇಬ್’ ಎಂದು ಹೆಸರು ಇರಿಸಿ ಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನು ಇನ್ನು ಯಾವುದೇ ಪಕ್ಷ ಬಳಕೆ ಮಾಡಬಾರದೆಂದು ತಾಕೀತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.
ಶಿವಸೇನೆ ಎನ್ನುವುದು ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಮೀಸಲಾಗಿ ಇರು ವಂಥದ್ದು. ನಮ್ಮ ಪಕ್ಷ ಅವರು ಹಾಕಿಕೊಟ್ಟ ಕಠೊರ ಹಿಂದುತ್ವದ ದಾರಿಯಲ್ಲಿಯೇ ಮುನ್ನಡೆಯಲಿದೆ. ಜತೆಗೆ ಮರಾಠಿಗರ ಆತ್ಮಾಭಿಮಾನ ರಕ್ಷಣೆಯಲ್ಲಿ ಮುಂದುವರಿಯಲಿದೆ ಎಂದು ಸಭೆಯ ಬಳಿಕ ಪಕ್ಷದ ಸಂಸದ ಸಂಜಯ ರಾವತ್ ಹೇಳಿದ್ದಾರೆ.
ಇನ್ನೊಂದೆಡೆ ಮುಂಬಯಿಯಲ್ಲಿ ನಡೆದ ಶಿವಸೇನೆಯ ರಾಷ್ಟ್ರೀಯ ಕಾರ್ಯ ಕಾರಿಣಿಯಲ್ಲಿ ಭಿನ್ನಮತೀಯ ಶಾಸಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಲ್ಲ ಅಧಿಕಾರವನ್ನೂ ಸಿಎಂ ಉದ್ಧವ್ ಠಾಕ್ರೆ ಅವರಿಗೆ ನೀಡಲಾಗಿದೆ. ಏಕನಾಥ ಶಿಂಧೆ ಜತೆಗೆ ಗುರುತಿಸಿಕೊಂಡಿರುವ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ಚಿಂತನೆ ನಡೆದಿದೆ.
ಭಿನ್ನಮತೀಯ ಶಾಸಕರಿಗೆ ನೀಡಲಾಗಿ ರುವ ಭದ್ರತೆಯನ್ನು ವಾಪಸ್ ಪಡೆದಿರು ವುದು ವಿವಾದಕ್ಕೆ ಕಾರಣವಾಗಿದೆ. ಕೆಲವು ಶಾಸಕರ ಕಚೇರಿಗೆ ನುಗ್ಗಿ ದಾಂಧಲೆಯನ್ನೂ ನಡೆಸಲಾಗಿದೆ.
ದಾಂಧಲೆ
ಶಿವಸೇನೆಯ ಕಾರ್ಯಕರ್ತರು ಬಂಡಾಯ ಶಾಸಕರಲ್ಲಿ ಒಬ್ಬರಾಗಿರುವ ತಾನಾಜಿ ಸಾವಂತ್ ಅವರಿಗೆ ಸೇರಿದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಕಲ್ಯಾಣ್ ಕ್ಷೇತ್ರದ ಸಂಸದ ಮತ್ತು ಏಕನಾಥ ಶಿಂಧೆಯವರ ಪುತ್ರ ಡಾ| ಶ್ರೀಕಾಂತ ಶಿಂಧೆ ಅವರ ಕಚೇರಿಗಳಿಗೆ ನುಗ್ಗಿ ವಸ್ತುಗಳನ್ನೆಲ್ಲ ಧ್ವಂಸ ಮಾಡಲಾಗಿದೆ. ಪುಣೆ, ನಾಶಿಕ್, ಕೊಲ್ಹಾಪುರ, ಪರ್ಬನಿಗಳಲ್ಲಿಯೂ ಇಂಥ ಘಟನೆಗಳು ನಡೆದಿವೆ. ಅದಕ್ಕೆ ಪೂರಕವಾಗಿ ಭಿನ್ನಮತೀಯ ಶಾಸಕರಿಗೆ ನೀಡಲಾಗಿರುವ ಭದ್ರತೆಯನ್ನು ಸರಕಾರ ವಾಪಸ್ ಪಡೆದಿದೆ ಎಂದು ಸಚಿವ ಏಕನಾಥ ಶಿಂಧೆ ದೂರಿದ್ದಾರೆ. ಆದರೆ ರಾಜ್ಯ ಸರಕಾರ ಈ ಆರೋಪವನ್ನು ತಿರಸ್ಕರಿಸಿದೆ.
ಪಕ್ಷ ತ್ಯಜಿಸಿಲ್ಲ
ಭಿನ್ನಮತೀಯ ಶಾಸಕರು ಶಿವಸೇನೆ ಯನ್ನೇನೂ ತ್ಯಜಿಸಿಲ್ಲ. ನಮ್ಮ ಸಿಟ್ಟು ಏನಿದ್ದರೂ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿಯ ವಿರುದ್ಧ ಮಾತ್ರ ಎಂದು ಶಿಂಧೆ ಬಣದ ವಕ್ತಾರ ಶಾಸಕ ದೀಪಕ್ ಕೇಸ್ಕರ್ ಹೇಳಿದ್ದಾರೆ. “ನಮ್ಮ ಗುಂಪಿಗೇ ಮೂರನೇ ಎರಡರಷ್ಟು ಬಹುಮತ ಇದೆ. ಹೀಗಾಗಿ ನಮ್ಮ ಗುಂಪು ನಿಜವಾದ ಶಿವಸೇನೆ’ ಎಂದು ಅವರು ಹೇಳಿದ್ದಾರೆ. ಮುಂಬಯಿಗೆ ಬರುವುದು ಸುರಕ್ಷಿತವಲ್ಲ ಎಂಬ ಕಾರಣ ಕ್ಕಾಗಿ ಗುವಾಹಾಟಿಯಲ್ಲಿದ್ದೇವೆ. ವಿಧಾನಸಭೆ ಯಲ್ಲಿ ನಮ್ಮ ಬಣ ಬಹುಮತ ಸಾಬೀತು ಮಾಡಲಿದೆ ಎಂದು ಕೇಸ್ಕರ್ ಹೇಳಿದ್ದಾರೆ.
16 ಶಾಸಕರಿಗೆ ನೋಟಿಸ್
ಸಚಿವ ಏಕನಾಥ ಶಿಂಧೆಯವರ ಜತೆಗೆ ಇರುವ 52 ಶಾಸಕರ ಪೈಕಿ 16 ಮಂದಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸಭಾಧ್ಯಕ್ಷ ನರಹರಿ ಝಿರ್ವಾಡಿ ನೋಟಿಸ್ ನೀಡಿದ್ದಾರೆ. ಅವರನ್ನು ಅನರ್ಹ ಗೊಳಿಸಬೇಕು ಎಂದು ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಅವಿಶ್ವಾಸ ಪ್ರಸ್ತಾವ ತಿರಸ್ಕೃತ
ಇನ್ನೊಂದೆಡೆ ಭಿನ್ನಮತೀಯ ನಾಯಕ ಶಿಂಧೆ ಬಣದ ಶಾಸಕರು ಉಪ ಸಭಾಧ್ಯಕ್ಷ ನರಹರಿ ಝಿರ್ವಾಡಿ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ಪ್ರಸ್ತಾವ ತಿರಸ್ಕೃತಗೊಂಡಿದೆ.
ಗುಜರಾತ್‌ನಲ್ಲಿ ಬಿಜೆಪಿ ನಾಯಕರ ಭೇಟಿ?
ಭಿನ್ನಮತೀಯರ ನಾಯಕ ಏಕನಾಥ ಶಿಂಧೆ ಗುರುವಾರ ರಾತ್ರಿ ವಡೋದರಾಕ್ಕೆ ಭೇಟಿ ನೀಡಿದ್ದಾರೆ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗುವಾಹಾಟಿಯಿಂದ ವಿಶೇಷ ವಿಮಾನದಲ್ಲಿ ಅವರು ಆಗಮಿಸಿದ್ದರು ಎನ್ನಲಾಗಿದೆ. ಮಾತುಕತೆ ವೇಳೆ ಇಬ್ಬರು ನಾಯಕರು ಸರಕಾರ ರಚನೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಬಗ್ಗೆ ಕೆಲವು ಸುದ್ದಿವಾಹಿನಿಗಳು ವರದಿ ಮಾಡಿವೆ.
ಬಾಳಾ ಸಾಹೇಬ್ ಠಾಕ್ರೆ ಮತ್ತು ಶಿವಸೇನೆ ಒಂದೇ ನಾಣ್ಯದ ಎರಡು ಮುಖಗಳು. ಶಿವಸೇನೆ ವಿನಾ ಮತ್ತೆ ಯಾರಿಗೂ ಆ ಹೆಸರು ಬಳಕೆ ಮಾಡುವ ಅವಕಾಶ ಇಲ್ಲ.
-ಸಂಜಯ ರಾವತ್, ಶಿವಸೇನೆ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.