ಗಣರಾಜ್ಯೋತ್ಸವ ಪರೇಡ್: ನೌಕಾಪಡೆ ತಂಡಕ್ಕೆ ಮಂಗಳೂರಿನ ದಿಶಾ ಅಮೃತ್ ನೇತೃತ್ವ
ಈಗ ನಾನು ನೌಕಾಪಡೆ ಸೇರಿರುವುದಕ್ಕೆ ಹೆಮ್ಮೆಯಾಗುತ್ತಿದೆ
Team Udayavani, Jan 21, 2023, 9:21 AM IST
ಮಂಗಳೂರು/ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸುವರು.
ಈ ತುಕಡಿಯಲ್ಲಿ ನೌಕಾಪಡೆಯ 144 ಯುವ ಯೋಧರು ಮತ್ತು “ನಾರಿಶಕ್ತಿ’ ಸ್ತಬ್ಧಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರರು ಭಾಗಿಯಾ ಗುವರು. ಅಮೃತಾ ಅವರ ಜತೆಗೆ ಸಬ್ ಲೆ| ವಲ್ಲಿ ಮೀನಾ ಎಸ್. ಸಹ ಇರುವರು.
ಮಂಗಳೂರು ಮೂಲದವರಾದ ದಿಶಾ ಅವರು, 2016ರಲ್ಲಿ ನೌಕಾ ಪಡೆ ಸೇರಿದ್ದರು. ತರಬೇತಿ ಮುಗಿದ ಬಳಿಕ 2017ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸ ಲಾಗಿತ್ತು. ನಾನು ಡಾರ್ನಿಯರ್ ಏರ್ ಕ್ರಾಫ್ಟ್ ಅನ್ನು ಚಲಾಯಿಸುತ್ತಿದ್ದೆ. ಕೆಲವು ಮಿಷನ್ ಗಳ ಲ್ಲಿಯೂ ಭಾಗಿಯಾಗಿದ್ದೇನೆ ಎಂದು ದಿಶಾ ಅವರು ಹೇಳಿಕೊಂಡಿದ್ದಾರೆ.
ನಾನು ಚಿಕ್ಕವಳಿದ್ದಾಗಿನಿಂದಲೂ ಸೇನೆಗೆ ಸೇರಬೇಕು ಎಂದುಕೊಂಡಿದ್ದೆ. ಇದಕ್ಕೆ ನನ್ನ ಪೋಷ ಕರೇ ಸ್ಫೂರ್ತಿ. ನನ್ನ ತಂದೆ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದರು. ಆದರೆ ಕನಸು ಈಡೇರಿರಲಿಲ್ಲ. ಈಗ ನಾನು ನೌಕಾಪಡೆ ಸೇರಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ದಿಶಾ ಅಮೃತ್.
ನಾರಿ ಶಕ್ತಿ ಪ್ರದರ್ಶನ
ಪರೇಡ್ ನಲ್ಲಿ ನೌಕಾಪಡೆಯ ಯುವ ನಾರಿ ಶಕ್ತಿ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಿದೆ. ಡಾರ್ನಿ ಯರ್ ಯುದ್ಧ ವಿಮಾನದ ಪ್ರತಿಕೃತಿಯೂ ಇರಲಿದ್ದು, ಮಹಿಳೆಯರ ಸಾಧನೆಯನ್ನು ಪ್ರದರ್ಶಿಸಲಾಗುವುದು. ಜತೆಗೆ 80 ಮಂದಿ ಸಂಗೀತಗಾರರು ಆ್ಯಂಥೋಣಿ ರಾಜ್ ನೇತೃತ್ವದಲ್ಲಿ, ನೌಕಾಪಡೆಯ ಗೀತೆ ಜೈ ಭಾರತಿಯನ್ನು ನುಡಿಸುವರು.
ದಿಶಾ ಅಮೃತ್ ಕರಾವಳಿಯ ಕುವರಿ
ದಿಶಾ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ. ಅವರಿಗೆ ನೌಕಾ ಪಡೆಯ ಅಧಿಕಾರಿಯಾಗಬೇಕು ಎಂಬ ಆಸೆ ಬಾಲ್ಯದಲ್ಲೇ ಇತ್ತು. ದಿಶಾ ಅವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಕಲಿತರು. ನೌಕಾಪಡೆ ಸೇರಬೇಕೆಂಬ ಹಂಬಲ ಈಡೇರಿಸಿಕೊಳ್ಳಲು ಹೈಸ್ಕೂಲ್ ನಲ್ಲಿದ್ದಾಗಲೇ ಎನ್‌ಸಿಸಿ ಗೆ ಸೇರಿದ್ದರು. ಆಗ ಕೆನರಾ ಕಾಲೇಜಿನಲ್ಲಿ ಎನ್‌ಸಿಸಿ ಇರಲಿಲ್ಲವಾದ ಕಾರಣ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿಯುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೇ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. ಸದ್ಯ ನೌಕಾಪಡೆಯಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಮ್ಮ ಆಸೆ ಮಗಳು ಈಡೇರಿಸಿದಳು
ದಿಶಾ ಅವರ ತಂದೆ ಅಮೃತ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಮಗಳು ದಿಶಾ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನೌಕಾ ಪಡೆಯ ತುಕಡಿ ಮುನ್ನಡೆಸಲು ಆಯ್ಕೆಯಾದದ್ದು ಸಂತಸ ತಂದಿದೆ. ನೌಕಾಪಡೆಯ ಬಗ್ಗೆ ನನಗೆ ಮತ್ತು ಪತ್ನಿಗೆ ವಿಶೇಷ ಆಸಕ್ತಿ ಇದೆ. ಆದರೆ ಆ ಕಾಲದಲ್ಲಿ ನಮಗೆ ಸಾಧ್ಯವಾಗಲಿಲ್ಲ. ಈಗ ನಮ್ಮ ಆಸೆಯನ್ನು ಮಗಳು ಈಡೇರಿಸಿದ್ದಾಳೆ ಎಂಬುದೇ ಸಂತಸದ ಸಂಗತಿ’ ಎಂದಿದ್ದಾರೆ.
2008ರಿಂದಲೂ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಬೇಕು ಎಂಬ ಕನಸು ಹೊತ್ತಿದ್ದೆ. ಈಗ ಭಾರತೀಯ ನೌಕಾಪಡೆಯು ನನಗೆ ಆ ಅವಕಾಶ ಕಲ್ಪಿಸಿದೆ.
-ಲೆ|ಕ| ದಿಶಾ ಅಮೃತ್, ನೌಕಾಪಡೆ ಅಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.