ಐಕಿಯಾದಿಂದ ಸಹಸ್ರ ಕೋಟಿ ಹೂಡಿಕೆ
Team Udayavani, Oct 9, 2018, 11:38 AM IST
ಹೈದರಾಬಾದ್: ಪೀಠೊಪಕರಣ, ಒಳಾಂಗಣ ವಿನ್ಯಾಸ ಕ್ಷೇತ್ರವನ್ನು ಕೇಂದ್ರವನ್ನಾಗಿಸಿಕೊಂಡು ಭಾರತೀಯ ಮಾರುಕಟ್ಟೆ ಪ್ರವೇಶ ಮಾಡಿರುವ ಸ್ವೀಡನ್ ಮೂಲದ ಐಕಿಯಾ ಕಂಪನಿ, ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ ಕಾರ್ಯರಂಭ ಮಾಡಲಿದೆ. ಈಗಾಗಲೇ ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿ ಮಳಿಗೆ ಸ್ಥಾಪಿಸಿ ಯಶಸ್ಸು ಕಂಡಿರುವ ಸಂಸ್ಥೆ, ಇದೀಗ ಬೆಂಗಳೂರಿನಲ್ಲಿ 1 ಸಾವಿರ ಕೋಟಿ ರೂ.ಬಂಡವಾಳ ಹೂಡಲು ಮುಂದಾಗಿದೆ.
ಈ ಉದ್ದೇಶಕ್ಕಾಗಿಯೇ ಐಕಿಯಾ ಈಗಾಗಲೇ, ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ತುಮಕೂರು ರಸ್ತೆಯ ನಾಗಸಂದ್ರದ ಬಳಿ 14 ಎಕೆರೆ ಜಾಗವನ್ನು ಖರೀದಿಸಿದ್ದು, ಇದರಲ್ಲಿ 4 ಎಕರೆ ಪ್ರದೇಶದಲ್ಲಿ ಬೃಹತ್ ಮಳಿಗೆ ತೆರೆಯಲಿದೆ. ಸುಮಾರು 700 ಮಂದಿಗೆ ನೇರವಾಗಿ ಮತ್ತು 800 ಮಂದಿಗೆ ಪರೋಕ್ಷವಾಗಿ ಉದ್ಯೋಗ ನೀಡುವುದು ಕಂಪನಿಯ ಮುಖ್ಯ ಗುರಿಯಾಗಿದೆ.
ಪ್ರಧಾನಿ ಕಲ್ಪನೆಗೆ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಂತೆ ಹಲವು ಉತ್ಪನ್ನಗಳು ಕರ್ನಾಟಕದಲ್ಲಿ ಸಿದ್ಧಗೊಳ್ಳಲಿದ್ದು, ಕೌಶಲ್ಯವುಳ್ಳ ಮರ ಕೆಲಸದವರಿಗೂ ಉದ್ಯೋಗ ದೊರೆಯಲಿದೆ. ಗ್ರಾಮೀಣ ಮಹಿಳೆಯರು ಉತ್ಪಾಧಿಸಿದ ಹತ್ತಿ ಉತ್ಪನ್ನಗಳು ಸೇರಿದಂತೆ ಇನ್ನಿತರ ಉತ್ಪನ್ನಗಳು ಐಕಿಯಾ ಮಳಿಗೆಯಲ್ಲಿ ಮಾರಾಟವಾಗಲಿವೆ.
ಪುಟ್ಟ ಮಕ್ಕಳ ಆಟಿಕೆ ಉತ್ಪನ್ನಗಳಿಂದ ಹಿಡಿದು, ಗೃಹ ಬಳಕೆ ವಸ್ತುಗಳವರೆಗೂ ಸುಮಾರು 7,500 ಬಗೆಯ ಉತ್ಪನ್ನಗಳು ಐಕಿಯಾ ಮಳಿಗೆಯಲ್ಲಿ ಕೈಗೆಟುಕುವ ದರದಲ್ಲಿ ದೊರೆಯಲಿವೆ. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಸ್ವದೇಶಿ ಉತ್ಪನ್ನಗಳಿರಲಿವೆ. ಗ್ರಾಹಕರಿಗೆ ರುಚಿಕರ ಆಹಾರ ಉಣಬಡಿಸಲು ರೆಸ್ಟೋರೆಂಟ್ ಕೂಡ ಇರಲಿದ್ದು, ಭಾರತ, ಸ್ವೀಡನ್ ಸೇರಿದಂತೆ ಹಲವು ದೇಶದ ಭೋಜನಗಳು ಅಲ್ಲಿ ದೊರೆಯಲಿವೆ.
ಹಣಕ್ಕೆ ತಕ್ಕಂತೆ ಖರೀದಿ: “ಪೈಸಾ ವಸೂಲ್’ ಪರಿಕಲ್ಪನೆಯಂತೆ ಐಕಿಯಾ ಮಳಿಗೆಯಲ್ಲಿ ಉತ್ಪನ್ನಗಳ ಮಾರಾಟ ಪ್ರಕ್ರಿಯೆ ನಡೆಯಲಿದ್ದು, ಹಣಕ್ಕೆ ತಕ್ಕಂತೆ ಖರೀದಿ ಇರಲಿದೆ. 15 ರೂ.ನಿಂದ ಲಕ್ಷಾಂತರ ರೂ.ವರೆಗಿನ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿವೆ ಎಂದು ಐಕಿಯಾ ಸಂಸ್ಥೆಯ ಡೆಪ್ಯೂಟಿ ಸಿಇಒ ಪ್ಯಾಟ್ರಿಕ್ ಅಂತೋನಿ ಹೇಳಿದರು.
2030ರ ವೇಳೆ ಭಾರತದ 49 ನಗರಗಳನ್ನು ತಲುಪಬೇಕೆಂಬ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ಕೆಲಸ ಸಾಗಿದೆ. 3 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಚನ್ನೈ, ಸೂರತ್, ಪುಣೆ, ಅಹ್ಮದಾಬಾದ್, ಕೋಲ್ಕತ್ತಾಗಳಲ್ಲಿ ಮಳಿಗೆ ಸ್ಥಾಪಿಸಿ ಸಾವಿರು ಮಂದಿ ಭಾರತೀಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು.
ಚೀನಾದಲ್ಲಿ 25 ಮತ್ತು ಸ್ವೀಡನ್‌ನಲ್ಲಿ 16 ಮಳಿಗೆಯನ್ನು ಹೊಂದಿರುವ ಐಕಿಯಾ, 2025ರ ವೇಳೆಗೆ ಭಾರತದಲ್ಲಿ ಐದು ಮಳಿಗೆಗಳನ್ನು ತೆರೆಯುವ ಗುರಿ ಹೊಂದಿದೆ. ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಆನ್‌ಲೈನ್ ಮಾರುಕಟ್ಟೆಗೂ ಆದ್ಯತೆ ನೀಡಲಾಗಿದೆ ಎಂದು ಸಂಸ್ಥೆಯ ತೆಲಂಗಾಣ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜಾನ್ ಆಕಿಲಿಯಾ ತಿಳಿಸಿದ್ದಾರೆ.
ಅ.11ರಂದು ಶಂಕುಸ್ಥಾಪನೆ: ತುಮಕೂರು ರಸ್ತೆ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದ ಸ್ಥಳದಲ್ಲಿ ಅ.11ರಂದು ಶಂಕು ಸ್ಥಾಪನೆ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸರ್ಕಾರದ ನಿವೃತ್ತ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ಯಾಟ್ರಿಕ್ ಅಂತೋನಿ ಹೇಳಿದ್ದಾರೆ.
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.