ಜಯಾಪಜಯ ಮಾತಿನ ಸಮರ
Team Udayavani, Nov 9, 2017, 6:00 AM IST
ನವದೆಹಲಿ: ನೋಟು ಅಮಾನ್ಯದ ವರ್ಷಾಚರಣೆಯೂ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಮಹಾ ಸಮರಕ್ಕೆ ಸಾಕ್ಷಿಯಾಯಿತು.
500 ಮತ್ತು 1000 ಮುಖಬೆಲೆಯ ನೋಟುಗಳ ಅಮಾನ್ಯ ಮಾಡಿ, ಕಪ್ಪುಹಣ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದರೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಇದೊಂದು ಕರಾಳದಿನ ಎಂದು ಬಣ್ಣಿಸಿದವು. ಹೀಗಾಗಿಯೇ ಬಿಜೆಪಿ ವಿಜಯೋತ್ಸವ ಆಚರಿಸಿದರೆ, ಪ್ರತಿಪಕ್ಷಗಳು ಕರಾಳ ದಿನ ಮಾಡಿದವು.
ಪ್ರತಿಪಕ್ಷಗಳ ಟೀಕೆಗೆ ಎದಿರೇಟು ಕೊಡುವ ಸಲುವಾಗಿಯೇ ಕೇಂದ್ರ ಸರ್ಕಾರದ ಹಿರಿಯ ಸಚಿವರೆಲ್ಲರನ್ನೂ ದೇಶದ ವಿವಿಧ ಭಾಗಗಳಿಗೆ ನಿಯೋಜಿಸಲಾಗಿತ್ತು. ಬುಧವಾರ ಬೆಳಗ್ಗೆಯೇ ನೋಟು ಅಮಾನ್ಯ ನಿರ್ಧಾರ ಸಮರ್ಥಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, “”ಕಪ್ಪುಹಣದ ವಿರುದ್ಧ ಸಾರಿರುವ ಅತ್ಯಂತ ದೊಡ್ಡ ಯುದ್ಧದಲ್ಲಿ ಭಾರತ ಗೆದ್ದಿದೆ” ಎಂದು ಸರಣಿ ಟ್ವೀಟ್ ಮಾಡಿದರು. ಅಷ್ಟೇ ಅಲ್ಲ, ಟ್ವೀಟ್ ಮೂಲಕವೇ ದೇಶವಾಸಿಗಳಿಗೆ ಕೃತಜ್ಞತೆ ಅರ್ಪಿಸಿದ ಅವರು, ನರೇಂದ್ರ ಮೋದಿ ಆ್ಯಪ್‌ನಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸಮೀಕ್ಷೆ ಇದೆ. ಅದರಲ್ಲಿ ಭಾಗವಹಿಸಿ ಎಂದರು.
ಕಳೆದ ವರ್ಷ ಘೋಷಣೆ ಮಾಡಲಾಗಿರುವ ಕ್ರಮದಿಂದ ದೇಶದ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಕ್ರಮ ಬದ್ಧಗೊಳಿಸಿದಂತಾಗಿದೆ. ಬಡವರಿಗೆ ಉತ್ತಮ ಉದ್ಯೋಗ, ಹಣಕಾಸು ವ್ಯವಸ್ಥೆ ಸುಧಾರಿಸುವ ಪ್ರಯತ್ನ ನಡೆಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ನಿರ್ಧಾರದಿಂದ ಉಂಟಾದ ಅನುಕೂಲತೆಗಳ ಬಗೆಗಿನ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ.
ಕಪ್ಪುಹಣಕ್ಕೆ ಕಷ್ಟ: “ಸಿಎನ್‌ಬಿಸಿ-ಆವಾಜ್’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಮಾನ್ಯದಿಂದ ಕಪ್ಪುಹಣವನ್ನು ಸದ್ಯಕ್ಕೆ ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದೇ ಇರಬಹುದು. ಆದರೆ ಕಾನೂನುಬದ್ಧವಲ್ಲದ ಹಣದ ವಹಿವಾಟು ನಡೆಸುವವರಿಗೆ ಕಷ್ಟವಾದದ್ದು ಸತ್ಯ ಎಂದರು. ಇದು ಆ ಕ್ಷೇತ್ರದ ಜನರಿಗೆ ಎಚ್ಚರಿಕೆಯ ಸಂದೇಶ ಎಂದರು.
ಆಸ್ತಿ ಅಥವಾ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲಿನ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. ದೆಹಲಿ ಮತ್ತು ಮುಂಬೈನಲ್ಲಿ ಆಸ್ತಿ ಮೇಲಿನ ದರ ಶೇ.20-30ರಷ್ಟು ಇಳಿಕೆಯಾಗಿದೆ. ಹೀಗಾಗಿ ಅವುಗಳಿಗೆ ಇರಬೇಕಾದ ದರದಲ್ಲಿಯೇ ಮಾರಾಟವಾಗಿ ಹೋಗುತ್ತಿವೆ. ಜತೆಗೆ ಡಿಜಿಟಲ್ ಮಾಧ್ಯಮದಲ್ಲಿ ಪಾವತಿ ಹೆಚ್ಚುತ್ತಿದೆ ಎಂದು ಪ್ರತಿಪಾದಿಸಿದರು ಕೇಂದ್ರ ಸಚಿವ.
ಮುಗಿಬಿದ್ದ ಅಮಿತ್ ಶಾ: ನಿವೃತ್ತ ಸೈನಿಕ ನಂದ್‌ಲಾಲ್ ಎಂಬುವರು ಅಳುತ್ತಿರುವ ಫೋಟೋ ಟ್ಯಾಗ್ ಮಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಮುಗಿಬಿದ್ದಿದ್ದಾರೆ. ಸಾರ್ವಜನಿಕರು ಇಂಥ ತಪ್ಪು ಮಾಹಿತಿಯಿಂದ ಬೇಸ್ತು ಬೀಳಬಾರದು ಎಂದು ಬರೆದುಕೊಂಡಿದ್ದಾರೆ. ಜತೆಗೆ ಅಮಾನ್ಯ ವಿಚಾರ ಬೆಂಬಲಿಸಿ ನೀಡಿದ ಹೇಳಿಕೆಯ ವಿಡಿಯೋವನ್ನೂ ಟ್ವೀಟ್ ಮಾಡಿದ್ದಾರೆ. “ಬಡವರ ಚಿತ್ರಣವನ್ನು ಗುರಿಯನ್ನಾಗಿಸಿಯೇ ಕಾಂಗ್ರೆಸ್ ಅಧಿಕಾರ ಕಸಿದುಕೊಂಡಿದೆ. ಆದರೆ ಇಂಥ ವಂಚನೆಯನ್ನು ಇನ್ನು ಮುಂದೆ ದೇಶದಲ್ಲಿ ನಂಬುವವರು ಯಾರೂ ಇಲ್ಲ’ ಎಂದಿದ್ದಾರೆ.
ಗಾಂಧಿ ಕುಟುಂಬಕ್ಕೆ ದುಃಖ: ಕಳೆದ ನ.8ರಂದು ಘೋಷಣೆ ಮಾಡಿದ ನಿರ್ಧಾರದಿಂದಾಗಿ ಗಾಂಧಿ ಕುಟುಂಬಕ್ಕೆ ದುಃಖವೇ ಆಗಿದೆ ಎಂದಿದ್ದಾರೆ ಕೇಂದ್ರ ಸಚಿವೆ ಸ್ಮತಿ ಇರಾನಿ. “ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆಯಲ್ಲಿ ಉಲ್ಲೇಖಗೊಂಡ ಅಂಶವನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿ ಮಾಡಿದ ಟೀಕೆಗೆ ಅವರು ತಿರುಗೇಟು ನೀಡಿದ್ದಾರೆ. “ಕೇವಲ ಪ್ರಚಾರಕ್ಕಾಗಿ ಎಟಿಎಂನಿಂದ 4 ಸಾವಿರ ರೂ. ತೆಗೆದು ಮತ್ತೆ ದೀರ್ಘ ಕಾಲದ ವರೆಗೆ ವಿದೇಶದ ಸ್ಥಳಕ್ಕೆ ರಹಸ್ಯವಾಗಿ ತೆರಳುವವರಿಗೆ ಅದೊಂದು ದುಃಖದ ಕ್ರಮ’ ಎಂದು ಟೀಕಿಸಿದ್ದಾರೆ.
ರಾಹುಲ್ ಟೀಕೆ: ಗುಜರಾತ್ ಚುನಾವಣಾ ಪ್ರಚಾರ ಮತ್ತು ಟ್ವಿಟರ್‌ನಲ್ಲಿ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟು ಅಮಾನ್ಯ ವಿವೇಚನಾ ರಹಿತದ್ದು ಮತ್ತು ದುರಂತ ಎಂದು ಬಣ್ಣಿಸಿದ್ದಾರೆ. “ಫೈನಾನ್ಶಿಯಲ್ ಟೈಮ್ಸ್’ನಲ್ಲಿ ಕ್ರಮ ಪ್ರಶ್ನಿಸಿ ಬರೆಯಲಾಗಿರುವ ಲೇಖನವನ್ನು ಅವರು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ. ಸರ್ಕಾರದ ಕ್ರಮದಿಂದಾಗಿ ಶೇ.2ರಷ್ಟು ಜಿಡಿಪಿ ನಷ್ಟವಾಗಿದೆ ಎಂಬ ಲೇಖನದ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಜತೆಗೆ ಪ್ರಧಾನಿ ಮೋದಿ ಕ್ರಮ ದೇಶದ ಅರ್ಥ ವ್ಯವಸ್ಥೆಯ ಮೇಲೆ ಪ್ರಹಾರ ಮಾಡಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸಚಿವ ಜೇಟ್ಲಿ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಚಿದಂಬರಂ, ದೇಶದ 121 ಕೋಟಿ ನಾಗರಿಕರು ನರಳುವಂತೆ ಮಾಡಿರುವುದು ನೈತಿಕ ಕ್ರಮವೇ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಕೈಗೊಂಡ ನಿರ್ಧಾರದಿಂದಾಗಿ ಉದ್ಯೋಗ ನಷ್ಟ ಮತ್ತು ಜೀವಹಾನಿಯನ್ನು ಯಾರೂ ಅಲ್ಲಗಳೆಯುಂತಿಲ್ಲ ಎಂದರು.
ಸಂಸತ್ ಸ್ಥಾಯಿ ಸಮಿತಿಗೆ ಇಂದು ವಿವರಣೆ
ಅಮಾನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಗುರುವಾರ ಹಣಕಾಸು ಖಾತೆಗಾಗಿನ ಸಂಸತ್‌ನ ಸ್ಥಾಯಿ ಸಮಿತಿ ಮುಂದೆ ಹಾಜರಾಗಲಿದ್ದಾರೆ. ಈ ವೇಳೆ ಅಧಿಕಾರಿಗಳು ಅಮಾನ್ಯದ ಬಳಿಕದ ಒಂದು ವರ್ಷದ ಅವಧಿಯಲ್ಲಿ ಏನೇನು ಬದಲಾವಣೆಗಳು ಆಗಿವೆ ಎಂಬ ಬಗ್ಗೆ ಸಮಿತಿಗೆ ವಿವರಣೆ ನೀಡಲಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ ಸಮಿತಿಯ ಮುಖ್ಯಸ್ಥರು. ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಕೂಡ ಹಾಜರಿರಲಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆ ಬಗ್ಗೆ ರೂಪಿಸಲಾಗಿರುವ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ರಾಹುಲ್‌ಗೆ ಮುಜುಗರ ತಂದ ಟ್ವೀಟ್
ಹರ್ಯಾಣದ ನಂದಲಾಲ್ (80)ಎಂಬ ನಿವೃತ್ತ ಯೋಧರೊಬ್ಬರ ಸುತ್ತ ಈಗ ಕಾಂಗ್ರೆಸ್ ಮತ್ತು ಬಿಜೆಪಿ ವಾಕ್ಸಮರಕ್ಕೆ ಆರಂಭ ಮಾಡಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ನೋಟುಗಳ ಅಮಾನ್ಯ ಘೋಷಣೆ ಮಾಡಿದಾಗ ಸರತಿ ಸಾಲಿನಲ್ಲಿ ನಿಂತು ತಮ್ಮ ಹಣ ಹಿಂಪಡೆಯಲು ಅಸಾಧ್ಯವಾಗಿದ್ದಕ್ಕೆ ಅಳುತ್ತಾ ನಿಂತಿದ್ದ ಫೋಟೋ ದೇಶಾದ್ಯಂತ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ನೋಟು ಅಮಾನ್ಯದಿಂದ ದೇಶಕ್ಕೆ ಒಳ್ಳೆಯದಾಗಿದೆ ಎಂದು ಅವರು ಹೇಳಿರುವುದನ್ನು ಬಿಜೆಪಿ ಪ್ರಕಟಿಸಿದೆ.
ಕಳೆದ ವರ್ಷ ಅಳುತ್ತಾ ನಿಂತಿದ್ದ ಘೋಟೋದ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ನೋಟುಗಳನ್ನು ಹಿಂತಿರುಗಿಸಲು ಬ್ಯಾಂಕ್‌ಗೆ ಹೋಗಲು ಸರತಿ ಸಾಲಿನಲ್ಲಿ ನಿಂತಿದ್ದೆ. ಈ ಸಂದರ್ಭದಲ್ಲಿ ಯಾರೋ ನನ್ನ ಕಾಲಿನ ಮೇಲೆ ನಿಂತರು. ನೋವಾಗಿದ್ದರಿಂದ ನಾನು ಅಳಲಾರಂಭಿಸಿದೆ. ನೋಟು ಅಮಾನ್ಯ ಮತ್ತು ಸರ್ಕಾರ ಕೈಗೊಂಡ ಪ್ರತಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತೇನೆ’ ಎಂದಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಂದ್‌ಲಾಲ್ ಕಳೆದ ವರ್ಷ ಲಾಲ್ ಅಳುತ್ತಾ ನಿಂತಿದ್ದ ಫೋಟೋವನ್ನು ಟ್ವೀಟ್ ಮಾಡಿ, “ಈ ವ್ಯಕ್ತಿಯ ಕಣ್ಣೀರಿನ ಒಂದು ಹನಿ ಆಳುವ ಸರ್ಕಾರಕ್ಕೆ ಎಚ್ಚರಿಕೆ. ನೀವು ಕಣ್ಣೀರಿನ ಸಾಗರ ನೋಡಿಯೇ ಇಲ್ಲ’ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ ಪ್ರಸಾದ್ “ಕಾಂಗ್ರೆಸ್ ಸುಳ್ಳಿನ ಮೇಲೆಯೇ ನಡೆಯುತ್ತಿದೆ. ಜನರು ಮೋದಿ ಸರ್ಕಾರದ ಜತೆಗಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಈಗ “ಇಂಡಿಯನ್ ಫೇಕ್‌ನೂÂಸ್ ಕಾಂಗ್ರೆಸ್’ ಎಂದು ಲೇವಡಿ ಮಾಡಿದ್ದಾರೆ.
ಅಮಾನ್ಯಗೊಂಡ ಬಳಿಕ ವಶಪಡಿಸಿಕೊಂಡ
ಹಳೆಯ ನೋಟುಗಳ ಗತಿ ಏನು?:ಸುಪ್ರೀಂ
ವಶಪಡಿಸಿಕೊಂಡ ಹಳೆಯ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಗಡುವು ಮೀರಿದ ಬಳಿಕ ತಪ್ಪಿತಸ್ಥರಿಗೆ ನೀಡಿದರೆ ಏನಾದರೂ ಪ್ರಯೋಜನ ಇದೆಯೇ? ಹೀಗೆಂದು ಪ್ರಶ್ನೆ ಮಾಡಿದ್ದು ಸುಪ್ರೀಂಕೋರ್ಟ್? ಐಪಿಎಲ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಬಿಡುಗಡೆ ಹೊಂದಿದ ಅಭಿಷೇಕ್ ಶುಕ್ಲಾ ಎಂಬಾತನ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಎರಡು ವಾರಗಳಲ್ಲಿ ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಸರ್ಕಾರ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.
ಅಮಾನ್ಯಗೊಂಡಿರುವ ನೋಟುಗಳನ್ನು ಆರ್‌ಬಿಐಗೆ ಹಿಂದಿರುಗಿಸಲು 2016 ಡಿ.31 ಕೊನೆಯ ಗಡುವು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪವಾಗಿದೆ. ಬಂಧಿತನಾಗಿರುವ ವ್ಯಕ್ತಿ ಬಿಡುಗಡೆಯಾದ ಬಳಿಕ ಆತನಲ್ಲಿದ್ದ ನಗದನ್ನು ಆರ್‌ಬಿಐ ಗಡುವಿನ ಬಳಿಕ ನೀಡಿದರೆ ಹೊಸ ನೋಟುಗಳನ್ನೂ ಪಡೆಯುವಂತಿಲ್ಲ. ಹಳೆಯದ್ದನ್ನೂ ಉಪಯೋಗಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿತು.
396 ಕೋಟಿ ರೂ. ಪತ್ತೆ; 84 ಕೇಸು ದಾಖಲು: ಸಿಬಿಐ
ಅಮಾನ್ಯ ಬಳಿಕ ಕೇಂದ್ರ ತನಿಖಾ ಸಂಸ್ಥೆ ಸಿಬಿಐ 396 ಕೋಟಿ ರೂ. ಮೊತ್ತವನ್ನು ಅಕ್ರಮವಾಗಿ ವಿನಿಮಯ ಮಾಡಿದ ಪ್ರಕರಣಗಳನ್ನು ಸಿಬಿಐ ಬಯಲಿಗೆ ಎಳೆದಿದೆ. ಜತೆಗೆ 84 ಕೇಸು ದಾಖಲಿಸಿಕೊಂಡಿದೆ ಎಂದಿದ್ದಾರೆ ಸಂಸ್ಥೆಯ ನಿರ್ದೇಶಕ ಅಲೋಕ್ ವರ್ಮಾ. ಕಳೆದ ವರ್ಷದ ನ.8ರಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಘೋಷಣೆ ಭ್ರಷ್ಟಾಚಾರದ ವಿರುದ್ಧದ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗಿದೆ ಎಂದಿದ್ದಾರೆ ಅವರು. ಅಮಾನ್ಯ ಘೋಷಣೆ ಬಳಿಕ ಪತ್ತೆಯಾದ ಹಣಕಾಸು ಅಕ್ರಮಗಳ ತನಿಖೆ ಬಗ್ಗೆ ಸಿಬಿಐ ಹೆಚ್ಚಿನ ಆದ್ಯತೆ ನೀಡಿದೆ ಎಂದು ಅವರು ಹೇಳಿದ್ದಾರೆ. ದಾಖಲಾದ 84 ಪ್ರಕರಣಗಳಲ್ಲಿ 21 ಸಾರ್ವಜನಿಕ ಸೇವೆಗಳಲ್ಲಿ ನಿರತರಾಗಿರುವವರ ವಿರುದ್ಧ, 26 ಖಾಸಗಿ ವ್ಯಕ್ತಿಗಳು, 7 ಇನ್ನೂ ಪ್ರಾಥಮಿಕ ಹಂತದ ಪ್ರಕರಣಗಳು. ತನಿಖಾ ಸಂಸ್ಥೆಗೆ ಒಟ್ಟು 92 ದೂರುಗಳು ದೇಶದ ವಿವಿಧ ಭಾಗಗಳಿಂದ ದಾಖಲಾಗಿವೆ ಎಂದು ವರ್ಮಾ ಹೇಳಿದ್ದಾರೆ.
ನಗದು ರಹಿತ ಗ್ರಾಮ ಮತ್ತೆ ನಗದಿನತ್ತ
ಮಹಾರಾಷ್ಟ್ರದ ಠಾಣೆಯ ಧಸಾಸಿ ಗ್ರಾಮ 2016ರ ಡಿ.1 ರಂದು ದೇಶದ ಮೊದಲ ನಗದು ರಹಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ ನಾಲ್ಕು ದಿನಗಳಿಂದ ಈಚೆಗೆ ಗ್ರಾಮದ ಚಿನ್ನಾಭರಣ ಮಳಿಗೆಯಲ್ಲಿರುವ ಪಾಯಿಂಟ್ ಆಫ್ ಸೇಲ್ಸ್ ಮಷಿನ್ ಕೆಲಸ ಮಾಡುತ್ತಿಲ್ಲ. ಇನ್ನು ಗ್ರಾಮದ ಸೀರೆ ಮಳಿಗೆಯಲ್ಲಿ ಖರೀದಿಗಾಗಿ ಬಂದ ವ್ಯಕ್ತಿ ನಗದು ಮೂಲಕವೇ ಅದರ ಬೆಲೆಯನ್ನು ಪಾವತಿ ಮಾಡಿದರು. ನೋಟು ಅಮಾನ್ಯ ಮತ್ತಿತರ ಬೆಳವಣಿಗೆಗಳ ಬಗ್ಗೆ ಅವರನ್ನು ಪ್ರಶ್ನಿಸಿದಾಗ “ನನಗೆ ಅದೆಲ್ಲ ಏನೂ ಗೊತ್ತಿಲ್ಲ. ಇದುವರೆಗೆ ಎಟಿಎಂ ಕಾರ್ಡ್ ಬಳಸಿಲ್ಲ’ ಎಂದು ಹೇಳಿದ್ದಾರೆ.
ನೋಟು ಅಮಾನ್ಯ ಘೋಷಣೆಯ ಆರಂಭದಲ್ಲಿ ರಸ್ತೆ ಬದಿಯಲ್ಲಿನ ವ್ಯಾಪಾರಸ್ಥರೂ ಭೀಮ್ ಆ್ಯಪ್ ಬಳಸಿ ವಹಿವಾಟು ಮಾಡುತ್ತಿದ್ದರು. ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸಿದವರೆಲ್ಲ ಮೊಬೈಲ್‌ನಲ್ಲಿಯೇ ಹಣಕಾಸು ವಹಿವಾಟು ನಡೆಸಲಾರಂಭಿಸಿದರು. ಸದ್ಯ ಗ್ರಾಮದಲ್ಲಿ ಶೇ.15-20ರಷ್ಟು ಮಾತ್ರ ಆನ್‌ಲೈನ್ ಮೂಲಕ ವಹಿವಾಟು ನಡೆಯುತ್ತದೆ. ಗ್ರಾಮದಲ್ಲಿ ಠಾಣೆ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‌ನ ಶಾಖೆಗಳಿವೆ.
ಸರ್ಕಾರದ ಕ್ರಮ ಬೆಂಬಲಿಸಿದ್ದಕ್ಕೆ ದೇಶವಾಸಿಗಳಿಗೆ ಪ್ರಣಾಮಗಳು. ನರೇಂದ್ರ ಮೋದಿ ಆ್ಯಪ್‌ನಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸಮೀಕ್ಷೆ ಇದೆ. ಅದರಲ್ಲಿ ಭಾಗವಹಿಸಿ. ಕಳೆದ ವರ್ಷ ಘೋಷಣೆ ಮಾಡಲಾಗಿರುವ ಕ್ರಮದಿಂದ ದೇಶದ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಕ್ರಮಬದ್ಧಗೊಳಿಸಿದಂತಾಗಿದೆ. ಬಡವರಿಗೆ ಉತ್ತಮ ಉದ್ಯೋಗ, ಹಣಕಾಸು ವ್ಯವಸ್ಥೆ ಸುಧಾರಿಸುವ ಪ್ರಯತ್ನ ನಡೆಸಲಾಗಿದೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ
ನೋಟು ಅಮಾನ್ಯ ವಿವೇಚನಾ ರಹಿತ ಕ್ರಮ. ಮೋದಿಯವರ ಈ ನಿರ್ಧಾರದಿಂದಾಗಿ ದೇಶದ ಅರ್ಥ ವ್ಯವಸ್ಥೆಗೆ ಪ್ರಹಾರ ನಡೆಸಿದಂತಾಗಿದೆ. ಜಿಎಸ್‌ಟಿ ಜಾರಿಯಿಂದಾಗಿ ಸೂರತ್‌ನ ವಜೊÅàದ್ಯಮಕ್ಕೆ ಕೊಡಲಿಯೇಟು ನೀಡಿದಂತಾಗಿದೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ಕಾರ ಜನರ ಸಂಕಷ್ಟ, ಸಾವು-ನೋವಿನ ಬಗ್ಗೆ ಹರ್ಷಾಚರಣೆ ಮಾಡುತ್ತಿದೆ. ಅಮಾನ್ಯದಿಂದ ಕಪ್ಪುಹಣಕ್ಕೆ ತಡೆಯೊಡ್ಡಲಾಗುತ್ತದೆ ಎಂದು ಮೋದಿ ಸರ್ಕಾರ ಹೇಳಿದ್ದು ನಡೆಯಲೇ ಇಲ್ಲ. ಈ ಮೂಲಕ ಈ ಮೂಲಕ ಮೋದಿ ಸರ್ಕಾರ ವಿಶ್ವದಲ್ಲಿಯೇ 2 ದಾಖಲೆ ಮಾಡಿದೆ.
– ಬೃಂದಾ ಕಾರಟ್, ಸಿಪಿಎಂ ನಾಯಕಿ
ಅವಸರವಾಗಿಯೇ ನೋಟು ಅಮಾನ್ಯ ನಿರ್ಧಾರ ಜಾರಿಗೊಳಿಸಿದೆ ಕೇಂದ್ರ. ಈ ಕ್ರಮದಿಂದಾಗಿ ಹೊಸ ರೀತಿಯ ಭ್ರಷ್ಟಾಚಾರ ತಂತ್ರಗಳು ಶುರುವಾಗಿವೆ. ರೈತರು, ಕೃಷಿ ಕಾರ್ಮಿಕರಿಗೆ ತೊಂದರೆಯಾಗಿದೆ.
– ಮಾಯಾವತಿ, ಬಿಎಸ್‌ಪಿ ನಾಯಕಿ
ಪ್ರಧಾನಿ ಮೋದಿ ನಿರ್ಧಾರದಿಂದ ಕಪ್ಪುಹಣವನ್ನು ಸಕ್ರಮ ಎಂದು ಪರಿವರ್ತಿಸಲು ನೆರವಾಗಿದೆ. ಬಡವರು ಮತ್ತು ಇತರ ವರ್ಗದವರಿಗೆ ಏನೂ ಲಾಭವಾಗಿಲ್ಲ.
– ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.