ಜೈ ಶ್ರೀರಾಂ ಎನ್ನುವೆ; ತಾಕತ್ತಿದ್ರೆ ಬಂಧಿಸಿ
ಪಶ್ಚಿಮ ಬಂಗಾಲದ ರ್ಯಾಲಿಯಲ್ಲಿ ದೀದಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು
Team Udayavani, May 7, 2019, 6:48 AM IST
ಪಶ್ಚಿಮ ಬಂಗಾಲದ ಹಲ್ದಿಯಾ ಚುನಾವಣ ರ್ಯಾಲಿ ವೇಳೆ ಬಿಜೆಪಿ ಅಭ್ಯರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ಹೊಸದಿಲ್ಲಿ: ‘ಪಶ್ಚಿಮ ಬಂಗಾಲದ ನೆಲದಲ್ಲಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತೇನೆ. ಧೈರ್ಯವಿದ್ದರೆ ನನ್ನನ್ನು ಬಂಧಿಸಿ’. ಹೀಗೆಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ. ಸಿಎಂ ಮಮತಾ ಅವರ ಬೆಂಗಾವಲು ವಾಹನಗಳು ಸಾಗುವಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೋಮವಾರ ದೀದಿಯ ಭದ್ರಕೋಟೆಯಲ್ಲೇ ನಿಂತು ಇಂಥ ಸವಾಲು ಹಾಕಿದ್ದಾರೆ.
ಪ.ಬಂಗಾಲದ ಜಾರ್‌ಗ್ರಾಮ್‌ನಲ್ಲಿ ಸೋಮವಾರ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ‘ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಕೆಲವರನ್ನು ಸ್ಪೀಡ್‌ಬ್ರೇಕರ್ ದೀದಿ ಜೈಲಿಗಟ್ಟಿದ್ದಾರೆ. ಇಂದು ಇದೇ ಸ್ಥಳದಲ್ಲಿ ನಿಂತು ನಾನೂ ಅದೇ ಘೋಷಣೆ ಕೂಗುತ್ತೇನೆ. ತಾಕತ್ತಿದ್ದರೆ ಅವರು ನನ್ನನ್ನೂ ಬಂಧಿಸಲಿ. ಆ ಮೂಲಕವಾದರೂ ಟಿಎಂಸಿಯ ದರ್ಪದ ಆಡಳಿತದಿಂದ ಪ.ಬಂಗಾಲದ ಜನರಿಗೆ ರಕ್ಷಣೆ ದೊರೆಯಲಿ’ ಎಂದಿದ್ದಾರೆ.
ಇದೇ ವೇಳೆ, ರಾಮಾಯಣ ಹಾಗೂ ಮಹಾಭಾರತ ಕುರಿತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಡಿರುವ ಮಾತುಗಳ ವಿರುದ್ಧವೂ ಗುಡುಗಿದ ಮೋದಿ, ‘ಹಿಂದೂ ಧರ್ಮದ ವಿರುದ್ಧ ಅವ ಹೇಳನಕಾರಿ ಪದ ಬಳಕೆ ಮಾಡುವುದು ಕಮ್ಯೂನಿಸ್ಟರಿಗೆ ಫ್ಯಾಷನ್ ಆಗಿಬಿಟ್ಟಿದೆ’ ಎಂದಿದ್ದಾರೆ. ಇತ್ತೀಚೆಗೆ ಯೆಚೂರಿ ಅವರು, ರಾಮಾಯಣ- ಮಹಾಭಾರತವು ಹಿಂಸೆಯ ಘಟನೆಗಳಿಂದ ಕೂಡಿವೆ ಎಂದಿದ್ದರು.
ರಾಜೀವ್ ಹೆಸರಲ್ಲಿ ಚುನಾವಣೆ ಎದುರಿಸಿ: ಇದಾದ ಬಳಿಕ ಜಾರ್ಖಂಡ್‌ನಲ್ಲಿ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಇನ್ನೂ 2 ಹಂತಗಳ ಮತದಾನ ಬಾಕಿಯಿದೆ. ಆ ಎರಡು ಹಂತಗಳಲ್ಲೂ ಕಾಂಗ್ರೆಸ್ ಧೈರ್ಯವಿದ್ದರೆ ಬೊಫೋರ್ಸ್ ಆರೋಪಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹೆಸರಲ್ಲಿ ಚುನಾವಣೆ ಎದುರಿಸಲಿ ಎಂದು ಸವಾಲೆಸೆದಿದ್ದಾರೆ. ರವಿವಾರವಷ್ಟೇ ‘ರಾಜೀವ್‌ಗಾಂಧಿ ಭ್ರಷ್ಟಾಚಾರಿ ನಂ.1 ಆಗಿಯೇ ಮೃತಪಟ್ಟರು’ ಎಂದು ಹೇಳಿ ಪ್ರಧಾನಿ ಮೋದಿ ವಿವಾದ ಸೃಷ್ಟಿಸಿದ್ದರು.
ಎಲ್ಲವೂ ಅಂದುಕೊಂಡಂತೆ ನಡೆದರೆ, ನಾನೇ ಪಿಎಂ!
ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ತಮ್ಮ ಪ್ರಧಾನಿ ಹುದ್ದೆಯ ಕನಸಿನ ಕುರಿತು ಸುಳಿವು ನೀಡಿದ್ದಾರೆ. ಉತ್ತರಪ್ರದೇಶದ ಅಂಬೇಡ್ಕರ್‌ನಗರದಲ್ಲಿ ಸೋಮವಾರ ಪ್ರಚಾರ ಭಾಷಣ ಮಾಡಿದ ಅವರು, ‘ಎಲ್ಲವೂ ಅಂದುಕೊಂಡಂತೆ ನಡೆದರೆ, ನಾನು ಇಲ್ಲಿಂದಲೇ ಚುನಾವಣ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ, ರಾಷ್ಟ್ರ ರಾಜಕಾರಣದತ್ತ ಸಾಗುವ ಹಾದಿಯು ಅಂಬೇಡ್ಕರ್ ನಗರವನ್ನು ದಾಟಿಯೇ ಹೋಗುತ್ತದೆ’ ಎಂದಿದ್ದಾರೆ. ಅಲ್ಲದೆ, ‘ನಮೋ ನಮೋ’ ಎನ್ನುವ ಯುಗ ಮುಗಿಯಿತು, ಇನ್ನೇನಿದ್ದರೂ ‘ಜೈ ಭೀಮ್’ ಎಂದು ಘೋಷಿಸುವ ಸಮಯ ಎಂದಿದ್ದಾರೆ. ಮಾಯಾ ಅವರು 4 ಬಾರಿ ಅಂದರೆ 1989, 1998, 1999 ಮತ್ತು 2004ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಪ್ರಧಾನಿ ಕೊಲ್ಲಲು ಮಾಜಿ ಯೋಧ ಷಡ್ಯಂತ್ರ: ಬಿಜೆಪಿ
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣ ಕಣಕ್ಕಿಳಿದಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್, ಮೋದಿಯವರನ್ನು ಹತ್ಯೆಗೈಯುವ ಷಡ್ಯಂತ್ರ ರೂಪಿಸಿದ್ದಾನೆಂದು ಬಿಜೆಪಿ ಆರೋಪಿಸಿದ್ದು, ಈ ಬೆಳವಣಿಗೆ ಆಘಾತಕಾರಿಯಾಗಿದೆ ಎಂದು ಹೇಳಿದೆ. ಸೋಮವಾರ ಹೊಸ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ವಕ್ತಾರ ಜಿ.ವಿ.ಎಲ್. ನರಸಿಂಹರಾವ್, ಯಾದವ್ ಅವರು ಮೋದಿಯನ್ನು ಕೊಲ್ಲುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಕೆಲವು ವೀಡಿಯೋ ತುಣುಕುಗಳು ಓಡಾ ಡುತ್ತಿವೆ. ಇದಿನ್ನೂ ದೃಢೀಕಣರವಾಗಿಲ್ಲವಾದರೂ, ಹತಾಶನಾದ ಅಭ್ಯರ್ಥಿಯೊಬ್ಬ ಹೇಗೆ ಅಪಾಯಕಾರಿ ಹಾದಿ ಹಿಡಿಯ ಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ನರಸಿಂಹರಾವ್ ಹೇಳಿದ್ದಾರೆ. ವಾರಾಣಸಿಯಲ್ಲಿ ಯಾದವ್ ಅವರ ನಾಮಪತ್ರ ಇತ್ತೀಚೆಗೆ ತಿರಸ್ಕೃತಗೊಂಡಿತ್ತು.
ಸುಪ್ರೀಂಗೆ ಯಾದವ್ ಅರ್ಜಿ
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದಿದ್ದ ಬಿಎಸ್‌ಎಫ್ ಮಾಜಿ ಯೋಧ ತೇಜ್ ಬಹಾದ್ದೂರ್ ಯಾದವ್ ತಮ್ಮ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಬಿಎಸ್‌ಎಫ್ನಿಂದ ವಜಾಗೊಂಡಿರುವ ತೇಜ್ ಬಹಾದ್ದೂರ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕಳೆದ ಬುಧವಾರ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಇದೀಗ, ತಮ್ಮ ನಾಮಪತ್ರ ತಿರಸ್ಕರಿಸಿರುವ ಚುನಾವಣ ಆಯೋಗದ ನಿರ್ಧಾರವು, ತಾರತಮ್ಯದಿಂದ ಕೂಡಿದೆ ಮತ್ತು ಸಕಾರಣವಿಲ್ಲದೆ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಆರೋಪಿಸಿರುವ ಯಾದವ್, ಕೂಡಲೇ ಆಯೋಗದ ನಿರ್ಧಾರವನ್ನು ವಜಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರ ‘ಜೈ ಶ್ರೀ ರಾಮ್’ ಸವಾಲಿಗೆ ತಿರುಗೇಟು ನೀಡಿರುವ ಮಮತಾ, ‘ಚುನಾವಣೆಗಳು ಬಂದಾಗ ಬಿಜೆಪಿಗೆ ಶ್ರೀರಾಮಚಂದ್ರನು ಚುನಾವಣ ಏಜೆಂಟಾಗಿ ಕಾಣುತ್ತಾನಾ? ನರೇಂದ್ರ ಮೋದಿ ಅಥವಾ ಬಿಜೆಪಿ ಏನು ಬಯಸುತ್ತದೋ, ಅದನ್ನೇ ಎಲ್ಲರೂ ಘೋಷಿಸಬೇಕೆಂದು ಹೇರಿಕೆ ಮಾಡಿದರೆ ಹೇಗೆ? ಜೈ ಶ್ರೀ ರಾಮ್ ಎನ್ನುವುದು ಬಿಜೆಪಿಯ ಚುನಾವಣ ಸ್ಲೋಗನ್. ಪಶ್ಚಿಮ ಬಂಗಾಲದ ಜನರಿಗೆ ಬಂಕಿಮ್‌ಚಂದ್ರ ಅವರ ‘ವಂದೇ ಮಾತರಂ’ ಮತ್ತು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ‘ಜೈ ಹಿಂದ್’ಗಳೇ ಘೋಷವಾಕ್ಯಗಳು. ಬಿಜೆಪಿಯವರು ಪ.ಬಂಗಾಲದ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಮೋದಿ ಯವರ 56 ಇಂಚಿನ ಎದೆ ಇನ್ನಷ್ಟು ಅಗಲವಾಗಿ 112 ಇಂಚಿಗೆ ತಲುಪಲಿ. ಏಕೆಂದರೆ, ಎಲ್ಲರೂ ಆರೋಗ್ಯವಾಗಿರಬೇಕು ಎಂಬುದೇ ನನ್ನ ಬಯಕೆ ಎಂದೂ ಹೇಳಿದ್ದಾರೆ.
ಚುನಾವಣ ರ್ಯಾಲಿಗಳಲ್ಲಿ ಪುಲ್ವಾಮಾ ಹಾಗೂ ಬಾಲಕೋಟ್ ದಾಳಿ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಹರ್ಯಾಣದ ಭಿವಂಡಿಯಲ್ಲಿ ಸೋಮವಾರ ಚುನಾವಣ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ‘ನಾನು ಪ್ರಾಣವನ್ನಾದರೂ ಬಿಡುತ್ತೇನೆಯೇ ಹೊರತು ಸೇನೆಯ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ‘ಬಾಕ್ಸರ್’ ಎಂದು ಕರೆದಿರುವ ರಾಹುಲ್, ‘ತಮ್ಮ 56 ಇಂಚಿನ ಎದೆಯನ್ನು ತಟ್ಟಿಕೊಂಡು ಪ್ರಧಾನಿ ಮೋದಿ ಬಾಕ್ಸಿಂಗ್ ರಿಂಗ್‌ನೊಳಕ್ಕೆ ಪ್ರವೇಶಿಸಿದರು. ನಿರುದ್ಯೋಗ, ರೈತರ ಸಮಸ್ಯೆ, ಭ್ರಷ್ಟಾಚಾರಗಳಿಗೆ ಪಂಚ್ ಮಾಡುತ್ತೇನೆ ಎಂದು ಹೇಳಿಕೊಂಡು ಬಂದರು. ಆದರೆ, ಒಳಕ್ಕೆ ಬಂದವರೇ ಮೊದಲು ಹಿರಿಯ ನಾಯಕ ಆಡ್ವಾಣಿ ಮುಖಕ್ಕೆ ಪಂಚ್ ಮಾಡಿದರು. ದೇಶದಲ್ಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಅವರಿಗೆ ಸಾಧ್ಯವಾಗಲಿಲ್ಲ’ ಎಂದು ಟೀಕಿಸಿದ್ದಾರೆ.
ದಿಲ್ಲಿಯ ಗಾಂಧಿನಗರದ ಆಪ್ ಶಾಸಕ ದೇವೀಂದರ್ ಸಿಂಗ್ ಸೆಹ್ರಾವತ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಒಂದೇ ವಾರದಲ್ಲಿ ಆಮ್ ಆದ್ಮಿ ಪಕ್ಷವನ್ನು ತೊರೆದು ಇಬ್ಬರು ಶಾಸಕರು ಬಿಜೆಪಿ ಸೇರಿದಂತಾಗಿದೆ. ಕಳೆದ ಶುಕ್ರವಾರವಷ್ಟೇ ಶಾಸಕ ಅನಿಲ್ ಬಾಜ್‌ಪೇಯಿ ಕೇಸರಿ ಪಕ್ಷವನ್ನು ಸೇರಿದ್ದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಚುನಾವಣ ಆಯೋಗ ಕ್ಲೀನ್‌ಚಿಟ್ ನೀಡಿರುವುದಕ್ಕೆ ಸಂಬಂಧಿಸಿದ ಆದೇಶದ ಪ್ರತಿಯೊಂದಿಗೆ ಬನ್ನಿ ಎಂದು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ. ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸುಷ್ಮಿತಾ ಕೋರ್ಟ್ ಮೆಟ್ಟಿಲೇರಿದ್ದರು. ಮೇ 8ರಂದು ಮುಂದಿನ ವಿಚಾರಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.