ಬದರಿನಾಥಕ್ಕೆ ಭೇಟಿ ನೀಡಿದ ಮೋದಿ
Team Udayavani, May 20, 2019, 6:52 AM IST
ಬದರಿನಾಥ: ಶನಿವಾರ ಕೇದಾರನಾಥಕ್ಕೆ ತೆರಳಿದ್ದ ಪ್ರಧಾನಿ ಮೋದಿ ರವಿವಾರ ಅಲ್ಲಿಂದಲೇ ಬದರಿನಾಥಕ್ಕೆ ಆಗಮಿಸಿ, ಪೂಜೆ ಪುನಸ್ಕಾರ ನೆರವೇರಿಸಿದರು. ಸುಮಾರು 20 ನಿಮಿಷಗಳವರೆಗೆ ಮೋದಿ ದೇಗುಲದಲ್ಲಿ ಕಳೆದಿದ್ದು, ಮೋದಿಗೆ ಇಲ್ಲಿನ ಅರ್ಚಕರು ಭೋಜಪತ್ರವನ್ನು ನೀಡಿದರು. ಅಲ್ಲದೆ ಈ ಗ್ರಾಮದ ಮುಖಂಡರು ಮೋದಿಗೆ ಶಾಲನ್ನೂ ನೀಡಿದ್ದಾರೆ. ದೇಗುಲದ ಪ್ರದಕ್ಷಿಣೆ ಹಾಕಿದ ಮೋದಿ, ಈ ವೇಳೆ ಆಗಮಿಸಿದ್ದ ಭಕ್ತಾದಿಗಳೊಂದಿಗೆ ಕೈಕುಲುಕಿ ಮಾತನಾಡಿದ್ದು ಕಂಡುಬಂತು. ಮೋದಿ ಆಗಮನದ ಹಿನ್ನೆಲೆಯಲ್ಲಿ ದೇಗುಲದ ಸುತ್ತಮುತ್ತ ಬಿಗಿ ಭದ್ರತೆ ಆಯೋಜಿಸಲಾಗಿತ್ತು.
ಕೇದಾರನಾಥದಲ್ಲಿ ಪೂಜೆ
ಶನಿವಾರ ಬೆಳಗ್ಗೆ ಕೇದಾರನಾಥಕ್ಕೆ ತೆರಳಿ, ಅಲ್ಲಿಂದ 2 ಕಿ.ಮೀ. ದೂರದಲ್ಲಿರುವ ಧ್ಯಾನ ಕುಟೀರದಲ್ಲಿ ರವಿವಾರ ಬೆಳಗಿನವರೆಗೂ ಧ್ಯಾನನಿರತರಾಗಿದ್ದರು. ಸುಮಾರು 17 ಗಂಟೆಗಳವರೆಗೆ ಧ್ಯಾನಮಗ್ನರಾಗಿದ್ದ ಮೋದಿ ರವಿವಾರ ಬೆಳಗ್ಗೆ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಟಿಎಂಸಿ, ಕಾಂಗ್ರೆಸ್ ದೂರು
ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಮಾಧ್ಯಮಗಳಿಗೆ ಮಾತನಾಡಿದ್ದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣ ಆಯೋಗಕ್ಕೆ ಟಿಎಂಸಿ ದೂರು ನೀಡಿದೆ. ಮೋದಿಯ ಕೇದಾರನಾಥ ಭೇಟಿಯನ್ನು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿತ್ತು ಎಂದು ಟಿಎಂಸಿ ಆರೋಪಿಸಿದೆ. ಅಲ್ಲದೆ ಕಾಂಗ್ರೆಸ್ ಕೂಡ ಈ ಬಗ್ಗೆ ಚುನಾವಣ ಆಯೋಗಕ್ಕೆ ದೂರು ನೀಡಿದೆ.
ಕುಟೀರಕ್ಕೆ ದಿನಕ್ಕೆ 990 ರೂ. ಬಾಡಿಗೆ
ಕೇದಾರನಾಥ ದೇಗುಲದ ಬಳಿ ಇರುವ ಪರ್ವತದ ಮೇಲೆ ಮೋದಿ ಧ್ಯಾನಗೈದ ಕುಟೀರಗಳ ಬಗ್ಗೆ ಈಗ ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿದೆ. ಇಲ್ಲಿನ ಧ್ಯಾನ ಕುಟೀರಗಳಲ್ಲಿ ಯಾರು ಬೇಕಾದರೂ ಉಳಿದುಕೊಂಡು ಧ್ಯಾನ ಮಾಡಬಹುದು. ಸದ್ಯ ಇಲ್ಲಿ ಎರಡು ಧ್ಯಾನ ಕುಟೀರಗಳನ್ನು ನಿರ್ಮಿಸಲಾಗಿದ್ದು, ಇದಕ್ಕೆ ದಿನವೊಂದಕ್ಕೆ 990 ರೂ. ಬಾಡಿಗೆ ವಿಧಿಸಲಾಗಿದೆ. ವಿದ್ಯುತ್, ನೀರು, ಹಾಸಿಗೆ ಮತ್ತು ಶೌಚಾಲಯದ ಸೌಲಭ್ಯ ಇಲ್ಲಿದೆ. ಒಂದು ಫೋನ್ ಕೂಡ ಇಲ್ಲಿದ್ದು, ತುರ್ತು ಸ್ಥಿತಿಯಲ್ಲಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಊಟ ತಿಂಡಿ ಮತ್ತು ಚಹಾ ವ್ಯವಸ್ಥೆಯೂ ಈ ಕುಟೀರದಲ್ಲಿ ಉಳಿಯುವವರಿಗೆ ಲಭ್ಯವಿದೆ. ಬೃಹತ್ ಕಲ್ಲುಗಳನ್ನು ಬಳಸಿ ಗುಹೆಯ ರೀತಿ ಕುಟೀರವನ್ನು ನಿರ್ಮಿಸಲಾಗಿದೆ. ಇದಕ್ಕೆ ಮರದ ಬಾಗಿಲು ಇದ್ದು, ಇಲ್ಲಿಂದ ದೇಗುಲ ಕಾಣಿಸುವಂತಿದೆ. ಇದನ್ನು ‘ಗರ್ವಾಲ್ ಮಂಡಲ್ ವಿಕಾಸ್ ನಿಗಮ್’ ನಿರ್ಮಾಣ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.