ಲೋಕ ಗೆದ್ದ ನರೇಂದ್ರ ಬಾಹುಬಲಿ…
Team Udayavani, May 24, 2019, 6:00 AM IST
ಈ ಚುನಾವಣೆಯಲ್ಲೂ ಮೋದಿ ಮ್ಯಾಜಿಕ್ ಇಡೀ ಭಾರತವನ್ನೇ ಆವರಿಸಿದ್ದು, ಸತತ 2ನೇ ಬಾರಿಗೆ ದೇಶದಲ್ಲಿ ಕಮಲಾಧಿಪತ್ಯಕ್ಕೆ ಮುನ್ನುಡಿ ಬರೆದಿದೆ. ಮೋದಿ ಅವರ ರಾಷ್ಟ್ರೀಯವಾದ, ಭದ್ರತೆ, ನವಭಾರತದ ಸಂದೇಶವನ್ನು ಜನರು ಹೃದಯಪೂರ್ವಕವಾಗಿ ಸ್ವೀಕರಿಸಿದ್ದು, ಅವರಿಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದಾರೆ. ಮತ್ತೂಂದೆಡೆ, ಕಾಂಗ್ರೆಸ್ ಮೋದಿ ಅಲೆಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಗಿದೆ. 2014ಕ್ಕೆ ಹೋಲಿಸಿದರೆ ಅತ್ಯಲ್ಪ ಮಟ್ಟಿಗಷ್ಟೇ ಚೇತರಿಸಿಕೊಂಡಿದೆಯಾದರೂ, ಘಟಾನುಘಟಿ ನಾಯಕರ ಸೋಲಿನ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.
ನವದೆಹಲಿ: ಇಡೀ ದೇಶದಲ್ಲಿ ಕೇಸರಿ ಅಧಿಪತ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದ ಇತಿಹಾಸದಲ್ಲೇ ಸತತ ಎರಡನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವ ಕಾಂಗ್ರೇಸ್ಸೇತರ ಸರ್ಕಾರ ಎಂಬ ಹಿರಿಮೆಗೆ ಪಾತ್ರವಾಗಿದೆ. ಅಲ್ಲದೆ, ಇಂದಿರಾ ಗಾಂಧಿಯವರ ಬಳಿಕ ಸಂಪೂರ್ಣವಾಗಿ ಸ್ವಂತ ಸಾಮರ್ಥ್ಯದಿಂದ, ಸತತ ಎರಡನೇ ಬಾರಿಗೆ ಬಹುಮತದಿಂದ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ನರೇಂದ್ರ ಮೋದಿ ಗಳಿಸಿದ್ದಾರೆ.
ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿಯ ಮತ ಹಂಚಿಕೆ ಏರಿಕೆಯಾಗಿರುವುದು ಈ ದಾಖಲೆಗೆ ಕಾರಣ. ಪ್ರಮುಖ ರಾಜ್ಯಗಳೆನಿಸಿದ ಗುಜರಾತ್, ಹರ್ಯಾಣ, ಜಾರ್ಖಂಡ್, ಹಿಮಾಚಲಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ದೆಹಲಿ, ಒಡಿಶಾ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿ 2014ರ ಚುನಾವಣೆಗಿಂತಲೂ ಹೆಚ್ಚಿನ ಮತಗಳನ್ನು ಪಡೆದಿರುವುದು ಗಮನಾರ್ಹ ಸಾಧನೆಯೇ ಸರಿ. ಇನ್ನು ಮುಂದೆ ಮೋದಿ ವಿರೋಧಿಗಳು ‘ಬಿಜೆಪಿಗೆ ಬಹುಸಂಖ್ಯೆಯ ಜನರ ಬೆಂಬಲವಿಲ್ಲ’ ಎಂದು ಹೇಳಲಾಗದಂತೆ, ದೇಶದ ಬಹುತೇಕ ಭಾಗಗಳಲ್ಲಿ ಅದರಲ್ಲೂ 12ಕ್ಕೂ ಹೆಚ್ಚು ದೊಡ್ಡ ರಾಜ್ಯಗಳಲ್ಲಿ ಪಕ್ಷದ ಮತ ಪ್ರಮಾಣವು ಶೇ.50ಕ್ಕಿಂತಲೂ ಅಧಿಕವಾಗಿದೆ.
ಈ ಫಲಿತಾಂಶದಲ್ಲಿ ಬಿಜೆಪಿಗೆ ಸ್ವಲ್ಪಮಟ್ಟಿಗೆ ನಿರಾಸೆ ಮೂಡಿಸಿದ್ದೆಂದರೆ ದಕ್ಷಿಣ ಭಾರತ. ಇಲ್ಲಿ ಕರ್ನಾಟಕ ಹೊರತುಪಡಿಸಿದಂತೆ ಉಳಿದೆಲ್ಲ ರಾಜ್ಯಗಳಲ್ಲೂ ಬಿಜೆಪಿಯ ನಾಗಾಲೋಟಕ್ಕೆ ಪ್ರಾದೇಶಿಕ ಪಕ್ಷಗಳು ಕಡಿವಾಣ ಹಾಕಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆ ಕ್ಲೀನ್‌ಸ್ವೀಪ್ ಮಾಡಿದ್ದರೆ, ಆಂಧ್ರಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿಯವರ ವೈಎಸ್ಸಾರ್ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಟಿಆರ್‌ಎಸ್ ಪ್ರಾಬಲ್ಯ ಮೆರೆದಿವೆ. ಇನ್ನು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕ್ಲೀನ್ ಸ್ವೀಪ್ ಮಾಡಿದ್ದು, ಬಿಜೆಪಿಗೆ ಇಲ್ಲಿ ಖಾತೆಯನ್ನೇ ತೆರೆಯಲು ಅವಕಾಶ ಕೊಟ್ಟಿಲ್ಲ.
ಇದು ಅಲೆಯಲ್ಲ, ಸುನಾಮಿ: ದೇಶಾದ್ಯಂತ ಅಪ್ಪಳಿಸಿದ ಮೋದಿಯ ಸುನಾಮಿಯ ಮುಂದೆ ಅವರನ್ನು ಸೋಲಿಸಲು ಯತ್ನಿಸಿದ್ದ ಪ್ರತಿಪಕ್ಷಗಳು ಧೂಳೀಪಟವಾದವು. ಭಾರತೀಯ ಮತದಾರರು ಸ್ಥಿರ ಸರ್ಕಾರಕ್ಕೆ ತಮ್ಮ ಒಪ್ಪಿಗೆಯ ಮುದ್ರೆಯೊತ್ತಿದರು. ಅಗೋಚರವಾದ ಹಾಗೂ ಮೌನವಾಗಿದ್ದ ಮೋದಿ ಅಲೆಯು ಹಿಂದಿ ಹಾರ್ಟ್‌ಲ್ಯಾಂಡ್, ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲೂ ಅಬ್ಬರಿಸಿತು. ಪುಲ್ವಾಮಾ ದಾಳಿಯ ನಂತರದ ಬೆಳವಣಿಗೆಗಳು, ಸ್ಥಿರ ಸರ್ಕಾರದ ಆಶ್ವಾಸನೆ, ಒಗ್ಗಟ್ಟಾಗುವಲ್ಲಿ ವಿಫಲವಾದ ಪ್ರತಿಪಕ್ಷಗಳು, ವಿಫಲ ಕಾರ್ಯತಂತ್ರಗಳ ಮೊರೆಹೋದ ಕಾಂಗ್ರೆಸ್. ಹೀಗೆ ಹತ್ತು ಹಲವು ಅಂಶಗಳು ಆಡಳಿತ ವಿರೋಧಿ ಅಲೆಯನ್ನೂ ಮೆಟ್ಟಿ ನಿಂತವು. ಒಂದು ಕಡೆ ಪುಲ್ವಾಮಾದಲ್ಲಿ 44 ಯೋಧರನ್ನು ಕಳೆದುಕೊಂಡ ಆಕ್ರೋಶದಲ್ಲಿ ಜನರಿದ್ದಾಗ, ಬಾಲಕೋಟ್ ದಾಳಿ ಮೂಲಕ ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದ ಮೋದಿ, ಜನರ ಮೆಚ್ಚುಗೆಗೆ ಪಾತ್ರರಾದರು.
ಇನ್ನು ಪ್ರಾದೇಶಿಕ ಪಕ್ಷಗಳ ವಿಚಾರಕ್ಕೆ ಬಂದರೆ, ಉತ್ತರಪ್ರದೇಶದಲ್ಲಿ ಮೋದಿಗೆ ಅತಿದೊಡ್ಡ ಆಘಾತ ನೀಡಲಿದೆ ಎಂದೇ ನಂಬಲಾಗಿದ್ದ ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೂಡ ಮೋದಿ ಫ್ಯಾಕ್ಟರ್ ಮುಂದೆ ಕೊಚ್ಚಿಹೋದವು. ದೀದಿಯ ಭದ್ರಕೋಟೆಯಲ್ಲೂ ಮೋದಿ-ಅಮಿತ್ ಶಾ ಜೋಡಿ ಬಿರುಕು ಮೂಡಿಸಿತು. ‘ನೀವು ಅರಿತ್ಮಾಟಿಕ್(ಅಂಕಗಣಿತ) ಅನ್ನು ನೋಡಬೇಡಿ, ಕೆಮಿಸ್ಟ್ರಿಯನ್ನು ನೋಡಿ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ಹೇಳಿದಂತೆ, ಜನಸಾಮಾನ್ಯನ ಜೊತೆಗಿನ ಮೋದಿಯ ಕೆಮಿಸ್ಟ್ರಿ ಈ ಚುನಾವಣೆಯಲ್ಲಿ ವರ್ಕ್ ಔಟ್ ಆಯಿತು.
ಇನ್ನು ಈ ಭರ್ಜರಿ ಗೆಲುವಿನಲ್ಲಿ ಮೋದಿಯ ಸಾರಥಿ ಅಮಿತ್ ಶಾ ಅವರ ಪಾಲೂ ಮಹತ್ವದ್ದೇ ಆಗಿದೆ. ಪೂರ್ವಭಾಗದಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಆಶ್ವಾಸನೆಯನ್ನು ಅವರು ಈಡೇರಿಸಿದ್ದಾರೆ. ಎನ್‌ಡಿಎಯ ಮಿಷನ್ 350ಯ ಹೀರೋ ಅಮಿತ್ ಶಾ. ತಮ್ಮ ಅದ್ಭುತ ಕಾರ್ಯತಂತ್ರ ಹಾಗೂ ಸಂಘಟನಾ ಚಾತುರ್ಯದ ಮೂಲಕ ಶಾ ಅವರು ಅಸಾಧ್ಯವಾದುದ್ದನ್ನೂ ಸಾಧಿಸಿ ತೋರಿಸಿದ್ದಾರೆ.
ಒಟ್ಟಿನಲ್ಲಿ ದೇಶದ ಜನ ಬಿಜೆಪಿಗೆ ಮತ್ತೆ 5 ವರ್ಷಗಳ ‘ಅಚ್ಛೇ ದಿನ್’ ಅನ್ನು ದಯಪಾಲಿಸಿದ್ದಾರೆ. ಆದರೆ, ಮುಂದಿನ 5 ವರ್ಷಗಳು ಬಿಜೆಪಿಗೆ ಸುಲಭದ ಹಾದಿಯಲ್ಲ. ದೇಶದ ಮುಂದಿರುವ ಹಲವು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದ ಅತಿದೊಡ್ಡ ಹೊಣೆಗಾರಿಕೆಯು ಬಿಜೆಪಿಯ ಹೆಗಲಿಗೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.