ಮಹಾಮೈತ್ರಿಯಲ್ಲ, ಅವಕಾಶವಾದಿಗಳ ಕೂಟ

ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ವಿರುದ್ಧ ಪ್ರಧಾನಿ ಮೋದಿ ಕಿಡಿ

Team Udayavani, Apr 28, 2019, 6:00 AM IST

23

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಶನಿವಾರ ಅಜ್ಮ್ರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

ಹೊಸದಿಲ್ಲಿ: ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದಲ್ಲಿ ಚುನಾವಣ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. ಶನಿವಾರ ಒಂದೇ ದಿನ ಇಲ್ಲಿನ ಕನೌಜ್‌, ಹರ್ದೋಯಿ ಮತ್ತು ಸೀತಾಪುರದಲ್ಲಿ ರ್ಯಾಲಿ ನಡೆಸಿದ್ದು, ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿ ಕೂಟವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಈಗಾಗಲೇ ಮಹಾಮೈತ್ರಿಯನ್ನು ಮಹಾ ಕಲಬೆರಕೆ ಎಂದು ಬಣ್ಣಿಸಿರುವ ಮೋದಿ, ಶನಿವಾರದ ರ್ಯಾಲಿ ಯಲ್ಲಿ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿಯನ್ನು ಅವಕಾಶವಾದಿಗಳ ಕೂಟ ಎಂದು ಕರೆದಿದ್ದಾರೆ. ಈ ಅವಕಾಶವಾದಿಗಳಿಗೆ ಅಸಹಾಯಕ ಸರಕಾರವೇ ಬೇಕಾಗಿದೆ. ಏಕೆಂದರೆ ಜನರನ್ನು ಲೂಟಿ ಮಾಡುವುದೇ ಅವರ ಧ್ಯೇಯವಾಗಿದೆ ಎಂದು ಆರೋಪಿಸಿ ದ್ದಾರೆ. ಜತೆಗೆ, ನಿಮ್ಮ ಪ್ರತಿಯೊಂದು ಮತವೂ ಮೋದಿಯ ಖಾತೆಗೆ ಜಮೆಯಾಗುತ್ತದೆ ಎಂದಿದ್ದಾರೆ.

ಇದೇ ವೇಳೆ, ಬಿಎಸ್ಪಿ ನಾಯಕಿ ಮಾಯಾವತಿ ಯವರ ಕಾಲೆಳೆದ ಮೋದಿ, “ಮಾಯಾವತಿಯ ವರೇ, ನಾನು ಕೂಡ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವನು. ನನ್ನನ್ನು ಈ ಜಾತಿ ರಾಜಕೀಯಕ್ಕೆ ಎಳೆದು ತರಬೇಡಿ ಎಂದು ನಿಮಗೆ ಕೈಮುಗಿದು ಕೇಳಿ ಕೊಳ್ಳುತ್ತೇನೆ. 130 ಕೋಟಿ ಜನರೂ ನನ್ನ ಕುಟುಂಬವಿದ್ದಂತೆ. ಪ್ರತಿಸ್ಪರ್ಧಿಗಳು ನನ್ನನ್ನು ಅವಹೇಳನ ಮಾಡು ವವರೆಗೂ ದೇಶಕ್ಕೆ ನನ್ನ ಜಾತಿಯ ಬಗ್ಗೆ ಗೊತ್ತಿರಲಿಲ್ಲ. ಹಿಂದುಳಿದ ವರ್ಗದಲ್ಲಿ ಜನಿಸುವುದು ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವಿದ್ದಂತೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಮೂರ್ಖ ಕೆಲಸ ಯಾರೂ ಮಾಡಿರಲಿಲ್ಲ: ಅತ್ತ ಕನೌಜ್‌, ಸೀತಾಪುರದಲ್ಲಿ ಮೋದಿ ಚುನಾವಣ ಪ್ರಚಾರ ನಡೆಸುತ್ತಿದ್ದರೆ, ಇದೇ ರಾಜ್ಯದ ರಾಯ್‌ಬರೇಲಿ ಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರೂ ಪ್ರಚಾರದಲ್ಲಿ ನಿರತರಾಗಿದ್ದರು. ಇಲ್ಲಿ ಮಾತ ನಾಡಿದ ಅವರು, ನೋಟು ಅಮಾನ್ಯ, ಗಬ್ಬರ್‌ಸಿಂಗ್‌ ಟ್ಯಾಕ್ಸ್‌(ಜಿಎಸ್‌ಟಿ)ನಂಥ ಮೂರ್ಖ ತನದ ನಿರ್ಧಾರ ಗಳನ್ನು ಕಳೆದ 70 ವರ್ಷಗಳಲ್ಲಿ ಯಾರೂ ಕೈಗೊಂಡಿರಲಿಕ್ಕಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಚೌಕಿದಾರನು ರಾಯ್‌ಬರೇಲಿ ಮತ್ತು ಅಮೇಠಿಯ ಫ್ಯಾಕ್ಟರಿಗಳು ಹಾಗೂ ಜನರ ಉದ್ಯೋಗಗಳನ್ನು ಕದ್ದರು. ಕೇಂದ್ರ ಸರಕಾರ ದಲ್ಲಿ ಖಾಲಿ ಇರುವ 22 ಲಕ್ಷ ಉದ್ಯೋಗಗಳನ್ನೂ ಮೋದಿ ಭರ್ತಿ ಮಾಡ ಲಿಲ್ಲ. ಆದರೆ ನಾವು ಅಧಿ ಕಾರಕ್ಕೆ ಬಂದರೆ ಒಂದೇ ವರ್ಷ ದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಮಾತ್ರ ವಲ್ಲ, ಪಂಚಾಯತ್‌ಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ ಎಂದೂ ರಾಹುಲ್‌ ವಾಗ್ಧಾನ ನೀಡಿದ್ದಾರೆ.

ಮೋದಿ ವಿರುದ್ಧ ದೂರು: ವಾರಾಣಸಿಯಲ್ಲಿ ರೋಡ್‌ಶೋ ಮೂಲಕ ಪ್ರಧಾನಿ ಮೋದಿ ಅವರ ಚುನಾವಣ ವೆಚ್ಚ 70 ಲಕ್ಷ ರೂ.ಗಳ ಮಿತಿಯನ್ನು ದಾಟಿದೆ ಎಂದು ಚುನಾವಣ ಆಯೋಗಕ್ಕೆ ಆಮ್‌ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್‌ ಸಿಂಗ್‌ ದೂರು ನೀಡಿದ್ದಾರೆ. ಗುರುವಾರದ ರೋಡ್‌ಶೋಗೆ 1.27 ಕೋಟಿ ರೂ. ವೆಚ್ಚ ಮಾಡಲಾಗಿದೆ. ವಿವಿಧ ಬಿಜೆಪಿ ನಾಯಕರು ವಾರಾಣಸಿಗೆ ಬರಲು ಖಾಸಗಿ ವಿಮಾನಗಳನ್ನು ಬಳಸಿದ್ದು, ಅದಕ್ಕೇ 64 ಲಕ್ಷ ರೂ. ವೆಚ್ಚವಾಗಿದೆ. 100 ಮಂದಿ ನಾಯಕರು ವಾಣಿಜ್ಯ ವಿಮಾನಗಳಲ್ಲಿ ಬಂದಿದ್ದು, ಅದಕ್ಕೆ 15 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಹೊಟೇಲ್‌ಗೆ 8 ಲಕ್ಷ ರೂ., ವಾಹನಗಳಿಗೆ 6 ಲಕ್ಷ ರೂ., ಆಹಾರಕ್ಕೆ 5 ಲಕ್ಷ ರೂ, ಚುನಾವಣ ಪರಿಕರಗಳಿಗೆ 5 ಲಕ್ಷ ರೂ., ಸಾಮಾ ಜಿಕ ಮಾಧ್ಯಮಗಳಲ್ಲಿ ಪ್ರಚಾರ, ಸೌಂಡ್‌ ಸಿಸ್ಟಂ ಮತ್ತು ವೇದಿಕೆಗೆ ತಲಾ 2 ಲಕ್ಷ ರೂ., ಕಾರ್ಯಕರ್ತ ರನ್ನು ರೈಲಿನ ಮೂಲಕ ಕರೆತರಲು 20 ಲಕ್ಷ ರೂ.ವೆಚ್ಚ ಮಾಡಿದ್ದಾರೆ. ಒಟ್ಟಾರೆ ವೆಚ್ಚವು 70 ಲಕ್ಷ ರೂ.ಗಳನ್ನು ದಾಟಿದೆ ಎಂದು ಸಿಂಗ್‌ ಆರೋಪಿಸಿದ್ದಾರೆ.

370ನೇ ವಿಧಿ ತೆಗೆದುಹಾಕುವ ಆಶ್ವಾಸನೆ: ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿ ಧಾನದ 370ನೇ ವಿಧಿಯನ್ನು ತೆಗೆದುಹಾಕುತ್ತೇವೆ  ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಶ್ವಾಸನೆ ನೀಡಿ ದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪ್ರಚಾರ ರ್ಯಾಲಿ ನಡೆಸಿದ ಅವರು, ಬಿಜೆಪಿ ಅಸ್ತಿತ್ವ ದಲ್ಲಿರುವವರೆಗೂ ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ವಾಗಿಯೇ ಉಳಿಯುತ್ತದೆ ಎಂದಿ ದ್ದಾರೆ. ಇದಾದ ಬಳಿಕ ಒಡಿಶಾದಲ್ಲಿ ರ್ಯಾಲಿ ನಡೆಸಿದ ಶಾ, ಭ್ರಷ್ಟ ಹಾಗೂ ಅದಕ್ಷ ಬಿಜೆಡಿ ಸರಕಾರವನ್ನು ಕೆಳಗಿಳಿ ಸುವವರೆಗೂ ಒಡಿಶಾದ ಅಭಿವೃದ್ಧಿ ಸಾಧ್ಯವಿಲ್ಲ ಎಂದಿದ್ದಾರೆ.

ಮೋದಿಗೆ ಜನರ ಭೇಟಿಗೆ ಸಮಯವಿಲ್ಲ
ಟಿವಿ ಸ್ಟಾರ್‌ಗಳಿಗೆ ಸಂದರ್ಶನ ನೀಡುವ ಪ್ರಧಾನಿ ಮೋದಿ ಅವರಿಗೆ ಜನಸಾಮಾನ್ಯರನ್ನು ಭೇಟಿಯಾಗಲು ಸಮಯವಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಶನಿ ವಾರ ರೋಡ್‌ಶೋ ನಡೆಸಿದ ಬಳಿಕ ಅವರು ಮಾತ ನಾಡಿದರು. ನಾನು ವಾರಾಣಸಿಗೆ ಹೋದಾಗ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎನ್ನುವುದು ಮನದಟ್ಟಾಯಿತು. 150 ಕಿ.ಮೀ. ರಸ್ತೆಯು ಪ್ರಸ್ತಾಪದಲ್ಲಿ ಮಾತ್ರವೇ ಇದೆ. ನಿಜವಾಗಿ ಆಗಿರು ವುದು 15 ಕಿ.ಮೀ. ರಸ್ತೆ ಮಾತ್ರ. ಕಾರ್ಮಿಕರಿಗೆ ಉದ್ಯೋಗ ಖಾತ್ರಿಯ ಮೊತ್ತವನ್ನು ಕೊಟ್ಟಿಲ್ಲ. ವಾರಾ  ಣಸಿಯಲ್ಲಿ ವಿಕಾಸ ಎಲ್ಲಿದೆ ಎಂದು ಮೋದಿ ಯವರೇ ತೋರಿಸಬೇಕು ಎಂದು ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ಜನರು ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ರೈತರಿಗೆ ಸರ್ಕಾರದಿಂದ ಯಾವುದೇ ಅನುಕೂಲ ಆಗಿಲ್ಲ, ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಇದು ವಾಸ್ತವ. ಆದರೆ, ಮತ್ತೂಂದು ಕಡೆ ನೋಡಿದಾಗ, ನಮಗೆ ಮಾರ್ಕೆಟಿಂಗ್‌ ಮತ್ತು ಜಾಹೀರಾತಿನ ಭರಾಟೆ ಕಾಣಸಿಗುತ್ತದೆ. ಪ್ರಧಾನಿ ಮೋದಿಯ ಫೋಟೋ ಮಿಂಚುತ್ತಿರುತ್ತದೆ. ಜನ ಸಾಮಾನ್ಯರು ನೋವು ಅನುಭವಿಸುತ್ತಿದ್ದರೆ, ಪ್ರಧಾನಿ ಮೋದಿ ತಮಗೆ ತಾವೇ ಪ್ರಚಾರ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದೂ ಹೇಳಿದ್ದಾರೆ.

ರಾಹುಲ್‌ - ಪ್ರಿಯಾಂಕಾ ವಿಡಿಯೋ ವೈರಲ್‌
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಅವರು ಉತ್ತರ ಪ್ರದೇಶದ ಕಾನ್ಪುರದ ವಿಮಾನ ನಿಲ್ದಾಣದಲ್ಲಿ ಅಚಾನಕ್‌ ಆಗಿ ಭೇಟಿಯಾದಾಗ ಪರಸ್ಪರ ಹಂಚಿಕೊಂಡ ಆತ್ಮೀಯ ಘಳಿಗೆಯ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ಸ್ವತಃ ರಾಹುಲ್‌ ಗಾಂಧಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ    ದ್ದಾರೆ. ಕಾನ್ಪುರದಲ್ಲಿ ಪ್ರಿಯಾಂಕಾಳನ್ನು ಭೇಟಿಯಾಗಿದ್ದು ಖುಷಿಯಾಯಿತು. ನಾವಿಬ್ಬರೂ ಉತ್ತರ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಇಂದು ಪ್ರಚಾರಕ್ಕೆ ತೆರಳುತ್ತಿದ್ದೇವೆ ಎಂದು ಅವರು ಅಡಿಬರಹ ಬರೆದಿದ್ದಾರೆ.

ವಿಡಿಯೋದಲ್ಲಿ ರಾಹುಲ್‌ ಹಾಗೂ ಪ್ರಿಯಾಂಕಾ ಪರಸ್ಪರರ ಹೆಗಲ ಮೇಲೆ ಕೈ ಹಾಕಿಕೊಂಡು ಆತ್ಮೀಯವಾಗಿ ಮಾತನಾಡುತ್ತಾರೆ. ಅನಂತರ ಮಾತ ನಾಡುವ ರಾಹುಲ್‌, “ಉತ್ತಮ ಸಹೋದರನಾಗಿರುವುದೆಂದರೆ ಹೀಗೆ: ನಾನು ಹೆಚ್ಚು ದೂರ ಪ್ರಯಾ ಣಿಸುತ್ತೇನೆ.

ಆದರೆ ಇಕ್ಕಟ್ಟಿನ ಪುಟ್ಟ ಹೆಲಿಕಾಪ್ಟರ್‌ ಬಳಸುತ್ತೇನೆ. ಆದರೆ ಪ್ರಿಯಾಂಕಾ ಕಡಿಮೆ ದೂರ ಪ್ರಯಾಣಿಸುತ್ತಾರೆ. ಆದರೆ ದೊಡ್ಡ ಹೆಲಿ ಕಾಪ್ಟರ್‌ ಬಳಸುತ್ತಾರೆ. ಆದರೂ ನಾನು ನನ್ನ ತಂಗಿ ಯನ್ನು ಪ್ರೀತಿಸುತ್ತೇನೆ’ ಎಂದು ಅವರು ನಗು ನಗುತ್ತಾ ಹೇಳುವಾಗ, ಅದನ್ನು ಪ್ರಿಯಾಂಕಾ ನಿರಾಕರಿ ಸುತ್ತಾರೆ. ಅನಂತರ ಪೈಲಟ್‌ಗಳೊಂದಿಗೆ ಅಣ್ಣ- ತಂಗಿ ಫೋಟೋಗೆ ಪೋಸ್‌ ಕೊಟ್ಟು, ಪರಸ್ಪರ ಆಲಿಂಗಿಸಿಕೊಂಡು ತಮ್ಮ ತಮ್ಮ ಕಾಪ್ಟರ್‌ಗಳತ್ತ ಹೊರಡುತ್ತಾರೆ.

ಕೋರ್ಟ್‌ ಮೆಟ್ಟಿಲೇರುವುದಾಗಿ ಕಾಂಗ್ರೆಸ್‌ ಎಚ್ಚರಿಕೆ
ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪದೇ ಪದೆ ಚುನಾವಣ ನೀತಿ ಸಂಹಿತೆ ಉಲ್ಲಂ ಸುತ್ತಿದ್ದು, ಅವರ ವಿರುದ್ಧ ಚುನಾವಣ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಪ್ರಶ್ನಿಸಿ ನಾವು ಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ಕಾಂಗ್ರೆಸ್‌ ಶನಿವಾರ ಎಚrರಿಸಿದೆ. ಮೆಗಾ ಪೊಲೀಸ್‌ಮನ್‌ ಎಂದು ಕರೆಯಲ್ಪಡುವ ಚುನಾವಣ ಆಯೋಗದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ ಹಿರಿಯ ನಾಯಕ ಅಭಿಷೇಕ್‌ ಮನು ಸಿಂಗ್ವಿ, “ಮೋದಿ ಹಾಗೂ ಶಾ ಅವರು ನೀತಿ ಸಂಹಿತೆಯ ವ್ಯಾಪ್ತಿಯಿಂದ ಹೊರಗಿದ್ದಾರೆಯೇ, ಇದೇನು ಮಾಡೆಲ್‌ ಕೋಡೋ ಅಥವಾ ಮೋದಿ ಕೋಡ್‌ ಆಫ್ ಕಂಡಕ್ಟೋ’ ಎಂದು ಪ್ರಶ್ನಿಸಿದ್ದಾರೆ. ಮೋದಿ ಮತ್ತು ಶಾ ಅವರು ತಮ್ಮ ರ್ಯಾಲಿಗಳಲ್ಲಿ, ಮೂರು ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂ ಸುತ್ತಿದ್ದಾರೆ. ಅವೆಂದರೆ, “ಮತಗಳ ಧ್ರುವೀಕರಣ, ಪ್ರಚಾರದಲ್ಲಿ ಸಶಸ್ತ್ರ ಪಡೆಗಳ ಹೆಸರು ಬಳಕೆ ಮತ್ತು ಮತದಾನದ ದಿನದಂದೇ ರ್ಯಾಲಿ ನಡೆಸುವುದು’. ಹೀಗಿದ್ದರೂ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ನಾವು ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದೂ ಹೇಳಿದ್ದಾರೆ.

“ನ್ಯಾಯ್‌’ ಆಡಿಯೋಗೆ ಪ್ರಿಯಾಂಕಾ ಧ್ವನಿ
ಕಾಂಗ್ರೆಸ್‌ ಘೋಷಿಸಿರುವ ಕನಿಷ್ಠ ಆದಾಯ ಖಾತ್ರಿ ಯೋಜನೆ(ನ್ಯಾಯ್‌)ಗೆ ಜನಸಾಮಾನ್ಯರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ತಮ್ಮ ಚುನಾವಣ ಆಶ್ವಾಸನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಹೊಸ ತಂತ್ರವನ್ನು ಪಕ್ಷ ಹೂಡಿದೆ. ನ್ಯಾಯ್‌ ಯೋಜನೆ ಕುರಿತು ಅರಿವು ಮೂಡಿಸುವ ಆಡಿಯೋ ಕ್ಲಿಪ್‌ವೊಂದನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಕಾಂಗ್ರೆಸ್‌ ಇಳಿದಿದೆ. ಈ ಆಡಿಯೋದಲ್ಲಿ ಪ್ರಿಯಾಂಕಾ ವಾದ್ರಾರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಹಿಂದಿ ಹಾರ್ಟ್‌ಲ್ಯಾಂಡ್‌ ರಾಜ್ಯಗಳಾದ ಜಾರ್ಖಂಡ್‌, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುಮಾರು 40 ಲಕ್ಷ ಜನರಿಗೆ ಈ ಆಡಿಯೋ ಕ್ಲಿಪ್‌ ಅನ್ನು ಹಂಚಲಾಗಿದೆ. ಇದಕ್ಕೂ ಮುನ್ನ ಉತ್ತರಪ್ರದೇಶದಲ್ಲೂ ಇದೇ ಸಂದೇಶವನ್ನು ರವಾನಿಸಲಾಗಿತ್ತು.

ಕಾಂಗ್ರೆಸ್‌ ಗಾಂಧಿ, ಪಟೇಲ್‌, ಜಿನ್ನಾರ ಪಕ್ಷ!
ಇತ್ತೀಚೆಗಷ್ಟೇ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಟ ಶತ್ರುಘ್ನ ಸಿನ್ಹಾ ಶನಿವಾರ ಕಾಂಗ್ರೆಸ್ಸನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. “ಕಾಂಗ್ರೆಸ್‌ ಪರಿವಾರವು ಮಹಾತ್ಮ ಗಾಂಧಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಜವಾಹರಲಾಲ್‌ ನೆಹರೂ ಮತ್ತಿತರರ ಪಕ್ಷ’ ಎಂದು ಹೇಳುವಾಗ ಸಿನ್ಹಾ ಅವರು, ಈ ಹೆಸರುಗಳ ನಡುವೆ ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾರ ಹೆಸರನ್ನೂ ಸೇರಿಸಿ ನಗೆಪಾಟಲಿಗೀಡಾಗಿದ್ದಾರೆ. ಕಾಂಗ್ರೆಸ್‌ನ ಪ್ರಮುಖರ ನಡುವೆ ಜಿನ್ನಾರ ಹೆಸರನ್ನು ಸೇರಿಸಿದ್ದು ಸುದ್ದಿಯಾಗುತ್ತಿದ್ದಂತೆ, ಪ್ರತಿಕ್ರಿಯೆ ನೀಡಿದ ಅವರು, “ನಾನು ಮೌಲಾನಾ ಆಜಾದ್‌ ಎಂದು ಹೇಳುವ ವೇಳೆ ಬಾಯಿತಪ್ಪಿ ಜಿನ್ನಾ ಎಂದು ಹೇಳಿಬಿಟ್ಟೆ’ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಇಷ್ಟಕ್ಕೆ ಸುಮ್ಮನಿರದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, “ಸಿನ್ಹಾ ಅವರು ಬಿಜೆಪಿಯಲ್ಲಿದ್ದಾಗ ರಾಷ್ಟ್ರೀಯವಾದದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ಜಿನ್ನಾರನ್ನು ಶ್ರೇಷ್ಠ ನಾಯಕ ಎಂದು ಹೇಳುತ್ತಿದ್ದಾರೆ’ ಎಂದು ಕಟಕಿಯಾಡಿದ್ದಾರೆ.

ಬೋಗಸ್‌ ಮತದಾನ: ವರದಿ ಕೇಳಿದ ಕೇರಳ ಸಿಇಒ
ಕಾಸರಗೋಡು ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಬೋಗಸ್‌ ಮತದಾನ ನಡೆದಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳದ ಮುಖ್ಯ ಚುನಾವಣ ಅಧಿಕಾರಿ ಟೀಕಾ ರಾಮ್‌ ಮೀನಾ ಶನಿವಾರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದಾರೆ. ವರದಿ ಬಂದ ಕೂಡಲೇ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಮೀನಾ ಹೇಳಿದ್ದಾರೆ. ಕಾಸರಗೋಡಿನಲ್ಲಿ ಮಹಿಳೆಯರೂ ಸೇರಿದಂತೆ ಕೆಲವರು ಎರಡು ಪ್ರತ್ಯೇಕ ಮತಗಟ್ಟೆಗಳಲ್ಲಿ ಎರಡೆರಡು ಬಾರಿ ಹಕ್ಕು ಚಲಾಯಿಸಿದ ವಿಡಿಯೋಗಳನ್ನು ಸ್ಥಳೀಯ ಟಿವಿ ಚಾನೆಲ್‌ಗ‌ಳು ಪ್ರಸಾರ ಮಾಡಿದ್ದವು. ಇದು ವಿವಿಧ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿತ್ತು.

ಕುಸಿದುಬಿದ್ದ ಗಡ್ಕರಿ
ಮಹಾರಾಷ್ಟ್ರದ ಶಿರ್ಡಿಯಲ್ಲಿ ಶನಿವಾರ ಸಂಜೆ ಚುನಾವಣ ಪ್ರಚಾರ ನಡೆಯುತ್ತಿದ್ದ ವೇಳೆ ಕೇಂದ್ರ ಸಚಿವ, ಬಿಜೆಪಿ ನಾಯಕ ನಿತಿನ್‌ ಗಡ್ಕರಿ ಅವರು ವೇದಿಕೆಯಲ್ಲೇ ಕುಸಿದುಬಿದ್ದ ಘಟನೆ ನಡೆದಿದೆ. ಅವರು ಶಿರ್ಡಿ ಕ್ಷೇತ್ರದ ಶಿವಸೇನಾ ಅಭ್ಯರ್ಥಿ ಸದಾಶಿವ ಲೋಖಂಡೆ ಪರ ಪ್ರಚಾರ ನಡೆಸುತ್ತಿ ದ್ದರು. ವೇದಿಕೆಯಲ್ಲಿ ಭಾಷಣ ಮಾಡಿ ತಮ್ಮ ಆಸನದತ್ತ ವಾಪಸಾಗುತ್ತಿದ್ದಂತೆ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಅವರ ಭದ್ರತಾ ಸಿಬಂದಿ ಹಾಗೂ ಅಹಮದ್‌ನಗರ ಕ್ಷೇತ್ರದ ಅಭ್ಯರ್ಥಿ ಸುಜಯ್‌ ಪಾಟೀಲ್‌ ಸಹಾಯಕ್ಕೆಂದು ಧಾವಿಸಿದರಾದರೂ, ಸಾವರಿಸಿಕೊಂಡು ಎದ್ದ ಗಡ್ಕರಿ, ಅನಂತರ ನಡೆದುಕೊಂಡೇ ತಮ್ಮ ಕಾರಿನ ಬಳಿಗೆ ತೆರಳಿದರು. 2018ರ ಡಿ.7ರಂದು ರಹುರಿ ಕೃಷಿ ವಿವಿಯ ಘಟಿಕೋತ್ಸವ ಕಾರ್ಯಕ್ರಮದ ವೇಳೆಯೂ ಗಡ್ಕರಿ ಕುಸಿದು ಬಿದ್ದಿದ್ದರು.

ಗೌತಮ್‌ ಗಂಭೀರ್‌ ವಿರುದ್ಧ ಎಫ್ಐಆರ್‌
ದಿಲ್ಲಿಯ ಜಂಗಪುರದಲ್ಲಿ ಅನುಮತಿ ಪಡೆಯದೇ ಚುನಾವಣ ಪ್ರಚಾರ ರ್ಯಾಲಿ ನಡೆಸಿದ ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ಪೂರ್ವ ದಿಲ್ಲಿಯ ಚುನಾವಣ ಅಧಿಕಾರಿ ಸೂಚಿಸಿದ್ದಾರೆ. ಪೂರ್ವ ದಿಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಗಂಭೀರ್‌ ಒಪ್ಪಿಗೆಯನ್ನೇ ಪಡೆಯದೆ ಗುರುವಾರ ರ್ಯಾಲಿ ಕೈಗೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಆಪ್‌ ಅಭ್ಯರ್ಥಿ ಆತಿಷಿ, “ಆಟದ ನಿಯಮಗಳೇ ಗೊತ್ತಿರದಾಗ, ಆಟ ಆಡುವುದಾದರೂ ಏತಕ್ಕೆ’ ಎಂದು ಪ್ರಶ್ನಿಸಿದ್ದಾರೆ.

ಇವಿಎಂ ದೋಷ: ಕೈಗೆ ವೋಟು!
ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಮತದಾನಕ್ಕಾಗಿ ಅಣಕು ಮತದಾನ ನಡೆದ ವೇಳೆ ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ ಮತ ಬಿಜೆಪಿಗೇ ಹೋಗುತ್ತಿತ್ತು ಎಂಬ ಮಾಧ್ಯಮಗಳ ವರದಿಯನ್ನು ಗೋವಾ ಚುನಾವಣ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಇದು ಸುಳ್ಳು ಹಾಗೂ ದಾರಿತಪ್ಪಿಸುವ ವರದಿ ಎಂದು ಹೇಳಿದ್ದಾರೆ. ಅಲ್ಲದೆ, ದೋಷಪೂರಿತ ಇವಿಎಂನಲ್ಲಿ ಮತಗಳು ಬಿಜೆಪಿಗಲ್ಲ, ಕಾಂಗ್ರೆಸ್‌ಗೆ ಹೋಗು ತ್ತಿದ್ದವು ಎಂದೂ ಅವರು ಹೇಳಿದ್ದಾರೆ. ತಕ್ಷಣವೇ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ಬದಲಿಸಲಾಯಿತು ಎಂದಿದ್ದಾರೆ.

ರಾಹುಲ್‌ ವಿರುದ್ಧ ಕೇಸು
ಬಿಹಾರದ ಚುನಾವಣ ರ್ಯಾಲಿ ವೇಳೆ ಚೌಕಿದಾರ್‌ ಚೋರ್‌ ಹೇ ಎಂದು ಹೇಳಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಸ್ಥಳೀಯ ಕೋರ್ಟ್‌ ನಲ್ಲಿ ದೂರು ದಾಖ ಲಾಗಿದೆ. ಸತ್ಯವ್ರತ್‌ ಎಂಬ ಸ್ಥಳೀಯ ವಕೀಲರು ಈ ಕುರಿತು ದೂರು ಸಲ್ಲಿಸಿದ್ದು, ದೂರಿನಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೆಸರನ್ನೂ ಸೇರಿಸಿದ್ದಾರೆ. ಎ. 29ರಂದು ಇದರ ವಿಚಾರಣೆ ನಡೆಯಲಿದೆ. ಈ ನಡುವೆ, ರಾಹುಲ್‌ ವಿರುದ್ಧ ಬಿಹಾರ ಡಿಸಿಎಂ ಸುಶೀಲ್‌ ಮೋದಿ ಸಲ್ಲಿಸಿದ್ದ ಮಾನಹಾನಿ ಪ್ರಕರಣ ಸಂಬಂಧ ಮೇ 20ರಂದು ಖುದ್ದು ಹಾಜರಾಗುವಂತೆ ರಾಹುಲ್‌ಗಾಂಧಿಗೆ ಪಾಟ್ನಾದ ನ್ಯಾಯಾಲಯ ನಿರ್ದೇಶನ ನೀಡಿದೆ. “ಎಲ್ಲ ಕಳ್ಳರೂ ಮೋದಿ ಎಂಬ ಅಡ್ಡಹೆಸರನ್ನೇ ಏಕೆ ಹೊಂದಿರುತ್ತಾರೆ’ ಎಂಬ ರಾಹುಲ್‌ ಹೇಳಿಕೆ ಹಿನ್ನೆಲೆಯಲ್ಲಿ, ಸುಶೀಲ್‌ ಮೋದಿ ಮಾನಹಾನಿ ಕೇಸು ದಾಖಲಿಸಿದ್ದರು.

7 ನಿವೃತ್ತ ಯೋಧರು ಬಿಜೆಪಿಗೆ
ಸಶಸ್ತ್ರ ಪಡೆಯ 7 ಮಂದಿ ನಿವೃತ್ತ ಅಧಿಕಾರಿಗಳು ಶನಿವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿರುವಂಥ ಹಿರಿಯ ಸೇನಾಧಿಕಾರಿಗಳು ಪಕ್ಷ ಸೇರ್ಪಡೆ ಆಗುತ್ತಿರುವುದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಸಚಿವೆ ನಿರ್ಮಲಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಅವರು ರಾಷ್ಟ್ರೀಯ ಭದ್ರತೆ ಹಾಗೂ ದೇಶ ನಿರ್ಮಾಣದ ಕೆಲಸದಲ್ಲಿ ನಮಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದೂ ಹೇಳಿದ್ದಾರೆ. ಸೇನೆಯ ನಿವೃತ್ತ ಡೆಪ್ಯುಟಿ ಚೀಫ್ಗಳಾದ ಲೆಫ್ಟಿನೆಂಟ್‌ ಜನರಲ್‌ ಜೆಬಿಎಸ್‌ ಯಾದವ್‌, ಜ.ಎಸ್‌.ಕೆ. ಪಟ್ಯಾಲ್‌ ಸೇರಿದಂತೆ ಒಟ್ಟು 7 ಅಧಿಕಾರಿ ಗಳು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನನ್ನ ಮತ್ತು ಟಿಎಂಸಿ ನಾಯಕಿ ಮೂನ್‌ಮೂನ್‌ ಸೇನ್‌ ಸ್ನೇಹ ತೀರಾ ಹಳೆಯದು. ಆದರೆ ಅವರು ವೈಯಕ್ತಿಕ ದಾಳಿ ನಡೆಸುವುದು ಮತ್ತು ಅವರ ಮೃತ ತಾಯಿಯನ್ನು ಮುಂದಿಟ್ಟು ಕೊಂಡು ಮತ ಕೇಳುವುದು ನನಗೆ ಅಸಹ್ಯ ತರಿಸಿದೆ.
ಬಾಬುಲ್‌ ಸುಪ್ರಿಯೊ, ಬಿಜೆಪಿ ನಾಯಕ

ಪ್ರಧಾನಿಯ ವಿಮಾನಯಾನದ ವೆಚ್ಚವನ್ನು ಯಾರು ಭರಿಸುತ್ತಾರೆ? ದಿಲ್ಲಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣಕ್ಕೆ 700 ಕೋಟಿ ರೂ. ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗಳಿಗೆ ಮೋದಿ ಮೊದಲು ಉತ್ತರಿಸಲಿ. ಬಳಿಕವಷ್ಟೇ ಅವರು ನನಗೆ ಪ್ರಶ್ನೆ ಕೇಳಲಿ.
ಕಮಲ್‌ನಾಥ್‌, ಮ.ಪ್ರ. ಸಿಎಂ

ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ, ಕಳೆದ 20 ವರ್ಷ ಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಆದರೆ, ರಾಹುಲ್‌ಗಾಂಧಿ ಪ್ರತಿ 2 ತಿಂಗಳಿ ಗೊಮ್ಮೆ ರಜೆಯಲ್ಲಿ ತೆರಳುತ್ತಾರೆ. ಇವರಿಬ್ಬರನ್ನು ಹೋಲಿಕೆ ಮಾಡಲು ಸಾಧ್ಯವೇ?
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಬಿಜೆಪಿ ನೀಡುವ ಭರವಸೆಗಳು ಬರೀ ಗಾಳಿ ಮಾತುಗಳು. ಅವರ ಘೋಷಣೆ ಗಳು ಕೇವಲ ಕಪಟಿಗಳಿಗೆ ಸಹಾಯ ಮಾಡುವಂಥವು. ಅವರು ನೀಡುವ ಅಂಕಿ- ಅಂಶಗಳು ಹಸಿಹಸಿ ಸುಳ್ಳುಗಳು. ಒಟ್ಟಿನಲ್ಲಿ ಬಿಜೆಪಿ ಸುಳ್ಳು ನಾಟಕಗಳ ಮೂಟೆ.
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ರಾಧಾಕೃಷ್ಣ ವಿಖೆ ಪಾಟೀಲ್‌ ಅವರು ಕಾಂಗ್ರೆಸ್‌ ಪರವೇ ಪ್ರಚಾರ ಮಾಡುವುದಾಗಿ ಹೇಳಿದ್ದರು. ಆದರೆ, ಈಗ ನುಡಿದಂತೆ ನಡೆಯದೇ ವಂಚಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.