ಶಶಿಕಲಾ ವಿರುದ್ಧ ಸಿಡಿದೆದ್ದ ಪನ್ನೀರ್ ಸೆಲ್ವಂ ; ಜಯಾ ಆಸೆ ಏನಿತ್ತು?
Team Udayavani, Feb 8, 2017, 10:27 AM IST
ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ಸಿಡಿದೆದ್ದು, ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಬೇಕೇ ಬೇಡವೆ ಎಂಬ ಪರ-ವಿರೋಧ ಚರ್ಚೆಗಳ ನಡುವೆ ಯಾವತ್ತೂ ಮೌನವಾಗಿರುವ ಪನ್ನೀರ್‌ಸೆಲ್ವಂ ಮಂಗಳವಾರ ತಡರಾತ್ರಿ ಮರೀನಾ ಬೀಚ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಮಾಧಿ ಬಳಿಗೆ ಬಂದು ಅರ್ಧ ಗಂಟೆ ಕಾಲ ಧ್ಯಾನಸ್ಥರಾದರು. ದಿ| ಜಯಲಲಿತಾ ಅವರಿಗೆ ಅತ್ಯಂತ ಆಪ್ತರಾಗಿದ್ದ ಮಾಜಿ ಸಿಎಂ ಒಂದು ಹಂತದಲ್ಲಿ ಭಾವುಕರಾದರು.
ಇದಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪನ್ನೀರ್ ಸೆಲ್ವಂ ಅವರು ಬಲು ದೊಡ್ಡ ಬಾಂಬ್ ಅನ್ನೇ ಸಿಡಿಸಿದರು. ನನಗೆ ಪದೇ ಪದೇ ಅವಮಾನವಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಜಯಲಲಿತಾ ಅವರು ತನ್ನ ಕೈ ಹಿಡಿದು ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಬೇಕು ಎಂದು ಹೇಳಿದ್ದರು ಎಂದರು. ಆದರೆ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಶಶಿಕಲಾ ನಟರಾಜನ್ ಆಪ್ತರು ಒತ್ತಡ ಹೇರಿದ್ದರು ಎಂಬ ವಿಷಯ ಬಾಯಿಬಿಟ್ಟಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಶಶಿಕಲಾ ಅವರು ಒಮ್ಮತದ ಆಯ್ಕೆಯಾಗಿರಲಿಲ್ಲ ಎಂಬ ಸ್ಫೋಟಕ ಸತ್ಯವನ್ನೂ ಅವರು ಹೊರ ಹಾಕಿದ್ದಾರೆ. ಡಿ.5ರ ಬಳಿಕ ಹಿರಿಯ ಸಚಿವರು ಮತ್ತು ನಾಯಕರು ನನಗೆ ಅವಮಾನ ಮಾಡಿದರು ಎಂದು ದೂರಿದರು. ಜಯಲಲಿತಾ ತನ್ನನ್ನು ಮುಖ್ಯಮಂತ್ರಿಯಾಗಬೇಕೆಂದಾಗ ಅದನ್ನು ನಿರಾಕರಿಸಿ ಪಕ್ಷದಲ್ಲಿನ ಹಿರಿಯ ನಾಯಕರು ಇದ್ದಾರೆ. ಅವರನ್ನೇ ಪರಿಗಣಿಸುವಂತೆ ಮನವಿ ಮಾಡಿದ್ದನ್ನು ಕೂಡ ಬಹಿರಂಗಗೊಳಿಸಿದ್ದಾರೆ. ಆದರೆ ಅಮ್ಮ ಒಪ್ಪಿರಲಿಲ್ಲ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ. ಒಂದು ವೇಳೆ ಎಐಎಡಿಎಂಕೆ ನಾಯಕರು ಮತ್ತು ಕಾರ್ಯಕರ್ತರು ಒಪ್ಪುವುದಾದರೆ ನಾನು ರಾಜೀನಾಮೆ ಹಿಂಪಡೆಯುವುದಾಗಿ ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ. ಈ ನಡುವೆ ಪನ್ನೀರ್ ಸೆಲ್ವಂ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಫೆ. 8ರಂದು ಭೇಟಿ ಮಾಡಲು ಸಮಯ ಕೇಳಿದ್ದಾರೆಂದು ಹೇಳಲಾಗಿದೆ.
ನಿವಾಸದ ಬಳಿ ಸಂಭ್ರಮ
ಪನ್ನೀರ್ ಸೆಲ್ವಂ ಅವರ ಬಂಡಾಯದ ವಿಚಾರ ಕಾಳ್ಗಿಚ್ಚಿನಂತೆ ಹರಡುತ್ತಲೇ ಚೆನ್ನೈಯಲ್ಲಿರುವ ಅವರ ನಿವಾಸದತ್ತ ಸಾವಿರಾರು ಮಂದಿ ಅಭಿಮಾನಿಗಳು ಧಾವಿಸಿ ಬಂದರು. ‘ಸಹೋದರ ಪನ್ನೀರ್ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಅವರನ್ನು ಯಾರೂ ತಡೆಯಲಾರರು’ ಎಂದು ಅವರು ಘೋಷಣೆ ಕೂಗಿದರು.
ಪೊಯಸ್ ಗಾರ್ಡನ್‌ನಲ್ಲಿ ಸಭೆ
ಈ ಬೆಳವಣಿಗೆಯಿಂದ ಆಘಾತಗೊಂಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಪೊಯೆಸ್ ಗಾರ್ಡನ್‌ನಲ್ಲಿ ತುರ್ತು ಸಭೆ ನಡೆಸಿದರು. ಹಂಗಾಮಿ ಮುಖ್ಯಮಂತ್ರಿಯೂ ಆಗಿರುವ ಪನ್ನೀರ್ ಸೆಲ್ವಂ ಹಠಾತ್ತಾಗಿ ಬಂಡೆದ್ದಿರುವ ವಿಚಾರದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು. ಇದಕ್ಕೂ ಮುನ್ನ ಪಕ್ಷದ ಎಲ್ಲ ನಾಯಕರು ಸಭೆಗೆ ಹಾಜರಿರಬೇಕೆಂದು ವಿಪ್ ಅನ್ನೂ ಹೊರಡಿಸಿದ್ದರು ಶಶಿಕಲಾ. ಈ ನಡುವೆ ಶಶಿಕಲಾ ಬೆಂಬಲಿಸಿ ಪೊಯೆಸ್ ಗಾರ್ಡನ್ ಮುಂಭಾಗದಲ್ಲೂ ಜನರು ಸೇರಿದ್ದಾರೆ.
ಸಂಖ್ಯಾ ರಾಜಕೀಯದಾಟ
ತಮಿಳುನಾಡಿನಲ್ಲಿ ಸಂಖ್ಯಾ ರಾಜಕೀಯದಾಟ ಶುರುವಾಗಿದ್ದು, ಮಾಜಿ ಸಿಎಂ ಪರ 70 ಮಂದಿ ಶಾಸಕರು ಇದ್ದಾರೆಂದು ಹೇಳಲಾಗಿದೆ. ಈ ನಡುವೆ ಹೊಸದಿಲ್ಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ತಮಿಳುನಾಡಿನ ಬೆಳವಣಿಗೆ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಕೆಲ ಮಾಧ್ಯಮಗಳು ಹೇಳಿವೆ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಕೂಡ ತಮಿಳುನಾಡಿನ ರಾಜಕೀಯ ಬೆಳವಣಿಗೆಯನ್ನು ಕಾದು ನೋಡಲು ನಿರ್ಧರಿಸಿದೆ. ಗುರುವಾರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಕೇಂದ್ರ ಸರಕಾರಕ್ಕೆ ವರದಿ ನೀಡಲಿದ್ದಾರೆ.
ಪನ್ನೀರ್ ಸೆಲ್ವಂ ಅವರಿಗೆ ಡಿಎಂಕೆ ಮತ್ತು ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ಮಾಡಿವೆ. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸದಸ್ಯರ ಬೆಂಬಲ ಅಗತ್ಯವಿದೆ. ಡಿಎಂಕೆ 89 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ 8 ಸದಸ್ಯರು, ಇತರ 2 ಸದಸ್ಯರಿದ್ದಾರೆ. ಒಂದು ಸ್ಥಾನ ಖಾಲಿ ಇದೆ. ಎಐಎಡಿಎಂಕೆ ಒಟ್ಟು 135 ಸದಸ್ಯ ಬಲ ಹೊಂದಿದೆ. ಬಂಡಾಯದ ಬಳಿಕ ಅಂತಿಮ ಚಿತ್ರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ.
ನಡೆದಿತ್ತು ಹೈವೋಲ್ಟೇಜ್ ಡ್ರಾಮ
ಈ ನಡುವೆ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಖಾತೆ ಹಿರಿಯ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ಮಾತುಕತೆ ನಡೆಸಿ ಮುಂಬಯಿಗೆ ತೆರಳಿದ್ದಾರೆ. ಚೆನ್ನೈಗೆ ತೆರಳುವ ಬಗ್ಗೆ ಬುಧವಾರ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಪನ್ನೀರ್ ಉಚ್ಚಾಟನೆ
ಹಠಾತ್ ರಾಜಕೀಯ ಬೆಳವಣಿಗೆಗಳ ಬಳಿಕ ಪನ್ನೀರ್ ಅವರನ್ನು ಶಶಿಕಲಾ ಅವರು ಎಐಎಡಿಎಂಕೆ ಖಜಾಂಚಿ ಹುದ್ದೆಯಿಂದ ಮಂಗಳವಾರ ತಡರಾತ್ರಿ ವಜಾಗೊಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.