ಒಮಿಕ್ರಾನ್ ತಡೆಗೆ ಭಾರೀ ಕಟ್ಟೆಚ್ಚರ
ಪಾಶ್ಚಿಮಾತ್ಯ ದೇಶಗಳಿಂದ ಹೊಸ ರೂಪಾಂತರಿ ವಕ್ಕರಿಸುವ ಆತಂಕದಲ್ಲಿ ಕೇಂದ್ರ ಸರಕಾರ, ಜನತೆ
Team Udayavani, Nov 28, 2021, 6:10 AM IST
ಹೊಸದಿಲ್ಲಿ: ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಯಾದ ಒಮಿಕ್ರಾನ್, ಅತ್ಯಂತ ಆತಂಕಕಾರಿ ರೂಪಾಂತರಿ ಪಟ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಘೋಷಿಸಿರುವ ಹಿನ್ನೆಲೆಯಲ್ಲಿ, ಆ ರೂಪಾಂತರಿ ಭಾರತವನ್ನು ಪ್ರವೇಶಿಸದಂತೆ ತಡೆಯಲು ಭಾರತದಾದ್ಯಂತ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ.
ವಿದೇಶಿಗರು ಭಾರತಕ್ಕೆ ಬರುವ ಪ್ರವೇಶ ಮಾರ್ಗಗಳಾದ (ಎಂಟ್ರಿ ಪಾಯಿಂಟ್) ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದೆಡೆ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಕೇಂದ್ರ ಸರಕಾರ ಆದೇಶಿಸಿದೆ. ಜತೆಗೆ ಎಲ್ಲ ರಾಜ್ಯಗಳಲ್ಲಿ ಇತ್ತೀಚೆಗೆ ಕಾರಣಾಂತರಗಳಿಂದ ಆಗಮಿ ಸಿರುವ ವಿದೇಶಿಗರನ್ನು ತಪಾಸಣೆಗೊಳಪಡಿಸುವಂತೆ, ಎಲ್ಲೆಡೆ ವೈಯಕ್ತಿಕ ಅಂತರ, ಮಾಸ್ಕ್ ಕಡ್ಡಾಯದಂಥ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.
ಸದ್ಯಕ್ಕಂತೂ ಪತ್ತೆಯಾಗಿಲ್ಲ: “ರಿಸ್ಕ್’ ಇರುವ ದೇಶಗಳಿಂದ ದೆಹಲಿ ವಿಮಾನನಿಲ್ದಾಣಕ್ಕೆ ಬಂದ ಪ್ರಯಾಣಿಕರ ಪೈಕಿ ಯಾರೊಬ್ಬರಿಗೂ ಒಮಿಕ್ರಾನ್ ರೂಪಾಂತರಿ ತಗುಲಿರುವುದು ಪತ್ತೆಯಾಗಿಲ್ಲ ಎಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳ ಪಡಿಸುತ್ತಿರುವ ಪ್ರಯೋಗಾಲಯದ ತಜ್ಞರು ತಿಳಿಸಿದ್ದಾರೆ. ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನ, ಮಾರಿಶಿಯಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಸಿಂಗಾಪುರ, ಹಾಂಕಾಂಗ್ ಮತ್ತು ಇಸ್ರೇಲ್‌ಗಳನ್ನು “ಹೈ ರಿಸ್ಕ್’ ದೇಶಗಳೆಂದು ಭಾರತ ಹೆಸರಿಸಿದೆ. ಈ ದೇಶಗಳ ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿಗಾ ಹೆಚ್ಚಳಕ್ಕೆ ಡಬ್ಲ್ಯುಎಚ್‌ಒ ಸೂಚನೆ
ಬೋಟ್ಸ್‌ವಾನಾದಲ್ಲಿ ಕಂಡುಬಂದ ಹೊಸ ರೂಪಾಂತರಿ ಬಿ.1.1.529(ಒಮಿಕ್ರಾನ್) ಬಗ್ಗೆ ಎಲ್ಲ ದೇಶಗಳೂ ನಿಗಾ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಒಮಿಕ್ರಾನ್ ಅನ್ನು “ಕಳವಳಕಾರಿ ರೂಪಾಂತರಿ’ ಎಂದು ಘೋಷಿಸಿದ ಬೆನ್ನಲ್ಲೇ ಈ ಸೂಚನೆ ಹೊರಬಿದ್ದಿದೆ. ಕಣ್ಗಾವಲು ಹೆಚ್ಚಳ ಮಾಡಿ, ಪರೀಕ್ಷೆಗಳನ್ನು ಹೆಚ್ಚಿಸಿ, ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬಲಿಷ್ಠಗೊಳಿಸಿ ಮತ್ತು ಲಸಿಕೆ ವಿತರಣೆಗೆ ವೇಗ ನೀಡಿ ಎಂದೂ ಡಬ್ಲ್ಯುಎಚ್‌ಒ ಸೂಚಿಸಿದೆ.
ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ನ್ಯೂಯಾರ್ಕ್‌ನೆಲ್ಲೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಗವರ್ನರ್ ಕ್ಯಾಥಿ ಹೋಚುಲ್ ಅವರು, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಸಾಂಕ್ರಾಮಿಕವನ್ನು ತಡೆಯಲು ಇದು ಅನಿವಾರ್ಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನೆದಲ್ಯಾಂಡ್, ಯು.ಕೆ.ಗೆ ಒಮಿಕ್ರಾನ್: ಶುಕ್ರವಾರ ದಕ್ಷಿಣ ಆಫಿಕಾದಿಂದ ಎರಡು ವಿಮಾನಗಳಲ್ಲಿ ಆ್ಯಮ್‌ಸ್ಟರ್‌ಡ್ಯಾಂಗೆ ಬಂದಿಳಿದ ಸುಮಾರು 600 ಮಂದಿಯಲ್ಲಿ 85 ಮಂದಿಗೆ ಒಮಿಕ್ರಾನ್ ತಗುಲಿದೆ ಎಂದು ಮೂಲಗಳು ತಿಳಿಸಿವೆ. ಜರ್ಮನಿ ಮತ್ತು ಚೆಕ್ ಗಣರಾಜ್ಯಗಳಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣಗಳು ಶನಿವಾರ ಪತ್ತೆಯಾಗಿವೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ:ಹೊಸ ರೂಪಾಂತರಿಯಿಂದ ಆತಂಕ : ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ
ಹೊಸ ರೂಪಾಂತರಿಗೆ 100 ದಿನದಲ್ಲಿ ಲಸಿಕೆ
ಅತ್ಯಂತ ವೇಗವಾಗಿ ಹರಡುವಂಥ ಕೊರೊನಾದ ಒಮಿಕ್ರಾನ್ ರೂಪಾಂತರಿ ಮೇಲೆ ನಮ್ಮ ಲಸಿಕೆಯ ಪರಿಣಾಮಕಾರಿತ್ವ ಇನ್ನೂ ಸ್ಪಷ್ಟವಾಗಿಲ್ಲ ಎಂದು ಫೈಜರ್ ಮತ್ತು ಬಯಾನ್‌ಟೆಕ್ ಕಂಪೆನಿಗಳು ತಿಳಿಸಿವೆ. ಆದರೆ “ಮುಂದಿನ 100 ದಿನಗಳ ಒಳಗಾಗಿ ಈ ಹೊಸ ರೂಪಾಂತರಿಗೆ ಹೊಸ ಪರಿಣಾಮಕಾರಿ ಲಸಿಕೆಯನ್ನು ಸಿದ್ಧಪಡಿಸುತ್ತೇವೆ’ ಎಂದೂ ಭರವಸೆ ನೀಡಿವೆ. ಸದ್ಯದಲ್ಲೇ ಒಮಿ ಕ್ರಾನ್‌ಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಹಿ ಸಲಿದ್ದೇವೆ ಎಂದೂ ಹೇಳಿವೆ. ಇದೇ ವೇಳೆ, ತನ್ನ ಲಸಿಕೆ ಮತ್ತು ಪ್ರತಿಕಾಯ ಕಾಕ್‌ಟೈಲ್ ಹೊಸ ರೂಪಾಂತರಿಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಅಧ್ಯಯನ ನಡೆಸ ಲಾಗುತ್ತಿದೆ ಎಂದು ಆಸ್ಟ್ರಾಜೆನೆಕಾ ಸಂಸ್ಥೆ ತಿಳಿಸಿದೆ.
ನೂರಾರು ಮಂದಿ ಅತಂತ್ರ!
ಹೊಸದಾಗಿ ಅಪ್ಪಳಿಸಿರುವ “ಒಮಿಕ್ರಾನ್’ ರೂಪಾಂತರಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ನೂರಾರು ಕುಟುಂಬಗಳು ಅತಂತ್ರವಾಗಿವೆ. ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದ್ದ ಕಾರಣ ಕೌಟುಂಬಿಕ ಅಥವಾ ಬ್ಯುಸಿನೆಸ್ ಟ್ರಿಪ್‌ಗೆಂದು ದ.ಆಫ್ರಿಕಾಗೆ ಬಂದಿದ್ದ ಹಲವು ಮಂದಿ ಈಗ ಅಲ್ಲೇ ಇರಲೂ ಆಗದೇ, ಅಲ್ಲಿಂದ ಬರಲೂ ಆಗದೇ ಪರದಾಡುವಂತಾಗಿದೆ. ಏಕಾಏಕಿ ಹಲವು ದೇಶಗಳು ದ.ಆಫ್ರಿಕಾದ ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದೇ ಇದಕ್ಕೆ ಕಾರಣ. ಬೇರೆ ಬೇರೆ ಕೆಲಸಗಳಿಗಾಗಿ ಹಾಗೂ ಪ್ರವಾಸಕ್ಕೆಂದು ಆ ದೇಶಗಳಿಗೆ ಹೋಗಿದ್ದವರೆಲ್ಲರೂ ಈಗ “ಸೋಂಕು ಪೀಡಿತ’ ರಾಷ್ಟ್ರಗಳಲ್ಲಿ ಸಿಲುಕಿದ್ದಾರೆ. ವಿಮಾನಗಳೆಲ್ಲ ರದ್ದಾಗಿರುವುದರಿಂದ ನಾವು ಯಾವಾಗ ನಮ್ಮ ದೇಶಕ್ಕೆ ವಾಪಸಾಗುತ್ತೇವೆಯೋ ಎಂಬ ಆತಂಕ ಶುರುವಾಗಿದೆ ಎಂದು ಏರ್‌ಪೋರ್ಟ್‌ನಲ್ಲಿ ತಂಗಿರುವವರು ಕಣ್ಣೀರು ಹಾಕುತ್ತಿದ್ದಾರೆ.
ಬ್ಯಾನ್, ಬ್ಯಾನ್, ಬ್ಯಾನ್
ಥಾಯ್ಲೆಂಡ್, ಕೆನಡಾ ಸರಕಾರಗಳು ದ.ಆಫ್ರಿಕಾ, ಎಸ್ವತಿನಿ, ಲೆಸೊಥೋ, ಜಿಂಬಾಬ್ವೆ, ಮೊಜಾಂಬಿಕ್, ನಮೀಬಿಯಾ, ಬೊಟ್ಸ್‌ವಾನಾ ನಾಗರಿಕರಿಗೆ ನಿಷೇಧ ಹೇರಿವೆೆ. ಶನಿವಾರದಂದು ಶ್ರೀಲಂಕಾ ಕೂಡ ಈ ದೇಶಗಳ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದೆ. ರವಿವಾರದಿಂದಲೇ ಈ ನಿಯಮ ಜಾರಿಗೆ ಬಂದಿದೆ.
ಎಳೆಯರಿಗೆ ಲಸಿಕೆ ನೀಡಲು ಒಪ್ಪಿಗೆ
ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಯುರೋಪ್ ಈಗ 1-5 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಅನುಮತಿ ನೀಡಿದೆ. ಜತೆಗೆ, ಈಗಾಗಲೇ ಎರಡೂ ಡೋಸ್ ಪಡೆದಿರುವ ವಯಸ್ಕರಿಗೂ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ಆರಂಭಿಸಿದೆ.
ಚೀನಕ್ಕೆ ಹೆದರಿ ರೂಪಾಂತರಿ ಹೆಸರೇ ಬದಲು
ಕೊರೊನಾ ಹೊಚ್ಚ ಹೊಸ ರೂಪಾಂತರಿಯಾದ “ಬೋಟ್ಸ್‌ವಾನಾ ರೂಪಾಂತರಿ’ ಅಥವಾ “ಬಿ.1.1.529 ರೂಪಾಂತರಿ’ಗೆ ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರದಂದು “ಒಮಿಕ್ರಾನ್’ ಎಂದು ನಾಮಕರಣ ಮಾಡಿದೆ. ಆದರೆ ಚೀನಕ್ಕೆ ಹೆದರಿ ಮಾಡಲಾಗಿರುವ ನಾಮಕರಣ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ, ಮೂಲ ಕೊರೊನಾ ವೈರಾಣು ಪತ್ತೆಯಾದ ನಂತರ, ಮೂಡಿಬಂದ ಈವರೆಗಿನ ರೂಪಾಂತರಿಗಳೆಲ್ಲಾ ಗ್ರೀಕ್ ವರ್ಣಮಾಲೆಯ ಅಕ್ಷರಗಳನ್ನು ಬಳಸಿ ಹೆಸರನ್ನಿಡಲಾಗಿದೆ. ಗ್ರೀಕ್‌ನ ವರ್ಣಮಾಲೆಯ ಮೊದಲ ಅಕ್ಷರವಾದ ಆಲ್ಫಾದಿಂದ ಹಿಡಿದು ಆನಂತರದ ಬಿಟಾ, ಗಾಮಾ, ಡೆಲ್ಟಾ, ಎಪ್ಸಿಲಿಯನ್, ಝೆಟಾ, ಇಟಾ, ಥೀಟಾ, ಐಯೋಟಾ, ಕಪ್ಪಾ, ಲ್ಯಾಮಾx, ಮ್ಯೂ ವರೆಗೆ ಡಬ್ಲ್ಯುಎಚ್‌ಒ ಹೆಸರನ್ನಿ ಟ್ಟಿತ್ತು. ಈ ಹಿನ್ನೆಲೆಯಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ರೂಪಾಂತರಿಗೆ ಮ್ಯೂ ನ ಮುಂದಿನ ಅಕ್ಷರವಾದ ನ್ಯೂ ಅಕ್ಷರವನ್ನೇ ಹೆಸರನ್ನಾಗಿ ಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನ್ಯೂ ಅಕ್ಷರವನ್ನು ಹಾಗೂ ಅದರ ನಂತರ ಬರುವ ಕ್ಸಿ ಅಕ್ಷರವನ್ನೂ ಬಿಟ್ಟು ಅವರೆಡರ ನಂತರ ಬರುವ ಒಮಿಕ್ರಾನ್ ಅಕ್ಷರವನ್ನೇ ಬಳಸಿ ಹೆಸರನ್ನಿಡಲಾಗಿದೆ.
ಡಬ್ಲ್ಯುಎಚ್‌ಒ ಸ್ಪಷ್ಟನೆ: ಎರಡು ಅಕ್ಷರಗಳನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ನ್ಯೂ ಎಂದರೆ ಹೊಸತು ಎಂಬರ್ಥ ಬರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿಯು ಹೊಸ ವೈರಾಣುವೇನಲ್ಲ, ಅದು ರೂಪಾಂತರಿಯಷ್ಟೇ. ಹಾಗಾಗಿ, ಹೊಸತು ಎಂಬ ಅರ್ಥ ಬರುವುದು ಬೇಡ ಎಂಬುದಕ್ಕಾಗಿ ನ್ಯೂ ಅಕ್ಷರ ಕೈಬಿಡಲಾಯಿತು. ಇನ್ನು, ಚೀನದ ಅಧ್ಯಕ್ಷರ ಹೆಸರಿನ ಆರಂಭದಲ್ಲಿ ಕ್ಸಿ ಅಕ್ಷರ (ಅವರ ಹೆಸರು ಕ್ಸಿ ಜಿನ್‌ಪಿಂಗ್) ಬರುವುದರಿಂದ ಕ್ಸಿ ಎಂದು ಹೆಸರಿಟ್ಟರೆ ಅದು ಚೀನಕ್ಕೆ ಕಳಂಕ ತಂದಂತಾಗುತ್ತದೆ ಎಂಬ ಕಾರಣಕ್ಕಾಗಿ ಆ ಅಕ್ಷರವನ್ನೂ ಕೈಬಿಡಲಾಯಿತು ಎಂದು ಡಬ್ಲ್ಯು.ಎಚ್.ಒ. ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.