ಪಿತ್ರೋಡಾ ವಿವಾದ; ಮೋದಿ ಕಿಡಿ
Team Udayavani, Mar 23, 2019, 12:30 AM IST
ಹೊಸದಿಲ್ಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿ ನಡೆಸಿದ ದಾಳಿ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯು ವಿವಾದದ ಅಲೆ ಎಬ್ಬಿಸಿದೆ. ಬಾಲಾಕೋಟ್ ದಾಳಿಯನ್ನು ಪ್ರಶ್ನಿಸಿರುವಂಥ ಪಿತ್ರೋಡಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಚಿವ ಅರುಣ್ ಜೇಟ್ಲಿಯಾದಿಯಾಗಿ ಬಿಜೆಪಿಯ ಹಲವು ನಾಯಕರು ಮುಗಿಬಿದ್ದಿದ್ದಾರೆ. “ಜನತಾ ಮಾಫ್ ನಹೀ ಕರೇಗಿ’ (ಜನರು ಕ್ಷಮಿಸುವುದಿಲ್ಲ) ಹ್ಯಾಷ್‌ಟ್ಯಾಗ್‌ನಡಿ ಇವರೆಲ್ಲರೂ ಪಿತ್ರೋಡಾ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಾಕೋಟ್ ದಾಳಿ ಬಗ್ಗೆ ಸತ್ಯಾಂಶಗಳು ಹೊರಬರಲಿ ಹಾಗೂ ಏಕಾಏಕಿ ಪಾಕಿಸ್ಥಾನದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಸ್ಯಾಮ್ ಪಿತ್ರೋಡಾ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದು ಬಹಿರಂಗವಾಗುತ್ತಲೇ, ಅವರ ಹೇಳಿಕೆ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ ಪ್ರಧಾನಿ ಮೋದಿ, “ಇದೊಂದು ನಾಚಿಕೆಗೇಡಿನ ವಿಷಯ. ಭಯೋತ್ಪಾದಕರನ್ನು ಕ್ಷಮಿಸುವುದು ಹಾಗೂ ಸಶಸ್ತ್ರ ಪಡೆಗಳನ್ನು ಅವಮಾನ ಮಾಡುವುದೇ ವಿಪಕ್ಷಗಳ ಕೆಲಸ’ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಯಾವತ್ತೂ ಭಯೋತ್ಪಾದಕರ ಕೃತ್ಯಗಳಿಗೆ ಪ್ರತಿಕ್ರಿಯೆ ನೀಡಿದ್ದೇ ಇಲ್ಲ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಅದನ್ನೇ ಈಗ ಕಾಂಗ್ರೆಸ್‌ನ ವಂಶಾಡಳಿತದ ವಿಧೇಯ ವ್ಯಕ್ತಿಯಾಗಿರುವ ಪಿತ್ರೋಡಾ ಅವರು ಪುನರುಚ್ಚರಿಸಿದ್ದಾರೆ. ಆದರೆ, ಇದು ನವಭಾರತ. ನಾವು ಭಯೋತ್ಪಾದಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲೇ, ಬಡ್ಡಿ ಸಮೇತ ವಾಪಸ್ ನೀಡುತ್ತಿದ್ದೇವೆ ಎಂದೂ ಮೋದಿ ಹೇಳಿದ್ದಾರೆ. ಅಲ್ಲದೆ, ಪಿತ್ರೋಡಾ ಈ ರೀತಿಯ ಹೇಳಿಕೆ ನೀಡುವ ಮೂಲಕ ಪಕ್ಷದ ಪರವಾಗಿ ಪಾಕಿಸ್ಥಾನದ ರಾಷ್ಟ್ರೀಯ ದಿನದ ಆಚರಣೆಯನ್ನು ಆರಂಭಿಸಿದ್ದಾರೆ ಎಂದೂ ಕಿಡಿಕಾರಿದ್ದಾರೆ.
ಶಾ, ಜೇಟ್ಲಿ ಟೀಕೆ: “ವಿಪಕ್ಷಗಳು ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ ಇಷ್ಟೆ. ಅವರು ನಮ್ಮ ಸೇನೆ ಬಗ್ಗೆ ಅನುಮಾನ ಪಡುತ್ತಾರೆ. ನಾವು ಸೇನೆ ಬಗ್ಗೆ ಹೆಮ್ಮೆ ಪಡುತ್ತೇವೆ. ಅವರ ಹೃದಯ ಉಗ್ರರಿಗಾಗಿ ಬಡಿಯುತ್ತದೆ, ನಮ್ಮದು ತ್ರಿವರ್ಣ ಧ್ವಜಕ್ಕಾಗಿ ಬಡಿಯುತ್ತದೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಸಚಿವ ಜೇಟ್ಲಿ, “ಇಂಥ ಹೇಳಿಕೆಗಳು ಪಾಕ್ ನ್ಯೂಸ್ ಚಾನೆಲ್‌ಗಳಲ್ಲಿ ಹಿಟ್ ಆಗುತ್ತವೆ. ಪಿತ್ರೋಡಾ ಅವರ ಪ್ರಕಾರ, ಬಾಲಾಕೋಟ್ ದಾಳಿಯೇ ತಪ್ಪು. ಯಾವ ದೇಶ ಕೂಡ ಇದನ್ನು ತಪ್ಪು ಎಂದು ಹೇಳಿಲ್ಲ. ಇಂಥ ವ್ಯಕ್ತಿಗಳು ರಾಜಕೀಯ ಪಕ್ಷವೊಂದಕ್ಕೆ ರೋಲ್ ಮಾಡೆಲ್ ಆಗಿರುವುದು ದುರದೃಷ್ಟಕರ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಷ ಪಸರಿಸಬೇಡಿ: ಇದೇ ವೇಳೆ, ವಿವಾದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಒಬ್ಬ ವ್ಯಕ್ತಿಯ ವೈಯಕ್ತಿಕ ಹೇಳಿಕೆಯನ್ನು ಬಳಸಿಕೊಂಡು ವಿಷ ಪಸರಿಸುವುದನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ಮೊದಲು ನಿಲ್ಲಿಸಲಿ. ಪುಲ್ವಾಮಾ ದಾಳಿಯು ಮೋದಿ ಸರಕಾರದ ಗಂಭೀರವಾದ ಭದ್ರತಾ ವೈಫಲ್ಯ ಎಂಬುದನ್ನು ಒಪ್ಪಿಕೊಳ್ಳಲಿ’ ಎಂದು ಹೇಳಿದೆ. ಬಾಲಾಕೋಟ್ ದಾಳಿಯು ಭಾರತೀಯ ವಾಯುಪಡೆಯ ಪರಾಕ್ರಮದ ಸಂಕೇತ. ನಮ್ಮ ಸಶಸ್ತ್ರ ಪಡೆಯ ಸೈನಿಕರ ತ್ಯಾಗದ ಹಿಂದೆ ಅಡಗಿ ಕೂರುವ ಬದಲು ಮೋದಿಯವರು ದೇಶಕ್ಕೆ ನಿರುದ್ಯೋಗ, ಕೃಷಿ ಸಮಸ್ಯೆ, ನೋಟು ಅಮಾನ್ಯ, ಜಿಎಸ್‌ಟಿ ಸಂಕಷ್ಟ, ಆರ್ಥಿಕ ಹಿಂಜರಿತದ ಬಗ್ಗೆ ಉತ್ತರಿಸಲಿ ಎಂದು ಕಾಂಗ್ರೆಸ್ ವಕ್ತಾರ ಸುಜೇìವಾಲಾ ಒತ್ತಾಯಿಸಿದ್ದಾರೆ.
ಪಿತ್ರೋಡಾ ಹೇಳಿದ್ದೇನು?
ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ್ದ ಪಿತ್ರೋಡಾ, “ಬಾಲಾಕೋಟ್‌ನಲ್ಲಿ ದಾಳಿ ಮಾಡಿದ್ದು ನಿಜಾನಾ? 300 ಉಗ್ರರನ್ನು ಕೊಲ್ಲಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಸತ್ಯಾಂಶಗಳನ್ನು ಬಹಿರಂಗಪಡಿಸಲಿ. ಅದನ್ನು ತಿಳಿದುಕೊಳ್ಳುವಂಥ ಅಧಿಕಾರ ಭಾರತೀಯರಿಗಿದೆ. ಪುಲ್ವಾಮಾದಂಥ ದಾಳಿಗಳು ಹಲವು ಬಾರಿ ನಡೆದಿವೆ. ಕೂಡಲೇ ಭಾರತವು ಪಾಕಿಸ್ಥಾನದ ಮೇಲೆ ದಾಳಿ ಮಾಡಬಾರದಿತ್ತು. ಮುಂಬೈ ದಾಳಿ ವೇಳೆಯೂ 8 ಉಗ್ರರು ಇಲ್ಲಿಗೆ ಬಂದು ದಾಳಿ ಮಾಡಿದರು. ಹಾಗಂತ ಇಡೀ ದೇಶದ ಮೇಲೆ ಆರೋಪ ಹೊರಿಸುವುದು ಸರಿಯಲ್ಲ’ ಎಂದಿ ದ್ದರು. ತಮ್ಮ ಹೇಳಿಕೆಯು ವಿವಾದ ಸೃಷ್ಟಿಸಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಪಿತ್ರೋಡಾ, “ಹೆಚ್ಚುವರಿ ಮಾಹಿತಿ ಕೊಡಿ ಎಂದಷ್ಟೇ ನಾನು ಕೇಳಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಕೇಳುವ ಅಧಿಕಾರ ಎಲ್ಲರಿಗೂ ಇದೆ. ಯಾವುದೇ ವಿಷಯದ ಬಗ್ಗೆಯಾದರೂ ಚರ್ಚೆ, ಸಂವಾದ, ಮಾತುಕತೆ ನಡೆಯ ಬೇಕು. ಹಾಗೆಂ ದು ಕೇಳಿದ ಮಾತ್ರಕ್ಕೆ ಯಾರನ್ನೋ ಪ್ರಶ್ನೆ ಮಾಡಿದರೆಂದು ಅರ್ಥವಲ್ಲ’ ಎಂದಿದ್ದಾರೆ. ಅಲ್ಲದೆ, ನನ್ನ ಹೇಳಿಕೆ ವೈಯ ಕ್ತಿಕವೇ ಹೊರತು, ಅದಕ್ಕೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ದಾಳಿಯಿಂದ ನಿಮ್ಮ ಮನೆಯಲ್ಲಿ ಯಾರೂ ಸತ್ತಿಲ್ಲ!
“ಉಗ್ರರ ದಾಳಿಯಲ್ಲಿ ನಿಮ್ಮ ಮನೆಯವರ್ಯಾರೂ ಸತ್ತಿಲ್ಲ. ಹೀಗಾಗಿ ನೀವು ಈ ಹೇಳಿಕೆ ನೀಡುತ್ತಿದ್ದೀರಿ. ನೀವು ಪಾಕಿಸ್ಥಾನವನ್ನು ಬೆಂಬಲಿಸುತ್ತಿದ್ದೀರಿ’ ಎಂದು ಮುಂಬೈ ದಾಳಿಯ ಸಂತ್ರಸ್ತ ಯುವತಿ ದೇವಿಕಾ ರೋಟವನ್, ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರತಿಕ್ರಿಯಿಸಿ ದ್ದಾರೆ. ಮುಂಬೈ ದಾಳಿ ನಡೆದಾಗ 10 ವರ್ಷದವಳಾಗಿದ್ದ ಆಕೆ, ಕುಟುಂಬದವರನ್ನು ಕಳೆದುಕೊಂಡಿದ್ದಳು. ಈ ಬಗ್ಗೆ ಆಕೆ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಟೀಕೆ ಮಾಡಿದ್ದಾಳೆ.
ಅನ್ರೋಹಾದಿಂದ ಡ್ಯಾನಿಷ್ ಅಲಿ ಸ್ಪರ್ಧೆ
ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಶುಕ್ರವಾರ 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಬಿಎಸ್ಪಿಗೆ ಸೇರ್ಪಡೆಗೊಂಡ ಡ್ಯಾನಿಷ್ ಅಲಿ ಅವರಿಗೂ ಸ್ಥಾನ ಸಿಕ್ಕಿದೆ. ಡ್ಯಾನಿಷ್ ಅವರು ನಿರೀಕ್ಷೆಯಂತೆಯೇ ಉತ್ತರಪ್ರದೇಶದ ಅನ್ರೋಹಾದಿಂದ ಕಣಕ್ಕಿಳಿಯಲಿದ್ದಾರೆ. ಪ್ರಮುಖ ಕ್ಷೇತ್ರ ಸಹರಾನ್ಪುರದಲ್ಲಿ ಬಿಜೆಪಿಯ ಲಖನ್‌ಪಾಲ್ ವಿರುದ್ಧ ಬಿಎಸ್‌ಪಿ ನಾಯಕ ಫಜುಲ್ ರೆಹಮಾನ್ ಸ್ಪರ್ಧಿಸಲಿದ್ದಾರೆ.
ಬಿಜೆಪಿ ವೆಬ್‌ಸೈಟ್ ಮತ್ತೆ ಜೀವ ಬಂತು!: ಎರಡು ವಾರಗಳಿಂದಲೂ ನಿಷ್ಕ್ರಿಯ ಗೊಂಡಿದ್ದ ಬಿಜೆಪಿ ವೆಬ್‌ಸೈಟ್ ಪುನಃ ಚಾಲ್ತಿಗೆ ಬಂದಿದೆ. ಮಾರ್ಚ್ 5ರಂದು ವೆಬ್‌ಸೈಟ್ ಸ್ಥಗಿತ ಗೊಂಡಿತ್ತು. ಸಚಿವ ರವಿಶಂಕರ್ ಪ್ರಸಾದ್ ಪ್ರಕಾರ ವೆಬ್‌ಸೈಟ್ ಹ್ಯಾಕ್ ಆಗಿತ್ತು. ತಕ್ಷಣವೇ ಬಿಜೆಪಿ ಐಟಿ ವಿಭಾಗ ಕಾರ್ಯಪ್ರವೃತ್ತವಾಗಿದ್ದು, ವೆಬ್‌ಸೈಟನ್ನು ಮರುವಶಪಡಿಸಿಕೊಂ ಡಿದೆ. ಆದರೆ ಡೇಟಾ ನಷ್ಟವಾಗಿದೆಯೇ ಎಂದು ತಿಳಿದುಬಂದಿಲ್ಲ. ಗುರುವಾರವೇ ವೆಬ್‌ಸೈಟ್ ಸಕ್ರಿಯಗೊಂಡಿದೆಯಾದರೂ ಒಂದೇ ಪುಟ ಲಭ್ಯವಿದೆ.
ಲೋಕಸಭೆಗೆ ಸ್ಪರ್ಧಿಸಲ್ಲ: ಉಮಾಭಾರತಿ
ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಉಮಾ ಭಾರತಿ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿರು ವುದಾಗಿ ಹೇಳಿದ್ದಾರೆ. ಮೇ ಇಂದ ಆರಂಭಿಸಿ 18 ತಿಂಗಳವರೆಗೆ ಗಂಗಾನದಿ ದಡದ ಪ್ರದೇಶಗಳಿಗೆ ಯಾತ್ರೆ ನಡೆಸಲಿರುವುದರಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಸ್ಪರ್ಧಿಸುವುದಿದ್ದರೆ ಝಾನ್ಸಿಯಿಂದಲೇ ಸ್ಪರ್ಧಿಸುತ್ತಿದ್ದೆ. ಆದರೆ ಸ್ಪರ್ಧಿಸಲಾರೆ ಎಂದು 2016ರಲ್ಲೇ ಹೇಳಿದ್ದೆ ಎಂದೂ ಉಮಾಭಾರತಿ ಹೇಳಿದ್ದಾರೆ. ಆದರೆ 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಕಳೆದ ವರ್ಷ ಉಮಾಭಾರತಿ ಘೋಷಿಸಿದ್ದರೂ, ಈ ಬಾರಿ ಅವರನ್ನೇ ಝಾನ್ಸಿಯಲ್ಲಿ ಬಿಜೆಪಿ ಕಣಕ್ಕಿಳಿಸಲಿದೆ ಎಂದು ಹೇಳಲಾಗಿತ್ತು.
“ಈ ಬಾರಿ ಮೋದಿ ನಿರುದ್ಯೋಗಿ’
2014ರ ಲೋಕಸಭೆ ಚುನಾವಣೆಯಲ್ಲಿ “ಅಬ್ ಕೀ ಬಾರ್ ಮೋದಿ ಸರಕಾರ’ ಎಂಬ ಉದ್ಘೋಷದೊಂದಿಗೆ ಬಿಜೆಪಿ ಚುನಾ ವಣಾ ಪ್ರಚಾರ ನಡೆಸಿತ್ತು. ಇದೇ ಮಾದರಿಯಲ್ಲಿ ಈ ಬಾರಿ ಹೊಸ ಚುನಾ ವಣಾ ಮಂತ್ರವನ್ನು ಘೋಷಿಸುವ ಮೂಲಕ ಸಿಪಿಎಂ ಆಡಳಿತಾರೂಢ ಬಿಜೆಪಿಗೆ ಟಾಂಗ್ ನೀಡಿದೆ. “ಇಸ್ ಬಾರ್ ಮೋದಿ ಬೇರೋಜ್‌ಗಾರ್’ (ಈ ಬಾರಿ ಮೋದಿ ನಿರುದ್ಯೋಗಿ) ಎಂಬ ಘೋಷ ವಾಕ್ಯದೊಂದಿಗೆ ಜನರ ಬಳಿ ತೆರಳಲು ಸಿಪಿಎಂ ನಿರ್ಧರಿಸಿದೆ. ಕಳೆದ ವಾರ ನಡೆದ ಮ್ಯಾರಥಾನ್ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಬಿಜೆಪಿಗೆ “ಪ್ರಸಾದ’?
ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯೊಂದು ಶುಕ್ರವಾರ ಹಬ್ಬಿದೆ. ಉತ್ತರಪ್ರದೇಶದ ಡೆಹ್ರಾಡೂನ್‌ನಿಂದ ಕಣಕ್ಕಿಳಿದಿರುವ ಅವರು, ಪಕ್ಷದ ಕೆಲವು ನಿರ್ಧಾರಗಳಿಂದ ಅಸಮಾಧಾನ ಗೊಂಡಿದ್ದು, ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪ್ರಸಾದ ಅವರು, “ಕಾಲ್ಪನಿಕ ಪ್ರಶ್ನೆಗಳಿಗೇಕೆ ಉತ್ತರಿಸಲಿ’ ಎಂದಷ್ಟೇ ಹೇಳಿ ಹೊರನಡೆದರೂ, ಸೂಕ್ತ ಉತ್ತರವನ್ನು ನೀಡಿಲ್ಲ. ಇನ್ನೊಂದೆಡೆ, ಅವರು ಬಿಜೆಪಿ ಸೇರುತ್ತಾರೆಂಬುದು ಶುದ್ಧ ಸುಳ್ಳು ಎಂದು ಕಾಂಗ್ರೆಸ್ ಹೇಳಿದೆ.
ಮಹಾಘಟಬಂಧನದಲ್ಲಿ ಬಿರುಕು?
ಬಿಹಾರದಲ್ಲಿ ಮಹಾಮೈತ್ರಿಯ ಸೀಟು ಹಂಚಿಕೆ ಶುಕ್ರವಾರ ಘೋಷಣೆಯಾಗಿದ್ದು, ಅದರ ಬೆನ್ನಲ್ಲೇ ಮಹಾಘಟಬಂಧನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಆರ್‌ಜೆಡಿ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಎಡಪಕ್ಷಗಳನ್ನು ಹೊರ ಗಿಡಲಾಗಿದ್ದು, ಸಿಪಿಐಗೆ ತೀವ್ರ ಮುಜುಗರ ಉಂಟಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ, ಸೀಟು ಹಂಚಿಕೆಯಲ್ಲಿ ಎಡಪಕ್ಷವನ್ನು ನಿರ್ಲ ಕ್ಷಿಸಿದ್ದು ದುರದೃಷ್ಟಕರ. ನಾವು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಜತೆ ಮಾತುಕತೆ ನಡೆಸಿದ್ದೆವು. ಅದನ್ನು ಅವರು ಪುತ್ರ ತೇಜಸ್ವಿ ಯಾದವ್‌ಗೆ ತಿಳಿಸಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಇದೊಂದು ರಾಜಕೀಯ ವಂಚನೆ. ಮಾ.24ರಂದು ಪಕ್ಷದ ರಾಜ್ಯ ನಾಯಕತ್ವವು ಸಭೆ ಸೇರಿ, ಮುಂದಿನ ಹೆಜ್ಜೆಗಳ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.
ಆರ್‌ಜೆಡಿಗೆ 20, ಕಾಂಗ್ರೆಸ್‌ಗೆ 9: ಇದಕ್ಕೂ ಮೊದಲು ಶುಕ್ರವಾರ ಪಾಟ್ನಾದಲ್ಲಿ ಮಹಾಮೈತ್ರಿಯ ಸೀಟು ಹಂಚಿಕೆ ಘೋಷಿಸಲಾಯಿತು. ಬಿಹಾರದಲ್ಲಿ ಆರ್‌ಜೆಡಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ಗೆ 9 ಸೀಟುಗಳನ್ನು ಬಿಟ್ಟುಕೊಡಲಾಗಿದೆ. ಉಪೇಂದ್ರ ಕುಶ್ವಾಹಾ ಅವರ ಲೋಕ ಸಮತಾ ಪಕ್ಷ ಮತ್ತು ಮುಕೇಶ್ ಸಾಹಿ° ಅವರ ವಿಕಾಸಶೀಲ ಇನ್ಸಾನ್ ಪಾರ್ಟಿ ಕ್ರಮವಾಗಿ 5 ಮತ್ತು 3 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಮಾಜಿ ಸಿಎಂ ಜಿತನ್ ರಾಂ ಅವರ ಎಚ್‌ಎಎಂ ಪಕ್ಷಕ್ಕೂ 3 ಸೀಟು ನೀಡಲಾಗಿದೆ.
ಆರ್‌ಜೆಡಿ ಚಿಹ್ನೆಯಲ್ಲಿ ಶರದ್ ಸ್ಪರ್ಧೆ
ಜೆಡಿಯು ಮಾಜಿ ಅಧ್ಯಕ್ಷ ಹಾಗೂ ಎನ್‌ಡಿಎ ಸಂಚಾಲಕರಾಗಿದ್ದ ಶರದ್ ಯಾದವ್ ಅವರು ಆರ್‌ಜೆಡಿ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ. ಲೋಕಸಭೆ ಚುನಾವಣೆಯ ಬಳಿಕ ಅವರು ತಮ್ಮ ಲೋಕತಾಂತ್ರಿಕ ಜನತಾ ದಳ(ಎಲ್‌ಜೆಡಿ)ವನ್ನು ಆರ್‌ಜೆಡಿ ಜತೆ ವಿಲೀನಗೊಳಿಸಲಿದ್ದಾರೆ ಎಂದು ಆರ್‌ಜೆಡಿ ವಕ್ತಾರ ಮನೋಜ್ ಜಾ ಘೋಷಿಸಿದ್ದಾರೆ.
ಕನ್ಹಯ್ನಾಗಿಲ್ಲ ಟಿಕೆಟ್
ಮಹಾಮೈತ್ರಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಹೆಸರು ಮಾಯವಾಗಿದೆ. ಕಳೆದ ವರ್ಷವಷ್ಟೇ ಅವರು, ಬೇಗುಸರಾಯ್‌ನಲ್ಲಿ ಸಿಪಿಐ ಟಿಕೆಟ್ ಪಡೆದು ಕಣಕ್ಕಿಳಿ ಯುವುದಾಗಿ ಘೋಷಿಸಿದ್ದರು. ಆದರೆ, ತೇಜಸ್ವಿ ಯಾದವ್ ಅವರು ಕನ್ಹಯ್ಯ ರಾಜಕೀಯ ಎಂಟ್ರಿಯನ್ನು ತಡೆ ಹಿಡಿದಿ ದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಪಿಐ, ಬೇಗುಸರಾಯ್‌ನಲ್ಲಿ ಕನ್ಹಯ್ನಾ ಕಣಕ್ಕಿಳಿಯುವುದು ಖಚಿತ ಎಂದಿದೆ.
ಗೌತಮ್ ಗಂಭೀರ್ ಬಿಜೆಪಿಗೆ
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶುಕ್ರವಾರ ಅವರು ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 37 ವರ್ಷ ವಯಸ್ಸಿನ ಗಂಭೀರ್ ಅವರು ಹೊಸದಿಲ್ಲಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಗಂಭೀರ್, ನಾನು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರಭಾವಕ್ಕೊಳಗಾಗಿ ಪಕ್ಷಕ್ಕೆ ಸೇರಿದ್ದೇನೆ. ಪಕ್ಷದ ಸದಸ್ಯನಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕ್ರಿಕೆಟ್‌ನಲ್ಲಿ ಏನು ಸಾಧ್ಯವೋ ಅದನ್ನು ನಾನು ಮಾಡಿದ್ದೇನೆ. ಈಗ ದೇಶಕ್ಕಾಗಿ ಒಳ್ಳೆಯದನ್ನು ಮಾಡಲು ನನಗೆ ಈ ವೇದಿಕೆ ಸಿಕ್ಕಿದೆ ಎಂದಿದ್ದಾರೆ. ಪ್ರಸ್ತುತ ಮೀನಾಕ್ಷಿ ಲೇಖೀ ಪ್ರತಿನಿಧಿಸುತ್ತಿರುವ ಹೊಸದಿಲ್ಲಿ ಕ್ಷೇತ್ರದಿಂದ ಗಂಭೀರ್ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಚುನಾವಣಾ ಕಣದಿಂದ ದೂರ ಸರಿದಿರುವುದು ನೋಡಿದರೆ, ಎನ್‌ಡಿಎ ಗೆಲುವು ಖಚಿತ ಎಂಬುದರ ಸ್ಪಷ್ಟ ಸೂಚನೆ ಸಿಗುತ್ತದೆ.
ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ
ಪ್ರಧಾನಿ ಮೋದಿ ಮತ್ತು ಬಿಜೆಪಿ ಕಳ್ಳತನವಾದ ರಫೇಲ್ ಕಡತಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಉದ್ಯೋಗ ಸೃಷ್ಟಿಯ ದತ್ತಾಂಶಗಳನ್ನು ಅಡಗಿಸಿಟ್ಟು ಕೊಂಡಿದ್ದಾರೆ. ಮತಗಳು ಹಾಗೂ ಇಮೇಜ್‌ಗಾಗಿ ಅವುಗಳನ್ನು ಅಡಗಿಸಿಡಲಾಗಿದೆ. ಇಂಥ ಚೌಕಿದಾರರು ದೇಶಕ್ಕೆ ಬೇಕೇ?
ಮಾಯಾವತಿ, ಬಿಎಸ್‌ಪಿ ನಾಯಕಿ
ಯಾವಾಗ ಕಾವಲುಗಾರ ಅಲರ್ಟ್ ಆಗಿರುತ್ತಾನೋ, ಆಗ ಕಳ್ಳರಿಗೆಲ್ಲ ಅಸಹನೆ ಶುರುವಾಗುತ್ತದೆ. ಮಾಯಾವತಿ ಅವರ ನೋವು, ಚಿಂತೆ ಹಾಗೂ ಅಸಹನೆಯು ನನಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೇ ಗೊತ್ತಾಗುತ್ತಿದೆ. ಪ್ರಜ್ಞೆಯುಳ್ಳ ಪ್ರತಿಯೊಬ್ಬ ನಾಗರಿಕನೂ ಚೌಕಿದಾರನೇ.
ಯೋಗಿ ಆದಿತ್ಯನಾಥ್, ಉ.ಪ್ರದೇಶ ಸಿ ಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.