ಪೊಲೀಸ್ ಅಧಿಕಾರಿಗಳಿಂದ ನೈತಿಕ ಪೊಲೀಸ್‌ಗಿರಿ ಬೇಡ: ಸುಪ್ರೀಂ
Team Udayavani, Dec 19, 2022, 6:50 AM IST
ನವದೆಹಲಿ: ಪೊಲೀಸ್ ಅಧಿಕಾರಿಗಳು ನೈತಿಕ ಪೊಲೀಸ್‌ಗಿರಿ ನಡೆಸಬೇಕಿಲ್ಲ. ಜತೆಗೆ ನಾಗರಿಕರಿಂದ ಭೌತಿಕ ಅಥವಾ ವಸ್ತು ರೂಪದಲ್ಲಿ ಏನಾದರೂ ಕೇಳಿ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಕಾನ್ಸ್‌ಟೆಬಲ್ ಸಂತೋಷ ಕುಮಾರ್ ಪಾಂಡೆ ಎಂಬುವವರನ್ನು ಸೇವೆಯಿಂದ ವಜಾಗೊಳಿಸಿ ಶಿಸ್ತು ಪ್ರಾಧಿಕಾರ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ಜೆ.ಕೆ.ಮಾಹೇಶ್ವರಿ ಅವರಿದ್ದ ನ್ಯಾಯಪೀಠ, ಸಂತೋಷ ಕುಮಾರ್ ಪಾಂಡೆ ಅವರನ್ನು ಶೇ.50ರಷ್ಟು ಬಾಕಿ ವೇತನದೊಂದಿಗೆ ಪುನಃ ಸೇವೆಯಲ್ಲಿ ಮುಂದುವರಿಸಬೇಕು ಎಂದು ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಪಾಂಡೆ ಅವರು ಗುಜರಾತ್‌ನ ವಡೋದರಾದ ಐಪಿಸಿಎಲ್ ಟೌನ್‌ಶಿಪ್‌ನಲ್ಲಿ ಕರ್ತವ್ಯದಲ್ಲಿದ್ದರು. 2001ರ ಅ.26ರಂದು ರಾತ್ರಿ ಪಾಳಿಯಲ್ಲಿ ಪಾಂಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಮಹೇಶ್ ಚೌಧರಿ ಎಂಬುವವರು ತಮ್ಮ ಭಾವಿ ಪತ್ನಿಯೊಂದಿಗೆ ಬೈಕ್‌ನಲ್ಲಿ ಟೌನ್‌ಶಿಪ್‌ಗೆ ಬರುತ್ತಿದ್ದರು. ಪಾಂಡೆ ಅವರು ಚೌಧರಿ ಅವರ ಬೈಕ್ ನಿಲ್ಲಿಸಿ, ಇಬ್ಬರನ್ನು ಪ್ರಶ್ನಿಸಿದ್ದರು. ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಪಾಂಡೆ, “ನಿನ್ನ ಗೆಳತಿಯೊಂದಿಗೆ ಕೆಲ ಸಮಯ ಕಳೆಯುತ್ತೇನೆ,’ ಎಂದು ಚೌಧರಿಗೆ ಹೇಳಿದ್ದರು. ಇದಕ್ಕೆ ಚೌಧರಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ನಂತರ ಏನಾದರೂ ವಸ್ತುವನ್ನು ಕೊಡುವಂತೆ ಪಟ್ಟು ಹಿಡಿದಿದ್ದ ಪಾಂಡೆಗೆ ಚೌಧರಿ ತನ್ನ ವಾಚನ್ನು ನೀಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಮಾರನೆಯ ದಿನ ಚೌಧರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆದು ಪಾಂಡೆ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಪಾಂಡೆ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.