ಪಿಯು ಮೌಲ್ಯಮಾಪನ ಬಹಿಷ್ಕಾರ ನಿರ್ಧಾರ ಅಚಲ
Team Udayavani, Mar 5, 2017, 3:45 AM IST
ಬೆಂಗಳೂರು:ವೇತನ ತಾರತಮ್ಯ ಸರಿಪಡಿಸದಿದ್ದರೆ ಈ ಬಾರಿಯೂ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ’ ಎಂದು ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿವೆ.
ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಉಪನ್ಯಾಸಕರು, ವೇತನ ತಾರತಮ್ಯ ನಿವಾರಣೆ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವತ್ತ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕು. ಬೇಡಿಕೆಗಳ ಬಗ್ಗೆ ಸರ್ಕಾರ ತಾತ್ಸಾರ ಈ ಬಾರಿಯೂ ಮೌಲ್ಯಮಾಪನ ಬಹಿರಷ್ಕರಿಸುವುದು ಅನಿವಾರ್ಯವಾಗುತ್ತದೆ. ಇದರಿಂದಾಗುವ ತೊಂದರೆಗಳಿಗೆ ನಾವು ಜವಾಬ್ದಾರರಲ್ಲ. ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಕಳೆದ ವರ್ಷ ವೇತನ ತಾರತಮ್ಯ ಸರಿಪಡಿಸುವಂತೆ ಮೌಲ್ಯಮಾಪನ ಬಹಿಷ್ಕರಿಸಿ ಹೋರಾಟಕ್ಕಿಳಿದಾಗ ಕುಮಾರ್ ನಾಯಕ್ ವರದಿ ಜಾರಿ ಸಾಧ್ಯವಿಲ್ಲ. ಆದರೆ, ವೇತನ ತಾರತಮ್ಯ ಸರಿಪಡಿಸಲು ಎರಡು ವೇತನ ಬಡ್ತಿ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಒಂದು ವೇತನ ಬಡ್ತಿಯನ್ನು ಆ ಕ್ಷಣವೇ ಜಾರಿ ಮಾಡಿ ಇನ್ನೊಂದು ವೇತನ ಬಡ್ತಿಯನ್ನು 2016ರ ಡಿಸೆಂಬರ್ ಅಥವಾ ಜನವರಿ ವೇಳೆಗೆ ನೀಡುವುದಾಗಿ ಹೇಳಿತ್ತು. ಆದರೆ, ಈ ವರೆಗೂ ನೀಡಿಲ್ಲ ಎಂದು ದೂರಿದರು.
ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ಕಳೆದ ವರ್ಷ ಮೌಲ್ಯಮಾಪನ ಬಹಿಷ್ಕಾರಿಸಿ ಹೋರಾಟ ನಡೆಸಿದ ವೇಳೆ ಒಂದು ವೇತನ ಬಡ್ತಿ ನೀಡಿ ಜನವರಿ ವೇಳೆಗೆ ಇನ್ನೊಂದು ವೇತನ ಬಡ್ತಿ ನೀಡುವುದಾಗಿ ಹೇಳಿದ್ದ ಸರ್ಕಾರ ಈಗ ನಿರಾಕರಿಸುತ್ತಿದೆ. 7ನೇ ವೇತನ ಆಯೋಗದಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವಂತೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಅವರು ಹೇಳುತ್ತಿದ್ದಾರೆ. ಆದರೆ, ಬರೀ ಪತ್ರ ಬರೆದರೆ ಆಯೋಗ ಪರಿಗಣಿಸಬಹುದು ಅಥವಾ ಪರಿಗಣಿಸದೆಯೂ ಇರಬಹುದು. ಮತ್ತೆ ತಾರತಮ್ಯ ಮುಂದುವರೆಯಲಿದೆ. ಅದರ ಬದಲು, ಹಿಂದೆ ನೀಡಿದ್ದ ಭರವಸೆಯಂತೆ ಮತ್ತೂಂದು ವೇತನ ಜಾರಿ ಮಾಡಿ ಅದರಿಂದಾಗುವ ವೇತನ ಹೆಚ್ಚಳದ ಆಧಾರದ ಮೇಲೆ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ಪರೀಕ್ಷೆಗೆ ತೊಂದರೆಯಿಲ್ಲ:
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಲ್ಕನೇ ಹಂತದ ಹೋರಾಟ ಮಾ.9ರಿಂದ 27ರವರೆಗೆ ನಡೆಯುವ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಎಲ್ಲ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಕಪ್ಪು ಪಟ್ಟಿ ಧರಿಸಿ ಪಾಲ್ಗೊಳ್ಳುವ ಮೂಲಕ ಮುಂದುವರೆಯಲಿದೆ. ಇದರಿಂದ ಪರೀಕ್ಷೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಪರೀಕ್ಷೆಯ ಕೊನೆಯ ದಿನದ ಮುನ್ನಾ ದಿನ (ಮಾ.26 ರ ಭಾನುವಾರ) ಉಭಯ ಸಂಘಗಳ ಪದಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯ ದಿನಾಂಕದೊಳಗೆ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಸ್ಪಂಧಿಸದೇ ಹೋದರೆ ಸಭೆಯಲ್ಲಿ ಮೌಲ್ಯಮಾಪನ ಬಹಿಷ್ಕಾರದ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು ಎಂದು ತಿಮ್ಮಯ್ಯ ಪುರ್ಲೆ ಹೇಳಿದರು.
ಏನಿದು ವೇತನ ತಾರತಮ್ಯ ವಿವಾದ?
*ವೇತನ ತಾರತಮ್ಯ ನಿವಾರಣೆಗಾಗಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಅವರು ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ¨ªಾಗ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ನೀಡಿದ ವರದಿಯಲ್ಲಿ, ಉಪನ್ಯಾಸಕರ ಮೂಲ ವೇತನ 25,300ಗೆ, ಪ್ರಾಂಶುಪಾಲರ ವೇತನ 32,800 ರೂ.ಗೆ ಮತ್ತು ಪ್ರೌಢ ಶಾಲಾ ಶಿಕ್ಷಕರ ವೇತನ 19,000ರೂ.ಗಳಿಗೆ ಹೆಚ್ಚಾಗಬೇಕು ಎಂದು ಶಿಫಾರಸು ಮಾಡಿದೆ. ಮೊದಲು ಈ ವರದಿ ನ್ಯಾಯಸಮ್ಮತವಾಗಿದ್ದು ಅನುಷ್ಠಾನಗೊಳಿಸುವದಾಗಿ ಹೇಳುತ್ತಾ ಬಂದಿದ್ದ ಸರ್ಕಾರ, ವರದಿ ಜಾರಿಯಿಂದ ಸರ್ಕಾರಕ್ಕೆ ಪ್ರತೀ ವರ್ಷ ಸುಮಾರು 170 ಕೋಟಿ ರೂ.ನಷ್ಟು ಹೊರೆ ಬೀಳಲಿದೆ ಎಂಬ ಕಾರಣಕ್ಕೆ ವರದಿಯನ್ನು ಪಕ್ಕಕ್ಕಿಟ್ಟಿದೆ. ಕಳೆದ ವರ್ಷ ಈ ವರದಿ ಅನಿಷ್ಠಾನಕ್ಕಾಗಿ ಶಿಕ್ಷಕರು, ಉಪನ್ಯಾಸಕರು ಹೋರಾಟ ತೀವ್ರಗೊಳಿಸಿದ್ದರಿಂದ ಸಂಧಾನಕ್ಕೆ ಮುಂದಾದ ಸರ್ಕಾರಕ್ಕೆ ಶಿಕ್ಷಕರು ವರದಿ ಅನಿಷ್ಠಾನ ಮಾಡಿದೆ ಹೋದರೆ ಕನಿಷ್ಠ 2 ವೇತನ ಬಡ್ತಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ತಕ್ಷಣ ಒಂದು ವೇತನ ಬಡ್ತಿ ನೀಡಿದ್ದ ಸರ್ಕಾರ, ಇನ್ನೊಂದು ವೇತನ ಬಡ್ತಿಯನ್ನು ಡಿಸೆಂಬರ್ ಅಥವಾ ಜನವರಿ 2016ರ ವೇಳೆಗೆ ನೀಡುವುದಾಗಿ ಭರವಸೆ ನೀಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.