ಆದಿವಾಸಿಗಳ ಬೆನ್ನೆಲುಬು ಮುರಿದ ಪ್ರಧಾನಿ ಮೋದಿ: ರಾಹುಲ್ ಟೀಕೆ
Team Udayavani, Dec 8, 2017, 11:19 AM IST
ಹೊಸದಿಲ್ಲಿ : ”ಪ್ರಧಾನಿ ನರೇಂದ್ರ ಮೋದಿ ಅವರು ಆದಿವಾಸಿಗಳ ಬೆನ್ನೆಲುಬು ಮುರಿದಿದ್ದಾರೆ. ಅವರಿಗೆ ನೆರವು ನೀಡುವ ಭರವಸೆಯನ್ನು ಅವರು ಹುಸಿಗೊಳಿಸಿದ್ದಾರೆ. ಮೋದಿ ಭರವಸೆ ಕೊಟ್ಟಿದ್ದ 55 ಕೋಟಿ ರೂ. ವಿನಿಯೋಗದ ವನಬಂಧು ಕಲ್ಯಾಣ ಯೋಜನೆಯ ಗತಿ ಏನಾಗಿದೆ ಎಂಬುದನ್ನು ಅವರೀಗ ದೇಶದ ಜನರಿಗೆ ತಿಳಿಸಬೇಕಾಗಿದೆ” ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುಡುಗಿದ್ದಾರೆ.
ಗುಜರಾತ್ ಚುನಾವಣೆ ಸಂಬಂಧ ಪ್ರಧಾನಿ ಮೋದಿಗೆ ದಿನನಿತ್ಯ ಒಂದು ಪ್ರಶ್ನೆಯನ್ನು ಕೇಳುವ ರಾಹುಲ್ ಗಾಂಧಿ ಅವರ ಸರಣಿ ಪ್ರಶ್ನಾವಳಿಯ 10ನೇ ಪ್ರಶ್ನೆಯಾಗಿ ಇಂದು ಪ್ರಧಾನಿ ಮೋದಿಯನ್ನು ಕಟಕಟೆಯಲ್ಲಿ ನಿಲ್ಲಿಸಿರುವ ರಾಹುಲ್, ‘ವಲಸಿಗರಿಗೆ ನೆರವಾಗುವ ನಿಮ್ಮ ಭರವಸೆ ಹುಸಿಯಾಯಿತೇಕೆ ?’ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಬುಡಕಟ್ಟು ಜನರ ಸಮಸ್ಯೆಗಳಿಗೆ ಒತ್ತು ನೀಡುತ್ತಾ ರಾಹುಲ್ ಗಾಂಧಿ ಅವರು, “ಬುಡಕಟ್ಟು ವಾಸಿಗಳ ಅನುಭೋಗದಲ್ಲಿದ್ದ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ; ಅವರಿಗೀಗ ತಾವು ವಾಸಿಸಿಕೊಂಡಿರುವ ಅರಣ್ಯದ ಮೇಲೆ ಯಾವುದೇ ಹಕ್ಕು ಇಲ್ಲವಾಗಿದೆ. ಅವರಿಗೆ ಜನಸಾಮಾನ್ಯರಿಗೆ ಸಿಗುವಂತಹ ಶಾಲೆ, ಆಸ್ಪತ್ರೆ ಮೊದಲಾದ ಮೂಲ ಸೌಕರ್ಯಗಳೂ ಇಲ್ಲವಾಗಿದೆ” ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅವರು ಈಚೆಗೆ ಮಾತನಾಡುತ್ತಾ, ಗುಜರಾತ್ ಸರಕಾರ ಬುಡಕಟ್ಟು ಜನರ ಕಲ್ಯಾಣಕ್ಕಾಗಿ 65,700 ಕೋಟಿ ರೂ. ಬಜೆಟ್ ವಿನಿಯೋಗದ ವನಬಂಧು ಕಲ್ಯಾಣ ಯೋಜನೆಯನ್ನು ಆರಂಭಿಸಲಾಗಿದೆ; ಇದರಿಂದಾಗಿ ಭಾರತೀಯ ಜನತಾ ಪಕ್ಷಕ್ಕೆ ಬುಡಕಟ್ಟು ಜನರ ಬಾಳ್ವೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಸಾಧ್ಯವಾಗಿದೆ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.