ಕೇಂದ್ರ ಹಣಕಾಸು ಸಚಿವಾಲಯದಲ್ಲಿ Mass Bunk: ರಾಹುಲ್ ಲೇವಡಿ
Team Udayavani, May 8, 2018, 3:59 PM IST
ಹೊಸದಿಲ್ಲಿ : ಕೇಂದ್ರ ಹಣಕಾಸು ಸಚಿವಾಲಯ ನಾಯಕತ್ವ ಇಲ್ಲದೆ ಮಾಸ್ ಬಂಕ್‌ನಿಂದಾಗಿ ಬರಿದಾಗಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರಕಾರವನ್ನು ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಮೋದಿ ವಿರುದ್ಧ ಕಟಕಿಯಾಡಿದ್ದಾರೆ.
“ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಕಳೆದ ಎಪ್ರಿಲ್ ತಿಂಗಳಿಂದ ಅಸ್ವಸ್ಥರಾಗಿ ದೂರ ಇದ್ದಾರೆ. ಹಣಕಾಸು ಕಾರ್ಯದರ್ಶಿ ಹಸ್‌ಮುಖ್ ಆಧಿಯಾ ಅವರು ತಮ್ಮ ಆಧ್ಯಾತ್ಮಿಕ ಗುರುವಿನೊಂದಿಗೆ ಆತ್ಮ ಶಾಂತಿಯನ್ನು ಅರಸುತ್ತಾ ರಜೆಯಲ್ಲಿ ಹೋಗಿದ್ದಾರೆ. ಆದುದರಿಂದ ನಾನು ಕೇಂದ್ರ ಹಣಕಾಸು ಸಚಿವಾಲಯವನ್ನು ಮುಚ್ಚಲು ನಿರ್ಧರಿಸಿದ್ದೇನೆ. ಪ್ರಧಾನಿಯವರ ಕಾರ್ಯಾಲಯವು ಈ ಮೊದಲಿನಂತೆ ಎಲ್ಲ ಹಣಕಾಸು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ” ಎಂದು ರಾಹುಲ್ ಗಾಂಧಿ ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.
ವಿಶೇಷವೆಂದರೆ ಈ ಲೇವಡಿಯ ಟ್ವೀಟ್ ಮಾಡುವ ವೇಳೆ ಸ್ವತಃ ರಾಹುಲ್ ಗಾಂಧಿ ಅವರು ದಿಲ್ಲಿಯಲ್ಲಿ ಇರದೆ ಕರ್ನಾಟಕದಲ್ಲಿ ತಮ್ಮ ಪಕ್ಷದ ಪರವಾಗಿ ಮಿಂಚಿನ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಒರೆಗಲ್ಲು ಎಂಬಂತೆ ಗಂಭೀರವಾಗಿ ಪರಿಗಣಿಸಿರುವ ರಾಹುಲ್ ಗಾಂಧಿ ಅವರು “2019ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಲ್ಲಿ ನೀವು ಪ್ರಧಾನಿಯಾಗುವಿರಾ ?’ ಎಂಬ ಮಾಧ್ಯಮದ ಪ್ರಶ್ನೆಗೆ ರಾಹುಲ್, “ಹೌದು, ಯಾಕಾಗಬಾರದು’ ಎಂದು ವಿಶ್ವಾಸದಿಂದ ಉತ್ತರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.